By Sunil sirasangi | Date – July 5, 2018
ನಮ್ಮ ತಂಡದ ಕ್ಯಾಪ್ಟನ್, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಗಾರರ ಜಾಲವನ್ನು ಕೆದಕಿದಷ್ಟೂ ಆತಂಕಕಾರಿ ಮಾಹಿತಿಗಳು ಹೊರಬರುತ್ತಿವೆ. ಈ ಕೊಲೆಯ ಸಂಚಿನಲ್ಲಿ ಸೇನೆಯ ನಿವೃತ್ತ ಕರ್ನಲ್ ಒಬ್ಬನನ್ನು ಒಳಗೊಂಡು ಬಲಪಂಥೀಯ ಸಂಘಟನೆಯೊಂದರ ನಾಲ್ಕು ಟಾಪ್ ಲೀಡರ್‍ಗಳು ಭಾಗಿಯಾಗಿದ್ದಾರೆಂದು ಎಸ್‍ಐಟಿ ಮೂಲಗಳನ್ನು ಆಧರಿಸಿ ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿದೆ.
ಗೌರಿಯವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿ, ಈಗ ಜೈಲಿನಲ್ಲಿರುವ ಪರಶುರಾಮ ವಾಗ್ಮೋರೆ ‘ಯಾರೋ ಮಾಡಿದ ಸಂಚಿಗೆ ನಾನು ಹರಕೆಯ ಕುರಿಯಾದೆ’ ಎಂದು ತನ್ನ ತಂದೆ ತಾಯಿಯ ಬಳಿ ಪಶ್ಚಾತ್ತಾಪದ ಮಾತಾಡಿದ್ದಾನೆಂಬುದು ವರದಿಯಾಗಿತ್ತು. ಈ ಪಾತಕದ ಸಂಚು ರೂಪಿಸಿದ್ದು ಈಗ ಎಸ್‍ಐಟಿ ವಶದಲ್ಲಿರುವ ಮಹಾರಾಷ್ಟ್ರ ಮೂಲದ ಅಮೋಲ್ ಕಾಳೆ ಎಂಬ ಅಭಿಪ್ರಾಯಕ್ಕೆ ಎಸ್‍ಐಟಿ ತಲುಪಿತ್ತು. ಆದರೆ ತನಿಖೆ ಮುಂದುವರೆಯುತ್ತಿದ್ದಂತೆ ಹೊರಬಿದ್ದ ರಹಸ್ಯ ‘ಸಂಘ’ದ ಉನ್ನತ ಹಂತದ ಸಂಚುಕೋರ ನಾಯಕರ ಆದೇಶವನ್ನು ಅಮೋಲ್ ಕಾಳೆ ಜಾರಿ ಮಾಡಿದ್ದಾನೆ ಎಂಬುದು.
ಈ ಕೃತ್ಯಕ್ಕೆ ಬೇಕಾದ ಹಣಕಾಸನ್ನು ಕೂಡ ಇದೇ ಸಂಘಟನೆ ಒದಗಿಸಿದೆ. ಇದಕ್ಕಾಗಿ ಅಮೋಲ್ ಕಾಳೆಗೆ ಪ್ರತಿ ತಿಂಗಳು ಕನಿಷ್ಟ 1.25 ಲಕ್ಷ ರೂಪಾಯಿ ಪಾವತಿಯಾಗಿದೆ. ಈ ಹಣ ಒದಗಿಸಿದ್ದು ಆತನ ಕಿಲ್ಲರ್ ಗ್ಯಾಂಗ್‍ನ ನಿರ್ವಹಣೆಗಾಗಿ ಎಂದು ವರದಿ ಹೇಳಿದೆ.
ಆ ನಾಲ್ಕು ಉನ್ನತ ಹಂತದ ನಾಯಕರೇ ಗೌರಿ ಕೊಲೆ ಮಾಡಲು ಆದೇಶ ಹೊರಡಿಸಿದ್ದು ಎಂಬ ಸುಳಿವು ಎಸ್‍ಐಟಿಗೆ ಸಿಕ್ಕಿದೆಯಾದರೂ ಖಚಿತ ಸಾಕ್ಷ್ಯಾಧಾರಗಳು ಸದ್ಯ ಲಭ್ಯವಿಲ್ಲದ ಕಾರಣ ತನಿಖೆ ಮುಂದುವರೆದಿದೆ. ಮಾತ್ರವಲ್ಲ, ನಾಪತ್ತೆಯಾಗಿರುವ ಇತರೆ ಆರೋಪಿಗಳನ್ನು ಶತಾಯಗತಾಯ ರಕ್ಷಣೆಮಾಡಲು ಅದೇ ಸಂಘಟನೆ ಶ್ರಮಿಸುತ್ತಿದೆ ಎಂಬ ಆಘಾತಕಾರಿ ಮಾಹಿತಿಯೂ ಹೊರಬಿದ್ದಿದೆ. ಹಲವು ಪ್ರತಿಕೂಲ ಅಂಶಗಳ ಹೊರತಾಗಿಯೂ ಎಸ್‍ಐಟಿ ತನಿಖೆ ಸರಿದಿಕ್ಕಿನಲ್ಲಿದೆ ಎಂದು ಭಾವಿಸೋಣ.
