

ಪ್ರಜಾಪ್ರಭುತ್ವ ರಕ್ಷಿಸಲು ಎಲ್ಲರೂ ಒಂದಾಗಿ ದನಿ ಎತ್ತಬೇಕೆಂದು ದೇಶದ ಜನತೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಅಭಿಯಾನ ಆರಂಭಿಸಿದ್ದಾರೆ.

ನವದೆಹಲಿ; ಪ್ರಜಾಪ್ರಭುತ್ವ ರಕ್ಷಿಸಲು ಎಲ್ಲರೂ ಒಂದಾಗಿ ದನಿ ಎತ್ತಬೇಕೆಂದು ದೇಶದ ಜನತೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಅಭಿಯಾನ ಆರಂಭಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, #SpeakUpForDemocracy ಅಭಿಯಾನದಲ್ಲಿ ಒಂದಾಗಿ ಪಾಲ್ಗೊಳ್ಳಿ, ಪ್ರಜಾಪ್ರಭುತ್ವ ರಕ್ಷಿಸಲು ದನಿ ಎತ್ತೋಣ ಎಂದು ಬರೆದುಕೊಂಡಿದ್ದಾರೆ.
ವಿಡಿಯೋ ಹಿನ್ನೆಲೆ ಧ್ವನಿಯಲ್ಲಿ ಬಿಜೆಪಿಯು ಪ್ರಜಾಪ್ರಭುತ್ವವನ್ನು ಕೆಡವಿದೆ ಮತ್ತು ರಾಜಸ್ಥಾನದಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಇಂದು ಇಡೀ ದೇಶ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಬಿಜೆಪಿಯು ಸಂವಿಧಾನವನ್ನು ಕೆಡವುತ್ತಿದೆ. ಪ್ರಜಾಪ್ರಭುತ್ವವನ್ನು ನಾಶಮಾಡುತ್ತಿದೆ. 2018ರಲ್ಲಿ ರಾಜಸ್ಥಾನದ ಜನರು ಕಾಂಗ್ರೆಸ್ ಸರ್ಕಾರವನ್ನು ಚುನಾಯಿಸಿತ್ತು. ಬಿಜೆಪಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿದ ನಂತರ ಇದೀಗ ರಾಜಸ್ಥಾನದಲ್ಲಿ ಪ್ರಜಾಪ್ರಭುತ್ವವನ್ನ ಕೊಲ್ಲಲು ಸಂಚು ರೂಪಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಚುನಾಯಿತ ಸರ್ಕಾರವನ್ನು ಬೀಳಿಸುವುದನ್ನು ನಿಲ್ಲಿಸುವಂತೆ ಬಿಜೆಪಿಗೆ ಒತ್ತಾಯಿಸುತ್ತೇವೆ. ನಮ್ಮ ಸಾಂವಿಧಾನಿಕ ಹಕ್ಕುಗಳೊಳಗೆ ಕೂಡಲೇ ಅಧಿವೇಶನವನ್ನು ಕರೆಯಬೇಕು. ನಿಮ್ಮ ದನಿ ಏರಿಸಲು, ಪ್ರಜಾಪ್ರಭುತ್ವ ರಕ್ಷಿಸಲು ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದೆ.
ಉಪಮುಖ್ಯಂತ್ರಿಯಾಗಿದ್ದ ಸಚಿನ್ ಪೈಲಟ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡುವೆ ಭಿನ್ನಾಭಿಪ್ರಾಯದ ಬಳಿಕ ರಾಜಸ್ಥಾನ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದೆ. (kpc)
