

ಉತ್ತರ ಪ್ರದೇಶ ಕಾರ್ಮಿಕರು ಅನ್ಯ ರಾಜ್ಯಗಳಿಗೆ ಹೋಗಿ ಕೆಲಸ ಮಾಡುವಂತಿಲ್ಲ ಎಂದು ನಿರ್ದೇಶಿಸುವ ಮೂಲಕ ಈ ದೇಶದ ಒಕ್ಕೂಟ ವ್ಯವಸ್ಥೆ ಹಾಗೂ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತಂದಿರುವ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ವಜಾ ಮಾಡಬೇಕು.

ಬೆಂಗಳೂರು: ಉತ್ತರ ಪ್ರದೇಶ ಕಾರ್ಮಿಕರು ಅನ್ಯ ರಾಜ್ಯಗಳಿಗೆ ಹೋಗಿ ಕೆಲಸ ಮಾಡುವಂತಿಲ್ಲ ಎಂದು ನಿರ್ದೇಶಿಸುವ ಮೂಲಕ ಈ ದೇಶದ ಒಕ್ಕೂಟ ವ್ಯವಸ್ಥೆ ಹಾಗೂ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತಂದಿರುವ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ವಜಾ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

ನಮ್ಮ ಸಂವಿಧಾನದ ಪರಿಚ್ಛೇದ 19(1)(ಡಿ) ಮತ್ತು (ಈ) ಪ್ರಕಾರ ದೇಶದ ಪ್ರತಿಯೊಬ್ಬ ನಾಗರೀಕ ಯಾವುದೇ ಜಾಗದಲ್ಲಿ ಹೋಗಿ, ಅಲ್ಲಿ ನೆಲೆಸಿ, ಅಲ್ಲಿ ಕೆಲಸ ಮಾಡುವ ಹಕ್ಕನ್ನು ನೀಡಲಾಗಿದೆ. ಆದರೆ ಹೊರ ರಾಜ್ಯಗಳಿಂದ ತಮ್ಮ ರಾಜ್ಯಕ್ಕೆ ವಾಪಸ್ಸಾಗುತ್ತಿರುವ ಕಾರ್ಮಿಕರನ್ನು ಸ್ವಾಗತಿಸಿ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ವಿಫಲವಾಗಿರುವ ಯೋಗಿ ಆದಿತ್ಯನಾಥ್ ಈ ರೀತಿಯ ಉದ್ಧಟತನದ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಯೋಗಿ ಆದಿತ್ಯನಾಥ ಅವರಿಗೆ ಈ ದೇಶದ ಸಂವಿಧಾನದ ಬಗ್ಗೆ ಕಿಂಚಿತ್ತೂ ಪರಿಜ್ಞಾನವಿಲ್ಲ. ಇದ್ದಿದ್ದರೆ ಈ ರೀತಿ ಪ್ರಜಾದ್ರೋಹದ ಮಾತು ಗಳನ್ನು ಆಡುತ್ತಿರಲಿಲ್ಲ. ಯಾರು ಬೇಕಾದರೂ ಎಲ್ಲಿಗೆ ಬೇಕಾದರೂ ಹೋಗಿ ಕೆಲಸ ಮಾಡುವ ಮೂಲಭೂತ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಿ ಕೆಲಸ ಮಾಡಲು ಯಾರೂ ಪಾಸ್ ಪೋರ್ಟ್ ತೆಗೆದುಕೊಳ್ಳಬೇಕಿಲ್ಲ. ಯೋಗಿ ಆದಿತ್ಯನಾಥ ಅವರ ನಡೆ ಸರ್ವಾಧಿಕಾರಿ ಧೋರಣೆಯದ್ದಾಗಿದ್ದು, ಪ್ರಜಾತಂತ್ರ ವ್ಯವಸ್ಥೆಯ ಭದ್ರಬುನಾದಿಯನ್ನು ಅಲ್ಲಾಡಿಸುವಂಥದ್ದಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.


ಉತ್ತರ ಪ್ರದೇಶ ಕಾರ್ಮಿಕರು ದೇಶದ ಎಲ್ಲೆಡೆ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ,ತಮಿಳುನಾಡು, ಆಂಧ್ರ ಪ್ರದೇಶ ಮತ್ತಿತರ ಕಡೆ ಕೆಲಸ ಮಾಡಿದ್ದಾರೆ. ಅದೇ ರೀತಿ ನಮ್ಮ ಕನ್ನಡಿಗರು ಕೂಡ ಮುಂಬೈ, ದಿಲ್ಲಿ, ಹೈದರಾಬಾದ್, ಉತ್ತರ ಪ್ರದೇಶ ಮತ್ತಿತರ ಕಡೆ ಕೆಲಸ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಅವರನ್ನು ಯೋಗಿ ಆದಿತ್ಯನಾಥ್ ಅವರಂತೆ ಕಟ್ಟಿಹಾಕಲು ಸಾಧ್ಯವೇ.ಹಾಗೆ ನಿರ್ಬಂಧ ಹೇರಲು ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ. ಆದಿತ್ಯನಾಥ ಅವರು ಕಾರ್ಮಿಕರನ್ನು ಗುಲಾಮರೆಂದು ಭಾವಿಸಿದ್ದಾರೆಯೇ ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.
ಆದಿತ್ಯನಾಥ ಅವರನ್ನು ಸಿಎಂ ಸ್ಥಾನದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಇಡೀ ದೇಶಾದ್ಯಾಂತ ಉಗ್ರ ಹೋರಾಟ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