ಅತ್ತ ಮಹಾರಾಷ್ಟ್ರದಲ್ಲಿ, ದಾಬೋಲ್ಕರ್ ಮತ್ತು ಪನ್ಸಾರೆ ಹತ್ಯೆಗಳ ಕೇಸಿನ ವಿಚಾರಣೆಯಲ್ಲೂ ಕೂಡ ನ್ಯಾಯ ದೊರಕಬಹುದೆ ಎಂಬ ಆಶಾಭಾವ ಚಿಗುರುವಂತಹ ಬೆಳವಣಿಗೆಗಳು ನಡೆದಿವೆ. 2013ರ ಆಗಸ್ಟ್‍ನಲ್ಲಿ ಕೊಲೆಯಾದ ನರೇಂದ್ರ ದಾಬೋಲ್ಕರ್ ಅವರ ಕೇಸಿನ ತನಿಖೆಯನ್ನು ಹಾಲಿ ಸಿಬಿಐ ನಡೆಸುತ್ತಿದೆ. 2015ರ ಫೆಬ್ರವರಿಯಲ್ಲಿ ಕೊಲೆಯಾದ ಗೋವಿಂದ್ ಪನ್ಸಾರೆ ಕೇಸಿನ ತನಿಖೆ ಅಡಿಷನಲ್ ಎಸ್‍ಪಿ ನೇತೃತ್ವದ ತಂಡದ ಉಸ್ತುವಾರಿಯಲ್ಲಿದೆ. ಆದರೆ ನಡೆದದ್ದೇನು?
ಈ ಕೇಸುಗಳ ತನಿಖೆಯಲ್ಲಿ ಯಾವುದೇ ಮಹತ್ವದ ಸುಳಿವು ಲಭ್ಯವಿಲ್ಲದೆ ತಾವು ‘ಡೆಡ್ ಎಂಡ್’ ತಲುಪಿದ್ದೇವೆ ಎಂಬುದು ಈ ಘನತೆವೆತ್ತ ತನಿಖಾ ಸಂಸ್ಥೆಗಳ ವಾದ. ಈ ಹಿನ್ನೆಲೆಯಲ್ಲಿ ದಾಬೋಲ್ಕರ್ ಹಾಗೂ ಪನ್ಸಾರೆ ಕುಟುಂಬದವರು ‘ಈ ಎಲ್ಲ ಕೊಲೆ ಕೇಸುಗಳಲ್ಲಿ ಸಾಮ್ಯತೆಯಿದ್ದು, ಒಂದೇ ಪಾತಕ ಗುಂಪಿನ ಕೈವಾಡವಿರುವುದರಿಂದ ಸೂಕ್ತ ಸಮನ್ವಯದಿಂದ ತನಿಖೆ ಮುಂದುವರೆಸಲು ಒಂದು ವಿಶೇಷ ತಂಡಕ್ಕೆ ಈ ಕೇಸುಗಳನ್ನು ವಹಿಸಿಕೊಡಬೇಕೆಂದು’ ಕೋರಿ ಕೋರ್ಟ್‍ಗೆ ಅಫಿಡೇವಿಟ್ ಸಲ್ಲಿಸಿದ್ದರು.
ಕಳೆದ ವಾರ ವಿಚಾರಣೆ ನಡೆಸುತ್ತಿದ್ದ ಬಾಂಬೆ ಹೈಕೋರ್ಟ್‍ನ ನ್ಯಾ.ಸತ್ಯರಂಜನ್ ಧರ್ಮಾಧಿಕಾರಿ ಮತ್ತು ನ್ಯಾ.ಭಾರತಿ ಡಾಂಗ್ರೆ ಅವರ ಪೀಠವು ‘ಈ ಕೇಸುಗಳ ತನಿಖೆ ಪ್ರಾಮಾಣಿಕವಾಗಿ ನಡೆದಿಲ್ಲ’, ‘ತನಿಖಾ ಸಂಸ್ಥೆಗಳಿಗೆ ಗಂಭೀರತೆಯ ಕೊರತೆಯಿದೆ’ ಎಂದು ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ.
