ಬಡಜೀವ ಭವ್ಯಜೀವ ಕಟ್ಟಿಕೊಂಡ ಪಯಣ ಈ ಹಾದಿಗಲ್ಲು

ಶ್ರೀ ಕೆ.ಎ. ದಯಾನಂದ ಅವರ ಆತ್ಮವೃತ್ತಾಂತದ ಮೊದಲ ಚರಣ ‘ಹಾದಿಗಲ್ಲು’ ಎಂಬ ಶೀರ್ಷಿಕೆಯಲ್ಲಿ ಮುದ್ರಣಗೊಂಡು ಬಿಡುಗಡೆಗೆ ಸಿದ್ಧವಾಗಿದೆ. ನಾನು ಅವರ ಹಾದಿಗಲ್ಲಿನ ಪಯಣದಲ್ಲಿ ೬ ವರ್ಷದ ಸ್ನೇಹ ಫಲವನ್ನುಂಡವನು. ಜೊತೆಗೆ ಈ ಪುಸ್ತಕದ ಕರಡು ತಿದ್ದುವಿಕೆಯ ಕೆಲಸವನ್ನು ನಿರ್ವಹಿಸಿದ್ದರಿಂದ ಪುಸ್ತಕದ ಮುಖಪುಟದೊಂದಿಗೆ ನನ್ನದೊಂದಿಷ್ಟು ಅನಿಸಿಕೆಗಳನ್ನು ಸಹೃದಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಶ್ರೀಯುತರು ಗುಮಾಸ್ತ ಹುದ್ದೆಯಿಂದ ಐಎಎಸ್ ಹುದ್ದೆವರೆಗಿನ ದಾರಿಯ ಆಯ್ದ ಹಾದಿಗಲ್ಲುಗಳನ್ನು ಇಲ್ಲಿ ಸಂಗ್ರಹಿಸಿ ನೀಡಿದ್ದಾರೆ. ಕೃತಿಯ ಹೆಸರೇ ಹೇಳುವಂತೆ ಇದು ಅವರ ಜೀವನ ಪಯಣದ ಹಾದಿಗಲ್ಲು. ಹಾಗಂತ ನೆಟ್ಟ ಕಲ್ಲಲ್ಲ. ಚಲನಶೀಲವಾಗಿ ನೆಡುತ್ತಲೇ ಹೊರಟ ಕಲ್ಲು. ‘ಬಡಜೀವವೊಂದು ಭವ್ಯಜೀವವನ್ನು’ ಹೇಗೆ ಕಟ್ಟಿಕೊಳ್ಳಬಹುದು ಎಂಬುದಕ್ಕೆ ಉದಾಹರಣೆಯಾಗಿ ‘ಹಾದಿಗಲ್ಲು’ ಎದುರಾಗುತ್ತದೆ. ಹಳ್ಳಿ ಬದುಕಿನೊಂದಿಗೆ ಬಡತನ ಮತ್ತು ಜೀವಸಂಸ್ಕೃತಿ ಹೇಗೆ ಮುಖಾಮುಖಿಯಾಗುತ್ತದೆ ಎಂಬುದನ್ನು ಕೃತಿ ಓದಿಯೇ ತಿಳಿದುಕೊಳ್ಳಬೇಕು. ಯಾವುದಕ್ಕೂ ‘ಸಿದ್ದ’ರಾಗದ ಹೊರತು ‘ಸಿದ್ಧ’ರಾಗಲಾರೆವು ಎಂಬುದನ್ನು ದಯಾನಂದ್ ಅವರ ಬರಹ ಸಾಬೀತುಪಡಿಸುತ್ತದೆ.

