

ಪ್ರೀತಿ-ಪ್ರೇಮದ ಘಮ ನಮ್ಮ ಮೂಗಿಗೂ ತಾಕತೊಡಗಿದಾಗಲೇ ಬೆಳ್ಳಿತೆರೆಯಲ್ಲಿ ಹೊಸ ಜೋಡಿಗಳು ಧೂಳೆಬ್ಬಿಸತೊಡಗಿದ್ದರು!.
ಅಂಥ ಜೋಡಿಗಳಲ್ಲಿ ನಾಗಾರ್ಜುನ,ಅಮಲಾ,ಅಂಬಿಕಾ. ಅರ್ಜುನಸರ್ಜಾ ಆಶಾರಾಣಿ, ಶಿವರಾಜ್‍ಕುಮಾರ ಸುಧಾರಾಣಿ, ಕಾಜಲ್-ಶಾರುಖ್ ಖಾನ್, ಅಮೀರ್ಖಾನ್-ಮೊನಿಷಾ, ಮಾಧುರಿ ದೀಕ್ಷಿತ್-ಅನಿಲಕಪೂರ್, ಮಾಲಾಶ್ರೀ-ಸುನಿಲ್, ಚಿರಂಜೀವಿ-ದಿವ್ಯಾಭಾ ರತಿ, ಇತ್ಯಾದಿ….
ಇದೇ ಕಾಲದಲ್ಲಿ ಜೋಡಿ ಹೀರೋಗಳ ಸಿನೆಮಾ ಯುಗವೂ ಪ್ರಾರಂಭವಾಗಿತ್ತು. ಅನಿಲ್ ಕಪೂರ್,ನಾನಾ ಪಾಟೇಕರ್, ರಜನಿಕಾಂತ್-ಅರವಿಂದಸ್ವಾಮಿ, ಶಿವರಾಜ್ ಕುಮಾರ-ರಮೇಶ್,ಉಪೇಂದ್ರ-ಶಿವರಾಜ್ ಕುಮಾರ, ಅಂಬರೀಷ್-ರಾಜ್ ಕುಮಾರ, ಕುಮಾರ ಗೋವಿಂದ್-ರಮೇಶ ಮುಂತಾದವರು.
ಇಷ್ಟೆಲ್ಲಾ ಹೀರೋ,ಹಿರೋಯಿನ್ ಗಳಲ್ಲಿ ಈಗಲೂ ಫಾರ್ಮ್ ನಲ್ಲಿರುವ ನಾಯಕ ನಟರು ಶಿವರಾಜ್ ಕುಮಾರ, ಶಾರುಖ್ ಖಾನ್, ನಾಗಾರ್ಜುನ, ಅಮೀರ್ ಖಾನ್‍ರಂಥ ಕೆಲವರು ಮಾತ್ರ,
ಇವರನ್ನು ಬಿಟ್ಟು ಬೇರೆಯವರು ನೆನಪಾಗದಿರಲು ಕಾರಣ ಅವರು ಬೆಳ್ಳಿಪರದೆಯಲ್ಲಿ,ಸಾಮಾಜಿಕ ಜೀವನದಲ್ಲಿ ಮಹತ್ವ ಕಳೆದುಕೊಂಡಿದ್ದಾರೆ.
ಇಂಥ ಪರದೆ ಹೀರೋಗಳಲ್ಲಿ ದಕ್ಷಿಣದಲ್ಲೊಬ್ಬ ಕಮಲ್‍ಹಾಸನ್ ಇದ್ದಾರಲ್ಲ ಅವರಂಥ ಪ್ರಯೋಗಶೀಲ ನಟ ಭಾರತದಲ್ಲಿಲ್ಲ, ಈಗವರು ಸಿನೆಮಾಕ್ಕಿಂತ ರಾಜಕೀಯದತ್ತ ದೃಷ್ಟಿ ನೆಟ್ಟಿದ್ದಾರೆ. ಇವರೊಂದಿಗೆ ಉಲ್ಲೇಖಿಸಲೇಬೇಕಾದ ಭಾರತ ಚಿತ್ರರಂಗದ ಜೀವಂತ ದಂತಕತೆ ಪ್ರಕಾಶ ರೈ. ಪ್ರಕಾಶ ರಾಜ್ ಹೆಸರಿನಿಂದ ಪ್ರಸಿದ್ಧರಾಗಿ ಈಗಲೂ ವೃತ್ತಿ-ಪ್ರವೃತ್ತಿಗಳ ಮೂಲಕ ಸಮಾಜಮುಖಿಯಾಗಿರುವ ರಾಕ್ಷಸ ನಟ.
