

ಪಕ್ಷದ ನಾಯಕತ್ವ ವಿಚಾರವಾಗಿ ಭಿನ್ನಮತ, ವಾದ-ವಿವಾದ, ಅಪಸ್ವರಗಳು ಭುಗಿಲೆದ್ದಿರುವ ಹೊತ್ತಿನಲ್ಲಿಯೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೋಮವಾರ ನಡೆದಿದೆ.

ನವದೆಹಲಿ: ಪಕ್ಷದ ನಾಯಕತ್ವ ವಿಚಾರವಾಗಿ ಭಿನ್ನಮತ, ವಾದ-ವಿವಾದ, ಅಪಸ್ವರಗಳು ಭುಗಿಲೆದ್ದಿರುವ ಹೊತ್ತಿನಲ್ಲಿಯೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೋಮವಾರ ನಡೆದಿದೆ.
ಇಂದಿನ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ಮುಂದಿನ ದಿನಗಳಲ್ಲಿ ಮುನ್ನಡೆಸುವವರು ಯಾರು ಎಂಬ ಬಗ್ಗೆ ಚರ್ಚೆಗಳು ನಡೆದವು. ಇಂದು ಬೆಳಗ್ಗೆ ಸಭೆ ಆರಂಭವಾಗುತ್ತಿದ್ದಂತೆಯೇ ಸೋನಿಯಾ ಗಾಂಧಿಯವರು ತಾವು ಮಧ್ಯಂತರ ಅಧ್ಯಕ್ಷೆ ಹುದ್ದೆ ತೊರೆಯಲಿದ್ದು ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಮುಂದುವರಿಸಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಗುಲಾಂ ನಬಿ ಆಜಾದ್ ಮತ್ತು ಹಲವು ಹಿರಿಯ ನಾಯಕರು ಬರೆದಿರುವ ಪತ್ರದ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಪತ್ರವನ್ನು ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಗೆ ಹಸ್ತಾಂತರಿಸಿರುವ ಸೋನಿಯಾ ಗಾಂಧಿ ಪತ್ರದಲ್ಲಿ ಏನು ಬರೆದಿದ್ದರು, ಅದರಲ್ಲಿನ ವಿಷಯಗಳೇನು ಎಂದು ಇಂದಿನ ವರ್ಚುವಲ್ ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಸೋನಿಯಾ ಗಾಂಧಿ ಪ್ರಸ್ತಾಪಿಸಿದರು ಎಂದು ತಿಳಿದುಬಂದಿದೆ.
ಇಂದಿನ ಸಭೆಯಲ್ಲಿ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಗುಲಾಂ ನಬಿ ಆಜಾದ್, ಚಿದಂಬರಂ ಸೇರಿದಂತೆ ಹಲವರು ಭಾಗವಹಿಸಿದ್ದರು. ಹೊಸ ಅಧ್ಯಕ್ಷರ ನೇಮಕವಾಗುವವರೆಗೆ ನೀವೇ ಮುಂದುವರಿಯಬೇಕೆಂದು ಸೋನಿಯಾ ಗಾಂಧಿಯವರನ್ನು ಮನಮೋಹನ್ ಸಿಂಗ್ ಒತ್ತಾಯಿಸಿದರು. ಎ ಕೆ ಆಂಟನಿಯವರು ಕೆಲವು ನಾಯಕರು ಪತ್ರ ಬರೆದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ರಾಹುಲ್ ಗಾಂಧಿಯವರು ಇಂದಿನ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸೋನಿಯಾ ಗಾಂಧಿಯವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಭದಲ್ಲಿ ಏಕೆ ನಾಯಕತ್ವವನ್ನು ಪ್ರಶ್ನಿಸಿ ಪತ್ರ ಬರೆದಿದ್ದು, ಸಮಯ, ಸಂದರ್ಭ ನೋಡಿಕೊಂಡು ಪತ್ರ ಬರೆಯಬೇಕಲ್ಲವೇ, ಇದು ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯೇ ಹೊರತು ಮಾಧ್ಯಮವಲ್ಲ, ಇಲ್ಲಿ ನಮ್ಮ ಆಲೋಚನೆಗಳು, ಅಭಿಪ್ರಾಯಗಳು, ಚರ್ಚೆಗಳು ಪಕ್ಷದೊಳಗೆ, ನಮ್ಮೊಳಗೆ ತೀರ್ಮಾನವಾಗಬೇಕು ಎಂದು ಹೇಳಿದರು ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿಚಾರವಾಗಿ ಪಕ್ಷದಲ್ಲಿ ಎರಡು ಬಣವಾಗಿದ್ದು ಒಂದು ಬಣ ಸಾಮೂಹಿಕ ನಾಯಕತ್ವವನ್ನು ಬೆಂಬಲಿಸಿದರೆ ಮತ್ತೊಂದು ಬಣ ಗಾಂಧಿ ಕುಟುಂಬವೇ ನಾಯಕತ್ವ ಮುಂದುವರಿಸಬೇಕೆಂದು ಹೇಳುತ್ತಿದೆ.
