

ಬದುಕನ್ನು ಪ್ರೀತಿಸುವುದೆಂದರೆ ನೋವನ್ನು_ದಾಟುವುದಷ್ಟೇ! ನಿಜ ರಂಗಮ್ಮ ಹೊದೇಕಲ್ಲರವರು ನೋವುಗಳನ್ನು ದಾಟುತ್ತಾ ದಾಟುತ್ತಾ, ದಾಟಿದವುಗಳನ್ನೇ ಹೃದ್ಯವಾಗಿ ಪದ್ಯವಾಗಿಸುತ್ತಿರುವ ಪರಿ ಬೆರಗು ಮೂಡಿಸುತ್ತದೆ. ಚಿಟಿಕೆಯಷ್ಟು ಪ್ರೀತಿಗಾಗಿ ಬೊಗಸೆ ತುಂಬಿಕೊಂಡು ನಿಂತಿರುವ ಜೀವಪರ ಸಂಗಾತಿಯ ಎರಡು ಸಾಲುಗಳು ತಡೆದು ನಿಲ್ಲಿಸಿ ಚಿಂತೆನೆಗ್ಹಚ್ಚುತ್ತವೆ, ಕಣ್ಣಿನ ಪೊರೆ ಹರಿದು ಹೊಸ ಲೋಕವನ್ನೇ ತೋರಿಸುತ್ತವೆ.
ಮಂದಿರ ಮಸೀದಿ ಚರ್ಚು ಎಲ್ಲವನ್ನೂ ದಾಟಿಕೊಂಡು, ಕೂಡಿ ಆಡಿ ಹಗುರಾಗುವ ಮಾನವೀಯ ಪಾಠ ಕಲಿಸುತ್ತವೆ. ನೋವ ನುಂಗಿ, ನಗುವ ಹೆರುವ ಇವರ ತಾಯಿಪ್ರೀತಿ, ಕವಿತೆಯೊಂದಿಗಿರುವ ಇವರ ಕರುಳಬಳ್ಳಿಯ ಸಂಬಂಧ ಅಂತಃಕರಣ ಜೀವಪ್ರೀತಿ ಪ್ರತಿ ಸಾಲುಗಳಲ್ಲಿ ತುಂಬಿ ತುಳುಕುತ್ತವೆ.
“ಪ್ರಭುವೇ ಮತ್ತೇನಿಲ್ಲ..” ಹೀಗೆ ಆರಂಭಿಸಿ ಕಟ್ಟಕಡೆಯವರ ಕುರಿತು ಕಾಳಜಿಯಿಟ್ಟುಕೊಂಡು ಕಕ್ಕುಲತೆಯಿಂದ ಬಲು ಆದ್ರ್ರತೆಯಿಂದ ಬರೆವ ರಂಗಮ್ಮ ಹೊದೇಕಲ್ಲರವರು ನಮ್ಮ ನಡುವಿನ ಸಂವೇದನಾಶೀಲ ಕವಯತ್ರಿ. ಬುದ್ಧನ ಪ್ರೀತಿ, ಅಕ್ಕ ಅಣ್ಣ ಅಲ್ಲಮರ ಬಯಲು, ಗಾಂಧೀಯ ಅಹಿಂಸೆ, ಅಂಬೇಡ್ಕರ್ ಸಮಾನತೆ ಈ ಎಲ್ಲ ತತ್ವಗಳ ಎಳೆಯನ್ನೇ ಎಳೆದುಕೊಂಡು ತಮ್ಮದೇ ಆದ ಒಂದು ಶೈಲಿಯಲಿ ತುಂಬಾ ಕಲಾತ್ಮಕವಾಗಿ ಹೊಸೆದು ಹುರಿಗೊಳಿಸಿ ಇಲ್ಲಿ ಸರಳಿಕರಿಸಿ ಸಂಕಲಿಸಿದ್ದಾರೆ. ಇಲ್ಲಿರುವ ಸಾಲುಗಳಷ್ಟೇ ಕಾಡುವುದಿಲ್ಲ, ರಂಗಮ್ಮರ ಕೈ ಬರಹವೂ ಸಹ ಅರೇಕ್ಷಣ ನಮ್ಮನ್ನು ನಿಲ್ಲಿಸಿ, ಬರೆದರೆ ಹೀಗೆಯೇ ಬರೆಯಬೇಕೆಂದು ಅಕ್ಷರಪ್ರೀತಿಯ ಹುಕಿ ಎಬ್ಬಿಸಿ ನಿದ್ದೆಗೆಡಿಸುತ್ತವೆ.
-ಕೆ. ವೀರಲಿಂಗನಗೌಡ,ಶಿರಸಿ

