

ದೇಶ,ರಾಜ್ಯದಲ್ಲಿ ಕರೋನಾ ಹೆಚ್ಚುತ್ತಿರುವಂತೆ ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ರ ಗಣನೀಯ ಏರಿಕೆ ಸ್ಥಳಿಯರಿಗೆ ಎಚ್ಚರಿಕೆ ಗಂಟೆಯಾದಂತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳದಿಂದ ಹೊರಟ ಕರೋನಾ ಸೋಂಕಿತರ ಏರಿಕೆ ಕ್ರಮ ಹಳಿಯಾಳ, ಯಲ್ಲಾಪುರಗಳನ್ನು ಸುತ್ತಿ ಈಗ ಶಿರಸಿ-ಸಿದ್ಧಾಪುರದಲ್ಲಿ ಗಿರಕಿ ಹೊಡೆಯುತ್ತಿದೆ.
ಮಳೆ,ಶೀತದ ಪ್ರಮಾಣ ಹೆಚ್ಚುತ್ತಿರುವಂತೆ ಮಲೆನಾಡಿನಲ್ಲಿ ಕರೋನಾ ಆರ್ಭಟ ಜೋರಾಗಿದೆ. ಶಿರಸಿಯಲ್ಲಿ ಎರಡು ದಿವಸಗಳಲ್ಲಿ ನೂರು ಜನರು, ವಾರದಲ್ಲಿ ಎರಡುನೂರರ ಹತ್ತಿರ. ಸಿದ್ಧಾಪುರದಲ್ಲಿ ವಾರಕ್ಕೆ ನೂರು ಈ ವಾರದ ಎರಡು ದಿವಸಗಳಲ್ಲಿ 32 ಕರೋನಾ ಸೋಂಕಿತರು ಪತ್ತೆಯಾಗಿರುವುದು ಕೋವಿಡ್ ವಿಕೋಪಕ್ಕೆ ಸಾಕ್ಷಿಯಾಗಿದೆ.
ಸಿದ್ಧಾಪುರ, ಶಿರಸಿಗಳಲ್ಲಿ ಮೀನು ಮಾರುಕಟ್ಟೆ, ಪೊಲೀಸ್ ಠಾಣೆ, ತರಕಾರಿ ಮಾರುಕಟ್ಟೆ, ಸರ್ಕಾರಿ ಆಸ್ಫತ್ರೆ ಸೇರಿದಂತೆ ಜನನಿಬಿಡ, ಜನಸಂದಣಿಯ ಪ್ರದೇಶಗಳಲ್ಲೇ ಕೋವಿಡ್ ವೈರಾಣು ಸುತ್ತುವರಿಯುತ್ತಿರುವಂತಿದೆ. ಲಾಕ್ಡೌನ್ ಸಂಪೂರ್ಣ ತೆರವಿನ ನಂತರ ಜನರು ಸ್ವೇಚ್ಛೆಯಿಂದ ವರ್ತಿಸುವುದು, ಸಾಮಾಜಿಕ ಅಂತರ, ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಇರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಸಿದ್ಧಾಪುರ ಮೀನುಮಾರುಕಟ್ಟೆ, ಸರ್ಕಾರಿ ಆಸ್ಫತ್ರೆ ಆವರಣ, ಹೊಸಪೇಟೆ ಬಡಾವಣೆ ಸೇರಿದಂತೆ ಕೆಲವೆಡೆ ಸಾರ್ವತ್ರಿಕ ಪರೀಕ್ಷೆ, ಶುದ್ಧೀಕರಣ ಮಾಡುತ್ತಿರುವುದು ಕೋವಿಡ್ ಪರಿಣಾಮ. ಗ್ರಾಮೀಣ ಪ್ರದೇಶ, ನಗರ ಎನ್ನುವ ಭೇದವಿಲ್ಲದೆ ತಾಲೂಕು, ಜಿಲ್ಲೆ, ರಾಜ್ಯ, ದೇಶ, ವಿಶ್ವದಾದ್ಯಂತ ವಿಸ್ತರಿಸುತ್ತಿರುವ ಕೋವಿಡ್ ಇದೇ ತಿಂಗಳು ವಿಪರೀತ ಏರಿಕೆ ಕಾಣುವ ತಜ್ಞರ ವರದಿಗಳ ಸತ್ಯಜನತೆಗೆ ಎಚ್ಚರಿಕೆಯ ಗಂಟೆಯಾಗಬೇಕಾಗಿದೆ.
