ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬಿ.ಜೆ.ಪಿ. ಹಾಲಿ ಶಾಸಕರಾಗಿದ್ದ ವಿವೇಕಾನಂದ ವೈದ್ಯರನ್ನು ಮನೆಗೆ ಕಳುಹಿಸಿ ಶಿರಸಿ ಕ್ಷೇತ್ರದ ಟಿಕೇಟ್ ಗಿಟ್ಟಿಸಿ ನಂತರ ರಾಜ್ಯ ವಿಧಾನಸಭಾ ಅಧ್ಯಕ್ಷರಾಗಿರುವುದು ಹಳೆ ವಿಚಾರ.
ಈಗ ಹೊಸ ವರ್ತಮಾನವೆಂದರೆ… ಕಾಗೇರಿ ವಿಶ್ವೇಶ್ವರ ಹೆಗಡೆ ಹಿಂದಿನ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಕೇ.ಜಿ.ನಾಯ್ಕ ಹಣಜಿಬೈಲ್ ಜೊತೆ ಸಂಬಂಧ ಕಳೆದುಕೊಂಡು ಅವರ ಜಾಗದಲ್ಲಿ ಹೊಸಬರನ್ನು ಕೂಡ್ರಿಸುವ ತಂತ್ರ ವಾಗಿ ವಸಂತ ನಾಯ್ಕರನ್ನು ಬಿ.ಜೆ.ಪಿ. ಗೆ ತರುವ ಸಿದ್ಧತೆ ಮಾಡುತಿದ್ದಾರೆ ಎನ್ನುವ ವಿಚಾರ.
ವಸಂತ ನಾಯ್ಕ ಸಿದ್ಧಾಪುರದ ಕಾಂಗ್ರೆಸ್ ನಲ್ಲಿ ಬೆಳೆಯಬಲ್ಲ ಯುವಕ ಆದರೆ ಅವರಿಗೆ ಮತ್ತು ಅವರ ಬಣಕ್ಕೆ ಉತ್ತರಕನ್ನಡ ಕಾಂಗ್ರೆಸ್ ಭೀಷ್ಮ ದೇಶಪಾಂಡೆಯವರ ಬಣದೊಂದಿಗೆ ವಿರಸ. ಹಾಗೆ ನೋಡಿದರೆ ವಸಂತ ನಾಯ್ಕ ಗ್ರಾ.ಪಂ. ಸದಸ್ಯರಾಗಿ ರಾಜಕೀಯಪ್ರಾರಂಭಿಸಿದಾಗ ಇದೇ ದೇಶಪಾಂಡೆ ಶಿಷ್ಯರು ಅವರನ್ನು ಕಾಂಗ್ರೆಸ್ ಗೆ ಸೆಳೆದಿದ್ದರು. ಕಾಂಗ್ರೆಸ್ ನ ಬಣ ರಾಜಕಾರಣದ ಬಲಿಪಶುವಾದ ವಸಂತ ಗುರುಗಳಿಗೇ ತಿರುಮಂತ್ರ ಪಠಿಸಿ ತಮ್ಮ ಕ್ಷೇತ್ರದಲ್ಲಿ ಪತ್ನಿ ಸುಮಂಗಲಾ ನಾಯ್ಕರನ್ನು ಜಿ.ಪಂ. ಸದಸ್ಯರನ್ನಾಗಿ ಹಠದಿಂದ ಆಯ್ಕೆ ಮಾಡಿದವರು.
