ಕರೋನಾ ಅವಧಿಯಲ್ಲಿ ಆರೋಗ್ಯ ಇಲಾಖೆ, ಆರೋಗ್ಯ ಸಿಬ್ಬಂದಿಗಳ ಕಾರ್ಯ ಗುರುತರ. ಈ ಕಾರಣಕ್ಕೆ ಸಿದ್ಧಾಪುರದ ಪತ್ರಕರ್ತ ದಿವಾಕರ ನಾಯ್ಕ ತಮ್ಮ ಮಗ ಲಿಖಿತ್ ನ ಮೊದಲ ಹುಟ್ಟುಹಬ್ಬದ ನಿಮಿತ್ತ ವಾಜಗೋಡು ಪಂಚಾಯತ್ ವ್ಯಾಪ್ತಿಯ ಆಶಾಕಾರ್ಯಕರ್ತೆಯರನ್ನು ಅಭಿನಂದಿಸಿ, ಗೌರವಿಸಿ ಗೌರವಧನ ನೀಡಿದರು.
ಈ ಸಂಬಂಧ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತ ಸಮಾಜಮುಖಿ ಕನ್ನೇಶ್ ಆಶಾ ಕಾರ್ಯಕರ್ತೆಯರ ಅಪರಿಮಿತ ಕೆಲಸಕ್ಕೆ ಸರ್ಕಾರ ಅವರಿಗೆ ನೀಡುವ ವೇತನ, ಅನುಕೂಲ ಅಲ್ಪ. ಆದರೆ ಈ ಕರೋನಾ ಸೇನಾನಿಗಳ ಕೆಲಸ ಚರಿತ್ರೆ, ಇತಿಹಾಸದುದ್ದಕ್ಕೂ ನೆನಪಿನಲ್ಲಿ ಉಳಿಯುತ್ತದೆ ಎಂದರು. ದಿವಾಕರ ನಾಯ್ಕ ದಂಪತಿಗಳ ಕಳಕಳಿ ಪ್ರಯತ್ನ ಶ್ಲಾಘಿ ಸಿದ ಅವರು ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವವರನ್ನು ಗೌರವಿಸುವುದೆಂದರೆ ಅವರ ಕೆಲಸ ಪ್ರಶಂಸಿಸಿದಂತೆ ಎಂದು ವಿವರಿಸಿದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ದಿವಾಕರ ನಾಯ್ಕ ಮಗನ ಹುಟ್ಟುಹಬ್ಬದ ಕಾರಣಕ್ಕೆ ಉತ್ತಮ ಕೆಲಸಮಾಡುವುದನ್ನು ಅಭಿನಂದಿಸಲು ಇದೊಂದು ನೆಪದಂತೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಜಗೋಡು ಗ್ರಾ.ಪಂ. ಮಾಜಿ ಅಧ್ಯಕ್ಷ ಕೃಷ್ಣ ಮೂರ್ತಿ ನಾಯ್ಕ ಐಸೂರು ಮಾತನಾಡಿ ಬೇರೆ ಪ್ರದೇಶದ ಆಶಾ ಕಾರ್ಯಕರ್ತೆಯರಿಗಿಂತ ಈ ಭಾಗ, ಈ ತಾಲೂಕಿನ ಆಶಾ ಕಾರ್ಯಕರ್ತೆಯರು ಮಂಗನ ಖಾಯಿಲೆಗೆ ಹೆಚ್ಚುವರಿ ಕೆಲಸ ಮಾಡಿ ದಣಿಯುತ್ತಾರೆ. ನಮ್ಮ ತಾಲೂಕಿನ ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ತಕ್ಕ ಗೌರವ-ಧನ ಸಿಗಬೇಕಿದೆ ಎಂದರು. ನಯನಾ ದಿವಾಕರ ಆಶಾ ಕಾರ್ಯಕರ್ತೆಯರಿಗೆ ಅರಿಶಿಣ ಕುಂಕುಮ ನೀಡಿ ಅಭಿನಂದಿಸಿದರು.