
ರಾಜ್ಯದಲ್ಲೇ ಅತಿ ಹೆಚ್ಚು ಮಂಗನಕಾಯಿಲೆ ಪೀಡಿತ ಜನರನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಕೆ.ಎಫ್.ಡಿ.,ಡೆಂಗ್ಯೂ ಮತ್ತು ಕರೋನಾದಂಥ ಸಾಂಕ್ರಾಮಿಕ ಕಾಯಿಲೆಗಳ ಭೀತಿ ತಲೆದೋರಿದೆಯಾ ? ಎನ್ನುವ ಅನುಮಾನ ಬರುವಂತೆ ಇಲ್ಲಿಯ ವರ್ತಮಾನವಿದೆ.


ಸಿದ್ಧಾಪುರ ತಾಲೂಕೊಂದರಲ್ಲೇ ಈವರೆಗೆ 50 ಕ್ಕಿಂತ ಹೆಚ್ಚು ಮಂಗನಕಾಯಿಲೆ ಪೀಡಿತ ಜನರಲ್ಲಿ ಈ ವರ್ಷ ಒಂದು ಸಾವಿನ ನಂತರ ಎಚ್ಚೆತ್ತ ಆಡಳಿತಶಾಹಿ ಈ ಕಾಯಿಲೆಯಿಂದ ಆಗಬಹುದಾದ ಸಾವುಗಳನ್ನು ತಪ್ಪಿಸಿದೆ. ಈ ವರೆಗೆ ಕರೋನಾ ಮುಕ್ತವಾಗಿದ್ದ ತಾಲೂಕು ಇಂದು ಒಂದು ಪ್ರಕರಣದಿಂದ ಕರೋನಾ ಪೀಡಿತರ ಸಂಖ್ಯೆಯನ್ನು ದಾಖಲಿಸಿದೆ.
ಈ ಮಂಗನಕಾಯಿಲೆ ಮತ್ತು ಕರೋನಾ ಗಳ ನಡುವೆ ತಾಲೂಕಿನ ಒಬ್ಬರಲ್ಲಿ ಡೆಂಗ್ಯೂ ಕಂಡುಬಂದ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇಂದು ತಾಲೂಕಿಗೆ ಭೇಟಿ ನೀಡಿದ್ದ ಶಿರಸಿ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ತಾಲೂಕಿನಲ್ಲಿ ಒಬ್ಬ ವ್ಯಕ್ತಿಯಲ್ಲಿ ಕರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಾಲೂಕಾ ಆಡಳಿತವನ್ನು ಎಚ್ಚರಿಸಿದರು.
ಕರೋನಾ ಮುನ್ನೆಚ್ಚರಿಕೆ, ಆಡಳಿತಾತ್ಮಕ ಕ್ರಮಗಳ ನಡುವೆ ಕೋವಿಡ್ ಪ್ರಸರಣವನ್ನು ನಿರ್ಲಕ್ಷಿಸುವಂತಿಲ್ಲ ಗ್ರಾಮೀಣ ಭಾಗದಲ್ಲಿ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳು, ಗ್ರಾಮಲೆಕ್ಕಿಗರು ಕರೋನಾ ದೊಂದಿಗೆ ಇತರ ಸಾಂಕ್ರಾಮಿಕ ರೋಗಗಳು, ವಾಸ್ತವ ಸ್ಥಿತಿಗಳ ಬಗ್ಗೆ ಕರಾರುವಕ್ಕು ಮಾಹಿತಿ ನೀಡಬೇಕು ಎಂದು ಆದೇಶಿಸಿದರು.
