ಸಿದ್ಧಾಪುರ ತಾಲೂಕು ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಬಡ್ಡಿ ಮಾಫಿಯಾ
ತಾಂಡವಾಡುತಿದ್ದು ಕರೋನಾ ಹಿನ್ನೆಲೆಯಲ್ಲಿ ಬಹುಹಿಂದೇ ಬಡ್ಡಿಗೆ ಸಾಲಕೊಟ್ಟ ಬಡ್ಡಿ ವಸೂಲಿದಾರರು ಜನಸಾಮಾನ್ಯರ ತಲೆಮೇಲೆ ಕುಳಿತು ಚಿತ್ರಹಿಂಸೆ ಕೊಡುತ್ತಿರುವ ವಿದ್ಯಮಾನ ಬಹಿರಂಗವಾಗಿದೆ.
ರಾಜ್ಯದಾದ್ಯಂತ ಮೀಟರ್ ಬಡ್ಡಿ, ದಿನದ ಬಡ್ಡಿ ಲೆಕ್ಕದಲ್ಲಿ ನಡೆಯುತ್ತಿರುವ ಬಡ್ಡಿಮಾಫಿಯಾ ಕೆಲವೆಡೆ ರಾಜಕೀಯ ಬೆಂಬಲದಿಂದ ಜನಸಾಮಾನ್ಯರಿಗೆ ಕಂಟಕವಾಗಿ ಕಾಡುತ್ತಿದೆ. ಈ ಬಡ್ಡಿವ್ಯವಹಾರ ಕರೋನಾ, ಲಾಕ್ ಡೌನ್ ಹಿನ್ನೆಲೆಯಲ್ಲಿ ಮತ್ತೆ ಚಿಗುರಿದೆ. ಇಂಥ ಬಡ್ಡಿವ್ಯಹಾರ ಮಾಡಿ ಜನಸಾಮಾನ್ಯರನ್ನು ಹಿಂಡುವ ಬಡ್ಡಿವ್ಯವಹಾರಸ್ಥರಲ್ಲಿ ಅನೇಕರು ಸ್ವಯಂ ರಾಜಕಾರಣಿಗಳು, ರಾಜಕೀಯ ವ್ಯಕ್ತಿಗಳ ಸ್ನೇಹ-ಸಂಬಂಧ ಹೊಂದಿರುವವರು ಆಗಿರುವುದರಿಂದ ಅವರನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗುತ್ತಿದೆ ಎನ್ನಲಾಗುತ್ತಿದೆ.
ಸಿದ್ಧಾಪುರದ ನಗರ, ಗ್ರಾಮೀಣ ಭಾಗಗಳಲ್ಲಿ ಕೂಡಾ ಈ ಬಡ್ಡಿಮಾಫಿಯಾ ನಿರಂತರ ಕೆಲಸಮಾಡುತಿದ್ದು ಇಂಥವರನ್ನು ನಿಯಂತ್ರಿಸದ ವ್ಯವಸ್ಥೆಯಿಂದಾಗಿ ಬಡವರು ಬವಣೆ ಪಡುವಂತಾಗಿದೆ. ಶಿರಸಿ-ಸಿದ್ಧಾಪುರ ಸೇರಿದಂತೆ ಉತ್ತರಕನ್ನಡ ಜಿಲ್ಲೆಯಾದ್ಯಂತ ಈ ಬಡ್ಡಿಮಾಫಿಯಾದ ಉಪಟಳ ಮಿತಿಮೀರಿದ್ದು ಆಡಳಿತ ವ್ಯವಸ್ಥೆ ಈ ಬಡ್ಡಿವ್ಯವಹಾರಸ್ಥರ ಕಿರುಕುಳ ತಡೆಯದಿದ್ದರೆ ಇದರಿಂದ ಜೀವಾಪಾಯದಂಥ ಅಪರಾಧಗಳು ನಡೆಯುವ ಸಾಧ್ಯತೆ ಬಗ್ಗೆ ಸಮಾಜಮುಖಿಗೆ ಮಾಹಿತಿ ನೀಡಿರುವ ಕೆಲವರು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠರು ಈ ಬಗ್ಗೆ ಇಂಟಲಿಜೆನ್ಸ್ ಮಾಹಿತಿ ಆಧರಿಸಿ ಶೀಘ್ರ-ಸೂಕ್ತ ಕ್ರಮಕೈಗೊಳ್ಳದಿದ್ದರೆ ಅಪಾಯದ ಸಾಧ್ಯತೆ ಇದ್ದು ಈ ಮಾಫಿಯಾ ವಿರುದ್ಧ ನೊಂದ ಜನರು ಬೀದಿಗಿಳಿಯುವಂತಾದರೆ ಆಗ ಶಾಂತಿ-ಸುವ್ಯವಸ್ಥೆಗೆ ಅಪಾಯ ಎಂದು ಎಚ್ಚರಿಸಿರುವ ಕೆಲವರು ಜಿಲ್ಲೆಯ ಬಡ್ಡಿಮಾಫಿಯಾ ಜಿಲ್ಲೆಯ ಜನರ ಪ್ರಾಣಕ್ಕೆ ಎರವಾಗುವ ಮೊದಲು ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.
ಬೀದಿಬದಿ ವ್ಯಾಪಾರಿಗಳು, ಹಿಂದುಳಿದವರು, ಪರಿಶಿಷ್ಟರು, ಅಲ್ಫಸಂಖ್ಯಾತರ ಅನಿವಾರ್ಯತೆಯ ದುರ್ಲಾಭ ಪಡೆಯುತ್ತಿರುವ ಅನೇಕರು ವರ್ಷಕ್ಕೆ ನೂರಾ ಇಪ್ಪತ್ತು ಪ್ರತಿಶತ, ಕೆಲವೆಡೆ ಅದಕ್ಕಿಂತ ಹೆಚ್ಚು ಬಡ್ಡಿ! ವಸೂಲುಮಾಡಿ ಬಡವರ ಮಾನ-ಪ್ರಾಣಗಳಿಗೆ ಕಂಟಕವಾಗಿರುವ ಈ ಬಡ್ಡಿಮಕ್ಕಳ ನಿಯಂತ್ರಣ ತುರ್ತಾಗಿ ಆಗದಿದ್ದರೆ ಅವರಿಂದ ಸಾಮಾಜಿಕ ವ್ಯವಸ್ಥೆ ಹದಗೆಡುವ ಬಗ್ಗೆ ಕೂಡಾ ಎಚ್ಚರಿಸಲಾಗಿದೆ.