

ಹಳೆ ಸೊರಬದ ಮಹಿಳೆಯೊಬ್ಬರಲ್ಲಿ ದೃಢಪಟ್ಟ ಕೋವಿಡ್ 19 ವೈರಸ್ ನಿಂದಾಗಿ ಎರಡು ಜಿಲ್ಲೆಗಳ ಕನಿಷ್ಟ 5-6 ತಾಲೂಕುಗಳ 500 ಕ್ಕೂಹೆಚ್ಚು ಜನರು ತಲೆಕೆಡಿಸಿಕೊಂಡ ವಿದ್ಯಮಾನ ವಿಳಂಬವಾಗಿ ಸುದ್ದಿಯಾಗಿದೆ.
ಹಳೆಸೊರಬದ ಮದುವೆಯೊಂದು ಸೊರಬ ಚಂದ್ರಗುತ್ತಿ ಬಳಿಯ ಮಣ್ಣತ್ತಿಯಲ್ಲಿ ಮೇ 13 ರಂದು ನಡೆದಿತ್ತು. ಆ ಮದುವೆಗೆ ಬಂದಿದ್ದರು ಎಂದು ಹೇಳಲಾದ ಮಹಿಳೆ ತನ್ನ ಹಿಂದಿನ ಹೃದಯಸಂಬಂಧಿ ಕಾಯಿಲೆ ಮತ್ತು ಉಸಿರಾಟದ ತೊಂದರೆ ಕಾರಣಕ್ಕೆ ಆಸ್ಫತ್ರೆಗೆ ತೆರಳಿದ್ದರು. ಆಸ್ಫತ್ರೆಯಲ್ಲಿ ಹಿಂದಿನಂತೆ ಚಿಕಿತ್ಸೆ ಪಡೆದು ಮರಳಿ ಬಂದಿದ್ದ ಈ ಮಹಿಳೆಯ ಗಂಟಲುದೃವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದ ಆಸ್ಫತ್ರೆಯ ವೈದ್ಯರು ಸಿಬಂದಿಗಳಿಗೆ ಶಾಕ್ ಆಗಿದ್ದು ಈ ಮಹಿಳೆಯಲ್ಲಿ ಕರೋನಾ ದೃಢ ಪಟ್ಟಾಗ.


ಆಸ್ಫತ್ರೆಯ ವರದಿ, ತಾಲೂಕಾ ಆಡಳಿತದ ಮುತುವರ್ಜಿಯಿಂದ ಈ ಮಹಿಳೆಗೆ ಹೆಚ್ಚಿನ ಚಿಕಿತ್ಸೆ ನೀಡಲಾಯಿತು. ಆದರೆ ಈ ಪ್ರಕರಣ ಬೆಚ್ಚಿಬೀಳಿಸಿದ್ದು ಈ ಮಹಿಳೆಯ ಮಗ-ಸೊಸೆ ಪಾಲ್ಗೊಂಡಿದ್ದ ಮದುವೆಗೆ ಬಂದ ಜನರನ್ನು. ಸರ್ಕಾರದ ಅನುಮತಿಯಿಂದ ಮದುವೆ ನಡೆಸಿದ್ದ ಮಣ್ಣತ್ತಿಯ ಕುಟುಂಬ ಹಿತೈಶಿಗಳು,ಆಪ್ತರನ್ನು ಆಹ್ವಾನಿಸಿತ್ತು. ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಪಾಲ್ಗೊಂಡಿದ್ದ ಮದುವೆಯ ಜನರು ಅಂದೇನೋ ಉಂಡು ಬಂದರು. ಆದರೆ ಫಜೀತಿ ಪ್ರಾರಂಭವಾಗಿದ್ದು ಈ ಕರೋನಾ ದೃಢವಾದ ವಿದ್ಯಮಾನದ ನಂತರ.
ಈ ಪ್ರಕರಣದ ಮದುವೆಯಲ್ಲಿ ಶಿರಸಿ, ಸಿದ್ಧಾಪುರ, ಸೊರಬ, ಸಾಗರ ಸೇರಿದಂತೆ ಎರಡ್ಮೂರು ಜಿಲ್ಲೆಗಳ ಕನಿಷ್ಟ 5-6 ತಾಲೂಕುಗಳ ಜನರು ಭಾಗವಹಿಸಿದ್ದರು. ಹೀಗೆ ಈ ಮದುವೆಯಲ್ಲಿ ಭಾಗವಹಿಸಿ ಅವರವರ ಮನೆಗಳಿಗೆ ತೆರಳಿದ್ದ ಅನೇಕರು ಈಗ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಈ ಮದುವೆಯ ವಧು-ವರ ಸೇರಿದಂತೆ ಕೆಲವು ಆಪ್ತರು ಸಾಂಸ್ಥಿಕ ಕಾರಂಟೈನ್ ಆಗಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಸಿಕ್ಕ ಅಧೀಕೃತ ಮಾಹಿತಿಯೆಂದರೆ….