ಇಂದು ಕೋವಿಡ್ ದೃಢಪಟ್ಟ ಸಿದ್ದಾಪುರದ ಮೊದಲ ಪ್ರಕರಣದ ವ್ಯಕ್ತಿ ತನ್ನ ಕುಟುಂಬದೊಂದಿಗೇ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯ ಕಾರಂಟೈನ್ ಕೇಂದ್ರದಲ್ಲಿ ಕಾರಂಟೈನ್ ಆಗಿದ್ದ ಕಾರಣ ಇತರರಿಗೂ ಕರೋನಾ ಪ್ರಸರಿಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇಂಥ ಅಪಾಯದ ಸ್ಥಿತಿಯಲ್ಲಿ ತಾಲೂಕಾ ಅಡಳಿತದೊಂದಿಗೆ ನಿರ್ವಹಣೆಯ ಬಗ್ಗೆ ಚರ್ಚಿಸಿದ ಸಹಾಯಕ ಆಯುಕ್ತರು ಸಿದ್ಧಾಪುರದಲ್ಲಿ ವೈಯಕ್ತಿಕ ಅಂತರ ಪಾಲಿಸದ ಸಾರ್ವಜನಿಕರ ಮೇಲೆ ಕ್ರಮ ಜರುಗಿಸುವಂತೆ ತಾಕೀತು ಮಾಡಿದರು. ಬ್ಯಾಂಕ್,ಸಹಕಾರಿ ಸಂಘಗಳು ಸೇರಿದ ಹಣಕಾಸು ವ್ಯವಹಾರ, ವ್ಯಾಪಾರ ಕೇಂದ್ರಗಳಲ್ಲಿ ವೈಯಕ್ತಿಕ ಂತರ ಕಾಪಾಡುವಂತೆ ಸಲಹೆ ನೀಡಿದರು.
ಜಿಲ್ಲಾಡಳಿತದ ನಿ ರ್ದೇಶ ನದ ಮೇರೆಗೆ ಸಮರೋಪಾದಿಯಲ್ಲಿ ಕೆಲಸ ಮಾಡುವ ತಾಲೂಕಾ ಆಡಳಿತಕ್ಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಾಂಸ್ಥಿಕ ಕಾರಂಟೈನ್ ಮತ್ತು ಹೋಮ್ ಕಾರಂಟೈನ್ ಪ್ರಕರಣಗಳನ್ನು ನಿಭಾಯಿಸುವುದು ಸವಾಲಾಗಿದೆ.
ಅನಿವಾರ್ಯ ಕಾರಣಗಳಿಂದ ಹೋಮ್ ಕಾರಂಟೈನ್ ಆಗಿರುವ ಸಾವಿರಾರು ಜನರು ತಮಗೆ ಆಹಾರ, ಇನ್ನಿತರ ಅನುಕೂಲ ಒದಗಿ ಸಬೇಕೆಂದು ತಾಲೂಕಾ ಆಡಳಿತವನ್ನು ವಿನಂತಿಸಿದ್ದಾರೆ, ಇಂಥ ಸಮಯದಲ್ಲಿ ಜನರೊಂದಿಗಿರಬೇಕಾದ ಜನಪ್ರತಿನಿಧಿಗಳಲ್ಲಿ ಕೆಲವರು ನಾಪತ್ತೆಯಾದರೆ ಕೆಲವರು ತಾವು ಆಯ್ಕೆ ಮಾಡಿದ ಜನರಿಗೆ ಕಿಟ್ ನೀಡಿ ಪ್ರಚಾರ ಪಡೆಯುತಿದ್ದಾರೆ.
