

ಮತ್ತೆ…
ಯುದ್ಧವಂತೆ ಬುದ್ಧ!
ಯಾವ ಬಂದೂಕಿಗೆ
ಬಾಯ ತುರಿಕೆಯೋ ಕಾಣೆ
ಮತ್ತೆ ಬಂದಿದೆಯಂತೆ
ನರ ಬೇಟೆಯ ಸಮಯ
ಸಿದ್ಧ ಮಾಡುತ್ತಾರಲ್ಲಿ
ಹೆರವರ ಮಕ್ಕಳನ್ನು
ಬಲಿ ಕೊಡುವ ಪೀಠಕ್ಕೆ
ಇಲ್ಲಿ,
ಎದೆಯ ಕರಿಮಣಿಯನೊಮ್ಮೆ
ಮುಟ್ಟಿ ಮುಟ್ಟಿ ಅವಚುತ್ತಾರಿವರು
ಇನ್ನೋರ್ವರೆಲ್ಲೋ..
ಕುರ್ಚಿಯ ಕಾಲುಗಳನ್ನು
ಗಟ್ಟಿ ಮಾಡಿಸಿಕೊಳ್ಳುತ್ತಾರೆ
ಮುಂದಿನ ರಂಗದ
ಭರ್ಜರಿ ತಾಲೀಮಿನೊಂದಿಗೆ.
ನೀ ಬರಲು,
ಈಗಲೇ ಸರಿಯಾಗಿದೆ ಕಾಲ
ಬಂದು ಬಿಡು
ಬೆರಳೇ … ಬೇಕೆಂದವನಿಗೆ
ನೀ ಹೇಳಿದ ಕಥೆಯನ್ನೊಮ್ಮೆ ಹೇಳಿಬಿಡು
ಯುದ್ಧ ನಿಂತಾದರೂ..
ನಿಲ್ಲಲಿ ಇಲ್ಲಿ.

