

ಇಂದು ಅರಮನೆ ಗೌರಿ, ನಾಳೆ ಲೋಕಚೌತಿ ಅಥವಾ ಇಂದು ಹಿರಿಗೌರಿ, ನಾಳೆ ಕಿರಿಗೌರಿ ಹಬ್ಬ ಆಚರಿಸುವ ಮಲೆನಾಡಿನ ಗೌರಿ ಗಣೇಶ ಹಬ್ಬ ಇಂದಿನಿಂದಲೇ ಪ್ರಾರಂಭವಾಗಿದೆ.ಆದರೆ ನಾಳೆಯಿಂದ ಪ್ರಾರಂಭವಾಗುವ ಲೋಕಚೌತಿಯ ದಿನದಿಂದ ಪ್ರಾರಂಭವಾಗಬೇಕಿದ್ದ ಹಳಿಯಾಳದ ಮುಠ್ಠಳ್ಳಿ ಗೌರಮ್ಮನ ಹಬ್ಬ, ಪೂಜೆಯನ್ನು ಮುಂದೂಡಲಾಗಿದೆ.
ಪ್ರತಿವರ್ಷ ಅನ್ಯ ತಾಲೂಕು, ಜಿಲ್ಲೆ, ಪರ ಊರುಗಳಿಂದ ಸಿದ್ಧಾಪುರದಿಂದ 25 ಕಿ.ಮೀ ದೂರದ ಹಳಿಯಾಳದ ಮುಠ್ಠಳ್ಳಿ ಗೌರಮ್ಮನ ಪೂಜೆಗೆ ಸಹಸ್ರಾರು ಜನರು ಬರುತಿದ್ದರು. ಮಕ್ಕಳಾಗವರು, ಅನಾರೋಗ್ಯ ಉಂಟಾದವರು ತಾವು ಮುಠ್ಠಳ್ಳಿ ಗೌರಮ್ಮನಿಗೆ ಹರಕೆ ತೀರಿಸಿ, ಹಣ್ಣ-ಕಾಯಿ ನೈವೇದ್ಯ ಮಾಡಿಸಿ ಪ್ರಸಾದ ಪಡೆದು ತೆರಳುತಿದ್ದರು. ಬಿಳಗಿ ಅರಸರ ಕಾಲದಿಂದ ಪ್ರಾರಂಭವಾಗಿದ್ದ ಈ ಮುಠ್ಠಳ್ಳಿ ಗೌರಮ್ಮನ ಪೂಜೆ, ಚೌತಿ ಹಬ್ಬ ನೂರಾರು ವರ್ಷಗಳಿಂದ ಸಂಪ್ರದಾಯ, ಪರಂಪರೆ, ಸಾಂಸ್ಕೃತಿಕ ಆಚರಣೆಯಂತೆ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಮುಠ್ಠಳ್ಳಿಯಲ್ಲಿ ಅಮೇಯ ಅಥವಾ ಸೂತಕ ಇರುವುದರಿಂದ ಈ ವರ್ಷದ ಲೋಕಚೌತಿಯ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
‘ಹಳಿಯಾಳದ ಮುಠ್ಠಳ್ಳಿ ಗೌರಮ್ಮನ ಚೌತಿ ಪೂಜೆ-ಹಬ್ಬ ಯಾವಾಗಲೂ ನಿಂತಿದ್ದು, ಮುಂದೂಡಿದ್ದೇ ಇಲ್ಲ. ಈ ವರ್ಷ ಅನಿವಾರ್ಯವಾಗಿ ಸೂತಕದ ಹಿನ್ನೆಲೆಯಲ್ಲಿ ಈ ಪೂಜೆ ಮುಂದೂಡಿದ್ದೇವೆ. ಮುಂದಿನ ತಿಂಗಳುಪೂಜೆ ಹಬ್ಬಾಚರಿಸುತ್ತೇವೆ ಆ ಸಮಯದಲ್ಲಿ ಭಕ್ತರಿಗೆ ಮುಕ್ತ ಅವಕಾಶ ನೀಡಬೇಕೋ, ಬೇಡವೋ ಎನ್ನುವ ತೀರ್ಮಾನವಾಗಿಲ್ಲ. ಕರೋನಾ ಹಿನ್ನೆಲೆಯಲ್ಲಿ ನಿಯಮ, ಸರ್ಕಾರದ ಆದೇಶ, ಅನುಮತಿ ಅವಲಂಬಿಸಿ ಮುಂದೆ ಪ್ರಕಟಣೆ ನೀಡುತ್ತೇವೆ ಎಂದು ಜಿ.ಟಿ.ನಾಯ್ಕ ಹಳಿಯಾಳ ತಿಳಿಸಿದ್ದಾರೆ. ಕರೋನಾ ಹಿನ್ನೆಲೆಯಲ್ಲಿ ಈ ವರ್ಷದ ಗೌರಿ ಗಣೇಶ ಹಬ್ಬದ ಸಂಬ್ರಮ ಕುಗ್ಗಿದೆ. ಮುಠ್ಠಳ್ಳಿ ಗೌರಮ್ಮನ ಹಬ್ಬ,ಪೂಜೆ ನಿಂತಿರುವುದರಿಂದ ಮುಠ್ಠಳ್ಳಿ ಗೌರಮ್ಮನ ಒಕ್ಕಲು ಅಥವಾ ಕುಳಾವಿಗಳು ಈ ವರ್ಷ ಚೌತಿ ಖುಷಿಯನ್ನೂ ಮುಂದೂಡಬೇಕಾದ ಅನಿವಾರ್ಯತೆ ಎದುರಾಗಿದೆ.

