ರಾಜ್ಯದಲ್ಲಿ ಹೊರ ರಾಜ್ಯದವರಿಂದಲೇ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಕ್ವಾರಂಟೈನ್ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ.
ಬೆಂಗಳೂರು: ರಾಜ್ಯದಲ್ಲಿ ಹೊರ ರಾಜ್ಯದವರಿಂದಲೇ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಕ್ವಾರಂಟೈನ್ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ.
ಮಹಾರಾಷ್ಟ್ರದಿಂದ ಬಂದವರಿಗೆ ಏಳು ದಿನಗಳ ಸಾಂಸ್ಥಿಕ ಮತ್ತು 7 ದಿನಗಳ ಗೃಹ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಬಳಿಕ ಇವರಿಗೆ ಸೋಂಕು ಕಂಡು ಬಂದಲ್ಲಿ 21 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕು ಎನ್ನುವ ನಿಯಮ ಜಾರಿಗೆ ತರಲಾಗಿದೆ.
ಕ್ವಾರಂಟೈನ್ ಕುರಿತ ಪರಿಷ್ಕೃತ ನಿಯಮಗಳ ಮಾರ್ಗಸೂಚಿಯನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಹೊರಡಿಸಿದ್ದು, ಎಲ್ಲೆಡೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ನಿರ್ದೇಶನ ನೀಡಿದ್ದಾರೆ.
ಹೊರ ರಾಜ್ಯದಿಂದ ಬಂದವರ ಮುಂಗೈಗೆ ಕಡ್ಡಾಯವಾಗಿ ಕ್ವಾರಂಟೈನ್ ಮುದ್ರೆ ಹಾಕಬೇಕು. ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು, ಎಲ್ಲಾ ಅಂಗಡಿಗಳು, ವಾಣಿಜ್ಯ ಮಳಿಗೆಗಳು, ಕಚೇರಿಗಳು, ಮಾಲ್ ಗಳು, ಧಾರ್ಮಿಕ ಪ್ರದೇಶಗಳು, ಹೊಟೇಲ್ ಗಳಲ್ಲಿ ಯಾವುದೇ ವ್ಯಕ್ತಿ ಪ್ರವೇಶಿಸುವ ಮುನ್ನ ಮುಂಗೈಗೆ ಕ್ವಾರಂಟೈನ್ ಮುದ್ರೆ ಹಾಕಲಾಗಿದೆಯೇ ಎನ್ನುವುದನ್ನು ಪ್ರವೇಶ ದ್ವಾರದಲ್ಲೇ ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು. ನಿಯಮಗಳನ್ನು ಮೀರಿ ಹೊರ ರಾಜ್ಯದ ವ್ಯಕ್ತಿಗಳು ಅಂಗಡಿ ಮುಂಗಟ್ಟುಗಳನ್ನು ಪ್ರವೇಶಿಸಿದರೆ ತಕ್ಷಣವೇ ಪೊಲೀಸ್ ಸಹಾಯವಾಣಿ 100 ಕ್ಕೆ ಕರೆ ಮಾಡಬೇಕು ಎಂದು ಹೇಳಿದೆ.
ಇನ್ನು ಸಾಮಾನ್ಯ ನಾಗರಿಕರು, ವಸತಿ ಸಂಕರ್ಣಗಳ ವಸತಿ ಕಲ್ಯಾಣ ಸಮಿತಿ ಸದಸ್ಯರು ಸಹ ಈ ರೀತಿಯ ಉಲ್ಲಂಘನೆಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಕ್ವಾರಂಟೈನ್ ಅವಧಿಯಲ್ಲಿ ಹೊರ ರಾಜ್ಯದವರು ಮನೆಗಳಲ್ಲಿಯೇ ಇರಬೇಕು ಎಂದು ಸೂಚಿಸಲಾಗಿದೆ.