ಈ ಸೋಕಿತರಲ್ಲಿ ಒಬ್ಬರು ಕಾರವಾರ ಮೂಲದ ದುಬೈ ನಿವಾಸಿ, ಇವರ ಪತ್ನಿ ಮತ್ತು ಮಗು ಕೂಡಾ ಕಾರಂಟೈನ್ ಆಗಿದ್ದಾರೆ ಎನ್ನಲಾಗುತ್ತಿದೆ.
ಮಂಗಳೂರು: ಎರಡು ದಿನಗಳ ಹಿಂದೆ ಮಂಗಳೂರಿಗೆ ದುಬೈಯಿಂದ ಬಂದಿಳಿದ 20 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇನ್ನೂ 9 ಮಂದಿಯ ಶಂಕೆಯಿದ್ದು ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಆರೋಗ್ಯ ಇಲಾಖೆಯ ನಂಬಲರ್ಹ ಮೂಲಗಳ ಪ್ರಕಾರ, ನಿನ್ನೆ ದುಬೈಯಿಂದ ಬಂದವರ ಗಂಟಲು ದ್ರವ ಪರೀಕ್ಷೆ ವರದಿ ಸಿಕ್ಕಿದ್ದು ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ ರಾಮಚಂದ್ರ ಬಾಯಾರಿ ಅವರನ್ನು ಸಂಪರ್ಕಿಸಿ ಕೇಳಿದಾಗ ಅವರು ಈ ವಿಷಯವನ್ನು ನಿರಾಕರಿಸಲೂ ಇಲ್ಲ, ದೃಢಪಡಿಸಲೂ ಇಲ್ಲ.
ಕೊರೋನಾ ಸೋಂಕು ಕಾಣಿಸಿಕೊಂಡಿರುವವರಲ್ಲಿ ಬಹುತೇಕರು ಒಂದೇ ಕುಟುಂಬದ ಸದಸ್ಯರಾಗಿದ್ದು, ಬಹುತೇಕರು ಉಡುಪಿ ಮತ್ತು ದಕ್ಷಿಣ ಕನ್ನಡ ಮೂಲದವರು. ಕಳೆದ ಬುಧವಾರ ದುಬೈಯಲ್ಲಿ ವಿಮಾನ ಹತ್ತುವ ಮೊದಲು 168 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿತ್ತು. ಆಗ ಎಲ್ಲರದ್ದೂ ನೆಗೆಟಿವ್ ಬಂದಿತ್ತು. ಇದು ಕ್ಷಿಪ್ರವಾಗಿ ನಡೆಸುವ ಪರೀಕ್ಷೆಯಾಗಿದ್ದು ನಿಖರವಾಗಿ ಫಲಿತಾಂಶ ಸಿಗಲು ಸಾಧ್ಯವಿಲ್ಲ. ಮಂಗಳೂರಿಗೆ ಬಂದಿಳಿದ ನಂತರ ಇವರ ಮೇಲೆ ಮಾಡಿದ ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ 20 ಮಂದಿಯಲ್ಲಿ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ.
ನಗರದ ವಿವಿಧ ಹೊಟೇಲ್ ಗಳಲ್ಲಿ ಕ್ವಾರಂಟೈನ್ ನಲ್ಲಿದ್ದ ಈ 20 ಮಂದಿಯನ್ನು ಇದೀಗ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿದೆ. 168 ಪ್ರಯಾಣಿಕರಲ್ಲಿ 38 ಮಂದಿ ಗರ್ಭಿಣಿಯರು. ಉಳಿದವರಲ್ಲಿ ಕೆಲವರು ಹಿರಿಯ ನಾಗರಿಕರು ಮತ್ತು ಅನಾರೋಗ್ಯಪೀಡಿತರು ಕೂಡ ಸೇರಿದ್ದಾರೆ.