ಸಾಂಸ್ಥಿಕ ಕಾರಂಟೈನ್ ಕೇಂದ್ರಗಳಲ್ಲಿ ಸರ್ಕಾರ ಅಗತ್ಯ ಅನುಕೂಲಗಳನ್ನು ಒದಗಿಸುತ್ತಿದೆ. ಆದರೆ ಅವಶ್ಯಕತೆಯಿದ್ದರೆ ಹೋಮ್ ಕಾರಂಟೈನ್ ಆದ ಜನರಿಗೂ ಆಹಾರ-ಧಾನ್ಯಗಳ ವ್ಯವಸ್ಥೆ ಮಾಡುವುದಾಗಿ ಸಹಾಯಕ ಆಯುಕ್ತರು ಭರವಸೆ ನೀಡಿದ್ದಾರೆ. . ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ಸುಕ್ಷಿತರ ತಾಲೂಕೆಂಬ ಹೆಗ್ಗಳಿಕೆಯ ತಾಲೂಕಿನಲ್ಲಿ ಬಹುಸಂಖ್ಯಾತರಾದ ಬಡವರು ಈಗ ರೋಗಗಳ ಭೀತಿಗೆ ಒಳಗಾಗಿದ್ದು ಅವರ ಬೆಳೆಸಾಲ, ವೈಯಕ್ತಿಕ ಸಾಲಗಳಿಗೆ ಸಮಯಾವಕಾಶ ನೀಡಿ ರಿಯಾಯತಿ, ಮನ್ನಾಗಳನ್ನು ಪ್ರಕಟಿಸಬೇಕೆಂಬ ಬೇ ಡಿಕೆ ವ್ಯಕ್ತವಾಗಿದೆ. ಬ್ಯಾಂಕುಗಳ ಅಸಹಕಾರ, ಅವ್ಯವಸ್ಥೆ,ಜನವಿರೋಧಿ ನೀತಿಗಳಿಂದ ರೈತರು, ಜನಸಾಮಾನ್ಯರಿಗೆ ತೊಂದರೆಯಾಗುತಿದ್ದು ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಸರ್ಕಾರದ ನೀತಿ- ನಿಯಂತ್ರಣ, ಕಟ್ಟುಪಾಡುಗಳ ನಡುವೆ ಅನಾನುಕೂಲತೆ, ಅನಿವಾರ್ಯತೆಗಳಿಂದಾಗಿ ಜನರ ಓಡಾಟ,ವ್ಯವಹಾರ ಚಲನ-ವಲನ ಹೆಚ್ಚಿದೆ ಈ ಬಗ್ಗೆ ಅಧಿಕಾರಶಾಹಿಯಂತೆ ಜನಪ್ರತಿನಿಧಿಗಳ ಸ್ಫಂದನ ದೊರೆಯದಿರುವುದು ಸಾರ್ವಜನಿಕರ ಅಸಮಾಧನಕ್ಕೆ ಕಾರಣವಾಗಿದೆ.
ಈ ಎಲ್ಲಾ ಸಮಸ್ಯೆಗಳ ನಡುವೆ ಮಳೆಗಾಲ ಕಾಲಿಡುವ ಲಕ್ಷಣಗಳಿರುವುದರಿಂದ ಸಿದ್ಧಾಪುರ ಉತ್ತರಕನ್ನಡ ಜಿಲ್ಲೆಯ ಜೊತೆಗೆ ರಾಜ್ಯದಾದ್ಯಂತ ಸರ್ಕಾರ ಚುರುಕಿನಿಂದ ಜನರಿಗೆ ಸ್ಫಂದಿಸುವ ಅಗತ್ಯ ಹೆಚ್ಚಿದೆ. ಈ ಹಿನ್ನೆಲೆಗಳಲ್ಲಿ ಜನಸಾಮಾನ್ಯರಿಗಾಗುವ ತೊಂದರೆಗಳನ್ನು ಪರಿಹರಿಸುವ ದಿಸೆಯಲ್ಲಿ ಸರ್ಕಾರಿ ಯಂತ್ರದ ಸ್ಫಂದನೆ ಹೆಚ್ಚಬೇಕಿದೆ. ಈ ಬಗ್ಗೆ ಶೀಘ್ರ-ಸೂಕ್ತ ಕ್ರಮಗಳಿಗಾಗಿ ಪ್ರಯತ್ನಿಸುವ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ.
