

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಕರಾವಳಿ,ಮಲೆನಾಡು ಭಾಗದಲ್ಲಿಕಳೆದ 40 ತಾಸುಗಳಲ್ಲಿ ಬಿದ್ದ ಮಳೆ,ಗಾಳಿ ರಭಸದಿಂದಾಗಿ ಮರ-ಮಟ್ಟುಗಳು ನೆಲಕ್ಕುರುಳಿ ನೂರಾರು ಮನೆಗಳಿಗೆ ಹಾನಿಯಾಗಿದೆ. ಮಳೆಗಾಳಿ ಪರಿಣಾಮ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸರಬರಾಜು ವ್ಯತ್ಯಯವಾಗಿದೆ.




ಕರಾವಳಿ ಭಾಗದಲ್ಲಿ ಮಹಾಪೂರದಿಂದಾಗಿ ಅನೇಕ ಕಡೆ ರಸ್ತೆ ಸಂಪರ್ಕ ಕಡಿತವಾಗಿದೆ. ಮಲೆನಾಡಿನ ನದಿಗಳೆಲ್ಲಾ ತುಂಬಿ ಹರಿಯುತಿದ್ದು ನದಿಪಾತ್ರದ ಕೆಲವು ಭಾಗಗಳಲ್ಲಿ ಜನರಿಗೆ ಪುನರ್ವಸತಿ ವ್ಯವಸ್ಥೆ ಮಾಡಲಾಗಿದೆ. ಶಿರಸಿಯ ಮೊಗವಳ್ಳಿ,ಸಿದ್ಧಾಪುರದ ಹೆಮ್ಮನಬೈಲ್, ಅಕ್ಕುಂಜಿ,ಕಲ್ಯಾಣಪುರಗಳಲ್ಲಿ ಹಿಂದಿನ ವರ್ಷದಂತೆ ನೆರೆಭೀತಿ ಆವರಿಸಿದ್ದು ಜಿಲ್ಲಾಡಳಿತ ಈ ಗ್ರಾಮಗಳ ಜನರ ರಕ್ಷಣೆ,ಪುನರ್ವಸತಿಗೆ ಮುಂದಾಗಿದೆ. ಸಿದ್ಧಾಪುರ ತಾಲೂಕಿನ ಹೊಸೂರು,ಹುಸೂರು, ಇಟಗಿ, ತ್ಯಾಗಲಿಗಳಲ್ಲಿ ವಾಸ್ತವ್ಯದ ಮನೆಗಳ ಮೇಲೆ ಮರಬಿದ್ದು ಲಕ್ಷಾಂತರ ಹಾನಿ ಸಂಭವಿಸರುವ ಬಗ್ಗೆ ಕಂದಾಯ ಇಲಾಖೆ ವರದಿ ನೀಡಿದೆ.
ವಾಸಸ್ಥಳ ಬದಲು-
ಸಿದ್ಧಾಪುರದ ಹೆಮ್ಮನಬೈಲಿನ ಹೊಳೆಗೆ ಬಂದ ಪ್ರವಾಹದಿಂದ ಅಲ್ಲಿಯ 6 ಕುಟುಂಬಗಳನ್ನು ಸ್ಥಳಾಂತರಿಸಿ ಬುಧವಾರ ಪುನರ್ವಸತಿ ಕಲ್ಫಸಲಾಗಿದೆ.
