ಆಗಷ್ಟೇ ಕೆ.ಎಂ. ಮಂಜುನಾಥ್ ಈ ಟಿ.ವಿ.ಯ ಸಾರಥ್ಯ ವಹಿಸಿಕೊಂಡಿದ್ದರು. ಅವರು ಈ ಟಿ.ವಿ.ಯ ಮುಖ್ಯಸ್ಥರಾದ ಮೇಲೆ ಈ ಟಿ.ವಿ.ಯ ಬಹುತೇಕ ಹಳೆಚಪ್ಪಲಿ, ದಾಡಿವಾಲಾ ವರದಿಗಾರರು ದಾಡಿ ತೆಗೆದು, ಬಗಲಚೀಲ ಬಿಸಾಡಿ, ಹೊಸಕಾಲದ ಪತ್ರಕರ್ತರಾಗತೊಡಗಿದ್ದರು.
ಬಹುಶ: ನಮ್ಮ ಟೀಂ ಆಗ ಹೊಸ ಹೊಂತುಗಾರರ ತಂಡವಾಗಿತ್ತು. ಇದಕ್ಕಿಂತ ಮೊದಲು ಮನೋಹರ್ ಯಡವಟ್ಟಿ ಎನ್ನುವ ಪುಣ್ಯಾತ್ಮ ನಮ್ಮ ತಂಡವನ್ನು ಈ ಟಿ.ವಿ. ಅಂಗಳಕ್ಕೆ ಸೇರಿಸಿದ್ದರು. ಯಡವಟ್ಟಿಯವರು ಕಲೆಹಾಕಿದ್ದ 2000 ದ ಹೊಸತಲೆಮಾರಿನ ಪತ್ರಕರ್ತರನ್ನು ಈಗಿನ ಅವಧಿಯ ಜಿ.ಎನ್. ಮೋಹನ್ ತಿದ್ದುವ ಮಧ್ಯೆ ಆ ಕೆ.ಎಂ. ಮಂಜುನಾಥರೆಂಬ ಕನಸುಗಾರ ನಮ್ಮ ಅಶಿಸ್ತಿನ ಹಳೆ ಪತ್ರಿಕೋದ್ಯಮದ ಜಾಯಮಾನವನ್ನೇ ಬದಲಿಸಿದ್ದರು.
ಇಂಥ ಕೆ.ಎಂ. ಎಂ. ಒಂದು ದಿನ ಹುಬ್ಬಳ್ಳಿಯಲ್ಲಿ ಸಭೆ ನಡೆಸಿದವರು ಒಬ್ಬೊಬ್ಬರನ್ನೇ ಸಂದರ್ಶಿಸಿ, ನನ್ನ ಪಾಳಿ ಮುಗಿಯುವ ಮೊದಲೇ ಯುರೇಕಾ… ಎಂದು ಕೂಗಿಕೊಂಡರು.
ಹೀಗೆ ಮಂಜುನಾಥ ಕೂಗಿಕೊಳ್ಳುವ ಮೊದಲು ಅವರು ಪ್ರಧಾನಿಯಾಗಿದ್ದರು, ಅದೇ ನಿಮ್ಮ ಕನ್ನೇಶ್ ಸಂದರ್ಶಕರಾಗಿದ್ದರು!.
