

ನಮ್ಮೆಲ್ಲರ ಗೆಳೆಯ ಮಹೇಂದ್ರ ಕುಮಾರ್ ಸಾವಿಗೆ ನಿಜವಾದ ಕಾರಣ ನನಗೆ ಗೊತ್ತು, ಹೃದಯಾಘಾತ ಎನ್ನುವುದು ವೈದ್ಯರು ಹೇಳುವ ಕಾರಣ. ನಿಜವಾದ ಕಾರಣ ಅವರು ಬುದ್ದಿಯ ಮಾತು ಕೇಳದೆ ಹೃದಯದ ಮಾತಿಗೆ ಕಿವಿಕೊಟ್ಟದ್ದು ಅಂದರೆ ಅವರ ಒಳ್ಳೆಯತನ.ಒಳ್ಳೆಯವರಾಗಿರುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಒಳ್ಳೆಯವರಾಗಿದ್ದರೆ ಒಂದೋ ಕೆಟ್ಟವರು ನಿಮ್ಮನ್ನು ಕೊಲ್ಲುತ್ತಾರೆ, ಇಲ್ಲದೆ ಇದ್ದರೆ ನಿಮ್ಮ ಆರೋಗ್ಯ ಕೊಲ್ಲುತ್ತೆ. ಒಳ್ಳೆಯತನ ಎಂದರೆ ಏನು? ನಿಮ್ಮ ಸುತ್ತಲು ನಡೆಯುತ್ತಿರುವ ಅನ್ಯಾಯ, ಮೋಸ, ಹಿಂಸೆ, ಶೋಷಣೆ, ಹಿಪಾಕ್ರಸಿಗಳನ್ನು ಕಂಡಾಗ ನಿಮ್ಮ ಮನಸ್ಸು ಸಿಡಿಯುತ್ತದೆ, ಮರುಗುತ್ತದೆ. ಅದು ನಿಮ್ಮನ್ನು ಕುಟುಕುತ್ತಾ ಇರುತ್ತದೆ, ನಿಮ್ಮನ್ನು ಒಳಗೊಳಗೆ ಬೇಯುವಂತೆ ಮಾಡುತ್ತದೆ. ನಿಮ್ಮನ್ನು ವಿರೋಧಿಸಲು, ಬೀದಿಗಿಳಿದು ಪ್ರತಿಭಟಿಸಲು, ಜನರ ನಡುವೆ ಹೋಗಿ ಜಾಗೃತಿಗೊಳಿಸಲು ಪ್ರಚೋದಿಸುತ್ತಾ ಇರುತ್ತದೆ.ಆಗ ಮಧ್ಯೆ ಪ್ರವೇಶಿಸುವ ನಿಮ್ಮ ಬುದ್ದಿ ‘’ನಿನಗ್ಯಾಕಯ್ಯಾ ಊರ ಉಸಾಬರಿ, ನಿನ್ನ ಬದುಕು ನೋಡ್ಕೊ. ಮನೆಯಲ್ಲಿ ಹೆಂಡತಿ ಮಕ್ಕಳಿದ್ದಾರೆ, ಅವರ ಬಗ್ಗೆ ಯೋಚನೆ ಮಾಡು. ಜನರ ಬದುಕಿನ ಬಗ್ಗೆ ಅವರಿಗೇ ಇಲ್ಲದ ಕಾಳಜಿ ನಿನಗ್ಯಾಕಯ್ಯಾ? ತಮ್ಮ ಅನ್ನದ ಬಟ್ಟಲಿಗೆ ವಿಷ ಹಾಕುವವರಿಗೆ, ತಮ್ಮ ಬದುಕು ಕಿತ್ತುಕೊಳ್ಳುವವರಿಗೆ ಅವರು ಜೈಕಾರ ಹಾಕುತ್ತಿದ್ದಾರೆ. ಅವರು ಹಾಗೆಯೇ ಇರ್ಲಿ ಬಿಡಿ, ಅವರ ಪರವಾಗಿ ನೀನ್ಯಾಕೆ ತಲೆ ಜಜ್ಜಿಕೊಳ್ತಿ’’ ಎಂದು ತಲೆಗೆ ಮೊಟಕುತ್ತಾ ಇರುತ್ತದೆ.