

ಧಾರವಾಡದಲ್ಲಿ ಚಂಪಾರವರ ಮನೆಗೆ 1979 ರ ಮಧ್ಯೆ ಒಮ್ಮೆ ಭೇಟಿ ನೀಡಿದ್ದೆ .ಆಗ ತಾನೇ ಕೃಷಿ ಸಹಾಯಕ ನಿರ್ದೇಶಕನಾಗಿ ನರಗುಂದ ತಾಲೂಕಿಗೆ ಮೊದಲ ನೇಮಕಾತಿ ಆಗಿತ್ತು. ನವೋದಯ, ನವ್ಯ ಸಾಹಿತ್ಯದ ಓದು , ಸಾಹಿತಿಗಳ ನಡುವಣ ಸಂಘರ್ಷಗಳು ಮತ್ತು ಬಂಡಾಯದ ಮೊದಲ ಸಮ್ಮೇಳನದಲ್ಲಿ ಭಾಗಿಯಾಗಿದ್ದ ನನಗೆ ಧಾರವಾಡದಲ್ಲಿ ಗೊತ್ತಿದ್ದ ಹೆಸರು ಚಂಪಾ ಮಾತ್ರ. ಅಲ್ಲಿ ನಾನು ನನ್ನ ಸಾಹಿತ್ಯ ಪ್ರೀತಿ,ಓದು, ನವ್ಯ, ನವೋದಯಗಳ ಜಗಳದಲ್ಲಿ, ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಚಂಪಾರವರ ಭೇಟಿಯಾಗಿದ್ದನ್ನು ನಟರಂಗ, ಸಮುದಾಯದ ನಾಟಕಗಳನ್ನು ನೋಡಿರುವುದು ಇವುಗಳ ಬಗ್ಗೆ ಎಲ್ಲಾ ಮಾತನಾಡಿದೆ.
ಅವರು ಕೂಡಾ ಹಲವು ವಿಷಯಗಳ ಬಗ್ಗೆ ಮಾತನಾಡುತ್ತಾ ಈ ಪುಸ್ತಕ ಓದಿ ಎಂದು ನನಗೆ ಲೋಹಿಯಾರವರ Marx ,Gandhi and socialism ಓದಲು ಕೊಟ್ಟರು. ಅಂದು ಕನ್ನಡದ ಸಾಹಿತಿಗಳ ಮೇಲೆ ಲೋಹಿಯಾ ಪ್ರಭಾವ ಇದ್ದುದರಿಂದ ಅವರ ಮೂಲಕ ಲೋಹಿಯಾರವರ ಬಗ್ಗೆ ಓದಿದ್ದೆ. ತೇಜಸ್ವಿ ಅನುವಾದಿಸಿದ ಲೋಹಿಯಾರವರ ಬರಹ ಓದಿ , ಅವರ ವಿಚಾರಗಳಿಗೆ ಆಕರ್ಷಿತನಾಗಿದ್ದೆ.ಆದರೆ Marx ಬಗ್ಗೆ ಏನೂ ಗೊತ್ತಿರಲಿಲ್ಲ. ರಾಜಕೀಯದಲ್ಲಿ ಕಮ್ಯೂನಿಸ್ಟ್ ಪಕ್ಷ ಎಂಬುದೊಂದು ಇದೆ ಎನ್ನುವುದು ಕೂಡಾ ಪತ್ರಿಕೆಗಳಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಮಾಡಿದ ಪ್ರಸ್ತಾಪಗಳಿಂದ ಮಾತ್ರ ಗೊತ್ತಿತ್ತು.ಜನರಲ್ ವಿವಿಗಳಂತೆ ಸಮಾಜದ ಬದುಕಿನೊಂದಿಗೆ ತೊಡಗಿಕೊಂಡಿರದ ಕೃಷಿ ವಿವಿಯ ತಾಂತ್ರಿಕ ಜ್ಞಾನಕ್ಕೆ ಬಹಳಷ್ಟು ಸೀಮಿತವಾದ ವಿದ್ಯಾಭ್ಯಾಸವೂ ಅದಕ್ಕೆ ಕಾರಣವಾಗಿತ್ತು.