ಮೊನ್ನೆ ಲಾಕ್‍ಡೌನ್ ಘೋಷಣೆಯಾಗುತ್ತಲೇ ತನ್ನ ನೌಕರರಿಗೆ ಎರಡು ತಿಂಗಳ ಮುಂಗಡ ವೇತನ ಕೊಟ್ಟು ರಜೆ ನೀಡಿದಾತ, ಪ್ರತಿದಿನ 250 ಜನರಿಗೆ ಊಟಹಾಕುತ್ತಿರುವ ಅನ್ನದಾತ ನಮ್ಮ ಪ್ರಕಾಶ ರಾಜ್.
ಇವರೆಲ್ಲರ ಪ್ರಭಾವಳಿಯಲ್ಲಿ ನಲಿದ ನಮಗೆ ಇತ್ತೀಚಿನ ದಶಕಗಳ ಹೀರೋಗಳಲ್ಲಿ ಅಮೀರ್ ಖಾನ್ ಕಾಡುತ್ತಾರೆ.
ಮೊದಮೊದಲು ಅಮೀರ್ ಬಾಲನಟನಾಗಿ,ಪ್ರೇಮಚಿತ್ರಗಳಿಂದ ಪ್ರಾರಂಭವಾಗಿ ಪರದೇಶಿ, ಸರ್ಫರೋಶ್, ತ್ರೀ ಈಡಿಯಟ್ಸ್,ಲಗಾನ್ ಅವರ ಚಿತ್ರಗಳ ಖದರ್ರೆ ಬೇರೆ. ರಂಗೀಲಾ,ತಾರೆ ಜಮೀನ್ ಪರ್, ಮಂಗಲ್ಪಾಂಡೆ, ಗಜನಿ ವಿಭಿನ್ನ ಚಿತ್ರ, ಸವಾಲಿನ ಪಾತ್ರಗಳನ್ನು ಆಯ್ದುಕೊಳ್ಳುವ ಅಮೀರ್ ಚಿತ್ರರಂಗದ ನಂಟಿನ ಮೂಲಕವೇ ಬೆಳ್ಳಿಪದರೆಗೆ ಬಂದು ಕಯಾಮತ್ ಸೆ ಕಯಾಮತ್ ತಕ್, ದಿಲ್,ಮನ್, ಪ್ಯಾರ್ ಹ್ಐ ಕಿ ಮಾನತಾ ನಹೀ, ಜೋ ಜೀತಾ ವಹೀ ಸಿಕಂದರ್ ಚಿತ್ರಗಳ ಮೂಲಕ ಬಾಲಿವುಡ್ ನಲ್ಲಿ ಭದ್ರನೆಲೆ ಕಂಡುಕೊಂಡವರು.
4 ದಶಕಗಳ ಚಿತ್ರರಂಗದ ಸವಾಲು, ಸಾಧನೆಗಳಿಗಾಗಿ ಅಮೀರ್ ಪಡೆಯದ ಪ್ರಶಸ್ತಿಗಳೇ ವಿರಳ.
ಪದ್ಮಶ್ರೀ, ಪದ್ಮಭೂಷಣ ಪುರಸ್ಕಾರ ಪಡೆದಿರುವ ಅಮೀರ್ ಖಾನ್ ಚಿತ್ರರಂಗದಲ್ಲಿ ನಟ,ನಿರ್ದೇಶಕ,ನಿರ್ಮಾಪಕ,ಕಥೆಗಾರ, ಹಿನ್ನೆಲೆಗಾಯಕ ಹೀಗೆ ಅವರ ವೈವಿಧ್ಯತೆ ಅವರ ಬಹುಮುಖಿತ್ವಕ್ಕೆ ಸಾಕ್ಷಿ.
