narendra hirekai writes- Reality of 20 Lakh Crores Package 20 ಲಕ್ಷ ಕೋಟಿ ಪ್ಯಾಕೇಜ್ : ಕನ್ನಡಿಯೊಳಗಿನ ಗಂಟು..?


ಅನ್ಯಗ್ರಹಗಳಿಗೂ ಕಾಲಿಟ್ಟು ಗೆದ್ದೆ ಎಂದು ಬೀಗುತ್ತಿದ್ದ ಮನುಷ್ಯ ಇಂದು ತನ್ನ ಮನೆಯ ಹೊಸ್ತಿಲ ದಾಟುವುದಕ್ಕೂ ಬೆಚ್ಚಿಬೀಳುತ್ತಿದ್ದಾನೆ. ಕಣ್ಣಿಗೆ ಕಾಣದ ಒಂದೇ ಒಂದು ಜೀವಿ ಮನುಷ್ಯ ಸಂಕುಲವನ್ನೇ ಸರ್ವನಾಶ ಮಾಡುವಷ್ಟು ಸಶಕ್ತವಾಗಿದೆಯೆಂದರೆ ಅಭಿವೃದ್ದಿಯ ಹೆಸರಿನಲ್ಲಿ ಸಾವಿರಾರು ವರ್ಷಗಳಿಂದ ಮನುಷ್ಯ ನಡೆಸುತ್ತಿರುವ ಹೋರಾಟ, ಸಂಶೋಧನೆ, ವಿನಾಶ ಇವೆಲ್ಲ ಎಷ್ಟೊಂದು ಹಾಸ್ಯಾಸ್ಪದ ಎನಿಸುವುದಿಲ್ಲವೇ?

ಕೊರೋನಾ ಮನುಷ್ಯನಿಗೆ ಪಾಠವನ್ನು ಹೇಳಲು ಬಂದಿದೆ ಅಂತೆನಿಸುವುದಿಲ್ಲವೇ? ಅಭಿವೃದ್ದಿ, ತಂತ್ರಜ್ಞಾನ, ಪೈಪೋಟಿ, ಸ್ವೇಚ್ಛಾಚಾರ ಇತ್ಯಾದಿಗಳಲ್ಲಿ ಮೈಮರೆತಿದ್ದ ಮನುಷ್ಯನಿಗೆ ಪ್ರಕೃತಿ ತನ್ನ ಇರುವಿಕೆಯನ್ನು ನೆನಪಿಸಿದೆ ಅಂತೆನಿಸುವುದಿಲ್ಲವೇ? ಹೌದು, ಕೊರೋನಾ ಎದುರು ಮನುಷ್ಯ ನಿಸ್ಸಹಾಯಕನಾಗಿ ನಿಂತು ಶರಣಾಗಿದ್ದಾನೆ.


ಕೊರೋನಾ ಎಂಬ ಮಾರಣಾಂತಿಕ ಖಾಯಿಲೆಯಿಂದ ಇಡೀ ಜಗತ್ತು ತಲ್ಲಣಿಸಿದೆ. ಜಾನ್ ಹ್ಯಾಪ್ಕೀನ್ಸ್ ಯುನಿವರ್ಸಿಟಿ ನಡೆಸಿದ ಸಮೀಕ್ಷೆಯ ಪ್ರಕಾರ ಮೇ 14ರ ವರೆಗೆ ಜಗತ್ತಿನ ಒಟ್ಟೂ 195 ಅಧಿಕೃತ ರಾಷ್ಟ್ರಗಳ ಪೈಕಿ 183 ಕೊರೋನಾ ಸಂತ್ರಸ್ತ ರಾಷ್ಟ್ರಗಳಾಗಿವೆ.
ಕೇವಲ 12 ದೇಶಗಳಲ್ಲಿ ಮಾತ್ರ (ಉತ್ತರ ಕೋರಿಯಾವನ್ನು ಹೊರತು ಪಡಿಸಿದರೆ ಉಳಿದವು ಸಣ್ಣ ರಾಷ್ಟ್ರಗಳು) ಕೊರೋನಾ ಇದುವರೆಗೂ ಕಾಣಿಸಿಕೊಂಡಿಲ್ಲ. ಅಂದರೆ ಇಡೀ ಭೂಮಂಡಲವೇ ಕೊರೋನಾ ಪೀಡಿತವಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ, ಆರ್ಥಿಕ ಚಟುವಟಿಕೆಗಳು ನಿಂತು ಹೋಗಿವೆ, ಸಾಮಾಜಿಕ ಅಭದ್ರತೆ ಪ್ರತಿಯೊಬ್ಬರಲ್ಲೂ ಕಾಡುತ್ತಿದೆ. ಸಾಮಾಜಿಕ ಅಂತರ ಮತ್ತು ಪರಸ್ಪರ ಗುಮಾನಿ ನಿತ್ಯದ ಸಾಮಾನ್ಯ ಸಂಗತಿಗಳಾಗಿವೆ. ಯಾರ ಕಷ್ಟವನ್ನು ಯಾರೂ ಕೇಳದ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ಪ್ರತಿಯೊಬ್ಬರೂ ದೇಶದ ಸರಕಾರದತ್ತ ಮುಖಮಾಡುವಂತಾಗಿದೆ.
ಭಾರತದಲ್ಲಿ ಮೊದಮೊಲಿಗೆ ಎಲ್ಲವೂ ಸರಿಯಾಗಿದೆ ಅಂತೆನಿಸುತ್ತಿತ್ತು. ಆದರೆ ಇಂದು ದಿನೇ ದಿನೇ ಕೊರೋನಾ ಸಂತ್ರಸ್ತರ ಸಂಖ್ಯೆ ನಾಲ್ಕು ಅಂಕಿಯನ್ನು ಮೀರುತ್ತಿದೆ. ನಿಯಂತ್ರಣಕ್ಕೆ ಸರಕಾರಗಳು ನಡೆಸುತ್ತಿರುವ ಅವಿರತ ಪ್ರಯತ್ನ ಮುಂದುವರೆಯುತ್ತಿದ್ದರೂ ಯಶಸ್ಸು ಕಾಣುತ್ತಿಲ್ಲ. ಸರಕಾರಗಳು ಕೂಡ ಕೈಚೆಲ್ಲುವ ಪರಿಸ್ಥಿತಿ ಬಾರದಿರಲಿ ಎಂಬುದೇ ಪ್ರತಿಯೊಬ್ಬರ ಆಶಯ.

ಈ ಲೇಖನದಲ್ಲಿ ಕೊರೋನಾ ಎಂಬ ಮಾರಣಾಂತಿಕ ಖಾಯಿಲೆಯಿಂದ ಭಾರತದ ಅರ್ಥವ್ಯವಸ್ಥೆಯ ಮೇಲಾದ ಪರಿಣಾಮಗಳು ಮತ್ತು ಸರಕಾರ ಆರ್ಥಿಕ ಪ್ಯಾಕೆಜ್ ಗಳ ವಾಸ್ತವಾಂಶಗಳು ಮತ್ತು ಅದರ ಪರಿಣಾಮಗಳ ಬಗ್ಗೆ ಚರ್ಚಿಸಲಾಗಿದೆ.
