
ಬುದ್ದಿವಂತರ ಜಿಲ್ಲೆ’ ಎಂಬ ‘ಒಟ್ಟೆ’ ಕಿರೀಟ ಇಟ್ಟುಕೊಂಡಿರುವ ಜಿಲ್ಲೆಯ ಸುರತ್ಕಲ್ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಅವರು ಕೊರೊನಾ ವೈರಸ್ ಗೆ ಬಲಿಯಾದ ಮಹಿಳೆಯ ಅಂತ್ಯ ಸಂಸ್ಕಾರವನ್ನು ತಮ್ಮ ಕ್ಷೇತ್ರದಲ್ಲಿ ನಡೆಸಲು ಅವಕಾಶ ಕೊಡದೆ ಓಡಿಸಿದ್ದಾರೆ. ತನ್ನ ಒಪ್ಪಿಗೆ ಇಲ್ಲದೆ ನನ್ನ ಕ್ಷೇತ್ರದಲ್ಲಿ ಅಂತ್ಯ ಸಂಸ್ಕಾರ ನಡೆಸಬಾರದೆಂದು ಫರ್ಮಾನು ಹೊರಡಿಸಿದ್ದಾರಂತೆ.ಈಗ ಮೊದಲನೆಯ ಪ್ರಶ್ನೆ: ಈ ರೀತಿ ಮೃತ ವ್ಯಕ್ತಿಗಳ ಅಂತ್ಯ ಸಂಸ್ಕಾರವನ್ನು ತಡೆಯುವ ಅಧಿಕಾರ ಶಾಸಕರಿಗಿದೆಯೇ? ಇಲ್ಲ ಎಂದಾದರೆ ಅವರ ವಿರುದ್ಧ ಕ್ರಮಕೈಗೊಳ್ಳದೆ ಜಿಲ್ಲಾಢಳಿತ ಮಂಡಿ ಊರಿದ್ದು ಯಾಕೆ?”
ಪಾದರಾಯನಪುರದಲ್ಲಿ ತಪಾಸಣೆ ನಡೆಸಲು ರಾತ್ರಿ ಹೋಗುವುದು ಬೇಡ, ಹಗಲಿಗೆ ಬನ್ನಿ, ನಾನೂ ಜೊತೆಯಲ್ಲಿ ಬರುತ್ತೇನೆ” ಎಂಬ ಜಮೀರ್ ಹೇಳಿದರೆ ‘ ಆ ಕ್ಷೇತ್ರವೇನು ಜಮೀರ್ ಅವರ ಸ್ವಂತ ಆಸ್ತಿಯೇ? ಅವರನ್ನು ಯಾಕ್ರಿ ಕೇಳಬೇಕು ಎಂದು ಮುಖ್ಯಮಂತ್ರಿಯವರೂ ಸೇರಿದಂತೆ ಅಬ್ಬರಿಸಿದ್ದ ಬಿಜೆಪಿ ನಾಯಕರು, ಅವರನ್ನೇ ಬಂಧಿಸಿ ಎಂದು ಒತ್ತಾಯಿಸಿದವರು, ಶಾಸಕ ಭರತ್ ಶೆಟ್ಟಿ ಯವರ ಬೆದರಿಕೆಗೆ ಏನನ್ನುತ್ತಾರೆ?ಇದು ಕಾನೂನಿನ ಪ್ರಶ್ನೆ,ಇನ್ನೊಂದು ಮಾನವೀಯತೆಯ ಪ್ರಶ್ನೆ:ಪಾದರಾಯನಪುರದಲ್ಲಿ ಮೃತ ಮಹಿಳೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಜಮೀರ್ ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ಬಿಜೆಪಿ ಸಚಿವರು ಒತ್ತಾಯಿಸಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ್ದ ಶಾಸಕ ಜಮೀರ್ ಅವರು ಮೃತ ಮಹಿಳೆ ಆಸ್ಪತ್ರೆಯಲ್ಲಿದ್ದಾಗ ಹೋಗಿ ಚಿಕಿತ್ಸೆಯ ವೆಚ್ಚ ಭರಿಸಲು ನೆರವಾಗಿದ್ದು ಮಾತ್ರವಲ್ಲ, ಅವರ ಸಂಬಂಧಿಕರು ಅಲ್ಲಿರದಿದ್ದ ಕಾರಣ ಅವರೇ ಖುದ್ದಾಗಿ ನಿಂತು ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದರು.
“ಇದು ತಪ್ಪೆಂದು ಯಾರಾದರೂ ಹೇಳಲಿ, ನಾನು ಮಾತ್ರ ನನ್ನ ಕ್ಷೇತ್ರದಲ್ಲಿ ಮಾತ್ರವಲ್ಲ ನನ್ನ ವಿರುದ್ಧ ಆರೋಪಿಸುವವರ ಕ್ಷೇತ್ರದಲ್ಲಿ ಯಾರಾದರೂ ಸತ್ತು ಅಂತ್ಯ ಸಂಸ್ಕಾರಕ್ಕೆ ಗತಿ ಇಲ್ಲ ಎಂದಾದರೆ ಅಲ್ಲಿಯೂ ಹೋಗಿ ಆ ಕೆಲಸ ಮಾಡುತ್ತೇನೆ. ಯಾವ ರೋಗವಾದರೂ ಬರಲಿ, ನನ್ನ ಜೀವ ನನಗೆ ಮುಖ್ಯ ಅಲ್ಲ, ಮಾನವೀಯತೆ ಮುಖ್ಯ ” ಎಂದು ಹೇಳಿದ್ದರು.
