ಗೆಳೆಯರೆ/ಬಂಧುಗಳೆ,
ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು. ಬುದ್ಧನನ್ನು ಓದುವುದೆಂದರೆ, ಬುದ್ಧನ ತತ್ವವನ್ನು ಬದುಕಲ್ಲಿ ಆಚರಣೆಗೊಳಪಡಿಸುವುದು ಎಂದೇ ನಾನು ಭಾವಿಸಿರುವೆ. ಯಾವುದೇ ಸಾಂಸ್ಥಿಕ ಧರ್ಮ ತನ್ನ ವಿಧಿನಿಷೇಧ ಮತ್ತು ಕಟ್ಟಳೆಗಳಿಂದ ನಮ್ಮನ್ನು ನಿಯಂತ್ರಿಸುತ್ತದೆ. ಆಗ ಆ ಧರ್ಮ ತನ್ನ ಮೂಲ ತತ್ವದಿಂದಲೇ ದೂರ ಸರಿದು ಯಜಮಾನಿಕೆಯ ಕೇಂದ್ರವಾಗಿಬಿಡುತ್ತದೆ. ಬುದ್ಧನ ಚಿಂತನೆಗಳು ಈ ಸಾಂಸ್ಥಿಕ ಯಜಮಾನಿಕೆಯನ್ನು ವಿರೋಧಿಸುತ್ತವೆ. ತತ್ವಗಳು ಸಾಂಸ್ಥೀಕರಣಗೊಂಡು ಜಡ ಆಚರಣೆಗಳಾದಾಗ ಅವುಗಳಲ್ಲಿ ಜೀವ ಇರುವುದಿಲ್ಲ. ಬುದ್ಧನ ತತ್ವಗಳು ಸರಳ ಬದುಕಲ್ಲಿ ಆಚರಣೆಗೆ ಒಗ್ಗಿಕೊಳ್ಳುವಷ್ಟು ಪ್ರಸ್ತತವಾಗಿವೆ. ಅದಕ್ಕಾಗಿಯೇ ಬುದ್ಧನದು ಕೇವಲ ಒಣ ಧಾರ್ಮಿಕ ಗೊಣಗಾಟವಲ್ಲ, ಎಲ್ಲವನ್ನೂ ಆಪೋಶನ ತೆಗೆದುಕೊಂಡುಬಿಡುವ ಹೂಂಕಾರವೂ ಅಲ್ಲ. ಲೌಕಿಕದ ಬದುಕಲ್ಲಿ ನಿತ್ಯ ಆಚರಣೆಗೆ ತರಬಹುದಾದ ಸಂಗತಿಗಳನ್ನು ಬುದ್ಧ ತನ್ನ ತತ್ವದ ಮೂಲಕ ನಮ್ಮ ಮುಂದಿಟ್ಟಿದ್ದಾನೆ. ಹಾಗಾಗಿ ಬುದ್ಧಿಸಮ್ ಎಂದರೆ ಎಲ್ಲರೂ ಸಹಜವಾಗಿ, ಸರಳವಾಗಿ ಆಚರಣೆಗೊಳಪಡಿಸಬಹುದಾದ ಆಧ್ಯಾತ್ಮ.
ಹೀಗೆ ಬುದ್ಧನ ಚಿಂತನೆಗಳನ್ನು ಆಧುನಿಕ ಜಗತ್ತಿನ ಮೂಲತತ್ವವನ್ನಾಗಿ ವಿವರಿಸಿದ್ದು ಡಾ. ಅಂಬೇಡ್ಕರ್. ಧರ್ಮಾನಂದ ಕೋಸಾಂಬಿ, ಓಶೋ ಮತ್ತು ಆಚಾರ್ಯ ನರೇಂದ್ರದೇವ ಅವರೂ ಸಹ ಬುದ್ಧನ ಚಿಂತನೆಗಳನ್ನು ಆಧುನಿಕ ಸಾಮಾಜಿಕ ತತ್ವಜ್ಞಾನವೆಂದೇ ವಿಶ್ಲೇಷಿಸಿದ್ದಾರೆ. ಈ ಸಂದರ್ಭದಲ್ಲಿ, ಓಶೋನ Ma Tzu: The Empty Mirror ಪುಸ್ತಕದ ಒಂದು ಪುಟ್ಟ Paragraphನ್ನು ಇಲ್ಲಿ ಅನುವಾದ ಮಾಡಿದ್ದೇನೆ. ಬುದ್ಧ ನಮ್ಮ ನಿತ್ಯ ಆಲೋಚನೆಗಳ ಮತ್ತು ಜೀವನ ವಿಧಾನದ ಭಾಗವಾಗಲಿ ಎಂದು ಹಾರೈಸುವೆ.
