

ಪ್ರಗತಿಪರ ಚಿಂತಕ, ಹೋರಾಟಗಾರ, ನಮ್ಮ ಧ್ವನಿ ಬಳಗದ ಮುಖ್ಯಸ್ಥರಾದ ಮಹೇಂದ್ರ ಕುಮಾರ್‌ರವರಿಗೆ ಇಂದು ಮುಂಜಾನೆ ಹೃದಯಾಘಾತ ಸಂಭವಿಸಿದ್ದು ಕೊನೆಯುಸಿರೆಳೆದಿದ್ದಾರೆ.
ಹಠಾತ್ ಹೃದಯಾಘಾತ ಆದ ಕೂಡಲೇ ಅವರನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿನ ಅವರ ಮನೆಯಲ್ಲಿ ಸದ್ಯಕ್ಕೆ ಅವರ ಪಾರ್ಥೀವ ಶರೀರವನ್ನು ಇಡಲಾಗಿದ್ದು, ಇಂದು ಮಧ್ಯಾಹ್ನ ಅವರ ಸ್ವಗ್ರಾಮವಾದ ಕೊಪ್ಪಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನೇರವೇರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮಹೇಂದ್ರ ಕುಮಾರ್‌ರವರು ದಿಟ್ಟ ಹೋರಾಟಗಾರರಾಗಿದ್ದರು. ಯುವಕರಾಗಿದ್ದಲೇ ಹೋರಾಟದ ಮನೋಭಾವ ಬೆಳೆಸಿಕೊಂಡಿದ್ದ ಅವರು ಭಜರಂಗದಳ ಸಂಘಟನೆ ಸೇರಿದ್ದರಲ್ಲದೇ ಅದರ ರಾಜ್ಯಾಧ್ಯಕ್ಷರು ಸಹ ಆಗಿದ್ದರು. ಆ ನಂತರ ಆ ಸಂಘಟನೆಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ಅದರಿಂದ ಹೊರಬಂದು ಪ್ರಗತಿಪರ ಚಳವಳಿಯಲ್ಲಿ ಗುರುತಿಸಿಕೊಂಡಿದ್ದರು.
ಜೀವಪರ ಚಳವಳಿಯೊಂದಿಗೆ ಬೆರೆತುಹೋದ ಅವರು ಈ ಮೊದಲು ಭಜರಂಗದಳ ಸಂಘಟನೆ ಸೇರಿ ಎಂತಹ ತಪ್ಪು ಮಾಡಿದ್ದೆ ಎಂಬುದನ್ನು ಅರಿತು, ಜನರ ಪರ ಕೆಲಸ ಮಾಡಲು ನಿರ್ಧರಿಸಿದ್ದರು.
ತಮ್ಮ ಮೂಲ ಸಂಘಟನೆಯ ಹುಳುಕುಗಳನ್ನು ವಿಮರ್ಶಿಸುತ್ತಲೇ, ಪ್ರಸ್ತುತ ಸಾಮಾಜಿಕ, ರಾಜಕೀಯ, ಆರ್ಥಿಕ ವಿಷಯಗಳ ಕುರಿತು, ಸಮಾಜದ ಆಗು ಹೋಗುಗಳಿಗೆ ಬಹಳ ಹತ್ತಿರದಿಂದ ಸ್ಪಂದಿಸುತ್ತಿದ್ದರು. ನಂತರ ನಮ್ಮ ಧ್ವನಿ ಬಳಗ ಎಂಬ ಸಮಾನ ಮನಸ್ಕರ ಸಂಘಟನೆಯೊಂದನ್ನು ಹುಟ್ಟುಹಾಕಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಶೋಷಿತರ ಜಾಗೃತಿಗಾಗಿ ಶ್ರಮಿಸುತ್ತಿದ್ದರು.
ಸಂವಿಧಾನದ ಆಶಯಗಳು, ಜಾತ್ಯಾತೀತತೆ, ಸೌಹಾರ್ದತೆಯ ಕುರಿತಾಗಿದ್ದ ಅವರ ನಿಲುವು ಮತ್ತು ಆಚರಣೆಗಳಿಗಾಗಿ ಅವರು ರಾಜ್ಯಾದ್ಯಂತ ಸಾವಿರಾರು ಅಭಿಮಾನಿ ಬಳಗವನ್ನು ಹೊಂದಿದ್ದರು.
ಡಿಜಿಟಲ್ ಮಾಧ್ಯಮ ವಿಭಾಗದಲ್ಲಿ ಮುಂದಿದ್ದ ಅವರು ಪ್ರತಿನಿತ್ಯ ತಮ್ಮ ಹರಿತ ಬರಹ ಮತ್ತು ವಿಡಿಯೋಗಳ ಮೂಲಕ ಲಕ್ಷಾಂತರ ಜನರನ್ನು ತಲುಪಿದ್ದರು. ಚಿಂತನಾರ್ಹ, ಸಕಾಲಿಕ ವಿಡಿಯೋಗಳಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದರು.

ನಿನ್ನೆಯವರೆಗೂ ಸಹ ಸಕ್ರಿಯರಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಿಗಿಸಿಕೊಂಡಿದ್ದ ಮಹೇಂದ್ರ ಕುಮಾರ್‌ರವರು ರಾತ್ರಿ ಧೀಡಿರನೆ ಕಾಣಿಸಿಕೊಂಡ ಹೃದಯಾಘಾತದಿಂದಾಗಿ ಇಹಲೋಕ ತ್ಯಜಿಸಿದ್ದು ಅವರ ಅಪಾರ ಅಭಿಮಾನಿಗಳು, ಕುಟುಂಬ ಸದಸ್ಯರ, ಸಹ ಹೋರಾಟಗಾರರನ್ನು ಅಗಲಿದ್ದಾರೆ.
ಮಹೇಂದ್ರ ಕುಮಾರ್‌ರವರ ನಿಧಾನಕ್ಕೆ ರಾಜ್ಯದಾದ್ಯಂತ ಹಲವಾರು ಜನರು ಸಂತಾಪ ಸೂಚಿಸಿದ್ದು, ಧಿಡೀರ್ ಆಘಾತಕ್ಕೆ ಕಂಬನಿ ಮಿಡಿದಿದ್ದಾರೆ.