ಇಂಥ ಅಸಾಧಾರಣ ಯಶಸ್ವಿ ನಟ,ನಿರ್ಧೇಶಕ, ನಿರ್ಮಾಪಕ ಕಳೆದ ವಾರ ಮುಂಬೈನ ಸ್ಲಂ ಒಂದಕ್ಕೆ ಲಾರಿಯೊಂದರಲ್ಲಿ ಮೈದಾಹಿಟ್ಟಿನ ಚೀಲ ಕಳುಹಿಸಿ, ಬಹಿರಂಗ ಘೋಷಣೆ ಮಾಡಿಸಿದರು. ‘ಅಮೀರ್ ಖಾನ್ ನಿಮಗೆ ತಲಾ ಒಂದು ಕೇ.ಜಿ.ಯ ಮೈದಾ ಹಿಟ್ಟು ಕಳುಹಿಸಿದ್ದಾರೆ. ಅಗತ್ಯವಿದ್ದವರು ಶಿಸ್ತಿನಿಂದ ತಲಾ ಒಂದು ಚೀಲ ಪಡೆಯಬೇಕು ಎಂದು ತಿಳಿಸಿದ್ದಾರೆ.ಅಗತ್ಯವಿದ್ದವರು ಸ್ವೀಕರಿಸಿ’
ಒಂದು ಕೇಜಿ ಮೈದಾಹಿಟ್ಟಿನ ಬಗ್ಗೆ ಉಪೇಕ್ಷೆ ಮಾಡಿದ ಕೆಲವರ ನಡುವೆ ಅನೇಕರು ಚೀಲ ಪಡೆದು ಮನೆಗೊಯ್ದು ಸುರಿದಾಗ ಆಶ್ಚರ್ಯ ಕಾದಿತ್ತು. ತಲಾ ಎರಡು ಸಾವಿರ ರೂಪಾಯಿಗಳ ಏಳೆಂಟು ನೋಟು ಎಣಿಸಿದ ಬಡವರು ಅಮೀರ್ ರಿಗೆ ಕೃತಜ್ಞತೆ ಹೇಳದೆ ಇರಲಿಲ್ಲ.
ಬದುಕು, ಚಿತ್ರ, ಚಿತ್ರರಂಗಗಳಲ್ಲಿ ಮಾಂತ್ರಿಕನಾಗಿ ಗೆದ್ದ ಅಮೀರ್ ಕರೋನಾ ಅವಧಿಯಲ್ಲಿ ಪ್ರಚಾರವಿಲ್ಲದೆ ತಮ್ಮ ಅಳಿಲುಸೇವೆ ಮಾಡಿ ಮಾದರಿಯಾಗಿದ್ದಾರೆ. ಚಿತ್ರರಂಗದಲ್ಲಿ ಉದಾರಿ, ಚಿತ್ರದಲ್ಲಿ ತ್ಯಾಗಿ, ಪ್ರಯೋಗಶೀಲ,ಕಠಿಣಪರಿಶ್ರಮಿ ಎಂದೆಲ್ಲಾ ಮಾದರಿ ಆಗಿದ್ದ ಅಮೀರ್ ನಿಜಜೀವನದಲ್ಲೂ ಹೀರೋ ಆಗುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಸರ್ವರ ಸುಖ-ಖುಷಿಯ ಪ್ರೇರಕ ಅಮೀರ್ ಖಾನ್ ಮುಸ್ಲಿಂ ಎನ್ನುವ ಕಾರಣಕ್ಕೆ ಅವರನ್ನು ಜನ ವಿರೋಧಿಸಿದರೆ ಅಂಥವರನ್ನು ಮೂರ್ಖರೆನ್ನದೆ ಮತ್ತೇನೆಂದು ಕರೆದು ಗೌರವಿಸಬೇಕು?