ಬುದ್ಧ ನಮ್ಮೊಳಗಿನ ಎಚ್ಚರ
….………………………….
ಗೌತಮ ಬುದ್ಧ ಕ್ರಮಿಸಿದ ದಾರಿಗೆ ಹೋಲಿಸಿದರೆ, ಎಲ್ಲಾ ಧರ್ಮದ ಶ್ರೇಷ್ಠ ಪ್ರವಾದಿಗಳು ಆತನಿಗಿಂತ ಹಿಂದಿದ್ದಾರೆ. ಎಕೆಂದರೆ, ಎಲ್ಲಾ ಧರ್ಮದ ಶ್ರೇಷ್ಠ ಪ್ರವಾದಿಗಳು ನೀವು ಅವರ ಅನುಯಾಯಿಗಳಾಗಿರಬೇಕೆಂದು ಬಯಸುತ್ತಾರೆ. ಅನುಯಾಯಿಗಳಾದ ನೀವು ಕೆಲ ನಿರ್ದಿಷ್ಟ ಶಿಸ್ತುಗಳನ್ನು ಪಾಲಿಸಲೇಬೇಕು ಎಂದು ಅವರು ಸದಾ ಬಯಸುತ್ತಾರೆ. ಒಂದು ನಿರ್ದಿಷ್ಟ ಪರಿವೃತ್ತದಲ್ಲಿ ನೀವು ನಿಮ್ಮ ಲೌಕಿಕದ ವ್ಯವಹಾರಗಳನ್ನು, ನೈತಿಕತೆಯನ್ನು ಮತ್ತು ನಿಮ್ಮ ಜೀವನ ವಿಧಾನವನ್ನು ನೀವು ರೂಪಿಸಿಕೊಳ್ಳಬೇಕು ಎಂದು ಅವರು ಬಯಸುತ್ತಾರೆ. ಅವರು, ಪ್ರತಿಕೃತಿಗಳನ್ನು ಉತ್ಪಾದಿಸಬಲ್ಲ ಒಂದು ಅಚ್ಚಿನಂತೆ (ಮೌಲ್ಡ್) ನಿಮ್ಮನ್ನು ತಯಾರಿಸಿ, ಒಂದು ಸುಂದರ ಜೈಲಲ್ಲಿ ಇಟ್ಟುಬಿಡುತ್ತಾರೆ.
ಆದರೆ, ಬುದ್ಧ ಮಾತ್ರ ಮಾನವ ಸ್ವಾತಂತ್ರ್ಯದ ಪ್ರತಿಪಾದಕನಾಗಿ ಏಕಾಂಗಿಯಾಗಿ ನಿಂತಿದ್ದಾನೆ. ಸ್ವಾತಂತ್ರ್ಯವಿಲ್ಲದ ಮನುಷ್ಯ ತನ್ನೊಳಗಿನ ಯಕ್ಷಿಣಿಯನ್ನು ಅರಿಯಲು ಸಾಧ್ಯವಿಲ್ಲ. ಕಟ್ಟಳೆಗಳ ಸರಪಳಿಗಳಿಂದ ಬಂಧಿಸಲ್ಪಟ್ಟವನು ತನ್ನ ರೆಕ್ಕೆಗಳನ್ನು ಬಿಚ್ಚಿ ಆಕಾಶಕ್ಕೆ ಹಾರಲಾರ. ತನ್ನ ಮಿತಿಗಳನ್ನು ಮೀರಿ ತನ್ನ ವಿಸ್ತರಿಸಿಕೊಳ್ಳಲಾರ.
ಎಲ್ಲಾ ಧರ್ಮಗಳು ಮನುಷ್ಯರನ್ನು ಕಟ್ಟಿ ಹಾಕುತ್ತವೆ. ಮನುಷ್ಯನ ಮೇಲೆ ಅತ್ಯಂತಿಕ ನಿಯಂತ್ರಣವನ್ನು ಸಾಧಿಸುತ್ತವೆ. ಮನುಷ್ಯರು, ಅವರು ಮೂಲದಲ್ಲಿದ್ದಂತೆ ಸಹಜವಾಗಿರಲು ಈ ಧರ್ಮಗಳು ಬಿಡುವುದಿಲ್ಲ. ಮನುಷ್ಯರಿಗೆ ಒಂದು ಕೃತಕ ವ್ಯಕ್ತಿತ್ವ ಮತ್ತು ಮುಖವಾಡಗಳನ್ನಷ್ಟೇ ಈ ಧರ್ಮಪ್ರವರ್ತಕರು ನೀಡುತ್ತಾರೆ. ಇದನ್ನೇ ತಾವು ನೀಡುವ ಘನಂಧಾರಿ ಧಾರ್ಮಿಕ ಶಿಕ್ಷಣ ಎಂದು ಅವರು ಬೊಬ್ಬೆ ಹೊಡೆಯುತ್ತಾರೆ.
ಬುದ್ಧ ನಿಮಗೆ ಯಾವ ಧಾರ್ಮಿಕ ಶಿಕ್ಷಣವನ್ನು ನೀಡುವುದಿಲ್ಲ. ನೀವು ಹೇಗಿದ್ದೀರೋ ಹಾಗೆಯೇ ಸಹಜವಾಗಿರಲು ಆತ ಬಯಸುತ್ತಾನೆ. ನೀವು ಹೇಗಿದ್ದೀರೋ ಹಾಗೇಯೆ ಸಹಜವಾಗಿದ್ದಲ್ಲಿ ಅದೇ ನಿಮ್ಮ ಧರ್ಮ. ಅಂದರೆ ನೀವು ನೀವಾಗಿರುವುದೇ ನಿಮ್ಮ ಧರ್ಮ.
ಸ್ವಾತಂತ್ರ್ಯವನ್ನು ಯಾವ ಮನುಷ್ಯನೂ ಅಷ್ಟಾಗಿ ಪ್ರೀತಿಸಿಲ್ಲ. ಮಾನವಕುಲವನ್ನು ಯಾವ ಮನುಷ್ಯನೂ ಅಷ್ಟೊಂದು ಪ್ರೀತಿಸಿಲ್ಲ. ಬುದ್ಧ ಕೆಲವು ಸರಳ ಕಾರಣಗಳಿಗಾಗಿ ಅನುಯಾಯಿಗಳನ್ನು ಒಪ್ಪಿಕೊಳ್ಳುವುದಿಲ್ಲ. ತನ್ನನ್ನು ಅನುಸರಿಸಿ ಎಂದು ಹೇಳುವುದಿಲ್ಲ. ಅನುಯಾಯಿಗಳನ್ನು ಒಪ್ಪಿಕೊಳ್ಳುವುದೆಂದರೆ ಅವರ ಘನತೆಯನ್ನು ನಾಶ ಮಾಡಿದಂತೆ. ಬುದ್ಧ ಒಪ್ಪಿಕೊಂಡಿರುವುದು ಸಹಪಯಣಿಗರನ್ನು ಮಾತ್ರ.
ಸಾಯುವ ಮೊದಲು ಬುದ್ಧನ ಕೊನೆಯ ಹೇಳಿಕೆಯನ್ನು ನಾವು ಗಮನಿಸಬೇಕು. ‘ನಾನು ಎಂದಾದರು ಹಿಂತಿರುಗಿದರೆ, ಅದು ನಿಮ್ಮ ಗೆಳೆಯನಾಗಿ ಬರುತ್ತೇನೆ’ ಎನ್ನುತ್ತಾನೆ ಬುದ್ಧ.
ಅಷ್ಟಕ್ಕೂ ಬುದ್ಧನ ‘ಮೈತ್ರೇಯ’ ಎಂದರೆ, ಗೆಳಯನೆಂದೇ ಅರ್ಥ.
ಓಶೋ,
Ma Tzu: The Empty Mirror
ಅನುವಾದ. ಎ ಎಸ್ ಪ್ರಭಾಕರ