

ಕೇಂದ್ರ ಸರ್ಕಾರದ ಆರೋಗ್ಯ ಸೇತು ಮೊಬೈಲ್ ಆ್ಯಪ್ ಗೆ ಸಂಬಂಧಿಸಿದಂತೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಇದೊಂದು ‘ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ’ ಎಂದು ಆರೋಪಿಸಿದ್ದಾರೆ.

Source : PTI
ನವದೆಹಲಿ: ಕೇಂದ್ರ ಸರ್ಕಾರದ ಆರೋಗ್ಯ ಸೇತು ಮೊಬೈಲ್ ಆ್ಯಪ್ ಗೆ ಸಂಬಂಧಿಸಿದಂತೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ , ಇದೊಂದು ‘ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ’ ಎಂದು ಆರೋಪಿಸಿದ್ದಾರೆ.
ಆರೋಗ್ಯ ಸೇತು ಆ್ಯಪ್ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಾಗಿದ್ದು, ಡಾಟಾ ಭದ್ರತೆ ಮತ್ತು ಖಾಸಗಿತನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಆರೋಗ್ಯ ಸೇತು ಆ್ಯಪ್ ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆಯಾಗಿದ್ದು, ಯಾವುದೇ ಮೇಲ್ವಿಚಾರಣೆಯಿಲ್ಲದೆ ಖಾಸಗಿ ಆಪರೇಟರ್‌ಗೆ ಹೊರಗುತ್ತಿಗೆಯನ್ನು ನೀಡಿದೆ. ಹಾಗಾಗಿ ಡೇಟಾ ಸೆಕ್ಯೂರಿಟಿ ಹಾಗೂ ಗೌಪ್ಯತೆ ಸೋರಿಕೆ ಬಗ್ಗೆ ಆತಂಕವನ್ನು ಹೆಚ್ಚಿಸುತ್ತಿದೆ. ತಂತ್ರಜ್ಞಾನವು ನಮ್ಮನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ. ಆದರೆ ನಾಗರಿಕರ ಒಪ್ಪಿಗೆಯಿಲ್ಲದೆ ಅವರನ್ನು ಪತ್ತೆ ಹಚ್ಚಲು ಭಯವನ್ನು ಬಳಸಿಕೊಳ್ಳಬಾರದು’ ಎಂದು ಹೇಳಿದ್ದಾರೆ.
ಇನ್ನು ರಾಹುಲ್ ಗಾಂಧಿ ಆರೋಪವನ್ನು ಬಿಜೆಪಿ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಕಾಂಗ್ರೆಸ್ ನಾಯಕ ಈಗ ಮತ್ತೊಂದು ಹೊಸ ಸುಳ್ಳು ಹೇಳುತ್ತಿದ್ದಾರೆ. ತಮ್ಮ ಜೀವನದುದ್ದಕ್ಕೂ ಕಣ್ಗಾವಲಿನಲ್ಲಿ ತೊಡಗಿರುವವರಿಗೆ ತಂತ್ರಜ್ಞಾನವನ್ನು ಹೇಗೆ ಉತ್ತಮಗೊಳಿಸಬಹುದು ಎಂದು ತಿಳಿದಿರುವುದಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ತಿರುಗೇಟು ನೀಡಿದ್ದಾರೆ.
ಕೊರೋನಾ ವೈರಸ್ ವಿರುದ್ದ ಹೋರಾಟದಲ್ಲಿ ಕೇಂದ್ರ ಸರಕಾರವು ತಂತ್ರಜ್ಞಾನದ ನೆರವನ್ನು ಪಡೆದಿತ್ತು. ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಆ್ಯಪ್ ಅನ್ನು ಎಲ್ಲ ಸರಕಾರಿ ನೌಕರರು ಮತ್ತು ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಕಡ್ಡಾಯವಾಗಿ ಬಳಕೆ ಮಾಡುವಂತೆ ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಉಲ್ಲೇಖ ಮಾಡಲಾಗಿದೆ.
