

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ರಾಮಚಂದ್ರಪುರ ಮಠದ ಸುಪರ್ದಿಗೆ ಒಳಪಟ್ಟ ನಂತರ ಅಲ್ಲಿ ಪೂಜೆ ಮತ್ತು ಭಕ್ತರಿಂದ ದೇಣಿಗೆ ಸ್ವೀಕರಿಸಲು ಕೋರಿ ಅನಂತ ಅಡಿ ನೇತೃತ್ವದಲ್ಲಿ 24 ಜನರು ಕಾರವಾರದ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ಗೋಕರ್ಣದ ದೇವಾಲಯ ರಾಮಚಂದ್ರಪುರ ಮಠಕ್ಕೆ ಹಸ್ಥಾಂತರವಾದ ನಂತರ ಅಲ್ಲಿಯ ಸಾಂಪ್ರದಾಯಿಕ ವೈದಿಕರು ಪೂಜೆ ಮತ್ತು ಭಕ್ತರಿಂದ ದಕ್ಷಿಣೆ ಸ್ವೀಕರಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ರಾಮಚಂದ್ರಪುರ ಮಠ ಮತ್ತು ಶ್ರೀಕ್ಷೇತ್ರ ಗೋಕರ್ಣದ ಉಪಾದಿವಂತ ಮಂಡಳಿ ಆಕ್ಷೇಪಿಸಿ ಮೇನ್ಮನವಿ ಸಲ್ಲಿಸಿತ್ತು.
24 ಜನರ ಸಾಂಪ್ರದಾಯಿಕ ವೈದಿಕರ ತಂಡ ಕುಮಟಾ ಸಿವಿಲ್ ಹಿರಿಯ ನ್ಯಾಯಾಲಯದಲ್ಲಿ ದಾವೆ ಹೂಡಿ ತಮಗೆ ಪೂಜೆ ಮತ್ತು ದಕ್ಷಿಣೆ ಸ್ವೀಕಾರಕ್ಕೆ ಅವಕಾಶ ನೀಡಬೇಕು ಮತ್ತು ಈ ಅರ್ಜಿಯ ತೀರ್ಪು ಬರುವವರೆಗೂ ತಮ್ಮ ಹಿಂದಿನ ಅವಕಾಶ ಕ್ಕಾಗಿ ಮನವಿ ನೀಡಿತ್ತು. ಈ ಬಗ್ಗೆ ಆಡಳಿತ ಮಂಡಳಿ ಅಡ್ಡಿ ಪಡಿಸದಂತೆ ನಿರ್ಬಂಧಕಾಜ್ಞೆ ನೀಡಬೇಕೆಂದು ಹಕ್ಕು ಮಂಡಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡಲು ಉಚ್ಚನ್ಯಾಯಾಲಯದ ಧಾರವಾಡ ವಿಭಾಗೀಯ ಪೀಠ ಜಿಲ್ಲಾ ನ್ಯಾಯಾಲಯಕ್ಕೆ ಸೂಚಿಸಿತ್ತು.
ಈ ಬಗ್ಗೆ ಇಂದು ತೀರ್ಪು ಪ್ರಕಟಿಸಿರುವ ಏಕಸದಸ್ಯ ಪೀಠ ಹಿಂದೆ ಸ್ಥಳಿಯ ನ್ಯಾಯಾಲಯ ನೀಡಿದ್ದ ವೈದಿಕರ ಪೂಜೆ,ದಕ್ಷಿಣೆ ಸ್ವೀಕಾರದ ತಾತ್ಕಾಲಿಕ ಅನುಮತಿಯನ್ನು ರದ್ದು ಮಾಡಿದೆ. ರಾಮಚಂದ್ರಪುರಮಠ ಮತ್ತು ಉಪಾದಿವಂತ ಮಂಡಳಿ ಪರವಾಗಿ ಈ ಹಿಂದಿನ ಸ್ಥಳೀಯ ನ್ಯಾಯಾಲಯಗಳ ಆದೇಶವನ್ನು ರದ್ದು ಮಾಡಿ ದೇವಾಲಯದ ಪೂಜೆ, ದಕ್ಷಣೆ ಸ್ವೀಕಾರ ಸೇರಿದಂತೆ ಎಲ್ಲಾ ಹಕ್ಕುಗಳೂ ಮಠ ಮತ್ತು ಉಪಾದಿವಂತ ಮಂಡಳಿಯ ಸ್ವಾಧೀನದ ಹಕ್ಕು ಎಂದು ಆದೇಶಿಸಿದೆ.


ಇದರಿಂದಾಗಿ ಗೋಕರ್ಣದ ಹಕ್ಕು, ಜವಾಬ್ಧಾರಿಗಳ ವಿಚಾರದಲ್ಲಿ ರಾಮಚಂದ್ರಪುರಮಠ ಮತ್ತು ಉಪಾದಿವಂತಮಂಡಳಿ ಬಿಟ್ಟು ಸಾಂಪ್ರದಾಯಿಕ ವೈದಿಕರಿಗೆ ಇಲ್ಲಿ ಯಾವ ಅವಕಾಶವೂ ಇಲ್ಲ ಎಂದು ನ್ಯಾಯಾಲಯ ಸ್ಪಸ್ಟಪಡಿಸಿದಂತಾಗಿದೆ.
