ಹಿರಿಯ ರಾಜಕಾರಣಿಗಳು, ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಗಳು ಆದ ಪ್ರಮೋದ್ ಹೆಗಡೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ರಾಜ್ಯ ವಿಕೇಂದ್ರೀಕರಣಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಉ.ಕ. ಜಿ.ಪಂ. ಉಪಾಧ್ಯಕ್ಷರು, ನಾನಾ ಅವಧಿಗಳಲ್ಲಿ ಕಾಂಗ್ರೆಸ್, ಬಿ.ಜೆ.ಪಿ. ಜಿಲ್ಲಾ ವಕ್ತಾರರು, ಜಾತ್ಯಾತೀತ ಜನತಾದಳದ ಜಿಲ್ಲಾ ಅಧ್ಯಕ್ಷರೂ ಆಗಿ ಕೆಲಸ ಮಾಡಿದ್ದರು.
ಪ್ರಮೋದ್ ಹೆಗಡೆ ರಾಮಕೃಷ್ಣ ಹೆಗಡೆಯವರ ಕಾಲದ ಜನತಾದಳದ ಧುರೀಣರಾಗಿ ನಂತರ ಯಲ್ಲಾಪುರದಲ್ಲಿ ಸಂಕಲ್ಫಸಂಸ್ಥೆ ಸ್ಥಾಪಿಸಿ, ಕಲೆ, ಸಂಸ್ಕೃತಿಗಳಿಗೆ ನೀರೆರೆದಿದ್ದರು. ಈಗಿನ ಬಿ.ಜೆ.ಪಿ. ಸರ್ಕಾರದಲ್ಲಿ ಯಲ್ಲಾಪುರದವರೇ ಶಾಸಕರು, ಸಚಿವರು, ಯಲ್ಲಾಪುರದವರೇ ವಿ.ಪ.ಸದಸ್ಯರು ಮತ್ತೆ ಯಲ್ಲಾಪುರದವರೇ ಎರಡನೇ ನಿಗಮಮಂಡಳಿ ಸ್ಥಾನಮಾನ ದಕ್ಕಿಸಿಕೊಂಡಂತಾಗಿದೆ.
ಅನಂತ ಹೆಗಡೆ ಆಶೀಸರರೊಂದಿಗೆ ನಿಗಮ ಮಂಡಳಿಗೆ ಪ್ರಯತ್ನಿಸಿದ್ದ ಸಿದ್ಧಾಪುರದ ಕೆ.ಜಿ.ನಾಯ್ಕರನ್ನು ಹಿಂದೆ ಸರಿಸಿದ ಸಂಸದ ಅನಂತ ಹೆಗಡೆ ಮತ್ತು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅನಂತ ಆಶೀಸರ ಮತ್ತು ಪ್ರಮೋದ್ ಹೆಗಡೆ ಪರವಾಗಿ ಪತ್ರನೀಡಿ, ಲಾಬಿ ನಡೆಸಿದ್ದರು ಎನ್ನಲಾಗುತ್ತಿದೆ. ಅನಂತ ಆಶೀಸರರ ಜೀವವೈವಿಧ್ಯತಾ ಮಂಡಳಿ ಅಧ್ಯಕ್ಷತೆ ಆಯ್ಕೆ ತಡೆಹಿಡಿಯುವಂತೆ ವಿರೋಧ ವ್ಯಕ್ತಪಡಿಸಿದ ಬಿ.ಜೆ.ಪಿ.ಸ್ಥಳಿಯ ಪ್ರಮುಖರು ಪ್ರಮೋದ್ ಹೆಗಡೆ ವಿಚಾರದಲ್ಲಿ ಮುಗುಮ್ಮಾಗಿರುವುದು ವಿಶೇಶ ಎನ್ನಲಾಗಿದೆ.