ಕೊರೋನಾ ಪೂರ್ವ ಮತ್ತು ನಂತರ..
ಭಾರತದಲ್ಲಿ ಕೊರೋನಾ ವೈರಾಣು ಮೊದಲಿಗೆ ಕಾಣಿಸಿಕೊಂಡಿದ್ದು 2020, ಜನೆವರಿ 30 ರಂದು. ಭಾರತದ ಅರ್ಥವ್ಯವಸ್ಥೆಯನ್ನು ಕೊರೋನಾ ಕಾಲವನ್ನಾಗಿ ವಿಂಗಡಿಸಿ ವಿಶ್ಲೇಷಿಸುವುದಾದರೆ ಜನೆವರಿ ತಿಂಗಳಿನಿಂದ ಹಿಂದಕ್ಕೆ ಹೋಗಬೇಕು. ಈ ಅವಧಿಯ ವರೆಗೆ ಭಾರತದ ಅರ್ಥವ್ಯವಸ್ಥೆ ಹೇಗಿತ್ತು ಎಂದು ನೋಡಬೇಕು. ಜೂನ್ 2019ರ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ದರ 5%ಕ್ಕೆ ಬಂದು ತಲುಪಿದಾಗ ದೇಶಾದ್ಯಂತ ಚರ್ಚೆಯ ವಿಷಯವಾಗಿತ್ತು. ಭಾರತದಲ್ಲಿ ಆರ್ಥಿಕ ಹಿಂಜರಿತದ ಸಂದೇಹ ಎಲ್ಲರಲ್ಲೂ ಉಂಟಾಗಿತ್ತು. ಆ ಸಂದರ್ಭದಲ್ಲಿ ಜಾಗತಿಕ ಅರ್ಥವ್ಯವಸ್ಥೆಯ ಪ್ರಗತಿ ನಿರಾಶಾದಾಯಕವಾಗಿ ಇಲ್ಲದಿದ್ದರೂ ಆಂತರಿಕ ಬೆಳವಣಿಗೆಗಳಿಂದ ಭಾರತದಲ್ಲಿ ಅರ್ಥವ್ಯವಸ್ಥೆ ಕುಸಿಯುತ್ತಿತ್ತು. ನಿರುದ್ಯೋಗ, ಕುಂಟಿತ ಉತ್ಪಾದನೆ, ನಗದು ಪ್ರವಾಹದಲ್ಲಿ ಇಳಿಕೆ ಇತ್ಯಾದಿ ಸಂಗತಿಗಳು ಆರಂಭವಾಗಿದ್ದವು.

ಸಪ್ಟಂಬರ್ 19ರ ತ್ರೈಮಾಸಿಕ ಅವಧಿಗೆ 4.5% ಇದ್ದ ಜಿಡಿಪಿ ಮೂರನೇ ತ್ರೈಮಾಸಿಕ ಅಂದರೆ ಡಿಸೆಂಬರ್ 19ರಲ್ಲಿ ತುಸು ಚೇತರಿಸಿಕೊಂಡು 4.7% ರವರೆಗೆ ತಲುಪಿತ್ತು. ಈ ವೇಳೆಯಲ್ಲಿಯೇ ಭಾರತದ ಆರ್ಥಿಕ ಪ್ರಗತಿ ಆರು ವರ್ಷ ಹಿಂದಕ್ಕೆ ಹೋಗಿತ್ತು. ಜನೇವರಿ 2020ರಿಂದ ಆರಂಭವಾಗುವ ಕಾಲ ಕೊವಿಡ್ 19 ಕಾಲ. ಇಡೀ ಪ್ರಪಂಚದ ಅರ್ಥವ್ಯವಸ್ಥೆ ಕೊರೋನಾ ಎದುರು ಸ್ತಬ್ದವಾಗುವಂತಾಯಿತು. ಭಾರತದಲ್ಲಿ ಫೆಬ್ರುವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗುವವರೆಗೆ ಬಹು ಚರ್ಚಿತವಾಗಿದ್ದ ಅರ್ಥವ್ಯವಸ್ಥೆಯ ಆರೋಗ್ಯ ಮತ್ತು ಆರ್ಥಿಕ ಹಿಂಜರಿತ ಕ್ರಮೇಣ ಹಿನ್ನೆಲೆಗೆ ಸರಿದು ಕೊರೋನಾ ಒಂದೇ ಸಾರ್ವತ್ರಿಕ ಚರ್ಚೆಯ ಸಂಗತಿಯಾಗಿ ಮುಂದುವರೆಯಿತು. ಮಾರ್ಚ್ 24, 2020ರಿಂದ ಭಾರತದಲ್ಲಿ ಲಾಕ್ ಡೌನ್ ಆರಂಭವಾಯಿತು. ಅಂದಿನಿಂದ ದೇಶದ ಎಲ್ಲಾ ಆರ್ಥಿಕ ಚಟುವಟಿಕೆಗಳೂ ಸಂಪೂರ್ಣವಾಗಿ ನಿಂತುಹೋದವು. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದೇಶದ ಅಷ್ಟೂ ಜನ ಮನೆಯಲ್ಲಿಯೇ ಇರುವಂತಾಯಿತು. ಬಾನು ತಿಳಿಯಾಯಿತು, ಗಾಳಿ ನೀರು ಶುದ್ದವಾಯಿತು. ಆದರೆ ದೇಶದ ಅರ್ಥವ್ಯವಸ್ಥೆ ಮಾತ್ರ ಕನಿಷ್ಟ ಎರಡು ದಶಕದಷ್ಟು ಹಿಂದೆ ಹೋಗುವಂತಾಯಿತು.

ಕೊರೋನಾ ಎಂಬ ಕಾರಣಕ್ಕೆ ಇಂದು ಯಾರೂ ಅರ್ಥವ್ಯವಸ್ಥೆಯ ಬಗ್ಗೆ ಮಾತನ್ನಾಡುವಂತಿಲ್ಲ. ಜಿಡಿಪಿ ಝೀರೋ ಆದರೂ ಕಾರಣಗಳನ್ನು ಹುಡುಕುವಂತಿಲ್ಲ.
