

ನಾಳೆ ಆಕ್ಸ್‌ಫರ್ಡ್‌ನಲ್ಲಿ ಕೊರೊನಾ ವಿರುದ್ಧ (ವಿಶ್ವದ) ಮೊದಲ ವ್ಯಾಕ್ಸೀನ್ ಪ್ರಯೋಗ ಆರಂಭವಾಗಲಿದೆ. ಹತ್ತಿಪ್ಪತ್ತು ತಿಂಗಳ ಬದಲು ಕೇವಲ ಮೂರು ತಿಂಗಳಲ್ಲೇ ಸೃಷ್ಟಿಯಾದ ಈ ಲಸಿಕೆ ‘ಯಶಸ್ವಿ’ ಎಂಬುದು ಸಾಬೀತಾದರೆ ಇಷ್ಟೊಂದು ಜನರಿಗೆ ಅದನ್ನು ಹೇಗೆ ವಿತರಿಸುತ್ತಾರೆ? ಆಗ ಎಂತೆಂಥ ತರಲೆ ಡ್ರಾಮಾಗಳು ನಡೆಯಬಹುದು? 2011ರಲ್ಲಿ ತಯಾರಾದ ‘ಕಂಟೇಜಿಯನ್’ (ಸಾಂಕ್ರಾಮಿಕ) ಹೆಸರಿನ ಹಾಲಿವುಡ್ ಸಿನೆಮಾದ ಕಥೆಯೂ ಕೊರೊನಾ ಮಾದರಿಯಲ್ಲೇ ಸಾಗುತ್ತದೆ.


ಭಯದ ಮುಷ್ಟಿಗೆ ಸಿಕ್ಕ ಜನ ನಾಳೆ ಏನೇನು ಮಾಡಬಹುದು ಎಂಬುದರ ಮುನ್ನೋಟವೂ ಇದರಲ್ಲಿದೆ. ಕಥಾ ಸಾರಾಂಶ ಹೀಗಿದೆ: ಚೀನಾದ ಮಳೆಕಾಡಿನಲ್ಲಿ ತಂತಾನೆ ಬೆಳೆದಿದ್ದ ಕಾಡುಬಾಳೆಯ ಮರವನ್ನು ಬುಲ್ಡೋಝರ್ ಬಂದು ನೆಲಸಮ ಮಾಡುತ್ತದೆ. ಅದರಲ್ಲಿ ಅವಿತಿದ್ದ ಬಾವಲಿಯೊಂದು ತನ್ನ ಬಾಯಲ್ಲಿದ್ದ ಬಾಳೆಹಣ್ಣಿನ ತುಣುಕಿನ ಸಮೇತ ಹಾರಿ ಹೋಗುತ್ತದೆ. ಹೋಗಿ ಅದು ಕಾಡಂಚಿನಲ್ಲಿದ್ದ ಹಂದಿಸಾಕಣೆ ಕೇಂದ್ರದ ಸೂರಿಗೆ ಜೋತುಬೀಳುತ್ತದೆ. ಅದರ ಬಾಯಿಯಿಂದ ಕೆಳಕ್ಕೆ ಬಿದ್ದ ಬಾಳೆಹಣ್ಣನ್ನು ಹಂದಿಯೊಂದು ತಿನ್ನುತ್ತದೆ.ಬಾವಲಿಯಲ್ಲಿದ್ದ ವೈರಸ್ ಈಗ ಹಂದಿಯ ದೇಹಕ್ಕೆ ಬರುತ್ತದೆ. ಜ್ವರಪೀಡಿತ ಹಂದಿಯ ಮಾಂಸ ಹಾಂಗ್‌ಕಾಂಗ್‌ನ ಒಂದು ಹೊಟೆಲ್ಲಿನ ಅಡುಗೆ ಮನೆಗೆ ಬರುತ್ತದೆ. ಅಲ್ಲಿನ ಊಟವನ್ನು ಮೆಚ್ಚಿದ ಅಮೆರಿಕದ ಅತಿಥಿ ಬೆಥ್ ಎಂಬಾತ ಅಡುಗೆಹುಡುಗಿಗೆ ಶೇಕ್ ಹ್ಯಾಂಡ್ ಮಾಡಿದಾಗ ವೈರಸ್ ಅವನಿಗೂ ತಗಲುತ್ತದೆ. ಸ್ವದೇಶಕ್ಕೆ ಹಿಂದಿರುಗಿದ ಬೆಥ್ ತನ್ನ ಮಾಜಿ ಪತ್ನಿಯೊಂದಿಗೆ ಸರಸವಾಡುತ್ತಾನೆ. ಮರುದಿನ ಅವಳು ಮೈನಡುಕ ಹತ್ತಿ, ಮೂರ್ಛೆ ಬಿದ್ದು ಸಾಯುತ್ತಾಳೆ. ಅವಳ ಮಗನೂ ಸಾಯುತ್ತಾನೆ. ತನಿಖೆಗೆ ಬಂದ ವೈದ್ಯ ಸಂಶೋಧಕಿಯೂ ಸಾಯುತ್ತಾಳೆ.ವೈರಸ್ ಅನೇಕ ನಗರಗಳಿಗೆ ವಿಸ್ತರಿಸುತ್ತ ವೈರಲ್ ಆಗುತ್ತದೆ. ಲಾಕ್‌ಡೌನ್, ಕ್ವಾರಂಟೈನ್, ಲೂಟಿ, ದೊಂಬಿ ಎಲ್ಲ ಶುರುವಾಗುತ್ತದೆ.
ವಿಜ್ಞಾನಿಗಳು ವೈರಸ್ಸಿನ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ತಿಣುಕುತ್ತಿದ್ದಾಗ, ಪ್ರಭಾವೀ ಗಣ್ಯನೊಬ್ಬ “ಇದು ಚೀನೀಯರ ಜೀವಾಣು ಅಸ್ತ್ರವೇ ಹೌದು“ ಎಂದು ಟಿವಿಯಲ್ಲಿ ವಾದಿಸುತ್ತಾನೆ. ತಾನೂ ಕಾಯಿಲೆ ಬಿದ್ದಿದ್ದೆನೆಂದೂ ಹೋಮಿಯೋಪಥಿ ಔಷಧವೊಂದರಿಂದ ಚೇತರಿಸಿಕೊಂಡೆನೆಂದೂ ಟಿವಿ ಚಾನೆಲ್‌ಗಳಲ್ಲಿ ಪ್ರಸಿದ್ಧಿ ಪಡೆಯುತ್ತಾನೆ. ಆ ಬೋಗಸ್ ಔಷಧ ಪಡೆಯಲು ಎಲ್ಲೆಡೆ ಪೈಪೋಟಿ ನಡೆಯುತ್ತದೆ. ಅತ್ತ ಅಟ್ಲಾಂಟಾದ ರೋಗಪತ್ತೆ ಕೇಂದ್ರದ ವಿಜ್ಞಾನಿಯೊಬ್ಬಳು ಅಹೋರಾತ್ರಿ ಶ್ರಮಿಸಿ ಲಸಿಕೆ (ವ್ಯಾಕ್ಸಿನ್) ತಯಾರಿಸುತ್ತಾಳೆ. ಅದನ್ನು ಸಾರ್ವಜನಿಕರ ಮೇಲೆ ಪ್ರಯೋಗಿಸಿ ಪರೀಕ್ಷಿಸಲು ಹೋದರೆ ತುಂಬಾ ಸಮಯ ಬೇಕಾಗುತ್ತದೆಂದು ತನ್ನ ಮೇಲೆಯೇ ಪ್ರಯೋಗಿಸಿ, ನಂತರ ತಾನೇ ವೈರಸ್ಸನ್ನು ಅಂಟಿಸಿಕೊಳ್ಳುತ್ತಾಳೆ. ಅವಳಿಗೆ ರೋಗ ತಗಲುವುದಿಲ್ಲ. ಲಸಿಕೆ ಯಶಸ್ವಿ ಎಂದು ಗೊತ್ತಾದಾಗ ಅದನ್ನು ಪಡೆಯಲು ಪ್ರಭಾವಿಗಳ ನೂಕುನುಗ್ಗಲು ನಡೆಯುತ್ತದೆ. ನಂತರ ಲಾಟರಿ ಮೂಲಕ (ಅವರವರ ಜನ್ಮದಿನಾಂಕದ ಪ್ರಕಾರ) ಲಸಿಕೆ ವಿತರಣೆ ಆರಂಭವಾಗುತ್ತದೆ. ಅಷ್ಟರಲ್ಲೇ ಅಮೆರಿಕದಲ್ಲಿ 25ಲಕ್ಷ ಜನ ಹಾಗೂ ಇತರ ದೇಶಗಳಲ್ಲಿ 26 ಲಕ್ಷ ಜನ ಸತ್ತಿರುತ್ತಾರೆ.ರೋಗದ ಮೂಲ ಯಾವುದೆಂದು ಶೋಧಿಸಲು ಚೀನಾಕ್ಕೆ ಹೋದ ವಿಜ್ಞಾನಿ ಲಿಯೊನಾರಾಳನ್ನು ಸ್ಥಳೀಯರು ಹಿಡಿದು ಅಡಗಿಸುತ್ತಾರೆ. ತಮಗೂ ವ್ಯಾಕ್ಸಿನ್ ಕೊಟ್ಟರೆ ಮಾತ್ರ ಅವಳನ್ನು ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ.
ವಿಸ್ವಾಸಂ ಅಧಿಕಾರಿಗಳು ವ್ಯಾಕ್ಸಿನ್ ತಂದು ವಿತರಣೆ ಆರಂಭಿಸಿದ ಮೇಲೆ ಅವಳ ಬಿಡುಗಡೆಯಾಗುತ್ತದೆ. ಆದರೆ ಅಲ್ಲಿ ವಿತರಿಸಿದ್ದು ವ್ಯಾಕ್ಸಿನ್ ಅಲ್ಲ, ಸುಳ್ಳೌಷಧ ಎಂದು ಗೊತ್ತಾಗಿ ಲಿಯೊನಾರಾ ಹೇಗಾದರೂ ಅಲ್ಲಿನ ಮುಗ್ಧರನ್ನು ಬಚಾವು ಮಾಡಲೆಂದು…ಹೋರಾಡುವಲ್ಲಿ ಕಥೆ ಕ್ಲೈಮ್ಯಾಕ್ಸಿಗೆ ಬರುತ್ತದೆ.
[ಇದು ವೈಜ್ಞಾನಿಕವಾಗಿಯೂ ಸರ್ವಸಂಪನ್ನ ಚಿತ್ರವೆಂದು ತಜ್ಞರಿಂದ ಪ್ರಶಂಸೆ ಪಡೆದ ಚಿತ್ರ. ಈಗಿನ ಕೊರೊನಾ ಮಾರಿಯಿಂದಾಗಿ ಈ ಹಳೇ ಸಿನೆಮಾಕ್ಕೆ ಈಗ ಭಾರಿ ಡಿಮಾಂಡ್ ಬಂದಿದೆ. ಸತತ ಎರಡು ವಾರಗಳಿಂದ ಅದು ಅತಿ ಹೆಚ್ಚು ಡೌನ್ಲೋಡ್ ಮಾಡಿಸಿಕೊಂಡ ಸಿನೆಮಾ ಎಂಬ ಖ್ಯಾತಿಯನ್ನು ಪಡೆದಿದೆ].
by- ನಾಗೇಶ್ ಹೆಗಡೆ.