ಇದು ಮನುಷ್ಯರೆಲ್ಲರ ಮನಸ್ಸಿನೊಳಗೆ ನಡೆಯುವ ಬುದ್ದಿ ಮತ್ತು ಹೃದಯದ ನಡುವಿನ ಭೀಕರ ಯುದ್ಧ. ಸೋನಿಯಾಗಾಂಧಿಯೇನು ಮಹೇಂದ್ರಕುಮಾರ್ ಅಕ್ಕನೋ,ತಂಗಿಯೋ? ಆಕೆಯ ಪಕ್ಷದವರೇ ಹಾಯಾಗಿರುವಾಗ ಮಹೇಂದ್ರ ಕುಮಾರ್ ಯಾಕೆ ಸೋನಿಯಾಗಾಂಧಿಗೆ ಯಾವನೋ ತಲೆಕೆಟ್ಟ ಪತ್ರಕರ್ತ ಬೈದರೆ ಡಿಸ್ಟರ್ಬ್ ಆಗ್ಬೇಕು? ಗೆಳೆಯ ಸುಧೀರ್ ಕುಮಾರ್ ಮುರೊಳ್ಳಿಗೆ ಪೋನ್ ಮಾಡಿ ಸೋನಿಯಾ ಗಾಂಧಿ ಬಗ್ಗೆ ಒಂದು ವಿಡಿಯೋ ಮಾಡಯ್ಯಾ? ನಾನು ಅದನ್ನು ‘ನಮ್ಮ ಧ್ವನಿ’ಯಲ್ಲಿ ಹಾಕ್ತೇನೆ ಎಂದು ಯಾಕೆ ಕಾಡಬೇಕು?ಮಂಗಳೂರಿನಲ್ಲಿ ಸಂಜೆಯಿಂದ ರಾತ್ರಿ ಎರಡು ಗಂಟೆ ವರೆಗೆ 76 ವರ್ಷದ ಹಿರಿಯ ಜೀವದ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಊರೆಲ್ಲಾ ಹೊತ್ತು ತಿರುಗಾಡುವಂತಹ ಪರಿಸ್ಥಿತಿಯನ್ನು ಕಂಡಾಗ ಮಹೇಂದ್ರಕುಮಾರ್ ಯಾಕೆ ಸಿಡಿಯಬೇಕು? ಆ ಮಹಿಳೆಯೇನು ಅವರ ಅಮ್ಮನೋ? ಅತ್ತೆಯೋ?ತಪ್ಪು ಮಹೇಂದ್ರ ಕುಮಾರ್ ಅವರದ್ದು. ಅವರು ಬುದ್ದಿಯ ಮಾತು ಕೇಳಬೇಕಿತ್ತು, ಕೇಳಿದ್ದರೆ ಅಲ್ಲಿಯೇ ಅವರು ಆ ‘ಪರಿವಾರ’ದಲ್ಲಿಯೇ ಹಾಯಾಗಿ ಇರಬಹುದಿತ್ತು. ಈಗ ಗೂಟದ ಕಾರಲ್ಲಿ ಸೀಟಿ ಹಾಕಿಕೊಂಡು ತಿರುಗಾಡಬಹುದಿತ್ತು. ಹೃದಯದ ಮಾತು ಕೇಳಿ ಅವರು ತಪ್ಪು ಮಾಡಿದರು,. ಹೃದಯ ಬಹಳ ಸೂಕ್ಷ್ಮ ದುರ್ಬಲ, ಅದು ಬಹಳ ಬೇಗ ಕೈಚೆಲ್ಲಿ ಬಿಡುತ್ತೆ, ಕುಸಿದುಬಿಡುತ್ತೆ. ಪ್ರೀತಿಯ ಮಹೇಂದ್ರಕುಮಾರ್, ಬರೆಯುವುದು ಬಹಳಷ್ಟಿದೆ, ನೀವು ಬದುಕಿದ್ದರೆ ನಮ್ಮ ನಿಮ್ಮ ನಡುವಿನ ಸಹಮತ-ಭಿನ್ನಮತಗಳ ಬಗ್ಗೆಯೂ ಮಾತನಾಡುವುದಿತ್ತು, ಜಗಳ ಮಾಡುವುದಿತ್ತು. ಈಗ ಅದನ್ನು ಕಟ್ಟಿಕೊಂಡು ಏನು ಮಾಡಲಿ?ಆಸ್ಪತ್ರೆಯ ಮೋರ್ಚರಿಯಲ್ಲಿ ಮಲಗಿದ್ದ ನಿಮ್ಮ ಮುಖ ಶಾಂತವಾಗಿತ್ತು, ನಿಮ್ಮ ಕಣ್ಣಲ್ಲಿ ಕಣ್ಣೀರು ಇರಲಿಲ್ಲ. ನೀವು ಕಣ್ಣೀರು ಹಾಕಿದ್ದನ್ನು ನಾನೆಂದೂ ನೋಡಿರಲಿಲ್ಲ. ಆದರೆ ದೂರದಲ್ಲಿ ನಿಂತು ಮೌನವಾಗಿ ಬಿಕ್ಕುತ್ತಿದ್ದ ನಿಮ್ಮ ಪತ್ನಿಯ ಕಣ್ಣಲ್ಲಿ, ಹತ್ತಿರ ಬಂದು ನಿಮ್ಮನ್ನು ನೋಡಿ ಬಿಕ್ಕಿಬಿಕ್ಕಿ ಅಳುತ್ತಿದ್ದ ನಿಮ್ಮೆರಡು ಮಕ್ಕಳ ಕಣ್ಣಲ್ಲಿ ಕಣ್ಣೀರು ಇತ್ತು. ಅದನ್ನು ನಾನು ನೋಡಬಾರದಿತ್ತು. ನಿಮ್ಮ ಶಾಂತ ಮುಖಚರ್ಯೆಗಿಂತಲೂ ಆ ಕಣ್ಣೀರಿನ ಮುಖಗಳು ನನ್ನನ್ನು ಕಾಡುತ್ತಿವೆ, ಬಹುಷ: ನಾನು ಬದುಕಿರುವಷ್ಟು ದಿನವೂ ಅದು ನಮ್ಮೆಲ್ಲರನ್ನು ಕಾಡುತ್ತಲೇ ಇರಬಹುದು. ನೀವು ಹೀಗೆ ಮಾಡಬಾರದಿತ್ತು.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________

ದಿನೇಶ್ ರ, ಹೃದಯದ ಮಾತಿಗೆ ಬುದ್ಧಿ ಪ್ರೇರೇಪಣೆ ಮಾಡಿದಂತಿದೆ. ಮಹೇಂದ್ರ ಕುಮಾರ್ ಬಜರಂಗದಳದಿಂದ ಹೊರಬಂದು ಜೀವಪರ ನಿಲುವು ಪಡೆಯಲು ಹೃದಯ ಹೇಳಿತೆ ಅಥವಾ, ಬುದ್ಧಿಯೆ? ಅವರು ಅಲ್ಲಿಯೇ ಇದ್ದು ಮಾಡಬಹುದಾಗಿದ್ದ/ ಪಡೆಯಬಹುದಾಗಿದ್ದ ಹಣ, ಅಧಿಕಾರ, ಸ್ಥಾನಮಾನಗಳ ಮೇಲೂ, ‘ಹಕ್ಕಿ ಹಾರು’ವುದಿಲ್ಲವೆ?
ಮಹೇಂದ್ರ ಕುಮಾರ್ ಅವರ ಮನೆಯವರಿಗೆ ಈ ನೋವು ತಾಳಿಕೊಳ್ಳುವ ಶಕ್ತಿ ಬರಲಿ ಎಂದು ಆಶಿಸುತ್ತೇನೆ.