[ಕೋವಿಡ್-19ರಿಂದಾಗಿ ಇದುವರೆಗೆ ನಮ್ಮ ದೇಶದಲ್ಲಿ 1,23,456 ಜನ ಸತ್ತಿದ್ದಾರೆ ಅಂದುಕೊಳ್ಳಿ. ಇದೇ 100 ದಿನಗಳ ಅವಧಿಯಲ್ಲಿ CVD ಕಾಯಿಲೆಯಿಂದ ಭಾರತದಲ್ಲಿ ಅಂದಾಜು ಆರು ಲಕ್ಷ ಜನ ಸತ್ತಿದ್ದಾರೆ. ಸುದ್ದಿ ಮಾಧ್ಯಮಗಳಲ್ಲಿ ಅದರ ಸದ್ದೇ ಇಲ್ಲ. ಅಂದಹಾಗೆ, ಇದು ನಾಗೇಶ ಹೆಗಡೆ ಫೇಸ್‌ಬುಕ್ ಲೇಖನ]
CVD ಅಂದರೆ ಕಾರ್ಡಿಯೊ ವಾಸ್ಕುಲರ್ ಡಿಸೀಸ್. ಅಂದರೆ ಹೃದ್ರೋಗ. ಈ ಕಾಯಿಲೆಯಿಂದ ಪ್ರತಿ ದಿನ ನಮ್ಮಲ್ಲಿ ಸರಾಸರಿ ಆರು ಸಾವಿರ ಜನರು ಸಾಯುತ್ತಾರೆ.ಕಳೆದ ಹತ್ತು ವರ್ಷಗಳಿಂದ ಸಿವಿಡಿ ಸಾವಿನ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ಸ್ಟೆಂಟ್ ತಯಾರಿಸುವವರ ವೆಬ್ ಸೈಟ್‌ಗಳನ್ನು ನೋಡಿದರೆ ಹೃದ್ರೋಗಿಗಳ ಸಂಖ್ಯೆ ಹತ್ತು ಪಟ್ಟು ಏರಲಿದೆ ಎಂದು ಖುಷಿಯಿಂದೆಂಬಂತೆ ಸಾರುತ್ತಾರೆ.ಹೃದ್ರೋಗಗಳ ಹೆಚ್ಚಳಕ್ಕೆ ಮುಖ್ಯ ಕಾರಣ ಏನೆಂದರೆ ಕಳಪೆ ಖಾದ್ಯತೈಲ, ವ್ಯಾಯಾಮವಿಲ್ಲದ ದಿನಚರಿ, ಮತ್ತು ಆತಂಕ. ಈ ಮೂರು ಹೆಚ್ಚಾದಾಗ ಬರುವ ಬೊಜ್ಜು, ಬಿಪಿ, ಕೊಲೆಸ್ಟೆರಾಲ್ ಶೇಖರಣೆ, ಲಿವರ್ನಲ್ಲಿ ಉತ್ಪನ್ನವಾಗುವ LP(a) ಎಂಬ ಕೊಬ್ಬು ಇವೆಲ್ಲ ಸೇರಿ ರಕ್ತನಾಳಗಳಲ್ಲಿ ಗಂಟುಮೂಟೆ ಇಡುತ್ತವೆ. ಬ್ಯಾಂಕಿನಲ್ಲಿ ಡಿಪಾಸಿಟ್ ಇಟ್ಟ ಹಾಗೆ. ಹೃದಯ ಪಾಪ, ಏದುಸಿರು ಬಿಡುತ್ತ ರಕ್ತವನ್ನು ಪಂಪ್ ಮಾಡಿ ಮಾಡಿ ಹೈರಾಣಾಗುತ್ತದೆ. ಈ ಮೂರರ ಜೊತೆಗೆ ತಂಬಾಕು ಸೇವನೆ ಇದ್ದರೆ ಅದೂ ಹೃದಯ ಬಡಿತವನ್ನು ಹೆಚ್ಚಿಸುತ್ತ ಇನ್ನಷ್ಟು ಕಷ್ಟ ಕೊಡುತ್ತಿರುತ್ತದೆ.ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಇವೆಲ್ಲವುಗಳ ಬಳಕೆ ಹೆಚ್ಚಾಗಿದೆ. ಮನೆಯಲ್ಲಿ ಕೂತು ಮಾಡಿದ್ದೆಲ್ಲ ಇದೇ ತಾನೆ? (ಸಿಗರೇಟು ಪೂರೈಕೆ ಮಾಡಲೆಂದು 60 ಲಕ್ಷ ಲಂಚ ಪಡೆವರದ್ದೂ ಇದೇ ಗತಿ).
