

ಮಲೆನಾಡು ಮಾತು-2292020-
ಅಕಾಲದಲ್ಲಿ ಸುರಿದ ಮಳೆ ಎಬ್ಬಿಸಿದ ಥಂಡಿ, ಚಳಿಗೆ ನಡುಗುತ್ತಾ ಜುಗಾರಿಕ್ರಾಸ್ ಬಳಿ ಬಂದ ಧರ್ಮಣ್ಣ ಏ.ಬಿ.ಬಿ. ಎಲ್ಡ್ ಚಾ ತರ್ಸ ಎಂದು ಬಿ.ಬಿ.ಗೆ ಹುಖುಂ ಹೊರಡಿಸಿದ. ಬಾರ ಮರಯ ಧರ್ಮಣ್ಣ ಈ ಕರೋನಾ ಪರೋನಾ ಅನ್ನದು ಜನ ಪುಕ್ಕಟ್ಟೆ ಚಾಪಾ ಕುಡಸ್ತ್ನಿ ಅಂದ್ರೂ ಬರದಿಲ್ಲ, ಅಂತದ್ರಕೆ ನೀನೇ ಬಿಲ್ ಕೊಟ್ಟು ಚಾ ಕುಡಸ್ತಿಯೆ ಅಂದ್ರೆ ಚಲೊದೆ ಬಿಡು ಎಂದು ಬಿ.ಬಿ. ಹುಸಿನಕ್ಕ.
ಕಡಿಗೆ ಪ್ಯಾಟೆ ಬದಿಗೆ ಕರೋನಾ ಜೋರ್ ಅಂತಲೋ ಮರಯ, ನಾನೂ ಅದು ಇದು ಅಂತ ಸಂತೆ ಮಾಡಬಕು ಅಂದವ ಈಗ ಹೊಗಲ, ಬ್ಯಾಡ ಅಂತ ವಿಚಾರಮಾಡಕಿಡ್ದಿನಿ ಆದ್ರೂ ಈ ಕರೋನಾ ಎಲ್ಲ ಹಾಳ್ ಮಾಡಬಿಟ್ತ ಎಂದು ಬಿ.ಬಿ. ತನ್ನ ಗೋಳಾಟ ಹೇಳಿದ.
ಅಷ್ಟೊತ್ತಿಗೆ ಬೈಕ್ ಮೇಲೆ ಬಂದ ಡಾ. ಈಶ್ವರ ಎಂಥದ್ರೋ ಹುಡ್ರ ಎಂದು ಕೆಣಕಿದ.
ಎಂಥದ್ರ ಮಳೆ, ಕರೋನಾ ಅದು ಇದು ಅಂತ ಮನೆಬಿಟ್ ಹೊರಗೆ ಬರನಿಲ್ಲಾಗಿತು ಈಗ ಈ ಬದಿಗೆ ಬಂದ್ ಹಿಂಗೆ ಮಾತಾಡಕಿಡದಿವು ಎಂದು ಧರ್ಮಣ್ಣ ಸಾರಿಸಿದ. ಕಡಿಗೆ, ಇನ್ ಒಂದು ತಿಂಗ್ಳ ಸೀರಿಯಸ್ ಐತಿ ಕರೋನಾ, ಕಡಿಗೆ ಗದ್ದೆಕೊಯ್ಲು, ಕೊನೆಕೊಯ್ಲು ಅಂಥ ದಿನ ಹೋಗಿದ್ ಗೊತಾಗದಿಲ್ಲ ನೋಡು ಅದ್ರಕೆ ನಮ್ ಪಂಚೈತಿ ಎಲೆಕ್ಷನ್ ಬೇರೆ ಬಂತು. ಧರ್ಮುಡ್ಗ ಒಂದ್ ಕೈ ನೋಡತಿಯನ ಎಂದು ಡಾಕ್ಟರ್ ಕಾಲೆಳೆದರು.
