
ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಪರಮೋಚ್ಛ ಅಧಿಕಾರ ವಿಧಾನಸಬೆ ಸಭಾಧ್ಯಕ್ಷರಿಗೆ ಇರಬೇಕು. ಅನರ್ಹತೆ ವಿಚಾರದಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಮಾಡಬಾರದು ಎಂದು ವಿವಿಧ ಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ.

ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಪರಮೋಚ್ಛ ಅಧಿಕಾರ ವಿಧಾನಸಭೆ ಸಭಾಧ್ಯಕ್ಷರಿಗೆ ಇರಬೇಕು. ಅನರ್ಹತೆ ವಿಚಾರದಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಮಾಡಬಾರದು ಎಂದು ವಿವಿಧ ಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ.
ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಲು ಸಂವಿಧಾನದ 10ನೇ ಪರಿಚ್ಛೇದಕ್ಕೆ ಯಾವೆಲ್ಲಾ ಅಂಶಗಳನ್ನು ಸೇರಿಸಿ ತಿದ್ದುಪಡಿ ತರಬೇಕು ಎಂಬ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆಡಳಿತ ಹಾಗೂ ಪ್ರತಿಪಕ್ಷಗಳ ಪ್ರಮುಖ ಸಂಸದೀಯ ನಾಯಕರೊಂದಿಗೆ ಗುರುವಾಹ ಮಹತ್ವದ ಸಮಾಲೋಚನಾ ಸಭೆ ನಡೆಸಿದರು.
ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪಾಲ್ಗೊಂಡು ಸ್ಪೀಕರ್ ನೇತೃತ್ವದ ಸಮಿತಿಯ ಮುಂದೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಗೇರಿ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಪರಮೋಚ್ಛ ಅಧಿಕಾರ ವಿಧಾನಸಭೆ ಸಭಾಧ್ಯಕ್ಷರಿಗೆ ಇರಬೇಕು. ಅನರ್ಹತೆ ವಿಚಾರದಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಮಾಡಬಾರದು. ಶಾಸಕರ ಅನರ್ಹತೆ ಪ್ರಕರಣಗಳ ವಿಚಾರಣೆ ಕಾಲ ಮಿತಿ ನಿಗದಿಯಾಗಬೇಕು. ಆ ಕಾಲಮಿತಿಯೊಳಗೇ ಪ್ರಕರಣ ಮುಕ್ತಾಯಗೊಳಿಸಬೇಕು.
ಪಕ್ಷಗಳ ಚುನಾವಣೋತ್ತರ ಮೈತ್ರಿಗೂ ಅವಕಾಶ ನೀಡಬಾರದು. ಪಕ್ಷಾಂತರ ಉದ್ದೇಶದಿಂದ ಅವಧಿಗೂ ಮೊದಲೇ ರಾಜೀನಾಮೆ ನೀಡಿದ ಶಾಸಕರಿಗೆ ಮರು ಚುನಾವಣೆಗೆ ನಿಲ್ಲಲು ಅವಕಾಶ ನೀಡಬಾರದು. ಅನರ್ಹಗೊಂಡ ಶಾಸಕರ ಕುಟುಂಬವರ್ಗದವರು ಚುನಾವಣೆಗೆ ಸ್ಪರ್ಧಿಸದಂತೆ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ವಿವಿಧ ನಾಯಕರು ತಮ್ಮ ತಮ್ಮ ಅಭಿಪ್ರಾಯ ನೀಡಿದ್ದಾರೆಂದು ತಿಳಿಸಿದರು.
