

ಅವತ್ತು ನಾವು ಅಡ್ಡ ಬರದೇ ಇದ್ದಿದ್ದರೆ ಇವು ಜಿಂಕೆಗಳಿಗೆ ಒಂದು ಗತಿ ಕಾಣಿಸಿಯೇ ಬಿಡುತ್ತಿದ್ದವು.

ನಾವು ಅವುಗಳ ಬೇಟೆಗೆ ಅನಗತ್ಯ ತೊಂದರೆ ಕೊಟ್ಟೆವು. ಬಿಟ್ಟ ಬಾಣದಂತೆ ಲೀಲಾಜಾಲವಾಗಿ ನುಗ್ಗಿ ಬೆನ್ನಟ್ಟುವ ಇವುಗಳ ಚಲನಾ ರೀತಿಯೇ ವಿಶಿಷ್ಟ. ಮಾಂಸಕ್ಕಾಗಿ ಬೇಟೆಯಾಡುವ ಪ್ರಾಣಿಗಳು ಹೀಗೆ. ಸದಾ ತಮ್ಮ ಕಸುಬಿನಲ್ಲಿ ಪಕ್ಕಾ ಇರುತ್ತವೆ. ಇವುಗಳ ಸಮಯಪ್ರಜ್ಞೆ, ಹೊಂಚು ಹಾಕುವ ವಿಧಾನ, ಕಾಯುವ ತಾಳ್ಮೆ, ಪರಸ್ಪರ ತಾಳಮೇಳ ಎಲ್ಲವೂ ಕರಾರುವಾಕ್ಕು.
ಕೃಪಾಕರ ಸೇನಾನಿಯವರ ಕೆನ್ನಾಯಿಯ ಜಾಡಿನಲ್ಲಿ ಪುಸ್ತಕ ಓದಿದವರಿಗೆ ಇಲ್ಲಿನ ಅತಿಥಿಗಳ ಪರಿಚಯ ಆಗಿರುತ್ತದೆ. ಕಿಂಚಿತ್ತೂ ಒರಿಚಯ ಆಗದಿದ್ದರೆ ದಯಮಾಡಿ ಒಮ್ಮೆ ಓದಿ. ನಾನೋದಿದ ಅತ್ಯುತ್ತಮ ಪುಸ್ತಕವಿದು.
ಮೊಸಳೆ ಸರ್, ಪುಷ್ಪರಾಜ ಮತ್ತು ನಾನು ಅಲೆದಾಡುತ್ತಿದ್ದೆವು. ಒಂದು ಕೆರೆಯ ಬಳಿ ಸಂಜೆ ಬಂದಾಗ ಬೊಮ್ಮಣ್ಣ ಸಿಕ್ಕು ಹಿಂದಿನ ದಿನ ನೀರಿಗಿಳಿದ ಒಂದು ಕಡವೆಯ ಕಣ್ಣನ್ನು ಅವು ಮೊದಲು ಕಿತ್ತು ತಿಂದು ಹಾಕಿದ್ದವು. ಕಣ್ಣು ಕಾಣದ ಕಡವೆ ಸುಸ್ತಾಗಿ ದಡಕ್ಕೆ ಬಂದಾಗ ಎಳೆದುಕೊಂಡು ಹೋದವು. ಕತ್ತಲಾದ ಕಾರಣ ಹೆಚ್ಚೇನು ಕಾಣಲಿಲ್ಲ. ನಿನ್ನೆ ನೀವು ಬಂದಿದ್ದರೆ ಇಲ್ಲೇ ನೋಡಬಹುದಿತ್ತು ಎಂದು ಕೆರೆಯ ಕಡೆ ಕೈ ತೋರಿಸಿ ಹೇಳಿದ. ಛೇ ಎಂದು ಕೈಕೈ ಹಿಸುಕಿಕೊಂಡು ಸಂಕಟಪಟ್ಟೆವು. ಇಂಥ ಸಂದರ್ಭಗಳು ಫೋಟೋಗ್ರಫಿ ಹುಚ್ಚರಿಗೆ ಸಿಗುವುದೇ ಪುಣ್ಯ.
ನಿಮಗೀಗ ಕಿಂಚಿತ್ತೂ ಕರುಣೆ ಇಲ್ಲದ ಕೊಲೆಗಾರ ಪ್ರಾಣಿಗಳು ಇವೆಂದು ನಿಮಗನ್ನಿಸಿರಬಹುದು. ಆದರೆ ಹಾಗೆಲ್ಲ ಯೋಚಿಸಬಾರದು. ಪ್ರಕೃತಿ ಅವುಗಳ ಬದುಕಿನ ಲಯ ರೂಪಿಸಿರುವುದೇ ಹಾಗೆ. ಇದು ಅವುಗಳ ಆಹಾರ ಕ್ರಮ.