ಈಗಿನ ಉಸಾಪರಿನೇ ಮುಗಿಯದಿಲ್ಲ ಮತ್ತೆ ಎಲೆಕ್ಸನ್ನು ಅದು ಇದು ಅಂದ್ರೆ ಹೆಂಗಪ.. ಎಂಥದೂ ವಿಚಾರ ಹರಿಯದಿಲ್ಲ ಎಂದು ಧರ್ಮಣ್ಣ ಎಳೆದು ಮಾತು ನಿಲ್ಲಿಸಿದ. ಅಷ್ಟೊತ್ತಿಗೆ ಈ ಜಾಗಕ್ಕೆ ಬಂದ ಟಾರಿಪ್ಪಿ ‘ಅಲಾ ಅದೆಂಥದ ಭೂಸುಧಾರಣೆ ಕಾನೂನು ಅಂತೆ, ಎ.ಪಿ. ಎಂ.ಸಿ. ಅಂತೆ ಕಾಗೋಡು ಹೆಂಗ್ಯ ಮಾತಾಡದ್ರ್ಯು ನೋಡಿರನ ಟೀವಿನಾ ಎಂದು ಟಾರಿಪ್ಪಿ ಕಾಗೋಡು ತಿಮ್ಮಪ್ಪರ ಭಾಷಣವನ್ನು ಕೊಂಡಾಡಿದ.
ಹೌದಪ ಕಾಗೋಡು ಅಂದ್ರೆ ಕಾಗೋಡು, 90 ವರ್ಷ ಅವರಿಗೆ ಹೆಂಗೆ ಚಳಿ ಬಿಡಸದ್ರು ಒಂಬೊಬ್ಬರಿಗೆ ಗೊತ್ತಲ, ಮುಂಡೇಗಂಡ್ರು ಕೇಸರಿ ಬಾವುಟ ಹಿಡಿಯದು, ದನ ಹಿಡಿತುವು ಅಂತ ಹೋಗದು, ಅಂತರಲಾ ಮಾಡ ಕೆಲಸುಕೆ ನಮಗೆ ಈಗ ಬುಡುಕ ಬಂದೈತಿ, ಮೋದಿ ಅಂತೆ… ನಮ್ ಬಂಗಾರಪ್ಪ, ಗಣಪತ್ಯಪ್ಪ, ತಿಮ್ಮಪ್ಪ, ಲಿಂಗಪ್ಪ ಆಅಪ್ಪ, ಈ ಅಪ್ಪ ಅಂತ ಜನ ಸೇರ್ಸಿ ಆಗ ಕಾಗೋಡು ಹೋರಾಟ ಮಾಡಿದ್ದುಕೆ ನಮಗೆ ಒಂದ್ ಮೆಟ್ ಭೂಮಿ, ಹೊಲ ಮನೆ ಅಂಥ ಸಿಕ್ಕವ ಈಗ ಈ ದೇಶಪ್ರೇಮಿ ನನ್ಮಕ್ಲು ಇವನೆಲ್ಲಾ ಕಸಿಯಕ ಬಂದರೆ ಹಂಗಾಗೆ ದೆಲ್ಲಿಯಿಂದ ಹಳ್ಳಿವರಿಗೆ ಗಲಾಟೆ ನಡೆಯಕಿಡದೈತಿ ಗೊತೈತಲ ಎಂದು ಡಾಕ್ಟರ್ ಟಾರಿಪ್ಪಿಯನ್ನು ಹುರಿದುಂಬಿಸಿದರು.
ಹೌದ್ರಾ ಈ ಟಾರಿಪ್ಪಣ್ಣ, ಡಾಕ್ಟರು ಹೇಳದೆ ಸರಿ, ನಮ್ ಜನರೂ ಹಂಗೆ ಆಗಲೇ ಭೂಸುಧಾರಣ್ಯಗೇ ಭೂಮಿ ಕಂಡಿದ್ದು ಈಗ ಮತ್ತೆ ಇವೆಲ್ಲಾ ಕೈತಪ್ಪತವೆ ಅಂತೆ ಹೌದ್ರಾ ಎಂದು ನಾಗು ಗೊಂಡ ತನ್ನ ಆತಂಕವನ್ನೂ ಧ್ವನಿಯಾಗಿಸಿದ.
ಅಲ್ಲ… ದೇವರು, ದೇಶಪ್ರೇಮ ಅಂತ ನಮ್ ಬೀರಪ್ಪನ ಗುಡಿ ವರಿಗೂ ಬಂದ್ ಕೇಸರಿ ಟವಲ್ ಕೊಟ್ ನನ್ಮಕ್ಳು ಈನಮನಿ ನಮ್ ಜಮೀನು, ಮನಿಗೇ ಕೈಹಾಕ್ತರೆ ಅನ್ಕುನಿಲಾಗಿತ್ ನಾವು ಎಂದು ಮತ್ತೆ ಉಲಿದ ನಾಗು.
