

ಸಿದ್ದಾಪುರ.
ಅತಿವೃಷ್ಠಿಯಿಂದ ಹಾನಿಗೊಳಗಾದ ಕುಟುಂಬಗಳಿಗೆ ತುರ್ತು ಪರಿಹಾರ ನೀಡಲು ಲಯನ್ಸ ಇಂಟರನ್ಯಾಶನಲ್ ಸಂಸ್ಥೆ 317-ಬಿ. ಲಯನ್ಸ ಜಿಲ್ಲೆಗೆ ಆರ್ಥಿಕ ಸಹಾಯ ಒದಗಿಸಿದ್ದು ಈ ತಾಲೂಕಿನಲ್ಲಿಯೂ ಅರ್ಹ ಕುಟುಂಬಗಳಿಗೆ ಔಷಧಿ, ಅಗತ್ಯ ವಸ್ತು ಹಾಗೂ ದಿನಸಿ ವಸ್ತುಗಳ ಕಿಟ್ ನ್ನು ವಿತರಿಸಲಾಗುತ್ತಿದೆ ಎಂದು ಲಯನ್317-ಬಿ. ಜಿಲ್ಲೆಯ ಗವರ್ನರ್ ಡಾ|ಗಿರೀಶ ಕುಚನಾಡ ಹೇಳಿದರು.
ಅವರು ತಾಲೂಕಿನ ವಾಜಗೋಡ ಗ್ರಾಪಂ ಸಭಾಭವನದಲ್ಲಿ ಗ್ರಾಪಂ ವ್ಯಾಪ್ತಿಯ 20 ಕುಟುಂಬಗಳಿಗೆ ತುರ್ತು ಪರಿಹಾರದ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.
ಲಯನ್ ಸಂಸ್ಥೆ ಸೇವಾಕಾರ್ಯಗಳನ್ನು ಧ್ಯೇಯೋದ್ದೇಶವಾಗಿ ನಡೆಸಿಕೊಂಡು ಬಂದಿದ್ದು ಈ ಲಯನ್ಸ ಜಿಲ್ಲೆಯ 600 ಕುಟುಂಬಗಳಿಗೆ ಈ ನೆರವನ್ನು ನೀಡುತ್ತಿದೆ. ಇದೊಂದು ಚಿಕ್ಕ ಸಹಾಯವಾದರೂ ಕಷ್ಟಕ್ಕೊಳಗಾದ ಕುಟುಂಬಗಳಿಗೆ ಧೈರ್ಯ ತುಂಬುವ ಉದ್ದೇಶ ಇದರ ಹಿಂದಿದೆ. ಪ್ರತಿ ಸಂಸ್ಥೆಯ ಕಾರ್ಯದ ಹಿಂದೆ ಅದರ ಸದಸ್ಯರ ಪರಿಶ್ರಮವಿರುತ್ತದೆ. ಅದರಂತೆ ಲಯನ್ಸ ಸಂಸ್ಥೆಯಲ್ಲೂ ಸದಸ್ಯರ ಸಹಕಾರ, ಶ್ರಮದಿಂದ ಸೇವಾ ಕಾರ್ಯಗಳನ್ನು ನಡೆಸಲು ಸಾಧ್ಯವಾಗಿದೆ. ಈ ಕಾರ್ಯದ ಹಿದೆಯೂ ಅವರ ಮುತುವರ್ಜಿಯಿದೆ ಎಂದರು.
ಮಾಜಿ ಲಯನ್ ಗವರ್ನರ್ ಡಾ|ರವಿ ಹೆಗಡೆ ಹೂವಿನಮನೆ ಮಾತನಾಡಿ ಲಯನ್ಸ ಸಂಸ್ಥೆ ಈ ಹಿಂದೆಯೂ ಹಲವಾರು ಸಂಕಷ್ಠದ ಸಂದರ್ಭದಲ್ಲಿ ಅದಕ್ಕೆ ತಕ್ಷಣ ಸ್ಪಂದಿಸುತ್ತ ಬಂದಿದೆ.ಕೋವಿಡ್‍ನಿಂದ ಹಲವಾರು ಕುಟುಂಬಗಳು ಕಷ್ಟದಲ್ಲಿದ್ದು ಅದರ ಜೊತೆಗೆ ಅತಿವೃಷ್ಠಿಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಕಿರು ನೆರವು ನೀಡುವುದು ನಮ್ಮ ಪ್ರಯತ್ನವಾಗಿದೆ. ತಾಲೂಕಿನ ವಾಜಗೋಡ ಹಾಗೂ ಹಳ್ಳಿಬೈಲಿನ ಹಾನಿಗೊಳಗಾದ ಕುಟುಂಬಗಳಿಗೆ ತುರ್ತು ಪರಿಹಾರ ವಿತರಿಸಲಾಗುತ್ತಿದೆ. ಕೊವಿಡ್ ಸಂದರ್ಭದಲ್ಲಿ ಲಯನ್ಸ ಸಂಸ್ಥೆ ಸಾಕಷ್ಟು ನೆರವನ್ನು ನೀಡಿದೆ. ಜನರು ಕೊರೊನಾ ಕುರಿತಂತೆ ಜಾಗ್ರತೆ ವಹಿಸುವದು ಮುಖ್ಯವಾಗಿದೆ.ಎಂದರು.
ಸ್ಥಳೀಯ ಲಯನ್ಸ ಕ್ಲಬ್ ಅಧ್ಯಕ್ಷೆ ಶ್ಯಾಮಲಾ ರವಿ ಹೆಗಡೆ ಮಾತನಾಡಿದರು.
ವೇದಿಕೆಯಲ್ಲಿ ಲಯನ್ಸ ಕ್ಲಬ್ ನ ಪದಾಧಿಕಾರಿಗಳಾದ ನಾಗರಾಜ ದೊಶೆಟ್ಟಿ, ರಾಘವೇಂದ್ರ ಭಟ್ಟ ಸ್ವಸ್ತಿಕ್, ಪ್ರಶಾಂತ ಶೇಟ್ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ನಾಯ್ಕ, ಪಿ.ಡಿ.ಒ.ನಾಗೇಶ್ ಎಚ್.ಪಿ.ಮುಂತಾದವರಿದ್ದರು.
ಲ| ಜಿ.ಜಿ.ಹೆಗಡೆ ಬಾಳಗೋಡ ನಿರೂಪಿಸಿದರು.
ಆಶಾ ಕಾರ್ಯಕರ್ತೆಯರ ಮನವಿ
ಸಿದ್ದಾಪುರ.
ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಜುಲೈ ಕೊನೆಯ ವಾರದಲ್ಲಿ ನಡೆಸಿದ ಪ್ರತಿಭಟನೆ ವೇಳೆ ಶೀಘ್ರದಲ್ಲೇ ಬೇಡಿಕೆಗಳ ಈಡೇರಿಕೆಗೆ ಭರವಸೆ ದೊರಕಿತ್ತು. ಆದರೆ 50 ದಿನಗಳು ಕಳೆದರೂ ಸರಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ಆರ್ಥಿಕ ಸಂಕಷ್ಠದಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಅವರ ನ್ಯಾಯೋಚಿತ ಬೇಡಿಕೆಗಳನ್ನ ಸರಕಾರ ಈಡೇರಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಆಶಾ ಕಾರ್ಯಕರ್ತೆಯರು ಸರಕಾರಕ್ಕೆ ಮನವಿ ಸಲ್ಲಿಸಿದರು.
ಆರೋಗ್ಯ ಇಲಾಖೆಯ ಯೋಜನೆಗಳ ಅನುಷ್ಠಾನದಲ್ಲಿ ಸಕ್ರೀಯರಾಗಿರುವ ಮತ್ತು ಕೋವಿಡ್ 19 ನಿಯಂತ್ರಣದಲ್ಲಿ ಮುಂಚೂಣಿ ಯೋಧರಾಗಿ ಕಾರ್ಯನಿರ್ವಹಿಸಿದ ಆಶಾ ಕಾರ್ಯಕರ್ತೆಯರ ಆರ್ಥಿಕ ಸ್ಥಿತಿ ಕಷ್ಟದಲ್ಲಿದೆ. ನಮ್ಮ ಕೆಲಸಕ್ಕೆ ತಕ್ಕ ಹಣ ದೊರೆಯುತ್ತಿಲ್ಲ. ಕಾರ್ಯಕರ್ತೆಯರಿಗೆ ಬರಬೇಕಾಗಿರುವ ಪೂರ್ತಿ ಗೌರವಧನ ಈವರೆಗೆ ಬಂದಿಲ್ಲ. ದುಡಿತ ಮಾತ್ರ ಇದೆಯೇ ವಿನ: ಪ್ರತಿಫಲವಿಲ್ಲ. ದಿನೇ ದಿನೇ ಹೆಚ್ಚುತ್ತಿರುವ ಆರ್ಥಿಕ ತೊಂದರೆಯಿಂದ ಆಶಾ ಕಾರ್ಯಕರ್ತೆಯರ ಕುಟುಂಬವೂ ಸಮಸ್ಯೆ ಎದುರಿಸಬೇಕಿದೆ. ನಮಗೆ ದೊರೆಯಬೇಕಿದ್ದ ಸರಕಾರದ ಅನುದಾನವೂ ಸಮರ್ಪಕವಾಗಿ ಮತ್ತು ವೇಳೆಗೆ ಸರಿಯಾಗಿ ದೊರಕುತ್ತಿಲ್ಲ. ನಮಗೆ ಸೇವೆಗೆ ತಕ್ಕ ಗೌರವಧನ ಮತ್ತು ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಸರಕಾರ ಕೂಡಲೇ ಮುಂದಾಗಬೇಕು. ಹೋರಾಟ ನಡೆಸುವದು ಅನಿವಾರ್ಯ ಎನ್ನುವದು ವಿಷಾದದ ಸಂಗತಿಯಾಗಿದ್ದು ಸೆ.23ರಂದು ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ಹೋರಾಟ ನಡೆಸಲಿದ್ದಾರೆ. ಸರಕಾರ ಕೂಡಲೇ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ತಹಸೀಲದಾರ ಮಂಜುಳಾ ಭಜಂತ್ರಿಯವರಿಗೆ ಮನವಿ ನೀಡಲಾಯಿತು. ತಾಲೂಕ ಸಂಘಟನೆಯ ಪ್ರಮುಖರಾದ ಹಾಲಮ್ಮ ಪಿ.ನಾಯ್ಕ,ಸೀತಾ ವಿ.ನಾಯ್ಕ,ಶೋಭಾ ಟಿ.ನಾಯ್ಕ, ಲೀಲಾವತಿ ಮಡಿವಾಳ, ಗೀತಾ ಬಡಗಿ, ವಿಜಯಾ ಎ.ನಾಯ್ಕ ಗೀತಾ ಚಲುವಾದಿ ಇದ್ದರು.