ಹಳೆಸೊರಬದ ಮಹಿಳೆಯಲ್ಲಿ ಕೋವಿಡ್ ದೃಢಪಟ್ಟಿದ್ದು ಸತ್ಯ. ಆದರೆ ಈ ಮಹಿಳೆ ಮಣ್ಣತ್ತಿಯ ಮದುವೆಯಲ್ಲಿ ಭಾಗವಹಿಸಿರಲಿಲ್ಲ. ಆದರೆ ಇವರ ಮಗ-ಸೊಸೆ ಮಣ್ಣತ್ತಿಯ ಮದುವೆಯಲ್ಲಿ ಪಾಲ್ಗೊಂಡಿದ್ದು ಅವರ ಗಂಟಲುದೃವಗಳ ಮಾದರಿಯಲ್ಲಿ ಕರೋನಾ ಸೋಂಕು ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆಯ ಕ್ರಮವಾಗಿ ಪ್ರಾಥಮಿಕ ಮತ್ತು ಎರಡು, ಮೂರನೇ ಹಂತದ ಸಂಪರ್ಕಗಳನ್ನು ಬೇಧಿಸಲಾಗುತ್ತಿದೆ. ಈ ಕ್ಷಣದ ವರೆಗೆ ಹಳೆಸೊರಬದ ಪ್ರಕರಣದಿಂದ ಕರೋನಾ ಪ್ರಸರಣದ ಯಾವುದೇ ತೊಂದರೆ ಕಂಡುಬಂದಿಲ್ಲ. ಈ ಪ್ರಕರಣದ ಸಂಪರ್ಕದ ಮಣ್ಣತ್ತಿಯ ಮದುವೆಯಲ್ಲಿ ಪಾಲ್ಗೊಂಡವರಿಗೆ ಯಾವುದೇ ತೊಂದರೆ ಬಾಧಿಸುವ ಸಾಧ್ಯತೆ ಕಡಿಮೆ ಎನ್ನುವ ಮಾಹಿತಿಯನ್ನು ಶಿವಮೊಗ್ಗ ಜಿಲ್ಲಾಡಳಿತ ನೀಡಿದೆ.
ಇಷ್ಟರಲ್ಲೇ ಈ ಪ್ರಕರಣದ ಸಂಬಂಧಿತರ ಸಾಂಸ್ಥಿಕ ಮತು ಹೋಮ್ ಕಾರಂಟೈನ್ ಅವಧಿಗಳೂ ಮುಕ್ತಾಯದ ಹಂತದಲ್ಲಿವೆ. ಈ ಮಾಹಿತಿ ಆಧರಿಸಿ ಮಣ್ಣತ್ತಿ ಮದುವೆಗೆ ತೆರಳಿದ್ದ 2-3 ಜಿಲ್ಲೆಗಳ ಜನರು ನಿಟ್ಟುಸುರು ಬಿಡುವಂತಾಗಿದೆ.
(ಮಣ್ಣತ್ತಿ ಮದುವೆಗೆ ಹೋಗಿಬಂದ ಸಿದ್ಧಾಪುರದ 25 ಕ್ಕೂ ಹೆಚ್ಚು ಜನರಿಗೆ ಕ್ವಾರಂಟೈನ್ ಶಿಕ್ಷೆ
ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ವಿಸ್ತರಿಸಲು ಹೊರ ರಾಜ್ಯ, ಹೊರ ಜಿಲ್ಲೆಗಳ ಜನರು ಕಾರಣವಾಗುತ್ತಿರುವ ವಿದ್ಯಮಾನದ ನಡುವೆ ಜಿಲ್ಲೆಯ ಸಿದ್ಧಾಪುರದ 30 ಕ್ಕೂ ಹೆಚ್ಚು ಜನರಿಗೆ ಒಂದು ವಾರದ ಕಡ್ಡಾಯ ಕಾರಂಟೈನ್ ಶಿಕ್ಷೆ ಅನಿವಾರ್ಯವಾಗಿದೆ.
ಸಿದ್ಧಾಪುರದ ಕಾನಗೋಡು, ಕೋಲಶಿರ್ಸಿ ಸೇರಿದಂತೆ ತಾಲೂಕಿನ 30 ಕ್ಕೂ ಹೆಚ್ಚು ಜನರು ವಾರದ ಹಿಂದೆ ಸೊರಬ ತಾಲೂಕಿನ ಮಣ್ಣತ್ತಿಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಮದುವೆಯ ನಂತರ ಸ್ವ ಗ್ರಾಮಗಳಿಗೆ ಮರಳಿ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದವರಿಗೆ ಇಂದು ಸಿದ್ಧಾಪುರ ತಾಲೂಕಾ ಆಡಳಿತ ಎಚ್ಚರಿಕೆಯ ಸಂದೇಶ ನೀಡಿದೆ.