ಕೊರೋನಾ ಆರಂಭಕ್ಕೂ ಮುನ್ನವೇ ಭಾರತದ ಅರ್ಥವ್ಯವಸ್ಥೆಗೆ ಸೋಂಕು ತಗುಲಿತ್ತು ಮತ್ತು ಕೊರೋನಾ ಆರಂಭದ ಅವಧಿಯ ನಂತರ ಭಾರತದ ಅರ್ಥವ್ಯವಸ್ಥೆ ಕೊರೋನಾ ರೋಗಿಗಿಂತ ಹೆಚ್ಚು ಅಸ್ವಸ್ಥಗೊಂಡಿತು. ಇದು ಸರಕಾರಕ್ಕೆ ದೊಡ್ಡ ಸವಾಲಾಗಿ ನಿಂತಿದ್ದು ಮಾತ್ರ ಸತ್ಯ. ದೇಶದ ಜನತೆಯ ಆರೋಗ್ಯ ಮತ್ತು ಅರ್ಥವ್ಯವಸ್ಥೆಯ ಆರೋಗ್ಯ ಇವೆರಡರಲ್ಲೂ ಸಮತೋಲನವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಕೇಂದ್ರ ಸರಕಾರ ಹಲವಾರ ಆರ್ಥಿಕ ಚೇತರಿಕೆಯ ಪ್ಯಾಕೇಜುಗಳನ್ನು ಘೋಷಣೆ ಮಾಡಬೇಕಾಯಿತು. ಈ ಹಿನ್ನೆಲೆಯಲ್ಲಿ ಮೇ 14ರಂದು ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ತಮ್ಮ 20 ನಿಮಿಷದ ಭಾಷಣದಲ್ಲಿ 2020ನೇ ಸಾಲಿಗೆ 20ಲಕ್ಷ ಕೋಟಿ ಮೊತ್ತದ ಕೊರೋನಾ ಪ್ಯಾಕೇಜನ್ನು ಘೋಷಣೆ ಮಾಡಿದರು.
20ಲಕ್ಷ ಕೋಟಿ ಕೊರೋನಾ ಪ್ಯಾಕೇಜ್..!
ಮೇ 14ರಂದು ಪ್ರಧಾನ ಮಂತ್ರಿಗಳು ‘ಆತ್ಮ ನಿರ್ಭರ ಭಾರತ ಅಭಿಯಾನ’ದಲ್ಲಿ ಘೋಷಣೆ ಮಾಡಿದ ಆರ್ಥಿಕ ಪ್ಯಾಕೇಜ್ ವಿವರಗಳನ್ನು ವಿತ್ತ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸತತ ಐದು ದಿನಗಳ ಕಾಲ ಜನತೆಯ ಮುಂದಿಟ್ಟರು. ಲಾಕ್ ಡೌನ್ ಎಂಬ ದಿಗ್ಭಂದನದಿಂದ ತೀವ್ರ ಸಂಕಷ್ಟದಲ್ಲಿದ್ದ ದೇಶದ ಜನತೆ ಅತೀವ ನಿರೀಕ್ಷೆಯಿಂದ ಆಲಿಸಿಕೊಂಡರು. 20ಲಕ್ಷ ಕೋಟಿ ಜನಸಾಮಾನ್ಯನ ಕಲ್ಪನೆಗೂ ಮೀರಿದ ಮೊತ್ತ. ಇದು ನಮ್ಮ ದೇಶದ ಒಟ್ಟೂ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದ ಪ್ರತಿಶತ 10 ರಷ್ಟಾಗುತ್ತದೆ. ಸರಳವಾಗಿ ಹೇಳುವುದಾದರೆ, 20 ಲಕ್ಷ ಕೋಟಿಯನ್ನು 135 ಕೋಟಿ ಭಾರತೀಯರಿಗೆ ಕನಿಷ್ಟ 15 ಸಾವಿರದಂತೆ ಪ್ರತಿಯೊಬ್ಬರಿಗೂ ಹಂಚಬಹುದು. ಕುಟುಂಬವಾರು ಹಂಚಿದರೆ ಲಕ್ಷಕ್ಕೂ ಮೀರುತ್ತದೆ. ಹೀಗಿರುವಾಗ ಪ್ರಧಾನ ಮಂತ್ರಿಗಳು ಘೋಷಣೆ ಮಾಡಿದ ಕೊರೋನಾ ಪ್ಯಾಕೆಜ್ ತಮ್ಮ ಎಲ್ಲಾ ಆರ್ಥಿಕ ಸಂಕಷ್ಟಗಳನ್ನು ದೂರ ಮಾಡಬಹುದೆಂಬ ನಿರೀಕ್ಷೆ ಅತ್ಯಂತ ಸಹಜವಾಗಿತ್ತು.

ಆದರೆ ವಾಸ್ತವಿಕತೆ ಮಾತ್ರ ಭಿನ್ನವಾಗಿದೆ. 20ಲಕ್ಷ ಕೋಟಿಯಲ್ಲಿ ನಿಜಕ್ಕೂ ಜನಸಾಮಾನ್ಯರ ಪಾಲು ಎಷ್ಟು? ವಾಸ್ತವದಲ್ಲಿ ಸರಕಾರ ಅಷ್ಟು ಮೊತ್ತವನ್ನು ಖರ್ಚು ಮಾಡುತ್ತದೆಯೇ? ಅಥವಾ ಇದು ಕೇವಲ ಕನ್ನಡಿಯೊಳಗಿನ ಗಂಟಾ? ಇದನ್ನೆಲ್ಲ ಅರ್ಥಮಾಡಿಕೊಳ್ಳಲು ಕನಿಷ್ಟ ಅರ್ಥಶಾಸ್ತ್ರದ ತಿಳುವಳಿಕೆಯೊಂದಿಗೆ ವಿವರವಾಗಿ ತಿಳಿದುಕೊಳ್ಳಬೇಕಾಗುತ್ತದೆ.
ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ ಬ್ಯಾಂಕ್ ಘೋಷಣೆಗಳು
ಅರ್ಥವ್ಯವಸ್ಥೆಯನ್ನು ನಿಯಂತ್ರಿಸಲು ಮತ್ತು ಸುಗಮವಾಗಿ ಪ್ರವಹಿಸಲು ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ಹಲವಾರು ಯೋಜನೆಗಳನ್ನು ರೂಪಿಸುತ್ತವೆ. ಕೇಂದ್ರ ಸರಕಾರ ರೂಪಿಸುವ ಯೋಜನೆಗಳನ್ನು ಆರ್ಥಿಕ ಯೋಜನೆಗಳೆಂದೂ (Fiscal Policy ) ರಿಸರ್ವ್ ಬ್ಯಾಂಕ್ ರೂಪಿಸುವ ಯೋಜನೆಗಳನ್ನು ಹಣಕಾಸಿನ ಯೋಜನೆಗಳೆಂದೂ (Monetary Policy) ಕರೆಯಲಾಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಸ್ವತಂತ್ರ ಸ್ವಾಯತ್ತ ಸಂಸ್ಥೆಯಾಗಿದೆ. ಅದು ಸ್ವತಂತ್ರವಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ದೇಶದ ಹಣಕಾಸು ಸಂಸ್ಥೆಗಳಾದ ಬ್ಯಾಂಕುಗಳ ಮೇಲೆ ನೇರ ನಿಯಂತ್ರಣವನ್ನು ಹೊಂದಿರುವ ರಿಸರ್ವ್ ಬ್ಯಾಂಕ್ ತನ್ನ ಹಣಕಾಸಿನ ಯೋಜನೆಗಳ ಮೂಲಕ ಅರ್ಥವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯನ್ನು ಸಾಧಿಸುವಷ್ಟು ಸಶಕ್ತವಾಗಿದೆ. ರೆಪೋ ಮತ್ತು ರಿಸರ್ವ್ ರೆಪೋ ದರಗಳಲ್ಲಿ ಬದಲಾವಣೆಯನ್ನು ಮಾಡುವ ಮೂಲಕ ಅರ್ಥವ್ಯವಸ್ಥೆಯಲ್ಲಿ ನಗದು ಪ್ರವಾಹದ ಮಿತಿಯನ್ನು ನಿಯಂತ್ರಿಸುತ್ತದೆ. ಆದರೆ ಹಣಕಾಸಿನ ಯೋಜನೆಗಳು ದೇಶದ ಜನಸಾಮಾನ್ಯರ ಮೇಲೆ ನೇರವಾಗಿ ಪರಿಣಾಮವನ್ನು ಬೀರುವುದಿಲ್ಲ. ಆರ್ಥಿಕ ಯೋಜನೆಗಳನ್ನು ಕೇಂದ್ರ ಸರಕಾರ ರೂಪಿಸುತ್ತದೆ ಮತ್ತು ಇದು ನೇರವಾಗಿ ದೇಶದ ಜನಸಾಮಾನ್ಯರ ಮೇಲೆ ಪರಿಣಾಮವನ್ನು ಬೀರುತ್ತದೆ.


