ಭಾರತದಲ್ಲಿ ಈಗ ಮೇಕ್ ಇನ್ ಇಂಡಿಯಾ ಘೋಷಣೆ ಹಾಗೂ ಸೇಲ್ ಇನ್ ಇಂಡಿಯಾ ವಾಸ್ತವ ನಡೆಯುತ್ತಿದೆ ಎಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್ ನ ದೀಪಕ್ ದೊಡ್ಡೂರು ಕಾಂಗ್ರೆಸ್ ಭಾರತ ಕಟ್ಟಿರುವ ಪಕ್ಷ ಬಿ.ಜೆ.ಪಿ. ಭಾಷಣದ ಜನತಾಪಕ್ಷ ಎಂದು ಲೇವಡಿ ಮಾಡಿದ್ದಾರೆ. ಸಿದ್ಧಾಪುರದ ಲಯನ್ಸ್ ಬಾಲಭವನದಲ್ಲಿ ನಡೆದ ಕಾಂಗ್ರೆಸ್ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ 60 ವರ್ಷ ಏನು ಮಾಡಿದೆ ಎಂದು ಪ್ರಶ್ನಿಸುವವರು ಈಗ ಆರು ವರ್ಷಗಳಲ್ಲಿ ಏನು ಪ್ರಗತಿ ಆಗಿದೆ ಎಂದು ವಿವರಿಸಬೇಕು ಎಂದರು.
ವೀಕ್ಷಕರಾಗಿ ಆಗಮಿಸಿದ್ದ ಕಾಂಗ್ರೆಸ್ ಮುಖಂಡ ಸತೀಶ್ ನಾಯ್ಕ ಮಾತನಾಡಿ ಕೆಲಸ ಮಾಡದ ಪ್ರಧಾನಿ, ಸಂಸದರು, ಶಾಸಕರನ್ನು ಸೋಲಿಸುವ ಮೂಲಕ ಬಿ.ಜೆ.ಪಿ. ಡೊಂಬರಾಟಕ್ಕೆ ಉತ್ತರ ನೀಡಬೇಕು ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಪ್ರತಿಷ್ಠೆ ಮಾಡದೆ ಸಂಘಟಿತ ಹೋರಾಟದ ಮೂಲಕ ಅರಾಜಕತೆಗೆ ಉತ್ತರ ನೀಡಬೇಕು ಎಂದರು.
ನಾಡಿನ ಜನರನ್ನು ಹಿಂಸಿಸುತ್ತಿರುವ ಸರ್ಕಾರಗಳನ್ನು ಕಿತ್ತೆಸೆಯಬೇಕು, ಸಿದ್ಧಾಪುರದ ಕಾಂಗ್ರೆಸ್ ಜಾಗವನ್ನು ಅಧಿಕಾರ ಬಳಸಿ ಕಬಳಿಸಿರುವ ಬಿ.ಜೆ.ಪಿ. ವಿರುದ್ಧ ಬೃಹತ್ ಹೋರಾಟ ಮಾಡಬೇಕು ಎಂದು ವಿ.ಎನ್. ನಾಯ್ಕ ಬೇಡ್ಕಣಿ ಹೇಳಿದರು.
ಕಾಂಗ್ರೆಸ್ ವೈಭವ ಹಾಳಾಗಿದ್ದು ಕಾಂಗ್ರೆಸ್ ಕಾಲೆಳೆತದಿಂದಲೇ ಎಂದು ಸಮರ್ಥಿಸಿದ ಮಾಜಿ ಅಧ್ಯಕ್ಷ ಹನುಮಂತ ನಾಯ್ಕ ಈಗಲೂ ಹಿಂದಿನಂತೆ ಜಿಲ್ಲೆಯ ಆರಕ್ಕೆ ಆರು ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲುವಂತೆ ಕಾರ್ಯಕರ್ತರು ಹೋರಾಟ ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ಕೆಲವು ಮುಖಂಡರು ಜೆ.ಡಿ.ಎಸ್. ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.