ಮಣ್ಣತ್ತಿ ವರ, ಹಳೆ ಸೊರಬದ ವಧುವಿನ ಮದುವೆಗೆ ಬಂದಿದ್ದ ಒಬ್ಬ ಮಹಿಳೆಗೆ ಕರೋನಾ ಸೋಂಕು ದೃಢ ಪಟ್ಟಿದ್ದು ಆ ಮದುವೆಗೆ ತೆರಳಿದ್ದ ತಾಲೂಕಿನ ಕನಿಷ್ಟ 30 ಜನರಿಗೆ ಮನೆಯಲ್ಲೇ ಕ್ವಾರಂಟೈನ್ ನಿಯಮ ಪಾಲಿಸುವಂತೆ ಆದೇಶಿಸಲಾಗಿದೆ. ಮಣ್ಣತ್ತಿಯಲ್ಲಿ ಮೇ 13 ರಂದು ನಡೆದ ಮದುವೆಯಲ್ಲಿ ಪಾಲ್ಗೊಂಡಿದ್ದ ನೂರಕ್ಕೂ ಹೆಚ್ಚು ಜನರು ಕರೋನಾ ಸೋಂಕಿತೆಯ ಎರಡನೆ ಹಂತದ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಈ ಮದುವೆಯಲ್ಲಿ ಪಾಲ್ಗೊಂಡವರಿಗೆ ಕರೋನಾ ಅಪಾಯದ ಸಾಧ್ಯತೆ ಕಡಮೆಯಾದರೂ ಅವರು ಕನಿಷ್ಟ ಒಂದು ವಾರ ಕ್ವಾರಂಟೈನ್ ಆಗುವುದು ಅನಿವಾರ್ಯ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ತಾಲೂಕಾ ಆಡಳಿತ
ತಾಲೂಕಿನ 30 ಕ್ಕೂ ಹೆಚ್ಚು ಜನರಿಗೆ ಕಡ್ಡಾಯ ಕ್ವಾರಂಟೈನ್ ನಿಯಮ ಪಾಲಿಸಲು ಸೂಚಿಸಿದೆ. ಈ ಘಟನೆಯ ನಂತರ ಸಾರ್ವಜನಿಕರು ಈಗಿನ ಮದುವೆಗಳಲ್ಲಿ ಪಾಲ್ಗೊಳ್ಳುವುದನ್ನು ನಿರ್ಬಂಧಿಸುವ ಅವಶ್ಯಕತೆ ಹೆಚ್ಚಿದೆ.
ಲೋಕಲ್ ಕ್ರೈಂ ನ್ಯೂಸ್-
ಸಾವು ಗೆದ್ದ ಗೊಂಟನಾಳದ ಗುಂಡೇಟಿನ ಗಾಯಾಳು!
ಸಿದ್ಧಾಪುರ ತಾಲೂಕಿನ ಕವಲಕೊಪ್ಪಾ ಗ್ರಾಮದ ಗೊಂಟನಾಳದ ಪ್ರದೀಪ ಗೌಡ ಎನ್ನುವ ವ್ಯಕ್ತಿ
ಮೊಬೈಲ್ ಬಳಕೆಗಾಗಿ ಗ್ರಾಮದ ಬೆಟ್ಟ ಏರಿದಾಗ ಬಂದೂಕಿನ ಚರೆಗಳು ನುಗ್ಗಿ ಗಾಯಗೊಂಡ ಘಟನೆ ಗುರುವಾರ ಮುಸ್ಸಂಜೆ ನಡೆದಿದೆ.
ಇದೇ ಗ್ರಾಮದ ರಾಮಾ ಕನ್ನಾ ನಾಯ್ಕ ಲೋಡ್ ಮಾಡಿಟ್ಟ ನಾಡ ಬಂದೂಕು ದಿಢೀರನೆ ಸ್ಫೋಟಿಸಿ ಈ ಅವಗಢ ನಡೆದಿದೆ. ಗಾಯಾಳು ಪ್ರದೀಪ ಗೌಡ ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತಿದ್ದು ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಆರೋಪಿ ರಾಮಾ ಕನ್ನಾ ನಾಯ್ಕ ಮೇಲೆ ಪ್ರಕರಣ ದಾಖಲಿಸಿದ ಸ್ಥಳಿಯ ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈ ಅಚಾತುರ್ಯದ ಅವಗಡದ ಬಗ್ಗೆ ವಿಶಾದ ವ್ಯಕ್ತಪಡಿಸಿರುವ ಸ್ಥಳಿಯರು ಇಬ್ಬರೂ ಅಮಾಯಕರು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