ನಾನು ಚಂಪಾ ಕೊಟ್ಟ ಪುಸ್ತಕವನ್ನು ಶ್ರದ್ಧೆಯಿಂದ ಅಧ್ಯಯನ ಮಾಡಲಾರಂಭಿಸಿದೆ. ಅದರಲ್ಲಿ ಮಾರ್ಕ್ಸ್‌ರವರ ಹಲವು ಪುಸ್ತಕಗಳ ಪ್ರಸ್ತಾಪ ಮತ್ತು ಅವುಗಳಿಂದ ದೀರ್ಘ ಉಲ್ಲೇಖಗಳಿದ್ದವು. ನಂತರ ಈ ಉಲ್ಲೇಖಗಳಲ್ಲಿದ್ದ ಮಾರ್ಕ್ಸ್‌ರವರ ವಿಚಾರಗಳ ಬಗ್ಗೆ ಕಟುವಾದ ವಿಮರ್ಶೆಗಳಿದ್ದವು. ಆ ಪುಸ್ತಕವನ್ನು ಓದುತ್ತಾ ಹೋದಂತೆ ನನಗೆ ಮಾರ್ಕ್ಸ್‌ರವರ ಬರಹದ ಉಲ್ಲೇಖಗಳಲ್ಲಿರುವ ವಿಚಾರಗಳು ಸತ್ವ ಪೂರ್ಣವಾಗಿವೆ. ಅಲ್ಲಿಯವರೆಗಿನ ನನ್ನ ಗ್ರಾಮ ಜೀವನ,ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ, ಭಾರತದ ಇತಿಹಾಸಗಳ ಓದಿನಲ್ಲಿ ತಿಳಿದುಕೊಂಡ ವಿಷಯಗಳಿಗೆ ಬಹಳ ಹತ್ತಿರವಾಗಿದೆ ಎಂದೆನಿಸಿತು.
ಲೋಹಿಯಾರವರು ಮಾಡಿದ ವಿಮರ್ಶೆಗಳು ನನಗೆ ಆ ಉಲ್ಲೇಖಗಳಲ್ಲಿದ್ದ ಕೆಲ ಕಠಿಣ ವಿಚಾರಗಳನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ನೆರವು ನೀಡಿದವು. ಆದರೆ ಅವರ ವಿಮರ್ಶೆ ಸೆಳೆಯಲಿಲ್ಲ. ಅದು ಪೂರ್ವಾಗ್ರಹ ಪೀಡಿತವಾಗಿವೆ. ಅವರು ಉಲ್ಲೇಖಿಸಿರುವ ಮಾರ್ಕ್ಸ್‌ರವರ ವಿಚಾರಗಳನ್ನು ಪಕ್ಕಕ್ಕೆ ಸರಿಸಿದಂತೆ ಮಾಡಿದ್ದಾರಷ್ಟೇ ಎನ್ನಿಸಿತು.ಆ ನಂತರ ನಾನು ಮಾರ್ಕ್ಸ್‌ರವರ ಬಗ್ಗೆ ಪುಸ್ತಕಗಳನ್ನು ಹುಡುಕ ಲಾರಂಭಿಸಿದೆ .ನರಗುಂದದಲ್ಲಿ, ಧಾರವಾಡದಲ್ಲಿ ಅವೆಲ್ಲಿ ದೊರೆಯಬೇಕು ! ಹೀಗೆ ಹುಡುಕುತ್ತಿರುವಾಗ ಒಮ್ಮೆ ಕನ್ನಡ ಸಾಹಿತ್ಯದ ಪುಸ್ತಕಗಳನ್ನರಸಿ ನರಗುಂದ ಪುರಸಭೆಯ ಪುಸ್ತಕ ಭಂಡಾರಕ್ಕೆ ಭೇಟಿ ನೀಡಿದೆ. ಅಲ್ಲಿ six great philosophers ಎಂಬ ಅತಿ ಹಳೆಯ ಪುಸ್ತಕ, ಅದರಲ್ಲಿ ಯೂರೋಪಿನ ಲಾಕ್, ಹಾಬ್ಸ್,ಕಾಂಟ್, ಹೆಗೆಲ್ ಎಂಬ ಪ್ರಸಿದ್ಧ ವೈಜ್ಞಾನಿಕ ತತ್ವಶಾಸ್ತ್ರಜ್ಞರ ಹೆಸರುಗಳ ಜೊತೆಗೆ ಮಾರ್ಕ್ಸ್‌ನ ಹೆಸರು ಕಾಣಿಸಿತು. ಅದನ್ನು ಪಡೆದು ಮನೆಗೆ ಬಂದೆ. ಅದರಲ್ಲಿದ್ದದ್ದು ಮಾರ್ಕ್ಸ್‌ರವರ ಕಮ್ಯೂನಿಸ್ಟ್ ಮಾನಿಫೆಸ್ಟೋ . ಆದರೆ ಈ ಕಮ್ಯೂನಿಸ್ಟ್ ಎಂಬ ಬಗ್ಗೆ ಅಂದಿಗೆ ನನ್ನಲ್ಲಿ ಒಂದು ರೀತಿ ಪೂರ್ವಾಗ್ರಹ ಮೂಡಿತ್ತು.