ಇಂಥದ್ದೊಂದು ಅಣಕು ಸಂದರ್ಶನ ನಡೆದ ನಂತರ ಯುರೆಕಾ ಎಂದು ಕೂಗಿಕೊಂಡ ಮಂಜುನಾಥ ಅರೆ ಕ್ಷಣದಲ್ಲಿ ಮಂಗಳೂರಿನಲ್ಲಿದ್ದ ಜಿ.ಎನ್. ಮೋಹನ್ ರಿಗೆ ಕರೆಮಾಡಿ ಮೋಹನ್ ನಾನು ಹುಡುಕುತಿದ್ದ ಹುಡುಗ ಸಿಕ್ಕಿದ್ದಾನೆ ಸರ್, ಎಂಥಾ ಆತ್ಮವಿಶ್ವಾಸ, ಭಾಷೆ, ಮ್ಯಾನರಿಸಂ ಥಥ್ ಈ ಹುಡುಗನನ್ನು ಜಿಲ್ಲೆಯಲ್ಲಿಟ್ಟುಬಿಟ್ಟಿದ್ದೀವಲ್ರೀ…. ಎಂದು ಮತ್ತೇನನ್ನೋ ಹೇಳಿ ಅಂದಿನ ಕೆಲಸ ಮುಗಿಸಿ, ಒಂದು ವಾರದೊಳಗೆ ಹೈದರಾಬಾದ್ ಗೆ ಬರುವಂತೆ ನನಗೆ ಆದೇಶಿಸಿ ಹೊರಟವರು. ಮತ್ತೆ ನಾನು ಹೈದ್ರಾಬಾದ್ ರಾಮೋಜಿ ಫಿಲಂ ಸಿಟಿ ಸೇರುವ ಹೊತ್ತಿಗೆ. ಮಧ್ಯ ಪ್ರದೇಶಕ್ಕೋ, ಉತ್ತರ ಪ್ರದೇಶಕ್ಕೋ ಚುನಾವಣಾ ಸುದ್ದಿ ಉಸ್ತುವಾರಿ ಹೊತ್ತು ಹೊರಟು ನಡೆದಿದ್ದರು.
ಮತ್ತೆ ಮಂಜುನಾಥ ಮರಳಿ ಬರುವ ಮುನ್ನ ನಾನು ಊರಿಗೆ ಹೊರಟಿದ್ದೆ. ಇದರ ಮಧ್ಯೆ ಅದೆಷ್ಟು ಮಳೆ, ಬಿಸಿಲು, ಶೀತ, ಉಷ್ಣ ಇವುಗಳ ನಡುವೆ ಬನವಾಸಿಯ ರವಿ ಮಂಗಳೂರು,ಸಿದ್ದು ಕಾಳೋಜಿಯಂಥ ಅನೇಕ ಹಿರಿಯ, ನಮ್ಮ ಓರಗೆಯ ಅದೆಷ್ಟು ಜನರ ಸ್ನೇಹ, ಸಂಬಂಧ ಇತ್ಯಾದಿ… ಇತ್ಯಾದಿ
ಹೀಗೆ ನಾನು ನೆನಪಿಸಿಕೊಳ್ಳುವಂತೆ ನನಗೆ ಹೈದರಾಬಾದಿಗೆ ಆಹ್ವಾನವಿಟ್ಟ ಮಂಜುನಾಥ ಹೆಂಡತಿಯನ್ನು ಅಪ್ಪ ಅಮ್ಮನ ಸುಪರ್ದಿಗೆ ಕೊಟ್ಟು ನೂತನ ವರ ಸೇನೆಗೆ ಮರಳಿದಂತೆ ನನ್ನನ್ನೊಯ್ದು ರಾಮೋಜಿ ಪಿಲ್ಮ್ ಸಿಟಿಗೆ ದೂಡಿದ ಮಂಜುನಾಥ ಅದೇ ವರ್ಷ ಈ ಟಿ.ವಿ. ಸಂಸ್ಥೆಯನ್ನೂ ಬಿಟ್ಟು ಹೊರನಡೆದುಹೋದರು. ಈ ಸಂದರ್ಭದಲ್ಲಿ ಇಷ್ಟರ ನಂತರ ನನಗೆ ಮಾದರಿಯಾಗಿ ಹತ್ತಿರದಲ್ಲಿ ಕಂಡವರು, ದೇವರಂತೆ ಆಗೀಗ ಪ್ರತ್ಯಕ್ಷರಾದವರು ರಾಮೋಜಿರಾವ್.
