

ದೇಶಭಕ್ತಿ, ರಾಷ್ಟ್ರೀಯತೆಯನ್ನು ಬಂಡವಾಳ ಮಾಡಿಕೊಂಡು ರಾಜಕೀಯ,ಆರ್ಥಿಕ, ಸಾಮಾಜಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಭಾರತೀಯ ಉಳ್ಳವರ ವರ್ಗಕ್ಕೆ ಅರ್ಧ ಶತಮಾನಕ್ಕಿಂತ ಹೆಚ್ಚಿನ ಚರಿತ್ರೆಯಿದೆ.


ಕರೋನಾ ಜಗತ್ತನ್ನು ಕಾಡಿಸತೊಡಗಿತಲ್ಲಾ ಆಗ ಒಬ್ಬ ಅರಾಜಕ ಮನಸ್ಥಿತಿಯ ವ್ಯಕ್ತಿ ಶಂಖಊದಿ,ಜಾಗಟೆ ಹೊಡೆಯಿರಿ, ದೀಪಬೆಳಗಿಸಿ ಎಂದು ಕರೆಕೊಟ್ಟನಲ್ಲ ಅದೇ ಸಮಯದಲ್ಲಿ ಚೀನಾ ಕರೋನಾ ಸಮರದ ಹೋರಾಟವನ್ನು ಮುಕ್ತಾಯಮಾಡುವ ಹಂತ ತಲುಪಿತ್ತು.
ಗಲಿಬಿಲಿಯಾದಾಗ ಚೀರಿಕೊಳ್ಳುವಂತೆ, ಶಬ್ಧಮಾಡುವಂತೆ ಪಲಾಯನದ ಉಪಾಯವನ್ನು ಪ್ರಯೋಗಿಸುವವನನ್ನು ಒಂದು ದೇಶದ ಗ್ರಾ.ಪಂ. ಅಧ್ಯಕ್ಷನನ್ನಾಗಿಯೂ ಜನ ಆಯ್ಕೆ ಮಾಡಲು ಇಷ್ಟಪಡುವುದಿಲ್ಲ ಆದರೆ ನಾಟಕದ ದೇಶಪ್ರೇಮ, ಬೂಟಾಟಿಕೆಯ ರಾಷ್ಟ್ರೀಯತೆ ಹುಚ್ಚರನ್ನು ಸೃಷ್ಟಿಸುವಂತೆ ನಾಯಕನನ್ನು ನಿರ್ಮಿಸುತ್ತದೆ. ಇದೂ ಈಗ ಭಾರತೀಯರಿಗೆ ಅರ್ಥವಾಗುತ್ತಿದೆ. ಆದರೆ ಅರ್ಥವಾಗದ ವಿಚಾರ ಒಂದಿದೆ.
ಕೆಲವು ತಿಂಗಳುಗಳ ಹಿಂದೆ ಚಿರಂಜೀವಿ ಎನ್ನುವ ಅಮಾಯಕ ಎನ್ನಬಹುದಾದ ಭರವಸೆಯ ಹುಡುಗ ಅಕಾಲದಲ್ಲಿ ನಿಧನರಾದರಲ್ಲ ಆಗ ಡ್ರಗ್ಸ್-ಗಾಂಜಾ ವಿಚಾರಗಳನ್ನು ಮಾಧ್ಯಮಗಳು ಮುನ್ನೆಲೆಗೆ ತರಲೇ ಇಲ್ಲ. ಯಾಕೆ ಗೊತ್ತಾ ಆಗ ಪ್ರಸ್ತುತವಾಗಿದ್ದ ಡ್ರಗ್ಸ್-ಗಾಂಜಾ ವಿಚಾರ ಮುನ್ನೆಲೆಗೆ ಬಂದಿದ್ದರೆ ……..ಅದರಿಂದ ಪುರೋಹಿತಶಾಹಿ ಮಾಧ್ಯಮಗಳಿಗೆ, ನವಟಂಕಿ ರಾಜಕಾರಣಿಗಳಿಗೆ ಲಾಭವಾಗುತ್ತಿರಲಿಲ್ಲ.