ಹೌದು, ಅರಣ್ಯ ಅತಿಕ್ರಮಣ ಅಂತ ರವೀಂದ್ರನಾಯ್ಕ ಮಾಡ್ತಾ ಇದ್ರಲ ಹೋರಾಟ ಅದಕ್ಕೆ 30 ವರ್ಷ ಅಂತ ಕಾಗೋಡು ಮೊನ್ನೆ ಶಿರಸಿಗೆ ಬಂದಿರು, ಕಡಿಗೆ ನಿನ್ನೆ ಮನ್ನೆ ಮತ್ತೆ ಕಾಗೋಡನ್ಯಗೆ ಭೂಸುಧಾರಣೆ ಕಾನೂನು ತಿದ್ದುಪಡಿ ವಿರುದ್ಧ ಹೋರಾಟ ಅಂತ ಕಾರ್ಯಕ್ರಮ ಮಾಡಿದ್ರು, ಹಂಗೆ ಬೆಂಗಳೂರಗೂ ಜನತಾ ಹೋರಾಟ ಅಂತ ಕಾರ್ಯಕ್ರಮ ಮಾಡ್ಯರೆ, ಬೆಂಗಳೂರಗೆ ರೈತ ಸಂಘ, ದಲಿತ ಸಂಘ ಎಲ್ಲಾ ಸೇರಿ ಪ್ರತಿಭಟನೆ ಮಾಡ್ಯರೆ, ದೆಲ್ಯಗೆ ಮೇಲ್ಮನೆಗೆ ಗಲಾಟೆ ಆಗೈತಿ, ಬೆಂಗಳೂರಗೂ ಜನ ಇದೇ ಭೂಸುಧಾರಣೆ, ಎಂ.ಪಿ.ಎಂ.ಸಿ. ಕಾನೂನು ಅಂತ ಗಲಾಟೆ, ಹೋರಾಟ ಶುರುಮಾಡ್ಯರೆ ಒಟ್ಟೂ ಕೇಸರಿ ಶಾಲ್ನ್ಯರಿಗೆ ಒಳಗೂ, ಹೊರಗೂ ಸರಿ ಗದ್ಯಮ್ಯರಂತಾತು ಎಂದು ಟಾರಿಪ್ಪಿ ನಕ್ಕು ಖುಷಿ ಹಂಚಿಕೊಂಡ.
ಹೌದ್ರಾ ಹತ್ತಿಪ್ಪತ್ತು ವರ್ಷದು ಹಿಂದೇ ಆಗಬೇಕಾಗಿದ್ದು ಈಗ ನಡಿಯಕಿಡದೈತಿ ನಮ್ಮ ಮನೆ, ಮಠ, ಮಾರಿ, ನಾವು ಬೀದಿಗೆ ಬಿದ್ದು ಧರ್ಮದು ಹೆಸರಗೆ ಯಾರ್ಯಾರಿಗಲ ಅಧಿಕಾರ ಕೊಟ್ಟಿವು ಅಂತ ಜನರಿಗೂ ತಿಳಿಯಕಿಡದೈತಿ ಹಂಗಾಗಿ ಈಗ ರೈತರು, ಹೊಸ ಹುಡ್ರು, ಎಲ್ಲಾ ಈ ಮೋದಿ, ಬಿ.ಜೆ.ಪಿ. ವಿರುದ್ಧ ತಿರುಗಿ ಬೀಳಕಿಡ್ದರೆ, ನಾವೂ ಇಲ್ಲಿ ಹಳ್ಳಿಹಳ್ಯಗೆ ದೇವರು, ದನ ಅದು, ಇದು ಹಂತ ಸುಳ್ಳು ಹೇಳಿ, ನಾಟ್ಕ ಮಾಡಿ ಚುನಾವ್ಣೆ, ರಾಜಕೀಯ ಮಾಡರ್ನ ಕೊಲರ್ ಹಿಡದು ಕೇಳಬಕು. ಏನ್ ಕಿಸ್ದಿರಪ ಈ ಇಪ್ಪತೈದ್ ವರ್ಷದಗೆ ಅಂತ ಕೇಳಬಕು ಆಗ ಎಲ್ಲಾ ಸರಿ ಆಕವೆ ಎಂದು ಡಾಕ್ಟರ್ ಪರಿಹಾರ ಹೇಳಿದರು. ಡಾಕ್ಟರ್ ಮಾತು, ಸಲಹೆ ಇಂದಿನ ಕಟ್ಟೆ ಪಂಚಾತ್ಕೆಯ ಠರಾವಾಗಿ ಸ್ವೀಕಾರವಾಯಿತು.