ಮೀಡಿಯಾ ಮೊಗಲ್ ಎಂದು ಕರೆಸಿಕೊಳ್ಳುವ ರಾಮೋಜಿರಾವ್ ಒಂದು ಡಜನ್ ಗಿಂತ ಹೆಚ್ಚು ವಾಹಿನಿಗಳು, ಇಷ್ಟೇ ಸಂಖ್ಯೆಯ ಸಮೂಹ ಸಂಸ್ಥೆಗಳನ್ನು ಕಟ್ಟಿದ್ದ ಮಹಾನ್ ಸಾಧಕ. ಈ ನಾಡು ಪತ್ರಿಕೆ, ನ್ಯೂಸ್ ಟೈಮ್ , ಮಾರ್ಗದರ್ಶಿ ಚಿಟ್ಸ್, ಮಹಾರಾಜಾ ಹೋಟೆಲ್ ಹೀಗೆ ಅವರ ಆಸಕ್ತಿ, ಅಭಿರುಚಿ, ಸಾಹಸ, ಸಾಧನೆ ಬರೆದರೆ ದೊಡ್ಡ ಕಾದಂಬರಿಯಾಗುವಷ್ಟು. ಇಂಥ ರಾಮೋಜಿರಾವ್ ಸೈಕಲ್ ನಲ್ಲಿ ಉಪ್ಪಿನ ಕಾಯಿ ಮಾರಿ ಶ್ರೀಮಂತನಾದ ಉದ್ಯಮಿ.
ಇದೇ ಕನ್ನಡದ ವಿಜಯ ಸಂಕೇಶ್ವರ ತನ್ನ ಪತ್ರಿಕೆ ಮಾಡುವ ಮೊದಲು ಮಲಿಯಾಳಂ ಮನೋರಮಾ ಮತ್ತು ಈ ನಾಡು ಪತ್ರಿಕೆಗಳ ಪ್ರಸಾರ, ಪ್ರಭಾವ ನೋಡಿ ಬಂದವರು. ಸಂಕೇಶ್ವರ ಪತ್ರಿಕೆ ನಡೆಸುವುದನ್ನು ಕೇಳಲು ಬಂದಿದ್ದರು ಎಂದು ರಾಮೋಜಿರಾವ್ ನಸುನಕ್ಕಿದ್ದರಂತೆ!
ಒಂದು ದಿನ ಅಂದಿನ ಬಿಹಾರ್ ಮುಖ್ಯಮಂತ್ರಿ ಲಾಲುಪ್ರಸಾದ ಯಾದವ್ ರಾಮೋಜಿ ಭೇಟಿಗೆ ಬಂದಿದ್ದಾಗ ಖುದ್ದು ರಾಮೋಜಿರಾವ್ ಅವರನ್ನು ಸ್ವಾಗತಿಸಿ ರಾಮೋಜಿ ಫಿಲ್ಮ ಸಿಟಿಯ ಸೊಬಗು ತೋರಿಸಿದ್ದರು. ಇಂಥ ರಾಮೋಜಿರಾವ್ ಮಾಧ್ಯಮದ ಶಿಸ್ತು, ನೀತಿ-ರೀತಿ. ನೀತಿ ಸಂಹಿತೆ ವಿಚಾರ ಬಂದಾಗ ಕಠಿಣರಾಗುತಿದ್ದರು. ತಮ್ಮ ಟಿ.ವಿ., ಪತ್ರಿಕೆಗಳಲ್ಲಿ ಮದ್ಯ, ಸಿಗರೇಟ್ ಸೇರಿದ ನಶೆಯ ವಸ್ತುಗಳ ಜಾಹೀರಾತಿಗೆ ನೋ ಎನ್ನುತ್ತಿದ್ದ ಧೀಮಂತ ರಾಮೋಜಿರಾವ್ ಹಣ ಗಳಿಸಲು ನನಗೆ ನನ್ನ ಬೇರೆ ಸಂಸ್ಥೆಗಳಿವೆ ಮಾಧ್ಯಮದ ಮೂಲಕ ನಾನು ಹಣ ಗಳಿಸುವ ದರ್ದಿಲ್ಲ ಎಂದು ನಿಷ್ಠೂರರಾಗುತಿದ್ದರಂತೆ!