ಹಳ್ಳಿ ಸಮುದಾಯಗಳ ಅನೂಹ್ಯವಾದ ಲೋಕವೊಂದು ‘ಹಾದಿಗಲ್ಲು’ ಕೃತಿಯಲ್ಲಿ ಅನಾವರಣಗೊಂಡಿದೆ. ಹಳ್ಳಿ ಬದುಕಿನ ದಟ್ಟ ಅನುಭವಗಳನ್ನು ಬಹುಸಂಸ್ಕೃತಿಯ ಆಳದಲ್ಲಿ ಬಹುವಾಗಿ ಕಾಡಿದ ಮತ್ತು ವಿಸ್ಮಯವಾಗಿ ಕಂಡಿದ್ದನ್ನೇ ಲೇಖಕರು ಇಲ್ಲಿ ಕಥನವಾಗಿಸಿದ್ದಾರೆ. ಹಳ್ಳಿ ಬದುಕಿನ ಜನರ ಸಂಪ್ರದಾಯ, ಹತಾಶೆ, ಬಡತನ, ಅಸಹಾಯಕತೆಗಳು ಪ್ರತಿ ಲೇಖನದಲ್ಲಿ ಹಾಸುಹೊಕ್ಕಾಗಿವೆ. ನಮ್ಮ ಹಿರಿಕರ ಬಡತನದ ಬದುಕು ಬವಣೆಯನ್ನು ತೆರೆದಿಡುವ ಜತೆಗೆ ಅವರ ಒಡಲಾಳದಲ್ಲಿ ಅಂತರ್ಗತವಾಗಿರುವ  ಸ್ವಾಭಿಮಾನವನ್ನು ಮುನ್ನೆಲೆಗೆ ತಂದು ನಿಲ್ಲಿಸಿರುವುದು ಲೇಖಕರ ಕಥನ ಶೈಲಿಯ ವೈಶಿಷ್ಟ್ಯತೆ. ಪದಪಾಂಡಿತ್ಯದ ಪ್ರದರ್ಶನಕ್ಕಿಳಿಯದೇ ಸಮುದಾಯದೊಳಗಿನ ಆಡುಭಾಷೆಯನ್ನೇ ಕಥನ ಶೈಲಿಯಾಗಿ ಬಳಸಿರುವುದು ಈ ಪುಸ್ತಕದ ಮತ್ತೊಂದು ವೈಶಿಷ್ಟ್ಯ. ನೇರ ನಿರೂಪಣೆಯ ತಂತ್ರ ಅನುಸರಿಸಿರುವುದು ವಿಶೇಷವಾಗಿ ಓದುಗರು ಕಾಣಬಹುದು. ಗ್ರಾಮೀಣ ಭಾಷೆ ಲೇಖನಗಳಲ್ಲಿ ಢಾಳಾಗಿ ಇರುವುದರಿಂದ ಪ್ರತಿ ಲೇಖನಕ್ಕೂ ಪ್ರಾದೇಶಿಕ ಸೊಗಡು ದಕ್ಕಿದೆ. ಆದರೆ ಓದಿನ ಓಘಕ್ಕೆ ಎಲ್ಲಿಯೂ ಅವು ತೊಡಕೆನಿಸುವುದಿಲ್ಲ. ಬದುಕಿನ ವಾಸ್ತವಗಳನ್ನು ಅತ್ಯಂತ ನೈಜ ನೆಲೆಯಲ್ಲಿ ಎದುರಿಸಬೇಕೆಂಬ ಶರಣರ ಖಚಿತ ನಿಲುವು ಹಾದಿಗಲ್ಲಿನುದ್ದಕ್ಕೂ ಕಾಣಬಹುದು. ಇಡೀ ಹಾದಿಗಲ್ಲು ಚಲನಶೀಲತೆಗೆ, ಹಳ್ಳಿ ಬದುಕಿನ ಜೀವಸಂಸ್ಕೃತಿಗೆ ಹಾಗೂ ಭಾರತೀಯ ಸಂದರ್ಭದ ಬಹುಸಂಸ್ಕೃತಿಯ ಅನುಸಂಧಾನಕ್ಕೆ ಪೂರಕವಾಗಿ ಕಟ್ಟಿಕೊಂಡಿದೆ. ತುಂಬಾ ವಿಭಿನ್ನವಾದ ಬದುಕನ್ನು ಅನಾವರಣಗೊಳಿಸಿದೆ. ಬಹಳಷ್ಟು ಲೇಖನಗಳನ್ನು ಓದುತ್ತಾ ಹೋದಂತೆ ನಮ್ಮದೇ ಬದುಕನ್ನು ಶ್ರೀ ದಯಾನಂದರು ಹೇಗೆ ಇಷ್ಟು ನಿಜವಾಗಿ ಚಿತ್ರಿಸಿದರು ಎಂದು ಓದುಗನಿಗೆ ಅನಿಸಿದರು ಆಶ್ಚರ್ಯವಿಲ್ಲ. ಜೀವನ ದೃಷ್ಟಿ ಬರೋದು ಜೀವನವನ್ನು ಅರಿತ ಮುತ್ಸದ್ದಿಗಳಿಂದ; ಅವರ ಜೀವನಾನುಭವದಿಂದ. ಹಾಗಾಗಿ ನೈಜ ನೆಲೆಯಲ್ಲಿ ‘ಹಾದಿಗಲ್ಲು’ ಆ ನಿಟ್ಟಿನಲ್ಲಿ ಕ್ರಮಿಸಬಹುದಾದ ಹಳ್ಳಿಯ ಬಡ ಮಕ್ಕಳಿಗೆ ಹಾಗೂ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ದಾರಿ ದೀವಿಗೆಯಾಗಲಿದೆ.