ಕೃಪಾಕರ ಸೇನಾನಿ ಹೇಳುವಂತೆ “ಜಿಗಿದು ಓಡುವ ಜಿಂಕೆಗಳ ತೊಡೆಗಳನ್ನು ಗರಗಸದಂತೆ ಹರಿತವಾದ ತಮ್ಮ ಹಲ್ಲುಗಳಿಂದ ಹರಿದು ಅವಿನ್ನು ಸಾಯುವ ಮೊದಲೇ ತಮ್ಮ ಊಟವನ್ನು ಶುರುಮಾಡುತ್ತವೆ”.
ಕಾಡು ನಾಯಿಗಳು ನಾಚಿಕೆ ಸ್ವಭಾವದ, ಊರು ಕೇರಿ ಪ್ರವೇಶಿಸದ ಜೀವಿಗಳು. ಗುಂಪಿನಲ್ಲಿ ಪಕ್ಕಾ ಪ್ಲಾನ್ ರೂಪಿಸಿಕೊಂಡು ಕಾರ್ಯಾಚರಣೆ ಮಾಡುತ್ತವೆ. ವಿವಿಧ ದಿಕ್ಕುಗಳಿಂದ ಏಕಕಾಲದಲ್ಲಿ ದಾಳಿ ಮಾಡುತ್ತವೆ. ಪ್ರಾಬಲ್ಯ ಇರುವ ಹಿರಿಯ ಮುಖಂಡ ಇಡೀ ತಂಡವನ್ನು ಗೈಡ್ ಮಾಡುತ್ತಾನೆ.
ಹಗಲು ಮತ್ತು ಸಂಜೆಯ ಹೊತ್ತು ಹೆಚ್ಚಾಗಿ ಬೇಟೆಯಾಡುತ್ತವೆ.ಇದು ತಿಳಿದು ಬೆಳಿಗ್ಗೆ ಹಿಂದಿನ ದಿನ ಗುರುತಿಸಿಕೊಂಡ ಜಾಗಕ್ಕೆ ಬರುವಷ್ಟರಲ್ಲಾಗಲೇ ಒಂದು ಜಿಂಕೆಯ ಕಥೆ ಮುಗಿಸಿದ್ದವು. ರಕ್ತ ಚೆಲ್ಲಾಡಿತ್ತು. ಚರ್ಮ ಮೂಳೆಗಳ ಒಂದಿಷ್ಟು ಪಾಲು ಮಿಕ್ಕಿತ್ತು. ಆದರೆ ಕೆನ್ನಾಯಿಗಳು ಕಾಣುತ್ತಿರಲಿಲ್ಲ. ಕಾಯೋಣ ಬಂದೇ ಬರುತ್ತವೆ ಎಂದು ಕಾದೆವು. ಪೊದೆಯಿಂದ ಮಿಣಿಮಿಣಿ ಇಣುಕಿ ನೋಡಿ ಧಾವಿಸಿ ಬಂದವು. ಒಂದಂತೂ ಜಿಂಕೆಯ ಗಟ್ಟಿ ಮೂಳೆಗಳ ಗುಡ್ ಡೇ ಬಿಸ್ಕತ್ತಿನಂತೆ ಕುರುಂ ಕುರುಂ ಎಂದು ಕಡಿದು ಚಪ್ಪರಿಸುತ್ತಿತ್ತು. ಕೆಲವೇ ಕ್ಷಣದಲ್ಲಿ ನಾವು ಮರೆಯಲ್ಲಿರುವುದು ತಿಳಿದೇ ಹೋಯಿತು. ಅಳಿದುಳಿದ ಎಲ್ಲವನ್ನೂ ಬಾಚಿ ಬಳಿದುಕೊಂಡು ಓಡಿ ಹೋದವು.
ಆ ದಿನ ಸಂಜೆ ಜಿಂಕೆ ಹಿಂಡೊಂದನ್ನು ಆಸರೆಯ ಆಯ್ಕೆ ಮಾಡಿಕೊಂಡು ಮರೆಯಲ್ಲಿ ಕಾದು ಕುಳಿತೆವು. ಹಿಂದಿನ ದಿನ ಇಲ್ಲಿ ಬಂದಿದ್ದವು ಎಂದು ಒಬ್ಬರು ಹೇಳಿದ್ದರು. ಇವತ್ತೂ ಇಲ್ಲಿಗೇ ಬರಬಹುದೆಂಬ ಆಸೆ, ಊಹೆ, ತರ್ಕ, ಎಲ್ಲಾ ಸೇರಿಸಿಕೊಂಡು ಪ್ಲಾನ್ ಮಾಡಿ ಕೂತೆವು. ಮುಂದೇನಾಯಿತೆಂದು ಮುಂದೊಂದು ದಿನ ಹೇಳುವೆ.
