ಕೆಲವರು ಮಾಡಿದ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನು ದೂಷಿಸುವುದು ಸರಿಯಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
Source : Online Desk
ಮುಂಬೈ: ಕೆಲವರು ಮಾಡಿದ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನು ದೂಷಿಸುವುದು ಸರಿಯಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಭಾರತದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಾರಕ ಕೊರೋನಾ ವೈರಸ್ ಹರಡಲು ದೆಹಲಿಯಲ್ಲಿ ಕಳೆದ ತಿಂಗಳ ಆರಂಭದಲ್ಲಿ ತಬ್ಲಿಘಿ ಜಮಾತ್ ಸಮಾವೇಶ ಆಯೋಜಿಸಿದ್ದೇ ಕಾರಣ. ಇಲ್ಲಿ ಪ್ರಪಂಚದ ಹಲವು ದೇಶಗಳಿಂದ ಬಂದಿದ್ದ ಮುಸಲ್ಮಾನರ ಜೊತೆಗೆ ಭಾಗವಹಿಸಿದ್ದ ನಮ್ಮದೇಶದ ವಿವಿಧ ರಾಜ್ಯಗಳ ಮುಸ್ಲಿಮರ ಮೂಲಕ ಇಡೀ ದೇಶಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಕೊರೋನಾ ಹರಡಿತು ಎಂಬ ಆರೋಪಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಅದರ ಬಗ್ಗೆ ಮಾತನಾಡಿದ್ದಾರೆ.
ತಬ್ಲಿಘಿ ಸಮಾವೇಶದಲ್ಲಿ ಪಾಲ್ಗೊಂಡವರಿಂದ ಕೊರೋನಾ ಹರಡಿತು ಎಂದು ಕೆಲವರು ಮಾಡಿದ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯದವರು ಸರಿಯಿಲ್ಲ ಎಂದು ಹೇಳುವುದು ಸರಿಯಲ್ಲ. ಈ ಸಂದರ್ಭದಲ್ಲಿ ಜಾತಿ, ಧರ್ಮ,ಬೇಧಭಾವ ತೋರಿಸದೆ ಕೊರೋನಾ ಸೋಂಕಿತರಿಗೆ ಎಲ್ಲರೂ ಸಹಾಯ ಮಾಡುವುದು ಅಗತ್ಯ ಎಂದರು.
ಅಕ್ಷಯ ತೃತೀಯ ಅಂಗವಾಗಿ ಲಾಕ್ ಡೌನ್ ಮಧ್ಯೆ ನಾಗ್ಪುರದಿಂದ ಆನ್ ಲೈನ್ ಮೂಲಕ ಮಾತನಾಡಿದ ಅವರು, ಭಾರತದ ಎಲ್ಲಾ 130 ಕೋಟಿ ಜನರು ನಮ್ಮ ಕುಟುಂಬ. ಭಾರತೀಯರಾದ ನಾವೆಲ್ಲರೂ ಒಂದೇ. ಕೆಲವರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ಬೈಯುವುದು ಸರಿಯಲ್ಲ. ಎರಡೂ ಸಮುದಾಯಗಳ ಪ್ರಬುದ್ಧ ಜನರು ಮುಂದೆ ಬಂದು ಮಾತುಕತೆ ನಡೆಸಿ ಜನರ ಮನಸ್ಸಿನಲ್ಲಿರುವ ಪೂರ್ವಾಗ್ರಹ ಪೀಡಿತ ಮನೋಭಾವನೆಯನ್ನು ಹೋಗಲಾಡಿಸಬೇಕು ಎಂದರು.
ಮಹಾರಾಷ್ಟ್ರದ ಪಲ್ಗಾರ್ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಬ್ಬರು ಸಾಧುಗಳ ಸಾಮೂಹಿಕ ಹತ್ಯೆಗೆ ಪೊಲೀಸರು ಕಾರಣ ಎಂದು ಪರೋಕ್ಷವಾಗಿ ಆರೋಪಿಸಿದರು. ದಾಳಿಕೋರರ ಮೇಲೆ ಆರೋಪ ಮಾಡಿದ ಅವರು, ಗ್ರಾಮಸ್ಥರು ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳಬಾರದಿತ್ತು. ಇಬ್ಬರು ಸಾಧುಗಳು ಮುಗ್ಧರಾಗಿದ್ದರು.ಬೇರೆ ಬೇರೆಯವರು ಹೇಳುವ ಮಾತುಗಳನ್ನು ಪಕ್ಕಕ್ಕಿಟ್ಟು ನೋಡಿ, ಮುಗ್ಧ ಜನರನ್ನು ಕೊಲ್ಲುವುದು ಸರಿಯೇ ಎಂದು ಕೇಳಿದರು.
ಈ ಕೊರೋನಾ ಸಂಕಷ್ಟದಲ್ಲಿ ಆರ್ ಎಸ್ಎಸ್ ದೇಶಾದ್ಯಂತ ಸಹಾಯ ಮಾಡುತ್ತಿದ್ದು 3 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ದೇಶದ 55 ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ 33 ಲಕ್ಷ ಕಿಟ್ ಗಳನ್ನು ವಿತರಿಸಿದ್ದು ಏಪ್ರಿಲ್ 24ರವರೆಗೆ 2 ಕೋಟಿ ಆಹಾರ ಪೊಟ್ಟಣಗಳನ್ನು ವಿತರಿಸಿದ್ದೇವೆ. ಇಲ್ಲಿ ಮಾಡಿರುವ ಕೆಲಸದ ಬಗ್ಗೆ ಹೇಳಿಕೊಳ್ಳದೆ ಇನ್ನೊಬ್ಬರಿಗೆ ಸಹಾಯ ಮಾಡುವುದು ಮುಖ್ಯ ಎಂದರು.