20ಲಕ್ಷ ಕೋಟಿ ಕೊರೋನಾ ಪ್ಯಾಕೇಜ್ ಆರ್ಥಿಕ ಮತ್ತು ಹಣಕಾಸಿನ ಯೋಜನೆಗಳೆರಡನ್ನೂ ಒಳಗೊಂಡಿರುವ ಪ್ಯಾಕೇಜ್ ಆಗಿದೆ ಎನ್ನುವುದು ಗಮನಾರ್ಹ.
ಕೊರೋನಾ ಹಿನ್ನೆಲೆಯಲ್ಲಿ ಅರ್ಥವ್ಯವಸ್ಥೆಯಲ್ಲಿ ಸಮತೋಲನವನ್ನು ಸಾಧಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಒಟ್ಟೂ ರೂ 8.01 ಲಕ್ಷಕೋಟಿ ಪ್ಯಾಕೇಜನ್ನು ಘೋಷಣೆ ಮಾಡಿದೆ. ಇದು ದೇಶದ ಜನಸಾಮಾನ್ಯರಿಗೆ ನೇರ ಪ್ರಯೋಜನವನ್ನು ನೀಡುವಂಥದ್ದಲ್ಲ. ದೇಶದ ಮಾರುಕಟ್ಟೆಯಲ್ಲಿ ನಗದು ಹಣದ ಲಭ್ಯತೆಯಲ್ಲಿ ಕೊರತೆಯಾಗದಂತೆ ಮತ್ತು ಆ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಅವಶ್ಯವಿರುವ ಹಣಕಾಸಿನ ಪೂರೈಕೆಯಲ್ಲಿ ಸಮತೋಲನವನ್ನು ಸಾಧಿಸುವುದು ಈ ಪ್ಯಾಕೇಜ್ ಹಿಂದಿರುವ ಉದ್ದೇಶವಾಗಿದೆ.
20ಲಕ್ಷ ಕೋಟಿ ಪ್ಯಾಕೆಜ್ ಅನ್ನು ಹೀಗೆ ವಿಂಗಡಿಸಬಹುದು.
ಆರ್ಥಿಕ ಯೋಜನೆಯ ಪ್ಯಾಕೇಜ್ (ರಿಸರ್ವ್ ಬ್ಯಾಂಕ್ ಪ್ಯಾಕೇಜ್) ರೂ. 8.01 ಲಕ್ಷ ಕೋಟಿ
ಹಣಕಾಸು ಯೋಜನೆಯ ಪ್ಯಾಕೇಜ್ (ಕೇಂದ್ರ ಸರಕಾರದ ಪ್ಯಾಕೇಜ್) ರೂ. 12.95 ಲಕ್ಷ ಕೋಟಿ

ರೂ. 8.01 ಲಕ್ಷ ಕೋಟಿ ರಿಸರ್ವ್ ಬ್ಯಾಂಕ್ ಪ್ಯಾಕೇಜ್ ಅನ್ನು ಜನಸಾಮಾನ್ಯರು ಮರೆತುಬಿಡಬೇಕು. ಇನ್ನು ರೂ. 12.95 ಲಕ್ಷ ಕೋಟಿ ಪ್ಯಾಕೇಜಿನಲ್ಲಿ ಏನೇನಿದೆಯೆಂದು ನೋಡೋಣ.
1 ಮಧ್ಯಮ ಮತ್ತು ಸಣ್ಣ ಉದ್ದಿಮೆದಾರರಿಗೆ (( MSME )) ಆರ್ಥಿಕ ನೆರವು ರೂ 3.70 ಲಕ್ಷ ಕೋಟಿ
2 ನೌಕರರ ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ನೇರ ನೆರವು ರೂ 9550 ಕೋಟಿ
3 ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್ಬಿಎಫ್ಸಿ), ಹೌಸಿಂಗ್ ಫೈನಾನ್ಸ್ ಕಂಪನಿಗಳು (ಎಚ್ಎಫ್ಸಿ) ಮತ್ತು ಸೂಕ್ಷ್ಮ ಸಾಲ ನೀಡುವ ಸಂಸ್ಥೆಗಳಿಗೆ (ಎಂಎಫ್ಐ)
ರೂ 75 ಸಾವಿರ ಕೋಟಿ
4 ಉಜ್ವಲ ಯೋಜನೆಗೆ ನೆರವು (DISCOM) ರೂ 90 ಸಾವಿರ ಕೋಟಿ
5 ಟಿಡಿಎಸ್ ಮತ್ತು ಟಿಸಿಎಸ್ ದರ ಬದಲಾವಣೆಯ ಮೌಲ್ಯ ರೂ 50 ಸಾವಿರ ಕೋಟಿ
6 ವಲಸೆ ಕಾರ್ಮಿಕರಿಗೆ 2 ತಿಂಗಳ ದವಸ ಧಾನ್ಯ ರೂ 3500 ಕೋಟಿ
7 ಮುದ್ರಾ ಯೋಜನೆಯಡಿಯಲ್ಲಿ 2% ಬಡ್ಡಿ ಸಹಾಯಧನ ರೂ 1500 ಕೋಟಿ
8 ರಸ್ತೆ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ರೂ 5 ಸಾವಿರ ಕೋಟಿ
9 ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮಧ್ಯಮ ವರ್ಗದ ಗೃಹ ನಿರ್ಮಾಣಕ್ಕೆ ನೆರವು ರೂ 70 ಸಾವಿರ ಕೋಟಿ
10 ನಾಬಾರ್ಡ್ ಮೂಲಕ ಹೆಚ್ಚುವರಿ ದುಡಿಯುವ ಬಂಡವಾಳ ಪೂರೈಕೆ ರೂ 30 ಸಾವಿರ ಕೋಟಿ
11 ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ರೂ 2 ಲಕ್ಷ ಕೋಟಿ
12 ಆಹಾರ ಉತ್ಪಾದಕ ಸಣ್ಣ ಘಟಕಗಳಿಗೆ ನೆರವು ರೂ 10 ಸಾವಿರ ಕೋಟಿ
13 ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ರೂ 20 ಸಾವಿರ ಕೋಟಿ
14 ಆಪರೇಶನ್ ಗ್ರೀನ್ಸ್ ಯೋಜನೆ ರೂ 500 ಕೋಟಿ
15 ಕೃಷಿ ಮೂಲಭೂತ ಸೌಕರ್ಯ ಅಭಿವೃದ್ದಿ ನಿಧಿ ರೂ 1 ಲಕ್ಷ ಕೋಟಿ