ವಸಂತನಾಯ್ಕ ಮತ್ತು ದೇಶಪಾಂಡೆ ಶಿಷ್ಯರ ವಿರಸದಿಂದಾಗಿ ವಸಂತ ಗುಂಪು ಪ್ರತ್ಯೇಕವಾಗಿ ರಾಜಕಾರಣ ಮಾಡುತಿತ್ತಾದರೂ ಕಾಂಗ್ರೆಸ್ ಬಿಟ್ಟಿರಲಿಲ್ಲ. ಇದರ ಮಧ್ಯೆ ಕಾಂಗ್ರೆಸ್ ನ ಹಳೆ ತಲೆಗಳ ರಾಜಕಾರಣ ಮತ್ತು ಹಳೆಕಾಂಗ್ರೆಸ್ ರಾಜಕೀಯಗಳ ಮಧ್ಯೆ ವಸಂತ ಹಳೆಕಾಂಗ್ರೆಸ್ ಹಾಗೂ ಡಿ.ಸಿ.ಸಿ. ಅಧ್ಯಕ್ಷರೊಂದಿಗೂ ಸಂಪರ್ಕವಿಟ್ಟುಕೊಂಡೇ ಕಾಂಗ್ರೆಸ್ ನಲ್ಲಿ ಸೆಣಸಾಡುತಿದ್ದರು. ಈ ರಾಜಕೀಯ ಮೇಲಾಟಗಳ ನಡುವೆ ಹಿಂದಿನ ವಿಧಾನಸಭೆ ಚುನಾವಣೆ ವೇಳೆ ಶಾಸಕ ಕಾಗೇರಿ ಶಿಷ್ಯರು ಮತ್ತು ವಸಂತ ನಾಯ್ಕ ನಡುವೆ ಮಾರಾಮಾರಿಯೇ ನಡೆದು ಹೋಗಿತ್ತು. ವಿಚಿತ್ರವೆಂದರೆ…….. ಎರಡ್ಮೂರು ಮಳೆಗಾಲಗಳು ಕಳೆಯುವುದರೊಳಗೆ ಕಾಗೇರಿ ಶಿಷ್ಯ ಕೆ.ಜಿ.ನಾಯ್ಕ ಮತ್ತು ಕಾಗೇರಿ ನಡುವೆ ವಿರಸ, ವಿರೋಧ ಪ್ರಾರಂಭವಾಗಿ ಹಿಂದಿನ ಕಾಗೇರಿ ಶಿಷ್ಯ ಕೆ.ಜಿ.ನಾಯ್ಕ ಬದಲು ಹಳೆ ವಿರೋಧಿ ವಸಂತ ನಾಯ್ಕ ರನ್ನು ಬಿ.ಜೆ.ಪಿ. ಗೆ ಕರೆತಂದು ಹಲಗೇರಿ ಕ್ಷೇತ್ರದಿಂದ ವಸಂತ ನಾಯ್ಕ ಅಥವಾ ಅವರ ಪತ್ನಿ ಸುಮಂಗಲಾ ವಸಂತ ನಾಯ್ಕರಿಗೆ ತಾ.ಪಂ. ಅಥವಾ ಜಿ.ಪಂ. ಟಿಕೇಟ್ ನೀಡುವ ಮೂಲಕ ಕೆ.ಜಿ.ನಾಯ್ಕ ಮತ್ತು ಬಣಕ್ಕೆ ಸೆಡ್ಡು ಹೊಡೆಯಲು ಕಾಗೇರಿ ಯೋಜನೆ ಸಿದ್ಧಪಡಿಸಿದ್ದಾರೆ ಎನ್ನಲಾಗುತ್ತಿದೆ.
ಇತ್ತ ವಸಂತ ನಾಯ್ಕ ಕಾಂಗ್ರೆಸ್ ನ ಬಣಗಳ ಜಗಳ, ನಾಯಕರ ಅವಕೃಪೆಯಿಂದ ಸಾಕಷ್ಟು ನೊಂದಿದ್ದರು. ದೇಶಪಾಂಡೆ ಬಣ ನಂತರ ಆಳ್ವ ಬಣ ಎಲ್ಲೂ ನೆರವು, ಸಹಕಾರ ದೊರೆಯದೆ ಹೊಸದಾರಿ ಹುಡುಕುವ ಅನಿವಾರ್ಯತೆಯಲ್ಲಿದ್ದರು. ಈ ಒಳಜಗಳದ ಲಾಭ ಪಡೆದ ಕಾಗೇರಿ ಮತ್ತು ಬಿ.ಜೆ.ಪಿ. ವಸಂತ ನಾಯ್ಕ ಬಣವನ್ನು ಬಹುಹಿಂದೇ ವಿಶ್ವಾಸಕ್ಕೆ ತೆಗೆದುಕೊಂಡಿತ್ತು ಎನ್ನುವವರಿದ್ದಾರೆ.
ಅದೇನೇ ಇರಲಿ ವಸಂತ ನಾಯ್ಕ ಮತ್ತು ತಂಡ ಕಾಂಗ್ರೆಸ್ ನಲ್ಲಿ ಕಂಗಾಲಾಗಿತ್ತು. ಬಿ.ಜೆ.ಪಿ. ಬಿಟ್ಟರೆ ಉತ್ತಮ ಆಯ್ಕೆ, ಪರ್ಯಾಯ ಮತ್ತೊಂದಿಲ್ಲ ಎನ್ನುವ ಅನಿವಾರ್ಯತೆಯಲ್ಲಿ ವಸಂತ ನಾಯ್ಕ ಬಿ.ಜೆ.ಪಿ. ಪಾಲಾಗುತಿದ್ದಾರೆ ಎನ್ನುವ ಅಭಿಪ್ರಾಯ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ವಸಂತ ಬಿ.ಜೆ.ಪಿ. ಸೇರ್ಪಡೆಯಿಂದ ವಸಂತ ನಾಯ್ಕ ಮತ್ತು ಗುಂಪಿಗೆ ಎನು ಲಾಭವಿದೆಯೋ ಸ್ಫಸ್ಟವಿಲ್ಲ, ಆದರೆ ವಸಂತರಿಂದ ಬಿ.ಜೆ.ಪಿ. ಮತ್ತು ಶಾಸಕ, ಸಂಸದರಿಗೆ ಅನುಕೂಲ ಹೆಚ್ಚು ಎನ್ನುವ ಅಭಿಪ್ರಾಯವಿದೆ.