ಒಬ್ಬ ಶಾಸಕರು ವೈದ್ಯಕೀಯ ಪದವಿ ಹೊಂದಿ ಆ ವೃತ್ತಿಯಲ್ಲಿದ್ದು ಕೊರೊನಾ ಸೋಂಕಿತರ ಮೃತದೇಹದಿಂದ ರೋಗ ಹರಡುವುದಿಲ್ಲ ಎಂದು ಗೊತ್ತಿದ್ದೂ ಅಂತ್ಯ ಸಂಸ್ಕಾರಕ್ಕೆ ಸ್ಥಳ ನೀಡದೆ ಓಡಿಸಿದವರು.ಇನ್ನೊಬ್ಬ ಶಾಸಕರು ಯಾವ ಎಂಬಿಬಿಎಸ್, ಮಣ್ಣಂಗಟ್ಟಿ ಯಾವುದನ್ನೂ ಓದದೆ ಇರುವ, ಆದರೆ ಯಾರೂ ಗತಿ ಇಲ್ಲದೆ ಇದ್ದಾಗ ಅಂತಹವರ ಅಂತ್ಯ ಸಂಸ್ಕಾರ ಮಾಡುವುದು ನನ್ನ ಧರ್ಮ, ಅದರಿಂದ ಯಾವ ರೋಗವೂ ಬರಲಿ, ನಾನು ಹೆದರಲಾರೆ ಎಂದು ಹೇಳುವವರು.ಒಬ್ಬ ಶಾಸಕರು ‘ಹಿಂದೂಗಳು ನಾವೆಲ್ಲ ಒಂದು’ ಎಂಬ ಘೋಷಣೆಯ ಬಲದಿಂದಲೇ ಚುನಾವಣೆಯಲ್ಲಿ ಗೆದ್ದವರು.ಆದರೆ ಮೃತ ಹಿಂದು ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡದೆ ಆ ಮೃತ ದೇಹವನ್ನು ಅನಾಥ ಮಾಡಿದವರು.
ಇನ್ನೊಬ್ಬ ಶಾಸಕರು, ತನ್ನ ಧರ್ಮದ ಮಹಿಳೆ ಮೃತಪಟ್ಟಾಗ ರೋಗ-ಸೋಂಕಿಗೆ ಅಂಜದೆ ಮೃತದೇಹಕ್ಕೆ ಹೆಗಲು ಕೊಟ್ಟವರು ಮಾತ್ರವಲ್ಲ, ಕೊರೊನಾ ಸೋಂಕಿನಿಂದ ಯಾವ ಧರ್ಮದವರು ಸತ್ತರೂ ಗತಿ ಇಲ್ಲದೆ ಇದ್ದರೆ ನಾನೇ ಹೋಗಿ ಅಂತ್ಯ ಸಂಸ್ಕಾರ ಮಾಡುತ್ತೇನೆ ಎಂದು ಹೇಳುವವರು. ಇವರಲ್ಲಿ ಯಾರು ಒಳ್ಳೆಯ ಶಾಸಕ ಎಂದು ಹೇಳುವುದು ಬೇಡ,ಪಕ್ಷ, ಸಿದ್ಧಾಂತ, ಜಾತಿ,ಧರ್ಮ ಎಲ್ಲವನ್ನೂ ಪಕ್ಕಕ್ಕಿಟ್ಟು ಹೇಳಿ ” ಇವರಿಬ್ಬರಲ್ಲಿ ಯಾರು ಒಳ್ಳೆಯ ಮನುಷ್ಯರು?”
ಅಂದ ಹಾಗೆ ಹಿಂದುಗಳ ರಕ್ಷಣೆಯ ಗುತ್ತಿಗೆ ಪಡೆದಿರುವ ಕಲ್ಲಡ್ಕದ ಭಟ್ಟರು, ಹಿಂದುಗಳ ಹತ್ಯೆ ಮಾಡಿದವರ ಬಂಧಿಸದಿದ್ದರೆ ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ ಎಂದು ಬೊಬ್ಬಿರಿದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೊದಲಾದ ಹಿಂದು ಧರ್ಮ ರಕ್ಷಕರೇನಾದರೂ ಮೃತ ಹಿಂದು ಮಹಿಳೆಗೆ ಆಗಿರುವ ಅನ್ಯಾಯದ ಬಗ್ಗೆ ಬಾಯಿ ಬಿಟ್ಟಿದ್ದಾರಾ?ಪಾದರಾಯನಪುರದ ಗಲಾಟೆಗೆ ಸ್ಥಳೀಯ ಶಾಸಕಜಮೀರ್ ಅವರೇ ಕಾರಣ ಎಂದು ವಿಚಾರಣೆ ಇಲ್ಲದೆ ತೀರ್ಪು ನೀಡಿ ಅವರನ್ನು ಬಂಧಿಸುವಂತೆ ಎರಡು ದಿನಗಳ ಕಾಲ ಆರ್ಭಟಿಸಿದ್ದ ಕನ್ನಡ ನ್ಯೂಸ್ ಚಾನೆಲ್‌ಗಳು ಈ ಪ್ರಶ್ನೆಗಳನ್ನು ಮುಂದಿಟ್ಟು ಒಂದರ್ಧ ಗಂಟೆಯ ಕಾರ್ಯಕ್ರಮ ಯಾಕೆ ಮಾಡಬಾರದು? ಬೇಕಿದ್ದರೆ ನಾನೇ ಸ್ಕ್ರಿಪ್ಟ್ ಬರೆದುಕೊಡ್ತೇನೆ.
-ದಿನೇಶ್ ಅಮ್ಮಿನಮಟ್ಟು