16 ಗಿಡಮೂಲಿಕೆ ಕೃಷಿಗೆ(Herbal Cultivation) ರೂ 4 ಸಾವಿರ ಕೋಟಿ
17 ಜೇನು ಸಾಕಾಣಿಕೆ ಉತ್ತೇಜನ ರೂ 500 ಕೋಟಿ
18 ಹೈನುಗಾರಿಕೆ ಮೂಲಭೂತ ಸೌಕರ್ಯ ಅಭಿವೃದ್ದಿ ನಿಧಿ ರೂ 15 ಸಾವಿರ ಕೋಟಿ
19 ಆರ್ಥಿಕ ಬಿಕ್ಕಟ್ಟು ನಿವಾರಣೆಗೆViability Gap Funding ರೂ 8100 ಕೋಟಿ
20 MGNREGA ಯೋಜನೆ ರೂ 40 ಸಾವಿರ ಕೋಟಿ
21 ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ (ಮೊದಲ ಪ್ಯಾಕೇಜ್) ರೂ 1,92,800 ಕೋಟಿ
ಒಟ್ಟೂ ರೂಪಾಯಿ ರೂ 12,95,450 ಕೋಟಿ

ಮೇಲಿನ ವಿವರಣೆಯನ್ನು ವಿಶ್ಲೇಷಿಸುವುದಾದರೆ, ಕೊರೋನಾ ನಷ್ಟಭರ್ತಿ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ, ದೇಶದ ಜನಸಾಮಾನ್ಯರ ಹಿತದೃಷ್ಟಿಯಿಂದ ಕೇಂದ್ರ ಸರಕಾರ ಖರ್ಚು ಮಾಡಿದ ಮತ್ತು ಮುಂದೆ ಖರ್ಚು ಮಾಡಬಹುದಾದ ಒಟ್ಟೂ ಮೊತ್ತ ರೂ 12.95 ಲಕ್ಷ ಕೋಟಿ.ಈ ಮೊತ್ತವನ್ನು ನಾವು ಹೀಗೆ ವಿಂಗಡಿಸಬಹುದು

  1. ನೇರವಾಗಿ ಕೇಂದ್ರ ಸರಕಾರ ಖರ್ಚು ಮಾಡಿದ ಮತ್ತು ಮಾಡಲು ಉದ್ದೇಶಿಸಿದ ಮೊತ್ತ:
    ಮಾರ್ಚ್ 27ರಂದು ಕೇಂದ್ರ ಸರಕಾರ 1.7 ಲಕ್ಷ ಕೋಟಿಯ ಆರ್ಥಿಕ ನೆರವನ್ನು ಘೋಷಣೆ ಮಾಡಿ ನೇರವಾಗಿ ದೇಶದ ಜನಸಾಮಾನ್ಯರಿಗೆ ತಲುಪುವಂತೆ ಮಾಡಿದೆ. ಈ ಪ್ಯಾಕೇಜಿನಲ್ಲಿ ಮುಖ್ಯವಾಗಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ದೇಶದ 80 ಕೋಟಿ ಪಡಿತರದಾರರಿಗೆ ಮೂರು ತಿಂಗಳ ಉಚಿತ ಪಡಿತರ ವಿತರಣೆ, ಜನ್ ಧನ್ ಖಾತೆಯನ್ನು ಹೊಂದಿರುವ 20ಕೋಟಿ ಮಹಿಳೆಯರ ಖಾತೆಗೆ ತಿಂಗಳಿಗೆ ರೂ 500 ರಂತೆ ಮೂರು ತಿಂಗಳು ಹಣ ವರ್ಗಾವಣೆ, ಉಜ್ವಲ ಎಲ್ ಪಿ ಜಿ ಯೋಜನೆ ಅಡಿಯಲ್ಲಿ ದೇಶದ 8.3 ಬಡ ಕುಟುಂಬಳಿಗೆ ಉಚಿತ ಅಡುಗೆ ಅನಿಲ ಪೂರೈಕೆ,
  2. MNREGA ಯೋಜನೆಯಲ್ಲಿ ದಿನಗೂಲಿಯನ್ನು ರೂ 182ರಿಂದ ರೂ 202ಕ್ಕೆ ಹೆಚ್ಚಿಸುವುದು, ಸುಮಾರು 63 ಲಕ್ಷ ಮಹಿಳಾ ಸ್ವಸಹಾಯ ಗುಂಪುಗಳಿಗೆ ತಲಾ 20 ಲಕ್ಷದಂತೆ ಭದ್ರತಾರಹಿತ ಸಾಲ ವಿತರಣೆ, (ವಾಸ್ತವಿಕವಾಗಿ ಸಾಲ ವಿತರಣೆ ಮಾಡಿದ ಮೊತ್ತದ ವಿವರ ಲಭ್ಯವಿಲ್ಲ), ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ದೇಶದ ರೈತರು ಪಡೆಯುತ್ತಿದ್ದ ವಾರ್ಷಿಕ ರೂ 6000 ಮೊತ್ತದ ಮೊದಲ ಕಂತಾಗಿ ರೂ 2000 ವರ್ಗಾವಣೆ,
  3. ನೌಕರರ ಭವಿಷ್ಯ ನಿಧಿ ಕೊಡುಗೆಯನ್ನು ಕೇಂದ್ರ ಸರಕಾರ ಭರಿಸಿರುವುದು ಪ್ರಮುಖ ಅಂಶಗಳು. ಆದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಪಾವತಿಸುವ ಮೊತ್ತ ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಯಾಗಿರು ಕಾರಣ ಇದು ಕೊರೋನಾ ಪ್ಯಾಕೇಜ್ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇನ್ನು ಮೇ 17ರಂದು ಪ್ರಧಾನ ಮಂತ್ರಿಗಳು ಘೋಷಣೆ ಮಾಡಿದ ‘ಆತ್ಮ ನಿರ್ಭರ ಭಾರತ ಅಭಿಯಾನ’, 20 ಲಕ್ಷ ಕೋಟಿ ಪ್ಯಾಕೇಜ್ ಅಡಿಯಲ್ಲಿ ನೇರವಾಗಿ ದೇಶದ ಜನ ಸಾಮಾನ್ಯರಿಗೆ ನೆರವಾಗುವ ಯೋಜನೆಗಳು ತೀರಾ ಕಡಿಮೆ.