‘ಕರ್ನಾಟಕ ಪೊಲೀಸರನ್ನು ನೋಡಿ ಅವರ ಕಾರ್ಯದಕ್ಷತೆ ಮತ್ತು ಗಂಭೀರತೆಗಳನ್ನು ಕಲಿತುಕೊಳ್ಳಿ’ ಎಂದು ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಸಿಐಡಿ ಸಂಸ್ಥೆಗಳಿಗೆ ಕೋರ್ಟ್ ಛೀಮಾರಿ ಹಾಕಿದೆ. ಮಹಾರಾಷ್ಟ್ರ ಸರ್ಕಾರ ಮತ್ತು ಸಿಬಿಐಗಳಿಗೆ ನೋಟೀಸ್ ಜಾರಿಮಾಡಿ ಸಿಬಿಐನ ಜಂಟಿ ನಿರ್ದೇಶಕರು ಹಾಗೂ ಮಹಾರಾಷ್ಟ್ರ ಗೃಹ ಇಲಾಖೆಯ ಕಾರ್ಯದರ್ಶಿಗಳು ಇದೇ ಜುಲೈ 12ಕ್ಕೆ ಖುದ್ದಾಗಿ ಕೋರ್ಟ್‍ಗೆ ಹಾಜರಾಗಿ ಈ ಕೇಸುಗಳ ತನಿಖೆಗೆ ಸಂಬಂಧಿಸಿದ ವಿವರಣೆ ನೀಡಬೇಕೆಂದು ಆದೇಶಿಸಿದೆ.
ಕರ್ನಾಟಕ ಪೊಲೀಸರು ಗೌರಿ ಲಂಕೇಶ್ ಹಂತಕರನ್ನು ಮಹಾರಾಷ್ಟ್ರದಲ್ಲಿ ಬಂಧಿಸುವುದು ಸಾಧ್ಯವಿರುವುದಾದರೆ ಮಹಾರಾಷ್ಟ್ರ ಪೊಲೀಸರು ಏನು ಮಾಡುತ್ತಿದ್ದಾರೆ ಎಂಬ ಅಸಲಿ ಪ್ರಶ್ನೆ ನ್ಯಾಯಾಧೀಶರದು. ಪನ್ಸಾರೆ ಮತ್ತು ಕರ್ನಾಟಕದ ಕಲ್ಬುರ್ಗಿ ಅವರನ್ನು ಹತ್ಯೆ ಮಾಡಲು ಒಂದೇ ಪಿಸ್ತೂಲು ಬಳಸಲಾಗಿದೆಯೆಂದು, ಫೊರೆನ್ಸಿಕ್ ವರದಿಗಳನ್ನು ಆಧರಿಸಿ ಸಿಬಿಐ ಮತ್ತು ಸಿಐಡಿ ತಂಡಗಳು ಈ ಹಿಂದೆ ಕೋರ್ಟಿಗೆ ತಿಳಿಸಿದ್ದವು. ಆದರೆ ಅಲ್ಲಿಂದ ಒಂದು ಹೆಜ್ಜೆಯೂ ಮುಂದೆ ಸಾಗಿಲ್ಲ. ಇನ್ನುಮುಂದೆ ತನಿಖೆ ಎತ್ತ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.
ಆದರೆ ಈ ತನಿಖೆಗಳ ಮೇಲೆ ನಾವು ಎಷ್ಟು ವಿಶ್ವಾಸ ಇಡಬಹುದು? ನೂರಾರು ಜನರ ಸಾವಿಗೆ ಕಾರಣವಾಗಿದ್ದ ಘೋರ ಪಾತಕ ಕೃತ್ಯಗಳ ತನಿಖೆಗಳನ್ನು ಹಳ್ಳಹಿಡಿಸಿ, ಸಾಕಷ್ಟು ಸಾಕ್ಷ್ಯಗಳ ಸಮೇತ ಸಿಕ್ಕಿಬಿದ್ದಿದ್ದ ಆರೋಪಿಗಳಿಗೆ ಸಾಲುಸಾಲಾಗಿ ಕ್ಲೀನ್ ಚಿಟ್ ಕೊಡುತ್ತಿರುವ ವಿದ್ಯಮಾನ ನಮ್ಮ ಕಣ್ಣೆದುರಿನಲ್ಲೇ ನಡೆಯುತ್ತಿದೆ. 2006ರಲ್ಲಿ ಮಾಳೆಗಾಂವ್‍ನಲ್ಲಿ ನಡೆದ ಬಾಂಬ್ ಸ್ಫೋಟ, 2007ರಲ್ಲಿ ಹೈದರಾಬಾದ್‍ನ ಮೆಕ್ಕಾ ಮಸೀದಿಯಲ್ಲಿ ನಡೆದ ಬಾಂಬ್ ಸ್ಫೋಟ, ಸಂಜೋತಾ ರೈಲಿನಲ್ಲಿ ಆದ ಬಾಂಬ್ ಸ್ಫೋಟ, ಅಜ್ಮೇರ್‍ನ ಪ್ರಸಿದ್ಧ ದರ್ಗಾದಲ್ಲಿ ನಡೆದ ಬಾಂಬ್ ಸ್ಫೋಟ ಮುಂತಾದ ಕೇಸುಗಳಲ್ಲಿ ಸಾಕ್ಷಿಪುರಾವೆಗಳ ಸಮೇತ ಸಿಕ್ಕಿಬಿದ್ದಿದ್ದ ಆರೋಪಿಗಳಿಗೆ ಈ ನಾಲ್ಕು ವರ್ಷಗಳಲ್ಲಿ ಕ್ಲೀನ್ ಚಿಟ್ ಭಾಗ್ಯ ಲಭಿಸಿದೆ.
