
ಮಹಾಮಾರಿ ಕೊರೋನಾ ವೈರಸ್ ವೈದ್ಯರಿಗೂ ಕಂಟಕವಾಗಿ ಕಾಡುತ್ತಿದ್ದು, ಮಂಗಳೂರಿನಲ್ಲಿ ಕೊವಿಡ್-19 ಕರ್ತವ್ಯನಿರತ ಐವರು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು ತಗಲಿದೆ.

ಮಂಗಳೂರು: ಮಹಾಮಾರಿ ಕೊರೋನಾ ವೈರಸ್ ವೈದ್ಯರಿಗೂ ಕಂಟಕವಾಗಿ ಕಾಡುತ್ತಿದ್ದು, ಮಂಗಳೂರಿನಲ್ಲಿ ಕೊವಿಡ್-19 ಕರ್ತವ್ಯನಿರತ ಐವರು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು ತಗಲಿದೆ.
ನಗರದ ವೆನ್ಲಾಕ್ ಕೊವಿಡ್ ಆಸ್ಪತ್ರೆ ಮತ್ತು ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐವರು ವೈದ್ಯರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಚಂದ್ರ ಬಯಾರಿ ತಿಳಿಸಿದ್ದಾರೆ.
ಆ ಐವರು ಕಸ್ತೂರಿಬಾ ವೈದ್ಯಕೀಯ ಕಾಲೇಜ್ ನ ಪಿಜಿ ವಿದ್ಯಾರ್ಥಿಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸಂಪರ್ಕಿತರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ಆರೋಗ್ಯಾಧಿಕಾರಿ ಹೇಳಿದ್ದಾರೆ.
ಈ ವೈದ್ಯರ ಪ್ರಾಥಮಿಕ ಸಂಪರ್ಕಗಳನ್ನು ಪತ್ತೆಹಚ್ಚುತ್ತಿದ್ದೇವೆ. ಅವರು ಪ್ರತಿದಿನವೂ ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡಿರುವುದರಿಂದ ರೋಗಿಗಳನ್ನು ಪತ್ತೆಹಚ್ಚುವುದು ಕಷ್ಟಕರ ಪ್ರಕ್ರಿಯೆ. ನಾವು ಈಗಾಗಲೇ 30 ಕ್ಕೂ ಹೆಚ್ಚು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಉ.ಕ. ದಲ್ಲಿ 11 ಜನರಿಗೆ ಪಾಸಿಟಿವ್-
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ 11 ಜನರಲ್ಲಿ ಕರೋನಾ ದೃಢಪಟ್ಟಿದ್ದು ಇವರಲ್ಲಿ ಮೂರು ಜನರು ಮುಂಡಗೋಡು, ಯಲ್ಲಾಪುರ ದ ಓರ್ವ ಬಾಲಕಿ, 2 ಜನರು ಹಳಿಯಾಳ, ಹಾಗೂ ಜೊಯಡಾ, ಭಟ್ಕಳ, ದಾಂಡೇಲಿ,ಶಿರಸಿ ಹೊನ್ನಾವರದ ತಲಾ ಒಬ್ಬರು ಸೇರಿದ್ದಾರೆ. ಇವರಲ್ಲಿ ಬಹುತೇಕ ಹೊರರಾಜ್ಯಗಳಿಂದ ಬಂದವರು ಮತ್ತು ಅಂಥವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ.