ಸಿದ್ಧಾಪುರದ ಮೊದಲ ಕರೋನಾ ಪ್ರಕರಣದ ಪ್ರವಾಸಕತೆ
ಇಂದು ಮತ್ತೆ ನಾಲ್ಕು ಹೊಸ ಕರೋನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಉತ್ತರಕನ್ನಡ ಜಿಲ್ಲೆಯ ಕೋವಿಡ್ ಸಂಖ್ಯೆ ಏರಿದೆ. ಜಿಲ್ಲೆಯ ಸಿದ್ಧಾಪುರ ಮತ್ತು ಅಂಕೋಲಾಗಳಲ್ಲಿ ಪತ್ತೆಯಾಗದ ಕರೋನಾ ಪ್ರಕರಣಗಳ ಮಧ್ಯೆ ಇಂದು ಸಿದ್ಧಾಪುರದ ಒಬ್ಬ ವ್ಯಕ್ತಿಯಲ್ಲಿ ಕರೋನಾ ದೃಢ ಪಡುವ ಮೂಲಕ ಸಿದ್ಧಾಪುರ ಕರೋನಾ ಮುಕ್ತ ತಾಲೂಕೆಂಬ ಹೆಗ್ಗಳಿಕೆಯಿಂದ ದೂರಾದಂತಾಗಿದೆ.
ಸಿದ್ಧಾಪುರ ಮೂಲದ ಮಹಾರಾಷ್ಟ್ರ ಠಾಣಾದಲ್ಲಿರುತ್ತಿದ್ದ ಕುಟುಂಬವೊಂದು ಮೇ 17 ರಂದು ಠಾಣಾದಿಂದ ಹೊರಟು 18 ರಂದು ಶಿರಸಿಯ ನೀಲೇಕಣಿ ತಪಾಸಣಾ ಗೇಟ್ ಬಳಿ ಜಿಲ್ಲಾಡಳಿತದ ವಶಕ್ಕೆ ಸಿಕ್ಕಿದ್ದರು. ಈ ಕುಟುಂಬ ಮೇ 19 ರಂದು ಕಾವಂಚೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಾರಂಟೈನ್ ಆಗಿತ್ತು. ಮೂರು ಮಕ್ಕಳ ಜೊತೆಗಿನ ಈ ಕುಟುಂಬ ಕಿ.ರಾ.ಚೆ. ವಸತಿ ಶಾಲೆಯ ಒಂದೇ ಕೋಣೆಯಲ್ಲಿ ಕಾರಂಟೈನ್ ಆಗಿತ್ತು. ಇವರ ಗಂಟಲು ದೃವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಕೋವಿಡ್ ಸೋಂಕು ದೃಢವಾದ ಈ ವ್ಯಕ್ತಿ ತನ್ನ ಕುಟುಂಬದೊಂದಿಗೆ ಮಹಾರಾಷ್ಟ್ರದಿಂದ ಬಾಡಿಗೆ ಕಾರಿನಲ್ಲಿ ಹುಟ್ಟೂರು ಪ್ರವೇಶಿಸಿತ್ತು. ಇವರನ್ನು ಸಿದ್ಧಾಪುರಕ್ಕೆ ತಲುಪಿಸಿದ ಕಾರಿನ ಚಾಲಕ ಮರಳಿ ಠಾಣಾ ತಲುಪಿದ್ದಾನೆ. ಈ ಕುಟುಂಬದ 5 ಜನರ ಗಂಟಲುದೃವದ ಮಾದರಿಗಳಲ್ಲಿ ಕುಟುಂಬದ ಮುಖ್ಯಸ್ಥರ ಮಾದರಿಯಲ್ಲಿ ಕರೋನಾ ಸೋಕು ದೃಢಪಟ್ಟಿದ್ದು ಉಳಿದ ನಾಲ್ವರ ವರದಿಗೆ ಕಾಯಲಾಗುತ್ತಿದೆ. ಸಿದ್ಧಾಪುರದ ಗ್ರಾಮೀಣ ಪ್ರದೇಶದ ಈ ಕುಟುಂಬ ಮಹಾರಾಷ್ಟ್ರದಿಂದ ಮರಳಿ ಮನೆ ತಲುಪುವ ಮಾರ್ಗ ಮಧ್ಯದಲ್ಲಿ ಜಿಲ್ಲಾಡಳಿತದ ಕೈ ಗೆ ಸಿಕ್ಕು ಸಂಭಾವ್ಯ ಅಪಾಯವನ್ನು ತಪ್ಪಿಸಿದಂತಾಗಿದೆ.