ಕರ್ನಲ್ ಪುರೋಹಿತ್ ಎಂಬ ಸೇನಾಧಿಕಾರಿ ಈ ಸ್ಫೋಟಗಳಿಗೆ ಸೇನಾ ಉಗ್ರಾಣದಿಂದಲೇ ಆರ್‍ಡಿಎಕ್ಸ್ ಕದ್ದು ಸಾಗಿಸಿದ್ದ ಆರೋಪ ಹೊತ್ತು ಕಳೆದ 9 ವರ್ಷಗಳಲ್ಲಿ ಜೈಲಿನಲ್ಲಿದ್ದ. 2017ರ ಆಗಸ್ಟ್‍ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಸ್ವಾಮಿ ಅಸೀಮಾನಂದ ಎಂಬ ಕಟ್ಟರ್ ಆರೆಸ್ಸೆಸ್ ಪ್ರಚಾರಕನ ಕೇಸು ಬಹಳ ಕುತೂಹಲಕಾರಿಯಾಗಿದೆ. ಈತ ಮೇಲಿನ ನಾಲ್ಕೂ ಸ್ಫೋಟಗಳಲ್ಲಿ ಸ್ವತಃ ಭಾಗಿಯಾಗಿದ್ದಾಗಿ ಕೋರ್ಟ್ ಮುಂದೆ ಸ್ವಯಂಪ್ರೇರಿತ ಹೇಳಿಕೆ ಕೊಟ್ಟಿದ್ದ. ಈ ಹೇಳಿಕೆಯಿಂದ ನನಗೆ ಮರಣದಂಡನೆಯಾಗಬಹುದೆಂಬುದು ತನಗೆ ತಿಳಿದಿದೆ, ಆದರೆ ನಾನು ಮಾಡಿದ ತಪ್ಪಿಗೆ ಅಮಾಯಕರು ಶಿಕ್ಷೆ ಅನುಭವಿಸುವಂತಾಗಬಾರದೆಂದು ಆತ ಹೇಳಿಕೆ ನೀಡಿದ್ದ. ಈ ಹೇಳಿಕೆಗೆ ಸಿನಿಮೀಯ ರೀತಿಯ ಹಿನ್ನೆಲೆಯೊಂದಿತ್ತು. ಈಗಾಗಲೇ ಮಾಳೆಗಾಂವ್ ಕೇಸಿನಲ್ಲಿ ಜೈಲು ಸೇರಿದ್ದ ಅಸೀಮಾನಂದರಿಗೆ ಅದೇ ಜೈಲಿನಲ್ಲಿದ್ದ 21ರ ಹರೆಯದ ಕಲೀಮ್ ಎಂಬ ಮುಸ್ಲಿಂ ಯುವಕ ಬಹಳ ಆಪ್ತನಾದ. ಕಾರಣ ವಯೋವೃದ್ಧನಾಗಿದ್ದ ಅಸೀಮಾನಂದ ಜೈಲಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಕಲೀಂ ರಾತ್ರಿ ಹಗಲು ಈ ವೃದ್ದರ ಸೇವೆ ಮಾಡಿದ್ದ. ಆ ಕಲೀಂನನ್ನು ಮೆಕ್ಕಾ ಮಸೀದಿ ಬಾಂಬ್ ಸ್ಫೋಟದ ಕೇಸಿನಲ್ಲಿ ಬಂಧಿಸಲಾಗಿದೆ ಎಂಬ ವಿಷಯ ತಿಳಿದಾಗ ಅಸೀಮಾನಂದ ತೀವ್ರ ವ್ಯಾಕುಲತೆಗೆ ಗುರಿಯಾದ. ವಾಸ್ತವದಲ್ಲಿ ಆ ಸ್ಫೋಟ ನಡೆಸಿದ್ದವರು ಅಸೀಮಾನಂದದ ತಂಡದವರೇ ಆಗಿದ್ದರು. ಬಾಳಿಬದುಕಬೇಕಿದ್ದ ಅಮಾಯಕ ಕಲೀಂ ಅದೇ ಕೇಸಿನಲ್ಲಿ ಜೈಲು ಪಾಲಾಗಿದ್ದ. ಅಸೀಮಾನಂದನಲ್ಲಿದ್ದ ಧರ್ಮಾಂಧತೆ ಕರಗಿ ಮನುಷ್ಯ ಗುಣ ಮೇಲುಗೈ ಸಾಧಿಸಿತ್ತು. ನ್ಯಾಯಾಧೀಶರ ಮುಂದೆ ಸುಧೀರ್ಘ ಐದು ತಾಸುಗಳ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ.