ಒಂದೆಡೆ ವರ್ಚುವಲ್ ಸಭೆ ನಡೆಯುತ್ತಿದ್ದರೆ ಮತ್ತೊಂದೆಡೆ ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯ ಕಾಂಗ್ರೆಸ್ ಕಚೇರಿ ಎದುರು ಸೇರಿ ಘೋಷಣೆಗಳನ್ನು ಕೂಗುತ್ತಾ ಗಾಂಧಿ ಕುಟುಂಬದವರೇ ಪಕ್ಷದ ನಾಯಕರಾಗಿ ಮುಂದುವರಿಯಬೇಕು, ನಮಗೆ ಬೇರೆ ನಾಯಕರು ಬೇಡ ಎಂದು ಒತ್ತಾಯಿಸುತ್ತಿರುವ ದೃಶ್ಯ ಕಂಡುಬಂತು.
ಬಹುತೇಕ ಕಾಂಗ್ರೆಸ್ ನ ಲೋಕಸಭಾ ಸದಸ್ಯರು, ರಾಜ್ಯಗಳ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿಗೆ ಪತ್ರ ಬರೆದು ಅವರೇ ಮುಂದುವರಿಯಬೇಕು ಇಲ್ಲದಿದ್ದರೆ ರಾಹುಲ್ ಗಾಂಧಿಯವರನ್ನು ಮತ್ತೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಇಂದಿನ ಸಭೆಯ ಹೈಲೈಟ್: -ನಾನು ಅಧ್ಯಕ್ಷೆಯಾಗಿ ಮುಂದುವರಿಯುವುದಿಲ್ಲ, ಹೊಸ ನಾಯಕರನ್ನು ಹುಡುಕಿ ನೇಮಕ ಮಾಡಿ.
-20ಕ್ಕೂ ಹೆಚ್ಚು ನಾಯಕರು ಕೆಲ ದಿನಗಳ ಹಿಂದೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ಬಲಿಷ್ಠ ನಾಯಕತ್ವ ಬೇಕು, ಕಾಂಗ್ರೆಸ್ ನ ಕಾರ್ಯವೈಖರಿಯಲ್ಲಿ ಬದಲಾವಣೆಯಾಗಬೇಕು ಎಂದು ಒತ್ತಾಯಿಸಿ ಬರೆದ ಪತ್ರದ ಬಗ್ಗೆ ಚರ್ಚೆ.
– ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಧ್ಯೆ ಪ್ರವೇಶಿಸಿ ಸೋನಿಯಾ ಗಾಂಧಿಯವರು ಆಸ್ಪತ್ರೆಯಲ್ಲಿ ದಾಖಲಾಗಿರುವಾಗ, ರಾಜಸ್ತಾನ ಕಾಂಗ್ರೆಸ್ ನಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದ ಸಂದರ್ಭದಲ್ಲಿ ಪತ್ರ ಬರೆಯುವ ಅಗತ್ಯವೇನಿತ್ತು, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೀರಿ ಎಂದು ಆಕ್ಷೇಪ.
-ತಮ್ಮದೇನಿದ್ದರೂ ಕಾಂಗ್ರೆಸ್ ಪಕ್ಷದ ಮೇಲೆ ನಿಷ್ಠಾವಂತಿಕೆ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ ಗುಲಾಂ ನಬಿ ಆಜಾದ್.
-ಕಳೆದ ಆಗಸ್ಟ್ 7ರಂದು ಹಿರಿಯ ನಾಯಕರು ಬರೆದಿದ್ದ ಪತ್ರಕ್ಕೆ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್, ಎ ಕೆ ಆಂಟನಿ ಸೇರಿ ಹಲವರಿಂದ ಅಸಮಾಧಾನ.
-ನಾಯಕತ್ವದಲ್ಲಿನ ಅನಿಶ್ಚಿತತೆ, ಪಕ್ಷದಲ್ಲಿನ ಭಿನ್ನಮತದಿಂದಾಗಿ ಕಾರ್ಯಕರ್ತರಲ್ಲಿ ನೈತಿಕತೆ ಕುಗ್ಗಿದ್ದು ಪಕ್ಷವನ್ನು ದುರ್ಬಲಗೊಳಿಸಿದೆ ಎಂದು ಹೇಳಿ ಪತ್ರ ಬರೆದಿದ್ದು ಗುಲಾಂ ನಬಿ ಆಜಾದ್, ಶಶಿ ತರೂರ್, ಕಪಿಲ್ ಸಿಬಲ್, ಪೃಥ್ವಿರಾಜ್ ಚೌಹಾಣ್, ವಿವೇಕ್ ಟಂಖಾ ಮತ್ತು ಆನಂದ್ ಶರ್ಮಾ ಸೇರಿ ಹಲವರಿಂದ ಪತ್ರ.
ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋಲು ಕಂಡ ನಂತರ ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕಳೆದ ಜುಲೈಯಲ್ಲಿ ರಾಜೀನಾಮೆ ನೀಡಿದ್ದರು. ನಂತರ ಸೋನಿಯಾ ಗಾಂಧಿಯವರು ಹಂಗಾಮಿ ಅಧ್ಯಕ್ಷೆಯಾಗಿ ನೇಮಕಗೊಂಡರು. (kpc)