ಈಗ ಸತ್ಯೋತ್ತರ ಕಾಲ. ಸತ್ಯ ಹುಸಿಯೆನಿಸಿಕೊಂಡು ಸುಳ್ಳು ಸತ್ಯ, ಸಿದ್ಧಾಂತವಾಗುತ್ತಿದೆ. ಆಗ ರಾಮೋಜಿರಾವ್ ಬದ್ಧತೆಯಿಂದ ಶ್ರಮದಿಂದ ಮಾಡಿದ ಸಾಧನೆಯನ್ನು ಇಂದು ಅಂಬಾನಿ, ಅದಾನಿ ಥರದ ಉದ್ಯಮಿಗಳು ಮ್ಯಾಜಿಕ್ ನಿಂದ ಸಾಧಿಸುತಿದ್ದಾರೆ. ಇದೇ ರಾಮೋಜಿರಾವ್ ಮತ್ತು ಅದಾನಿ, ಅಂಬಾನಿಗಳಿಗಿರುವ ವ್ಯತ್ಯಾಸ. ಈಗ ಅದೇ 2000 ದಶಕದ ರಾಮೋಜಿರಾವ್, ಅವರ ಸಂಸ್ಥೆಯೊಂದಿಗಿನ ನನ್ನ ಅನುಭವದ ಸ್ಮರಣೆ ಹುತ್ತದ ಇರುವೆಯಂತೆ ನನ್ನ ಮೆದುಳಿನಿಂದ ಬುಳುಬುಳನೆ ಹೊರಬಂದವೆಂದರೆ…. ನಟ ಚೇತನ್ ಮದ್ಯ, ಸಿಗರೇಟ್, ರಮ್ಮಿಯಂಥ ಉತ್ಫನ್ನ-ಆಟಗಳಿಗೆ ಪ್ರಚಾರ ನೀಡುವ ನಟ-ನಟಿಯರಿಗೆ ಆತ್ಮಸಾಕ್ಷಿ ಕಾಡುವುದಿಲ್ಲವೆ? ಎಂದು ಪ್ರಶ್ನಿಸಿದ್ದಾರೆ. ಚಿತ್ರರಂಗ ಅಫೀಮಿನ ಗಾಳಿಸುದ್ದಿ, ಸುಳಿಸುದ್ದಿಯಲ್ಲಿ ಮುಳುಗಿ ಅನೇಕರನ್ನು ಕಾಡುತ್ತಿರುವ ಸಂದರ್ಭದಲ್ಲಿ ಅಂದಿನ ರಾಮೋಜಿರಾವ್ ರಂತೆ ಜನಸಾಮಾನ್ಯರ ಅಂತರಂಗ, ಆತ್ಮಸಾಕ್ಷಿಯನ್ನು ಕೆಣಕಿದ್ದಾರೆ. ಈಗಲೂ ರಾಮೋಜಿರಾವ್ ರಂಥವರಿದ್ದಾರೆ ಎನ್ನಲು ಇಷ್ಟೆಲ್ಲಾ ನೆನಪಿನಾಳಕ್ಕೆ ಇಳಿಯಬೇಕಾಯಿತು. ನಮ್ಮಂಥವರೂ ಆತ್ಮಸಾಕ್ಷಿ, ಅಂತರಂಗದ ಕದ ತಟ್ಟದಿದ್ದರೆ ಇನ್ನೆಂಥ ಆಪತ್ತು ಭಾದಿಸುವುದೋ? – ನಿಮ್ಮ ಕನ್ನೇಶ್