ಕೆಲವು ದಿನಗಳ ನಂತರ ಸಿಬಿಐಗೆ ಈ ಬಗ್ಗೆ ಪತ್ರ ಕೂಡ ಬರೆದಿದ್ದ. ಈ ಕೃತ್ಯಗಳಲ್ಲಿ ಆರೆಸ್ಸೆಸ್‍ನ ಕೈವಾಡ ಇದ್ದುದಾಗಿಯೂ, ಆರೆಸ್ಸೆಸ್ ನಾಯಕ ಮೋಹನ್ ಭಾಗವತ್‍ನ ಸೂಚನೆಯಿತ್ತೆಂದೂ ಆತ ತಿಳಿಸಿದ್ದ ವರದಿಗಳು ಪ್ರಕಟವಾಗಿದ್ದವು. ನಂತರದ ದಿನಗಳಲ್ಲಿ ದೊಡ್ಡ ದೊಡ್ಡ ನಾಯಕರು ಅಸೀಮಾನಂದರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕೆಲವು ತಿಂಗಳುಗಳ ನಂತರ ಆತ ಒತ್ತಡದಲ್ಲಿ ಹೇಳಿಕೆ ನೀಡಿದ್ದಾಗಿ ವಿಷಯವನ್ನು ತಿರುಚಲಾಯಿತು.
2017ರ ಮಾರ್ಚ್‍ನಲ್ಲಿ ಅಸೀಮಾನಂದನ ಬಿಡುಗಡೆಯಾಗಿದೆ. ಗುಜರಾತ್ ನರಮೇಧದ ಆರೋಪಿ ಸಚಿವೆ ಮಾಯಾ ಕೊಡ್ನಾನಿಗೆ ಈ ವರ್ಷದ ಏಪ್ರಿಲ್‍ನಲ್ಲಿ ಬಿಡುಗಡೆಯ ಭಾಗ್ಯ ಲಭಿಸಿದೆ. ಈ ಎಲ್ಲ ಸ್ಫೋಟಗಳಲ್ಲಿ ಭಾಗಿಯಾಗಿದ್ದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಹೊರಬಂದಿದ್ದಾಳೆ. ನಕಲಿ ಎನ್‍ಕೌಂಟರ್ ಕೇಸಿನಲ್ಲಿ ಅಮಿತ್ ಶಾ ಖುಲಾಸೆಯಾಗಿದ್ದಾನೆ. ಜಸ್ಟೀಸ್ ಲೋಯಾ ಕೇಸು ವಿಚಾರಣೆಯೂ ಇಲ್ಲದೆ ಮೂಲೆ ಸೇರಿದೆ. ಹೀಗೆ ಬರೆಯುತ್ತಾ ಹೋದರೆ…
ಈ ಎಲ್ಲ ಪಾತಕಗಳು ತಾರ್ಕಿಕ ಅಂತ್ಯ ತಲುಪಬೇಕೆಂದರೆ ಕನಿಷ್ಟ ಕರ್ನಾಟಕದ ಎಸ್‍ಐಟಿ ಮಾದರಿಯ ತನಿಖೆಯಾದರೂ ನಡೆಯಬೇಕು. ತೆರೆಯ ಹಿಂದಿನ ಪಾತಕಿಗಳಿಗೆ ಹೆಡೆಮುರಿ ಕಟ್ಟಬೇಕು. ಆದರೆ…?