ಲಾಕ್‌ಡೌನ್ ಮುಗಿದ ನಂತರ ಇವೆಲ್ಲ ಇನ್ನೂ ಹೆಚ್ಚಾಗಿದೆ. ರಸ್ತೆಗಳಲ್ಲಿ ಪಕೋಡಾ ಮಾರುವವರಿಗೆ ಗಿರಾಕಿಗಳು ಹೆಚ್ಚಾಗಿದ್ದಾರೆ. ಬೇಕರಿಗಳಲ್ಲಿ ಮೊದಲಿಗಿಂತ ಜಾಸ್ತಿ ನೂಕು ನುಗ್ಗಲು.ತಿಂಡಿ-ಊಟಗಳಲ್ಲಿ ಟ್ರಾನ್ಸ್ ಫ್ಯಾಟ್ (ಕಳಪೆ ತೈಲ) ಬಳಕೆ ಜಾಸ್ತಿ ಇದ್ದರೆ ಹೃದಯಕ್ಕೆ ಡಬಲ್ ಟ್ರಬಲ್ ಎನ್ನುತ್ತಾರೆ ತಜ್ಞರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ ಐದು ಲಕ್ಷ ಜನರು ಇದರಿಂದಾಗಿಯೇ ಸಾಯುತ್ತಿದ್ದಾರೆ. ಇನ್ನು ಎರಡು ವರ್ಷಗಳಲ್ಲಿ ಎಲ್ಲ ದೇಶಗಳೂ ಇದನ್ನು ನಿಷೇಧಿಸಬೇಕೆಂದು ಕರೆ ಕೊಟ್ಟಿದೆ.ಬಹಳಷ್ಟು ದೇಶಗಳು (ಕೆನಡಾ, ಬ್ರಿಟನ್, ಸಿಂಗಪೂರ್, ಸ್ವೀಡನ್, ಯುಎಸ್, ಸಿಂಗಪೂರ್ ಇತ್ಯಾದಿ) ಆಗಲೇ ಇದರ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಬಂಧನೆಗಳನ್ನು ಹಾಕಿವೆ. ನಮ್ಮಲ್ಲಿ ಅಂಥ ನಿಬಂಧನೆ ಜಾರಿಗೆ ಬರುವುದೇ ಕಷ್ಟ. ಬಳಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಬಳಸಬೇಡಿ ಎಂದು ರಸ್ತೆ ಪಕ್ಕದಲ್ಲಿ ಪಕೋಡಾ ಕರಿದು ಮಾರುವವನ ಮೇಲೆ ಎಂಥ ನಿಬಂಧನೆ ಜಾರಿಗೆ ಬಂದೀತು?
ಬೇಕರಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅವುಗಳ ಪಕ್ಕದಲ್ಲೇ ಔಷಧ ಅಂಗಡಿಗಳೂ ಹೆಚ್ಚುತ್ತಿವೆ. ಗೋಭಿ ಮಂಚೂರಿಗೆ ಬೇಡಿಕೆಯೂ ಹೆಚ್ಚುತ್ತಿದೆ.ಬೇರೆ ದೇಶಗಳಲ್ಲಿ ನಿರ್ಬಂಧಿಸಲಾದ 57 ಬಗೆಯ ಕೀಟನಾಶಕ ವಿಷಗಳು ನಮ್ಮಲ್ಲಿ ಸಲೀಸಾಗಿ ಮಾರಾಟವಾಗುತ್ತವೆ. ಹೂಕೋಸು (ಗೋಭಿ) ಬೆಳೆಯಲು ಭಾರೀ ವಿಷದ ಸಿಂಪಡನೆ ಆಗಲೇಬೇಕು. ಅತ್ತ ಬೆಳೆದವನಿಗೂ ವಿಷ ಸಿಂಚನ, ಇತ್ತ ಬಳಸುವವನಿಗೂ ಕಂಟಕ. ಚಿಕ್ಕವರು, ದೊಡ್ಡವರು, ನಗರದವರು, ಹಳ್ಳಿಯವರು ಅವರಿವರೆನ್ನದೆ ಯಾರನ್ನು ಬೇಕಾದರೂ ಬಲಿತೆಗೆದುಕೊಳ್ಳುತ್ತದೆ ಈ ಕೊರೊನರಿ ಹಾರ್ಟ್ ಡಿಸೀಸ್. ಇದಕ್ಕೂ ಕೊರೊನಾ ಸಂಬಂಧ ಇದೆ. ದೇಹಕ್ಕೆ ಶುದ್ಧರಕ್ತವನ್ನು ಪೂರೈಸುವ ರಕ್ತನಾಳಗಳು ಹೃದಯವನ್ನು ಕಿರೀಟದಂತೆ ಸುತ್ತಿಕೊಂಡಿದ್ದರಿಂದ ಇದಕ್ಕೆ ಕೊರೊನರಿ ಆರ್ಟರಿ ಎನ್ನುತ್ತಾರೆ. ಕೊರೊನಾ ಕುರಿತು ಗಾಬರಿ ಹುಟ್ಟಿಸುವ ಅಂಕಿಸಂಖ್ಯೆಗಳನ್ನೂ ಗ್ರಾಫಿಕ್‌ಗಳನ್ನೂ ತೋರಿಸುತ್ತ ಭಯಾನಕ ದೃಶ್ಯಗಳನ್ನು ಬಿತ್ತರಿಸುವವರು ಸದ್ಯಕ್ಕೇನೊ ದೇಶದ ಗಮನವನ್ನು ಗಡಿಯ ಕಡೆ ಸೆಳೆಯುತ್ತಿದ್ದಾರೆ. ರಸ್ತೆ ಪಕ್ಕ ಗೋಭೀ ಮಂಚೂರಿ ತಿನ್ನುತ್ತ ನಾವೆಲ್ಲ ಚೀನೀ ವಸ್ತುಗಳನ್ನು ನಿಷೇಧಿಸುವ ಚರ್ಚೆಯಲ್ಲಿ ತೊಡಗಿದ್ದೇವೆ. ಚಾನೆಲ್‌ಗಳ ಕೆಲವರು ರಕ್ತ ಹೆಪ್ಪುಗಟ್ಟುವಂಥ ಗ್ರಾಫಿಕ್‌ಗಳನ್ನು ಹಾಕುತ್ತಿದ್ದಾರೆ. ಯಾಕೆ ಯಾರೂ ಖಾದ್ಯ ತೈಲಗಳ ಗುಣಮಟ್ಟದ ಬಗ್ಗೆ, ಆಹಾರದಲ್ಲಿರುವ ವಿಷಗಳ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ?
ದಿನಕ್ಕೆ ಆರೇಳು ಸಾವಿರ ಸಾವಾಗುತ್ತಿದ್ದರೂ ಯಾರೂ ಯಾಕೆ ಹೃದ್ರೋಗವನ್ನು ತಡೆಗಟ್ಟಬಲ್ಲ ಸರಳ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ? ಯಾಕೆ ಫೋನ್ ನಲ್ಲಿ ಎಚ್ಚರಿಕೆಯ ಮಾತುಗಳು ಬರುತ್ತಿಲ್ಲ? ಯಾಕೆಂದರೆ CVDಯನ್ನು ತಡೆಗಟ್ಟುವಲ್ಲಿ ಮತ್ತು ಎಕ್ಸ್-ರೇ, ಇಸಿಜಿ, ಆಂಜಿಯೊಗ್ರಾಮ್, ಕೊರೊನರಿ ಬೈಪಾಸ್ ಅಥವಾ ಸ್ಟೆಂಟ್ ಬಳಕೆಯನ್ನು ಕಡಿಮೆ ಮಾಡುವಲ್ಲಿ ಯಾವ ಲಾಭವೂ ಇಲ್ಲ. ಅದಕ್ಕೇ ಸಿವಿಡಿಗೆ ಯಾರೂ ಕ್ಯಾರೇ ಅನ್ನುವವರಿಲ್ಲ. ಬದಲಿಗೆ ಕೊರೊನಾ ಮಾರಿಯ ಬಗ್ಗೆ ಬ್ರೆಕಿಂಗ್ ನ್ಯೂಸ್ ಕೊಟ್ಟು ಕೊಟ್ಟು ಹೃದಯ ಬಡಿತವನ್ನು ಹೆಚ್ಚಿಸುವ ಯತ್ನಗಳೇ ಎದ್ದು ಕಾಣುತ್ತಿವೆ. ಒಂದು ದಿನ ಈ ಸುದ್ದಿಯೂ ನೇಪಥ್ಯಕ್ಕೆ ಸೇರುತ್ತದೆ.ನೋಡುತ್ತಿರಿ, ಇಂದು ಸಿವಿಡಿಗೆ ಬಂದ ಸ್ಥಿತಿಯೇ ಮುಂದೆ ಕೋವಿಡ್-19ಕ್ಕೂ ಬರಲಿದೆ.