ಗಮನಿಸಿ, ಹಿಂದಿನ ತಿಂಗಳು ಇದೇ ಈಗಿನ ರಾಜ್ಯ ಸರ್ಕಾರದ ಕರೋನಾ ಕರ್ಮಕಾಂಡದ ವಿಚಾರ ಬೀದಿ ರಂಪವಾಗಿ ಯಡಿಯೂರಪ್ಪ ನೇತೃತ್ವದ ಸರ್ಕಾರದ ರಚನೆ, ಆನಂತರ ಆರೋಗ್ಯ ಸದನ ಸಮೀತಿ ಆಕ್ಷೇಪ, ಅದಕ್ಕೇ ತಳುಕು ಹಾಕಿಕೊಂಡ ಕಾರ್ಮಿಕ ಇಲಾಖೆಯ ಸಾವಿರಾರು ಕೋಟಿ ಅವ್ಯವಹಾರ ಇವೆಲ್ಲವುಗಳ ಮುಂದುವರಿದ ಭಾಗ ಮುಖ್ಯಮಂತ್ರಿಗಳ ಕುಟುಂಬ, ಪುತ್ರರ ಬಹುಕೋಟಿ ಬ್ರಷ್ಟಾಚಾರ. ಇವೆಲ್ಲ ಒಂದೊಂದಾಗಿ ಹೊರಬರತೊಡಗಿದ್ದವು. ಆಗ ದೊಡ್ಡ ಸುದ್ದಿಯಾದದ್ದು ಡ್ರಗ್ಸ್ ಮತ್ತು ಗಾಂಜಾ ವ್ಯವಹಾರ ಅದರ ಸುತ್ತ ತಿರುಗಿದ್ದು ಯಡಿಯೂರಪ್ಪ ಕುಟುಂಬದ ಆಪ್ತರು, ವಿರೋಧಿಗಳು!
ಈ ಮದರ್ ಇಂಡಿಯಾ ಕಾರ್ಯಾಚರಣೆ ಹಿಂದೆ ಯಡಿಯೂರಪ್ಪ ಕುಟುಂಬ, ಜಾತಿಯ ಆಪ್ತರಿದ್ದಾರೆ. ಸಿಕ್ಕಿಬೀಳುತಿದ್ದವರು ಯಾರದೋ ದಾಳವಾದವರು, ದಾಳಗಳಾಗುತ್ತಿರುವವರು ಅಲ್ಲಿಗೆ ಹಿಂದೂ ರಾಷ್ಟ್ರೀಯವಾದಿಗಳು, ಸ್ವಯಂ ಘೋಶಿತ ದೇಶಪ್ರೇಮಿಗಳು ಅಮಲುಸಹಿತವಾಗಿ, ಅಮಲುರಹಿತವಾಗಿ ಬೆಳಕಿಗೆ ಬರುತಿದ್ದಾರೆ. ಇಂಥ ಸಮಯದಲ್ಲೆಲ್ಲಾ ಧರ್ಮ, ರಾಷ್ಟ್ರೀಯತೆ, ದೇವರು, ದೀಪ, ಜಾಗಟೆ ಇವೆಲ್ಲವೂ ನಿಜ ಜೀವನದ ನಾಟಕ ಅನಿಸುತ್ತಿಲ್ಲವೆ? ಇದೂ ನಾಟಕಕಾರನ ಪ್ರಸಾಧನದಂತೆ ಅಂತಿಮ ಪರದೆ ಜಾರಿದ ಮೇಲಾದರೂ ಜಗತ್ತಿಗೆ ಕಾಣಲೇಬೇಕು. ಅಂದಹಾಗೆ ಆಡಳಿತ, ಪ್ರಭುತ್ವ, ಮಾಧ್ಯಮ ಸೇರಿದ ಅನೇಕ ಅಂಶಗಳು ಪುರೋಹಿತಶಾಹಿ, ಯಥಾಸ್ಥಿತಿವಾದಿ ಸಲಕರಣೆಗಳು ಎಂದದ್ದು ಅಂದಿನ ಕಾಂಗ್ರೆಸ್ ನ ಉಗ್ರ ಟೀಕಾಕಾರ ಮಿಸ್ಟರ್ ಪ್ರತಿಪಕ್ಷ ಲೋಹಿಯಾ.



