ಹಿಂದೂಗಳ ಆರಾಧ್ಯ ದೈವ ಶ್ರೀರಾಮ ಭಾರತೀಯನಲ್ಲ, ಆತ ನೇಪಾಳಿ. ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ ಎಂದು ಪ್ರಧಾನಿ ಕೆಪಿ ಶರ್ಮಾ ಒಲಿ ಹೇಳಿದ್ದಾರೆ.
ಕಠ್ಮಂಡು: ಹಿಂದೂಗಳ ಆರಾಧ್ಯ ದೈವ ಶ್ರೀರಾಮ ಭಾರತೀಯನಲ್ಲ, ಆತ ನೇಪಾಳಿ. ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ ಎಂದು ಪ್ರಧಾನಿ ಕೆಪಿ ಶರ್ಮಾ ಒಲಿ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ನಡೆದ ಸಾಂಸ್ಕ್ರೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು, ಭಾರತದ ಸಾಂಸ್ಕೃತಿಕ ದಬ್ಬಾಳಿಕೆ ಮತ್ತು ಅತಿಕ್ರಮಣದ ಮನೋಭಾವ ಹೊಂದಿದೆ ಎಂದು ಹೇಳಿದರು. ಭಾರತದಿಂದಾಗಿಯೇ ವಿಜ್ಞಾನಕ್ಕೆ ನೇಪಾಳ ನೀಡಿದ್ದ ಕೊಡುಗೆಯನ್ನು ನಗಣ್ಯವಾಗಿ ನೋಡಲಾಗುತ್ತಿದೆ. ಈಗಲೂ ರಾಮನಿಗಾಗಿ ನೇಪಾಳ ಸೀತೆಯನ್ನು ನೀಡಿದೆ ಎಂದು ನಂಬಿದ್ದಾರೆ. ಆದರೆ ನಿಜಾಂಶವೇನು ಎಂದರೆ ಶ್ರೀರಾಮನನ್ನು ನೀಡಿದ್ದೂ ಕೂಡ ನೇಪಾಳವೇ.. ಶ್ರೀರಾಮ ಭಾರತೀಯನಲ್ಲ. ಆತ ನೇಪಾಳಿ..ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ ಎಂದು ಹೇಳಿದ್ದಾರೆ.
ನೇಪಾಳ ರಾಜಧಾನಿ ಕಠ್ಮಂಡುವಿನಿಂದ ಸುಮಾರು 135 ಕಿ.ಮೀ ದೂರದಲ್ಲಿ ಬಿರ್ಗುಂಜ್ ಜಿಲ್ಲೆಯಿದ್ದು ಇಲ್ಲಿಯೇ ಶ್ರೀರಾಮ ಜನಿಸಿದ ನಿಜವಾದ ಅಯೋಧ್ಯೆ ಇದೆ. ನಾವು ಸಾಂಸ್ಕೃತಿಕವಾಗಿ ತುಳಿತಕ್ಕೊಳಗಾಗಿದ್ದು, ಭಾರತ ಸತ್ಯಾಂಶಗಳನ್ನು ಅತಿಕ್ರಮಿಸಿದೆ ಎಂದು ಹೇಳಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇನ್ನು ಈ ಹಿಂದೆಯೂ ಕೂಡ ಗಡಿ ವಿಚಾರವಾಗಿ ತಗಾದೆ ತೆಗೆದಿದ್ದ ಕೆಪಿ ಶರ್ಮಾ ಒಲಿ, ಭಾರತ ಭೂ ಪ್ರದೇಶವನ್ನು ತಮ್ಮದೆಂದು ಹೇಳಿದ್ದರು. ಅಲ್ಲದೆ ಭಾರತ ಭೂಪ್ರದೇಶವನ್ನು ನೇಪಾಳದ್ದು ಎಂದು ಹೇಳುವ ನಕ್ಷೆಯನ್ನೂ ಕೂಡ ನೇಪಾಳದ ಸಂಸತ್ ನಲ್ಲಿ ಮಂಡಿಸಿ ಅನುಮೋದನೆ ಕೂಡ ಪಡೆದಿದ್ದರು.