  4. ಪರೋಕ್ಷವಾಗಿ ಅಂದರೆ ಸಾಲ ಸೌಲಭ್ಯದ ಮೂಲಕ ಖರ್ಚು ಮಾಡಬಹುದಾದ ಮೊತ್ತ:
    ಮೇಲೆ ವಿವರಿಸಿದ 20 ಲಕ್ಷ ಕೋಟಿಯ ಲೆಕ್ಕಾಚಾರವನ್ನು ಗಮನಿಸಿ ಅದರಲ್ಲಿ ರಿಸರ್ವ್ ಬ್ಯಾಂಕ್ ಪ್ಯಾಕೇಜ್ ಹೊರತುಪಡಿಸಿ ಬಾಕಿ ಉಳಿಯುವ 12.95 ಲಕ್ಷ ಕೋಟಿ ಪ್ಯಾಕೇಜಿನಲ್ಲಿ ಮೊದಲ ಹಂತದ 1.7 ಲಕ್ಷ ಕೋಟಿಯನ್ನು ಕಳೆದರೆ ಬಾಕಿ ಉಳಿಯುವ 11.25 ಲಕ್ಷ ಕೋಟಿ ವಿನಿಯೋಗದ ವಿವರಗಳನ್ನು ನೋಡಿದರೆ ಅದಾವುದು ಜನಸಾಮಾನ್ಯರಿಗೆ ಕೈಗೆಟಕುವ ಸಾಧ್ಯತೆಗಳಿಲ್ಲ. ಎಕೆಂದರೆ 11.25 ಲಕ್ಷ ಕೋಟಿ ಮೊತ್ತ ಹಣಕಾಸು ಮತ್ತು ಹಣಕಾಸೇತರ ಸಂಸ್ಥೆಗಳ ಮೂಲಕ ಸಾಲ ಸೌಲಭ್ಯದ ರೂಪದಲ್ಲಿ ನೀಡಬಹುದಾದ ಆರ್ಥಿಕ ಪ್ಯಾಕೇಜ್ ಆಗಿದೆ.
    ಈ ಪ್ಯಾಕೇಜ್ ನಿಜಕ್ಕೂ ಜನಸಾಮಾನ್ಯರಿಗೆ ತಲುಪುವ ಬಗ್ಗೆ ವಿಶ್ವಾಸ ಹೊಂದುವುದು ಕಷ್ಟ. ಯಾಕೆಂದರೆ ಈ ಪ್ಯಾಕೇಜ್ ನಿಜಕ್ಕೂ ಅಗತ್ಯ ಉಳ್ಳವರಿಗೆ ತಲುಪಬೇಕೆಂದರೆ ಭಾರತದ ಬ್ಯಾಂಕ್ ಗಳು ಪ್ರಾಮಾಣಿಕವಾಗಿ ಅನುಷ್ಟಾನಗೊಳಿಸಬೇಕು. ಸರಕಾರದ ಯೋಜನೆಗಳನ್ನು ಎಷ್ಟರ ಮಟ್ಟಿಗೆ ಬ್ಯಾಂಕುಗಳು ಯಥಾವತ್ತಾಗಿ ಜಾರಿಗೊಳಿಸಿವೆ ಎನ್ನುವುದನ್ನು ನೋಡಬೇಕೇಂದರೆ ಕೇಂದ್ರ ಸರಕಾರ 2015ರಲ್ಲಿ ಜಾರಿಗೆ ತಂದಿರುವ ಮುದ್ರಾ ಯೋಜನೆಯ ವಾಸ್ತವವನ್ನು ನೋಡಬೇಕು. ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಯಾವುದೇ ಭದ್ರತೆ ಇಲ್ಲದೇ ಸಾಲ ಸೌಲಭ್ಯವನ್ನು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ ಯಾವ ಬ್ಯಾಂಕುಗಳೂ ಮುದ್ರಾ ಸಾಲವನ್ನು ನೀಡುವಾಗ ಸರಕಾರ ಹೇಳಿದ ಸರಳ ನಿಯಮಗಳನ್ನು ಅನುಸರಿಸಲಿಲ್ಲ ಮತ್ತು ಅಗತ್ಯವಿರುವಷ್ಟು ಹಣಕಾಸಿನ ನೆರವನ್ನೂ ನೀಡಲಿಲ್ಲ. ಸಾಮಾನ್ಯವಾಗಿ ಸಾಲವನ್ನು ನೀಡುವಾಗ ಯಾವೆಲ್ಲ ನಿಯಮಗಳಿರುವವೋ ಅದನ್ನೇ ಪಾಲಿಸುತ್ತಿವೆ. ಭದ್ರತೆ ಇಲ್ಲದೇ ಮುದ್ರಾ ಸಾಲವನ್ನು ನೀಡಿದ ಉದಾಹರಣೆಗಳು ಕೂಡ ತೀರ ವಿರಳ.
  5. ಲಭ್ಯವಿರುವ ಮಾಹಿತಿಯ ಪ್ರಕಾರ ಮುದ್ರಾಯೋಜನೆಯ ಅಡಿಯಲ್ಲಿ ಬ್ಯಾಂಕುಗಳು ನೀಡಿದ ಸಾಲದಲ್ಲಿ 90ಪ್ರತಿಶತ ಸಾಲದ ಮೊತ್ತ ರೂ 50 ಸಾವಿರಕ್ಕೂ ಕಡಿಮೆ. ಬ್ಯಾಂಕುಗಳ ಕಾರ್ಯವೈಖರಿಗೆ ಮತ್ತು ಅವರ ಪ್ರಾಮಾಣಿಕತೆಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಆದರೆ ಸೋಜಿಗದ ಸಂಗತಿ ಎಂದರೆ ಮುದ್ರಾಯೋಜನೆಯಲ್ಲಿ ಸಾಲಸೌಲಭ್ಯ ಪಡೆದ ಪ್ರತಿಶತ 97ರಷ್ಟು ಜನಸಾಮಾನ್ಯರು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿದ್ದಾರೆ.
    ‘ಆತ್ಮ ನಿರ್ಭರ ಭಾರತ ಅಭಿಯಾನ’ದ ಆರ್ಥಿಕ ಪ್ಯಾಕೇಜಿನಲ್ಲಿ ಮೀಸಲಿರುವ ಹೆಚ್ಚಿನ ಭಾಗವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಬ್ಯಾಂಕುಗಳಿಂದ ಆಗಬೇಕಿದೆ. ಬ್ಯಾಂಕುಗಳು ನೀಡುವ ಸಾಲಗಳಿಗೆ ಕೇಂದ್ರ ಸರಕಾರವೇ ಜಾಮೀನು ನೀಡುತ್ತದೆ. ಕಡಿಮೆ ಬಡ್ಡಿ ದರ ಮತ್ತು ಒಂದು ವರ್ಷದ ಮರುಪಾವತಿ ವಿನಾಯಿತಿ ಸೌಲಭ್ಯಗಳು ಕೊರೋನಾ ಸಂಕಷ್ಟದ ಜನಸಮೂಹಕ್ಕೆ ಅತಿ ಹೆಚ್ಚಿನ ಪ್ರಯೋಜನವನ್ನು ನೀಡಬಹುದಾಗಿದೆ.
    20 ಲಕ್ಷ ಕೋಟಿ ಅಲ್ಲ 2 ಲಕ್ಷ ಕೋಟಿ
    ‘ಆತ್ಮ ನಿರ್ಭರ ಭಾರತ ಅಭಿಯಾನ’ದ ಅಡಿಯಲ್ಲಿ ಘೋಷಣೆ ಮಾಡಿದ 20 ಲಕ್ಷ ಕೋಟಿಗೆ ಲೆಕ್ಕವೇನೋ ಸರಿಯಾಗಿದೆ. ಆದರೆ ಅದು ಕೇವಲ ಕಾಲ್ಪನಿಕ ಅಂತೆನಿಸಿದರೆ ಸುಳ್ಳಾಗುವುದಿಲ್ಲ. ಮೊದಲನೆಯದಾಗಿ ಈ ಘೋಷಣೆಯಲ್ಲಿ ರಿಸರ್ವ್ ಬ್ಯಾಂಕ್ ಪ್ಯಾಕೇಜನ್ನು ಸೇರಿಸಿರುವುದು ತಪ್ಪಾಗುತ್ತದೆ. ಎರಡನೇಯದಾಗಿ ಸರಕಾರ ಮುಂದಿನ ದಿನಗಳಲ್ಲಿ ಜಾರಿಗೆ ತರುವ ಬೇರೆ ಬೇರೆ ಯೋಜನೆಗಳು ಕೊರೋನಾ ಕಾರಣದಿಂದ ಆರ್ಥಿಕ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ತುರ್ತಾಗಿ ನೆರವಾಗುವಂಥವುಗಳಲ್ಲ ಮತ್ತು ಅವು ಬಜೆಟ್ ಘೋಷಣೆಗಳಂತೆ ಕೇವಲ ಭರವಸೆಯನ್ನು ನೀಡುವಂತಿವೆ. ಎಷ್ಟೋ ಯೋಜನೆಗಳು 2020-21ರ ಕೇಂದ್ರ ಬಜೆಟ್ಟಿನಲ್ಲಿ ಘೋಷಣೆ ಮಾಡಿದ ಯೋಜನೆಗಳ ಪುನರಾವರ್ತಿ ಎನಿಸುತ್ತಿದೆ. ನಿಜಕ್ಕೂ ಕೇಂದ್ರ ಸರಕಾರ ದೀರ್ಘಾವಧಿಯಲ್ಲಿ ಅರ್ಥವ್ಯವಸ್ಥೆಯ ಸಮತೋಲನಕ್ಕೆ ಮಹತ್ವ ನೀಡಿ ದೇಶದ ಜನಸಾಮಾನ್ಯರ ತತ್ ಕ್ಷಣದ ಅಥವಾ ಅಲ್ಪಾವಧಿಯ ಅಗತ್ಯತೆಗಳನ್ನು ಮರೆತಂತಿದೆ.
  6. 20 ಲಕ್ಷ ಕೋಟಿ ಪ್ಯಾಕೇಜ್ ಅಂದರೆ ದೇಶದ 10% ಜಿಡಿಪಿಗೆ ಸಮನಾಗುತ್ತದೆ. ಆದರೆ ವಾಸ್ತವದಲ್ಲಿ ಜನಸಾಮಾನ್ಯರಿಗೆ ಕೇಂದ್ರ ಸರಕಾರ ಖರ್ಚು ಮಾಡಿದ ಮತ್ತು ಮಾಡುವ ಪ್ರಮಾಣ ಕೇವಲ 2 ಲಕ್ಷ ಕೋಟಿಯ ಹತ್ತಿರ ಇರುತ್ತದೆ. ಇದು ಜಿಡಿಪಿಯ 1% ಮಾತ್ರ. ಅಮೇರಿಕ ಸರಕಾರ 225 ಲಕ್ಷ ಕೋಟಿ ಕೊರೋನಾ ಆರ್ಥಿಕ ಪ್ಯಾಕೇಜನ್ನು ಘೋಷಣೆ ಮಾಡಿದೆ ಮತ್ತು ಇದು ಅಮೇರಿಕದ ಫೇಡರಲ್ ಬ್ಯಾಂಕ್ ಪ್ಯಾಕೇಜನ್ನು ಹೊರತುಪಡಿಸಿರುತ್ತದೆ. ಬೇರೆ ಬೇರೆ ದೇಶಕ್ಕೆ ಹೋಲಿಸಿದರೆ ಭಾರತ ಸರಕಾರದ 1% ಪ್ಯಾಕೇಜ್ ಲೆಕ್ಕಕ್ಕೇ ಇಲ್ಲ. ನಿಜಕ್ಕೂ ಇದು ದೇಶದ ಜನತೆಯಲ್ಲಿ ಗೊಂದಲವನ್ನು ಸೃಷ್ಟಿಮಾಡುವ ಮತ್ತು ವಾಸ್ತವವನ್ನು ಮರೆಮಾಚುವ ಪ್ರಯತ್ನವಾಗಿದೆ.