ತೇಜಸ್ವಿ,ಲಂಕೇಶ್ ಮೊದಲಾದವರು ಲಂಕೇಶ್ ಪತ್ರಿಕೆಯಲ್ಲಿ ಮಾಡುತ್ತಿದ್ದ ವ್ಯಂಗ್ಯಗಳು ಅದಕ್ಕೆ ಕಾರಣ. ಆದ್ದರಿಂದ ತಕ್ಷಣ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಓದಲು ಮನಸ್ಸಾಗಲಿಲ್ಲ. ಲೋಹಿಯಾರವರ ಪುಸ್ತಕದಲ್ಲಿ ಹೆಚ್ಚು ದೀರ್ಘ ಉಲ್ಲೇಖಗಳಲ್ಲಿದ್ದ ಇತರ ಪುಸ್ತಕಗಳನ್ನು ಹುಡುಕಿದರೆ ಅವು ಸಿಗಲಿಲ್ಲ .ಆಗ ಆರಂಭವಾಗಿದ್ದ ಲಂಕೇಶ್ ಪತ್ರಿಕೆ ಚಿಕ್ಕ ಊರಾದ ನರಗುಂದದಲ್ಲೆಲ್ಲೂ ಕಾಣಿಸುತ್ತಿರಲಿಲ್ಲ. ಅದನ್ನು ಓದುವ ಕಾತರದಲ್ಲಿ ನರಗುಂದದಲ್ಲಿ ನಾನೇ ಪತ್ರಿಕೆಯ ಏಜೆಂಟ್ಆಗಿ ಹತ್ತು ಪತ್ರಿಕೆ ತರಿಸಿ ಮಾರತೊಡಗಿದೆ. ಪತ್ರಿಕೆಯ ಪ್ರಸಾರವನ್ನು ಐವತ್ತಕ್ಕೆ ಹೆಚ್ಚಿಸಿದೆ.ಈ ಮಧ್ಯೆ ಮೊದಲು ನವಲಗುಂದದಲ್ಲಿ, ನಂತರ ನರಗುಂದದಲ್ಲಿ ರೈತ ಚಳುವಳಿ ಚಿಮ್ಮಿ ಬೆಳೆಯಿತು. ಅದರ ಜೊತೆಗೂಡಿ ರೈತರ ಸಮಸ್ಯೆಗಳನ್ನು ಅಧ್ಯಯನ ಮಾಡತೊಡಗಿದ್ದೆ. ಹೋರಾಟದ ಕಾರಣಗಳನ್ನು ಅರಿಯತೊಡಗಿದಾಗ ಮುಂಬಯಿ, ಅಹಮದಾಬಾದ್‌ಗಳ ಹತ್ತಿ ಬಟ್ಟೆ ಕೈಗಾರಿಕೆಗಳು , ದೇಶದ ದೊಡ್ಡ ಹತ್ತಿ ವ್ಯಾಪಾರಿಗಳ ಪಾತ್ರ ಕಾಣತೊಡಗಿತ್ತು.ಅದೇ ಸಮಯದಲ್ಲಿ ಮಾರ್ಕ್ಸ್‌ರವರು ಎಂಗೆಲ್ಸ್‌ರವರ ಜೊತೆಗೂಡಿ ರಚಿಸಿದ ಮೊದಲ ಮುಖ್ಯ ವಿಶ್ಲೇಷಣೆ ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ ಓದಿದೆ. ಅದರ ವಿಶ್ಲೇಷಣೆ ಇಂದಿನ ಭಾರತದ ವಾಸ್ತವತೆಗೆ ಬಹಳ ಹತ್ತಿರ ಎನಿಸಿತು. ನಂತರ ಮಾರ್ಕ್ಸ್‌ರವರು ಕೃಷಿಯ ಬಗ್ಗೆ , ರೈತರನ್ನು ಬಲಿಕೊಟ್ಟು ಬಂಡವಾಳಶಾಹಿಗಳು ಬೆಳೆಯುವ ವಿಧಾನದ ಬಗ್ಗೆ, ಸರ್ಕಾರಗಳು ಅವರಿಗೆ ಸಹಕರಿಸುವ ಬಗ್ಗೆ ಬರೆದ ಬರಹಗಳನ್ನು ಓದಿದೆ.ಇದು ನನ್ನನ್ನು ಮಾರ್ಕ್ಸ್‌ವಾದಿಯಾಗಿಸಿತು.
ಇನ್ನೂ ಸರ್ಕಾರಿ ಅಧಿಕಾರಿಯಾಗಿರುವಾಗಲೇ ರೈತ ಚಳುವಳಿಯಲ್ಲಿ ಉತ್ಸಾಹದಿಂದ ಭಾಗವಹಿಸಿದೆ. ಹತ್ತಾರು ರೈತ ಸಭೆಗಳಲ್ಲಿ ನನ್ನ ಹೊಸ ತಿಳುವಳಿಕೆಯನ್ನು ಹಂಚಿಕೊಂಡೆ.ಕೆಲವು ತಿಂಗಳುಗಳ ನಂತರ ಲಂಕೇಶ್ ಪತ್ರಿಕೆಯಲ್ಲಿ ತೇಜಸ್ವಿಯವರು ಕಮ್ಯೂನಿಸ್ಟ್ ಪಕ್ಷದ ಬಗ್ಗೆ , ಅದು ದೇಶದ ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಒಂದು ಲೇಖನ ಮಾಲೆ ಬರೆದರು. ನಾನು ಆ ವೇಳೆಗಾಗಲೇ ಅಧ್ಯಯನ ಮಾಡಿದ್ದ ಮಾರ್ಕ್ಸ್‌ರವರ ಬರಹಳಲ್ಲಿ ರೈತರು,ಕೃಷಿ ಸಮಸ್ಯೆಗಳ ಬಗ್ಗೆ ಅಧ್ಯಯನ , ವಿಶ್ಲೇಷಣೆಗಳಿಗೆ ತೇಜಸ್ವಿಯವರ ಈ ಬರಹ ವಿರುದ್ಧವಾಗಿ ಕಂಡಿತು. ನನಗೆ ಪ್ರಿಯವಾದ ಸಾಹಿತಿಗಳಲ್ಲೊಬ್ಬರಾಗಿದ್ದ ತೇಜಸ್ವಿ ಹೀಗೆ ಬರೆದಿರುವುದು ಆಶ್ಚರ್ಯ ತಂದಿತು. ಇದೇನಿದು ? ಮಾರ್ಕ್ಸ್ ಅಷ್ಟು ಸ್ಪಷ್ಟವಾಗಿ ರೈತರ ಸಂಕಟಗಳ ಕಾರಣವನ್ನು ವಿವರಿಸಿರುವಾಗ ಭಾರತದ ಕಮ್ಯೂನಿಸ್ಟ್ ಪಕ್ಷ ಅದೇಕೆ ತಪ್ಪು ಮಾಡಿದೆ ಎಂದುಕೊಂಡು ಧಾರವಾಡದಲ್ಲಿ ಸಿಪಿಎಂ ಪಕ್ಷದವರಾರು ಎಂದು ಹುಡುಕಾಡಿದೆ. ಅವರಿಂದ ಸಿಪಿಎಂ, ಭಾರತದ ಬಗ್ಗೆ, ರೈತರ ಪರಿಸ್ಥಿತಿಯ ಬಗ್ಗೆ ಏನು ವಿಶ್ಲೇಷಣೆ ಮಾಡಿದೆ ಎಂಬ ಬಗ್ಗೆ ಪ್ರಕಟಣೆಗಳನ್ನು ಪಡೆದೆ. ಅದರಲ್ಲಿ ಸಿಪಿಎಂ ಕಾರ್ಯಕ್ರಮ ಎಂಬ ಕಿರು ಪುಸ್ತಿಕೆಯಲ್ಲಿ ರೈತರ ಪರಿಸ್ಥಿತಿಯ ಬಗ್ಗೆ ನೀಡಿದ ವಿವರಣೆಯಲ್ಲಿ ತೇಜಸ್ವಿಯವರ ಟೀಕೆಗಳಿಗೆ ಉತ್ತರ ದೊರಕಿತು.ತೇಜಸ್ವಿಯವರಿಗೆ ಮಾರ್ಕ್ಸ್‌ರವರ ಕೃಷಿ ಬಗೆಗಿನ ಬರಹಗಳು, ಸಿಪಿಎಂನ ಈ ಪುಸ್ತಿಕೆಗಳು ದೊರಕಿಲ್ಲ. ಅವರು ಲೋಹಿಯಾರವರ ಪುಸ್ತಕದಲ್ಲಿ ಇದ್ದ ವಿಮರ್ಶೆಗಳ ಆಧಾರದಲ್ಲಿ ಬರೆದಿದ್ದಾರೆ ಎಂದು ಸ್ಪಷ್ಟವಾಯಿತು.
ಆಗ ಸಿಪಿಎಂ ಸದಸ್ಯನಾಗಲು ತೀರ್ಮಾನಿಸಿದೆ.ಹೀಗೆ ಮಾರ್ಕ್ಸ್‌ರವರನ್ನು, ಕಮ್ಯೂನಿಸ್ಟ್ ಪಕ್ಷವನ್ನೂ ಪರಿಚಯಿಸಿ ನನ್ನ ಬದುಕಿನಲ್ಲಿ ಬಹು ದೊಡ್ಡ ತಿರುವಿಗೆ ಕಾರಣವಾಯಿತು , ಲೋಹಿಯಾರವರ ಹಾಗೂ ಲೋಹಿಯಾವಾದಿಗಳ ಬರಹ. ನಾನು ಚಂಪಾರವರಿಗೂ ಅಳುಕುತ್ತಾ ಈ ವಿಚಾರ ತಿಳಿಸಿ ಅವರ ಪುಸ್ತಕ ಹಿಂತಿರುಗಿಸಿದೆ . ಅವರಿಗೆ ಮೊದಲು ಏನು ಹೇಳಬೇಕೆಂದು ತಿಳಿಯಲಿಲ್ಲ. ಕೆಲ ಕ್ಷಣಗಳ ನಂತರ ಅವರು ನಾನು ಕೊಟ್ಟ ಪುಸ್ತಕ ನಿಮ್ಮನ್ನು ಹೊಸ ವಿಚಾರಗಳಿಗೆ ತಿರುಗಿಸಲು ಕಾರಣವಾಯಿತಲ್ಲ , ಅದೇ ಸಂತೋಷ ನನಗೆ ಎಂದರು.ಮುಂದೊಮ್ಮೆ ಆಗ ಅಡ್ವೊಕೇಟ್ ಜನರಲ್ ಆಗಿದ್ದ ರವಿವರ್ಮ ಕುಮಾರ್‌ರವರಿಗೆ ಈ ಪ್ರಸಂಗವನ್ನು ಹೇಳಿದಾಗ ಹೊಟ್ಟೆ ತುಂಬಾ ನಕ್ಕರು.
-ಜಿ.ಎನ್.ನಾಗರಾಜ್