ಹೀಗೆ ವಸಂತ ನಾಯ್ಕರನ್ನು ಬಿ.ಜೆ.ಪಿ.ಗೆ ಕರೆತರುವ ಮೂಲಕ ಶಾಸಕರು ಕಾಂಗ್ರೆಸ್ ಒಳಜಗಳದ ಲಾಭ ಪಡೆಯುವ ಜೊತೆಗೆ ಸೆರಗಿನ ಕೆಂಡ ಕೆ.ಜಿ.ನಾಯ್ಕರಿಗೆ ಶಾಕ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಕೆ.ಜಿ.ನಾಯ್ಕ ಪಕ್ಷದಲ್ಲೇ ಇದ್ದು ಕಾಗೇರಿಯವರಿಗೆ ರೆಬಲ್ ಆಗಿ ಕಾಡುವ ಸಾಧ್ಯತೆಗಳಿವೆ. ವಸಂತ ನಾಯ್ಕ ಬಿ.ಜೆ.ಪಿ. ಪ್ರವೇಶದಿಂದ ಹಸವಂತೆ ಕೆ.ಜಿ.ನಾಯ್ಕ ಕೂಡಾ ಬಿ.ಜೆ.ಪಿ.ಗೆ ರೆಬೆಲ್ ಆಗುವ ಅಪಾಯವಿದೆ. ಈ ಎಲ್ಲಾ ಸಾಧ್ಯತೆಗಳ ನಡುವೆ ವಸಂತ್ ಬಿ.ಜೆ.ಪಿ.ಯಲ್ಲಿ ಆಂತರಿಕ ಮತ್ತು ಬಾಹ್ಯ ವಿರೋಧಕ್ಕೂ ತುತ್ತಾಗುವ ಲಕ್ಷಣಗಳಿವೆ. ಈ ಬೆಳವಣಿಗೆಯಿಂದ ಬಿ.ಜೆ.ಪಿ.ಗೆ ಲಾಭವಾಗುವುದೋ ಎನ್ನುವುದು ಸ್ಫಸ್ಟವಿಲ್ಲ, ಆದರೆ ಕಾಂಗ್ರೆಸ್ ಗೆ ಹಾನಿ ಕಟ್ಟಿಟ್ಟ ಬುತ್ತಿ. ದೇಶಪಾಂಡೆ ಶಿಷ್ಯರು ಉತ್ತರಕನ್ನಡದಲ್ಲಿ ಕಾಂಗ್ರೆಸ್ ನಾಶಮಾಡುತಿದ್ದಾರೆ ಎನ್ನುವ ಗುರುತರ ಆರೋಪಕ್ಕೆ ಈ ಬೆಳವಣಿಗೆ ಸಾಕ್ಷಿ ಒದಗಿಸಿದೆ ಎನ್ನಬಹುದೇನೋ?
ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಶಿವಕುಮಾರ ಪ್ರಮಾಣ ವಚನ, ವಿ.ಪ.ಸದಸ್ಯರಾಗಿ ಆಳ್ವ ಆಯ್ಕೆ ಸಾಧ್ಯತೆ ಈ ವಿಶೇಶ ಬೆಳವಣಿಗೆಗಳ ನಡುವೆ ವಸಂತ ನಾಯ್ಕ ಕಾಂಗ್ರೆಸ್ ತ್ಯಜಿಸುತ್ತಿರುವುದು ಉತ್ತರ ಕನ್ನಡ ಕಾಂಗ್ರೆಸ್‍ನ ಇಂದಿನ ಸ್ಥಿತಿಗೆ ಕೈಗನ್ನಡಿ ಇದರಿಂದ ಉತ್ತರಕನ್ನಡ ಕಾಂಗ್ರೆಸ್ ಮತದಾರರು ಮಾತ್ರ ಸಂಕಟಪಡುವಂತಾಗಿರುವುದು ದುರಂತ.