    ಅರ್ಥವ್ಯವಸ್ಥೆಯ ಮೇಲೆ ಪರಿಣಾಮಗಳು
    ಪ್ರಸ್ತುತ ಭಾರತದ ಅರ್ಥವ್ಯವಸ್ಥೆಗೆ ತಗುಲಿರುವ ಸೋಂಕು ಕೊರೋನಾ ಸೋಂಕಿಗಿಂತ ಹೆಚ್ಚು ಭಾದಿತವಾಗಿದೆ. ಕೊರೋನಾ ಸೋಂಕಿಗೆ ಮದ್ದನ್ನು ಇನ್ನೂ ಶೋಧಿಸಲು ಸಾಧ್ಯವಾಗಲಿಲ್ಲ. ಆದರೆ ಭಾರತದ ಅರ್ಥವ್ಯವಸ್ಥೆಯ ಸೋಂಕಿಗೆ ಸೂಕ್ತ ಚಿಕಿತ್ಸೆಯನ್ನು ನೀಡಬಹುದಾದ ಅವಕಾಶವನ್ನು ಕೇಂದ್ರ ಸರಕಾರ ಕಳೆದುಕೊಂಡಿದೆಯೆಂದು ಭಾಸವಾಗುತ್ತಿದೆ. ನಿಜಕ್ಕೂ 20ಲಕ್ಷ ಕೋಟಿ ಪ್ಯಾಕೇಜ್ ಪರಿಣಾಮಕಾರಿ ಯೋಜನೆ ಅಂತೆನಿಸಿದ್ದರೆ ಭಾರತದ ಮಾರುಕಟ್ಟೆ ಸಕಾರಾತ್ಮಕವಾಗಿ ಸ್ಪಂದಿಸಬೇಕಿತ್ತು. ಆದರೆ ಅದಾವುದೂ ಗೋಚರಿಸಲಿಲ್ಲ. ನೀವು ‘ಮಾರುಕಟ್ಟೆಯನ್ನು ಎಂದೂ ಮೋಸಮಾಡಲು ಸಾಧ್ಯವಿಲ್ಲ’ ಎಂಬ ಮಾತಿದೆ. ಅದು ನಿಜಕ್ಕೂ ಸತ್ಯ. ಸರಕಾರದ ಯೋಜನೆಗಳ ಮೌಲ್ಯಮಾಪನಕ್ಕೆ ಶೇರು ಮಾರುಕಟ್ಟೆಯ ಸ್ಪಂದನೆ ಮತ್ತು ಬೆಳವಣಿಗೆಗಳನ್ನು ಪರಿಗಣಿಸಲಾಗುತ್ತದೆ. 20 ಲಕ್ಷ ಕೋಟಿ ಪ್ಯಾಕೇಜಿಗೆ ಭಾರತೀಯ ಶೇರು ಮಾರುಕಟ್ಟೆಯ ಪ್ರತಿಕ್ರಿಯೆ ಅತ್ಯಂತ ನೀರಸವಾಗಿರುವುದನ್ನು ಗಮನಿಸಬೇಕು. ಮಾರುಕಟ್ಟೆ ವಾಸ್ತವವನ್ನು ಅರಿತುಕೊಳ್ಳುತ್ತದೆ ಮತ್ತು ಅದಕ್ಕೆ ತಕ್ಕಂತೆ ಸ್ಪಂದಿಸುತ್ತದೆ. ದೇಶದ ಜನತೆ ಅಭೂತಪೂರ್ವವೆಂದು ಬಣ್ಣಿಸಿದ ಆರ್ಥಿಕ ಪ್ಯಾಕೇಜನ್ನು ಮಾರುಕಟ್ಟೆ ನಿರ್ಲಜ್ಜವಾಗಿ ತಿರಸ್ಕರಿಸಿರುವುದನ್ನು ನೋಡಿದರೆ ಅದು ಕೇವಲ ಕನ್ನಡಿಯೊಳಗಿನ ಗಂಟು ಮಾತ್ರ ಅಂತೆನಿಸುತ್ತದೆ.
    ಸರಕಾರಕ್ಕೆ ನಿಜಕ್ಕೂ ಕಾಳಜಿ ಇದ್ದರೆ..
    ಇಂದು ದೇಶದ ಅರ್ಥವ್ಯವಸ್ಥೆ ತೀವ್ರ ಸಂಕಷ್ಟದಲ್ಲಿ ಇದೆ. ಅದರಲ್ಲೂ ವಿಶೇಷವಾಗಿ ದೇಶದ ಅಸಂಘಟಿತ ವಲಯ ಸಂಪೂರ್ಣ ನೆಲಕಚ್ಚಿದೆ. ರೈತರ ಸಂಕಷ್ಟ ಯಥಾವತ್ತಾಗಿ ಉಲ್ಬಣಿಸಿದೆ. ಉದ್ಯೋಗ ನಷ್ಟಕ್ಕೆ ಸಧ್ಯ ಪರಿಹಾರವೇ ಇಲ್ಲದಂತಾಗಿದೆ. ಇಂಥಹ ತುರ್ತು ಪರಿಸ್ಥಿತಿಯಲ್ಲಿ ಜನಪರವೆನಿಸುವ ಸರಕಾರಕ್ಕೆ ನಿಜಕ್ಕೂ ಕಾಳಜಿ ಇದ್ದರೆ ಅವಾಸ್ತವಿಕ ಅಂಕಿ ಅಂಶಗಳ ಲೆಕ್ಕವನ್ನು ಹೇಳುವುದನ್ನು ಬಿಟ್ಟು ಜನಸಮೂಹಕ್ಕೆ ನೇರವಾಗಿ ಆರ್ಥಿಕ ನೆರವನ್ನು ನೀಡಲು ಕ್ರಮಕೈಗೊಳ್ಳಬೇಕು. ದೇಶದ ಅಸಂಘಟಿತ ವಲಯ ಮತ್ತು ರೈತ ಸಮುದಾಯ ಆರ್ಥಿಕವಾಗಿ ಸಬಲವಾದರೆ ಅರ್ಥವ್ಯವಸ್ಥೆ ತಾನಾಗಿಯೇ ಸರಿಯಾಗುತ್ತದೆ, ಭಾರತದ ಆತ್ಮ ನಿರ್ಭರತೆಯೂ ನಿರಾತಂಕವಾಗಿ ಸಾಗುತ್ತದೆ ಮತ್ತು ಆಗ ಜನರೂ ಕೊರೋನಾ ಜೊತೆ ಜೀವಿಸುವುದನ್ನೂ ಕಲಿಯುತ್ತಾರೆ.

-ಅಡ್ಮಿನ್ : ಲಾ ಛೇಂಬರ್ ಶಿರಸಿ

( ಲೇಖಕರು, ಸಾಹಿತಿಗಳು,ತೆರಿಗೆ ಸಲಹೆಗಾರರಾಗಿದ್ದು ಸಮಕಾಲೀನ ವರ್ತಮಾನ, ವಿದ್ಯಮಾನಗಳಿಗೆ ಪ್ರತಿಕ್ರೀಯಿಸಿ ಅಧ್ಯಯನಪೂರ್ಣ ಮಾಹಿತಿ ನೀಡುವುದರಲ್ಲಿ ಸಿದ್ಧ ಹಸ್ತರು. ಇವರ ಆಂಗ್ಲ ಮತ್ತು ಕನ್ನಡ ಭಾಷಾ ಪಾಂಡತ್ಯ ಅವರ ಚಿಂತನೆ, ಕ್ರೀಯಾಶೀಲತೆಗೆ ಮೆರಗುತಂದಿದೆ. ಶಿರಸಿಯಂಥ ಸಣ್ಣ ಪಟ್ಟಣದಲ್ಲಿದ್ದು ತೆರಿಗೆ ಸಲಹೆಗಾರರಾಗಿ ಕಳೆದ ಒಂದೂವರೆ ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಇವರು ಸತ್ವಪೂರ್ಣ ಲೇಖನಗಳಿಂದಲೂ ಬಹುಪ್ರಸಿದ್ಧರು)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *