

ಅಯೋಧ್ಯೆ ಭಾರತದಲ್ಲಿಲ್ಲ, ನಿಜವಾದ ಅಯೋಧ್ಯೆ ಇರುವುದು ನೇಪಾಳದಲ್ಲಿ ರಾಮ ನೇಪಾಳದವನು ಎಂಬ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಹೇಳಿಕೆಗೆ ಅಲ್ಲಿನ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಲು ಯತ್ನಿಸಿದೆ.

ಕಠ್ಮಂಡು: ಅಯೋಧ್ಯೆ ಭಾರತದಲ್ಲಿಲ್ಲ, ನಿಜವಾದ ಅಯೋಧ್ಯೆ ಇರುವುದು ನೇಪಾಳದಲ್ಲಿ ರಾಮ ನೇಪಾಳದವನು ಎಂಬ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಹೇಳಿಕೆಗೆ ಅಲ್ಲಿನ ವಿದೇಶಾಂಗ ಇಲಾಖೆ ತೇಪೆ ಹಚ್ಚುವ ಕೆಲಸ ಮಾಡಿ ಸ್ಪಷ್ಟನೆ ನೀಡಲು ಯತ್ನಿಸಿದೆ.
ಜು.13 ರಂದು ಕೆ.ಪಿ ಶರ್ಮಾ ಓಲಿ ನೀಡಿರುವ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ, ಅಯೋಧ್ಯೆ ಹಾಗೂ ಅದರ ಸಾಂಸ್ಕೃತಿಕ ಮೌಲ್ಯಗಳನ್ನು ಮಹತ್ವವನ್ನು ಕಡಿಮೆಮಾಡುವ ಉದ್ದೇಶ ಪ್ರಧಾನಿಗಳ ಹೇಳಿಯಲ್ಲಿ ಇರಲಿಲ್ಲ ಎಂದು ಹೇಳಿದೆ.
ನೇಪಾಳಿ ಭಾಷೆಯ ರಾಮಾಯಣದ ಕರ್ತೃ ಆದಿಕವಿ ಭಾನು ಭಕ್ತ ಆಚಾರ್ಯರ 207 ನೇ ಜನ್ಮದಿನಾಚರಣೆ ಅಂಗವಾಗಿ ಮಾತನಾಡಿದ್ದ ನೇಪಾಳ ಪ್ರಧಾನಿ ರಾಮನ ನಿಜವಾದ ಜನ್ಮಭೂಮಿ ಇರುವುದು ಭಾರತದಲ್ಲಿ ಅಲ್ಲ ನೇಪಾಳದಲ್ಲಿ ಎಂದು ಹೇಳಿದ್ದರು.
ಈ ಬಗ್ಗೆ ವಿವಾದ ಉಂಟಾದ ಬೆನ್ನಲ್ಲೇ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿರುವ ನೇಪಾಳ ವಿದೇಶಾಂಗ ಸಚಿವಾಲಯ, ಪ್ರಧಾನಿಯವರ ಹೇಳಿಕೆ ಯಾವುದೇ ರಾಜಕೀಯ ವಿಷಯಕ್ಕೂ ಸಂಬಂಧಿಸಿದ್ದಾಗಲೀ ಯಾವುದೇ ಭಾವನೆಗಳಿಗೆ ನೋವುಂಟು ಮಾಡುವುದಾಗಲೀ ಅಲ್ಲ. ರಾಮಾಯಣ ಹಾಗೂ ಅವುಗಳ ಘಟನೆಗಳಿಗೆ ಬೆಸೆದುಕೊಂಡಿರುವ ಹಲವಾರು ಪ್ರದೇಶಗಳು ಪುರಾಣಗಳಲ್ಲಿ ಬಂದಿವೆ, ಈ ಸಂಬಂಧ ಹೆಚ್ಚಿನ ಅಧ್ಯಯನಕ್ಕೆ ಸಹಾಯವಾಗುವಂತೆ ಅವುಗಳ ಮಹತ್ವವನ್ನು ಪ್ರಧಾನಿ ಹೇಳಿದ್ದಾರೆ ಎಂದು ತಿಳಿಸಿದೆ.
ಪ್ರತಿ ವರ್ಷ ಬಿಭಾ ಪಂಚಮಿಯ ದಿನದಂದು ಭಾರತದ ಅಯೋಧ್ಯೆಯಿಂದ ನೇಪಾಳದ ಜನಕಪುರಿಗೆ ಮದುವೆ ದಿಬ್ಬಣ ಬರುವ ಸಂಪ್ರದಾಯ ಗಮನಾರ್ಹವಾಗಿದೆ. 2018 ರಲ್ಲಿ ನೇಪಾಳ ಪ್ರಧಾನಿಯೇ ರಾಮಾಯಣ ಸರ್ಕ್ಯೂಟ್ ಉದ್ಘಾಟಿಸಿ ಜನಕಪುರದಿಂದ ಅಯೋಧ್ಯೆಗೆ ಬಸ್ ಸೇವೆಯನ್ನು ಪ್ರಾರಂಭಿಸಿದ್ದನ್ನೂ ವಿದೇಶಾಂಗ ಇಲಾಖೆ ಉಲ್ಲೇಖಿಸಿದೆ. (kpc)