‘ಹಾದಿಗಲ್ಲು’ ಪುಸ್ತಕದ ಮುಖಪುಟದಲ್ಲಿ ಅವರೇ ಹೇಳಿಕೊಂಡಂತೆ ಇದು ಅವರ ಆತ್ಮವೃತ್ತಾಂತದ ಮೊದಲ ಚರಣ. ಅಂದಮೇಲೆ ಇನ್ನೊಂದಿಷ್ಟು ಚರಣಗಳಿವೆ ಎಂದಾಯಿತು. ಮತ್ತೆ ಲೇಖಕರ ಮಾತಿನಲ್ಲಿ ಒಂದು ಕಡೆ ಅವರು ಅದನ್ನು ಪುನರುಚ್ಚರಿಸಿ ಅನಿವಾರ್ಯ ಕಾರಣಗಳಿಂದಾಗಿ ಕೆಲವೊಂದನ್ನು ಇಲ್ಲಿ ಬರೆಯಲಾಗಿಲ್ಲ ಎಂದಿದ್ದಾರೆ. ಹಾಗಾಗಿ ಮುಂದಿನ ಚರಣದಲ್ಲಿ ಇಲ್ಲಿ ಬಿಟ್ಟು ಹೋದ ಸಂಗತಿಗಳು, ಸಂಗಾತಿಗಳು ಪ್ರಸ್ತಾಪಗೊಳ್ಳಬಹುದು. ‘ಹಾದಿಗಲ್ಲು’ ಮುದ್ರಣಗೊಂಡು ನಮ್ಮ ಕೈಸೇರಿ ೧ ವಾರವಾಯಿತಷ್ಟೇ. ಸರಿಹೊತ್ತಿಗಾಗಲೇ ಪ್ರೊ. ಪುರುಷೋತ್ತಮ ಬಿಳಿಮಲೆ ಅವರ ‘ಕಾಗೆ ಮುಟ್ಟಿದ ನೀರು’ ಕೃತಿ ಬಿಡುಗಡೆಗೊಂಡು ದಾಖಲೆ ಪ್ರಮಾಣದಲ್ಲಿ ಖರ್ಚಾಗಿ, ಓದುಗರಿಂದ ಒಳ್ಳೆಯ ವಿಮರ್ಶೆಗಳನ್ನು ಪಡೆದುಕೊಳ್ಳುತ್ತಿತ್ತು. ಈ ಹೊತ್ತಲ್ಲಿ ಹಾದಿಗಲ್ಲಿನ ೫೦೦ ಪ್ರತಿಗಳನ್ನು ಮಾತ್ರ ಮುದ್ರಿಸಲಾಗಿತ್ತು. ಹಾಗೆ ನೋಡಿದರೆ ಬಹುಶಃ ಅವರಿಗೆ ೨,೩,೪ನೇ ಮುದ್ರಣಗಳ ಕಲ್ಪನೆಯು ಕೂಡ ಇರಲಿಲ್ಲ. ಆದರೆ ಆಕಸ್ಮಿಕವಾಗಿ ಪುಸ್ತಕ ಬಿಡುಗಡೆಗೊಂಡ ವಾರದಲ್ಲಿಯೇ ೫ನೇ ಮುದ್ರಣ ಕಂಡಿದೆ ಎಂದು ಪ್ರಕಾಶಕರಾದ ಶ್ರೀ ರಾಧಾಕೃಷ್ಣ ಅವರು ತಿಳಿಸಿದ್ದಾರೆ. (ಪ್ರತಿ ಮುದ್ರಣದಲ್ಲಿ ೫೦೦ ಪ್ರತಿ). ‘ಹಾದಿಗಲ್ಲು’ ಕೃತಿಯ ಆರಂಭದ ಬರವಣಿಗೆಯ ಕಾಲದಿಂದಲೂ ನಾನು ಅದಕ್ಕೆ ಸಂಬಂಧಿಸಿದ ಒಂದಿಷ್ಟು ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಹಾಗಾಗಿ ಆ ಬಗ್ಗೆ ನಾನು ಹೆಚ್ಚು ಕುತೂಹಲಕಾರಿ. ಆಗಾಗ ಅವರೊಂದಿಗೆ ಇಲಾಖೆಯ ಕರ್ತವ್ಯದ ಹಿನ್ನೆಲೆಯಲ್ಲಿ ಬೆಂಗಳೂರು ಬಿಟ್ಟು ಅನ್ಯ ನಗರಗಳಿಗೆ ಪ್ರವಾಸ ಮಾಡಬೇಕಾದ ಸಂದರ್ಭದಲ್ಲಿ ಅವರು ತಮ್ಮ ಆಡಳಿತದ ಕೆಲವು ಅನುಭವಗಳನ್ನು, ಸ್ವಾರಸ್ಯಕರ ಘಟನೆಗಳನ್ನು ನಮಗೆ ಹೇಳುತ್ತಿದ್ದರು. ಹಾಗೆ ನೋಡಿದರೆ ಆರಂಭದಲ್ಲಿ ಈ ಪುಸ್ತಕದ ಮೊದಲ ಲೇಖನಗಳು ಕೇವಲ ಇವೆ ಮಾತ್ರ ಆಗಿದ್ದವು. ಆದರೆ ನಂತರ ಅದು ಅವರ ಬಾಲ್ಯ ಜೀವನದ ಕಡೆಗೆ  ಆಕಸ್ಮಿಕವಾಗಿ ಹೊರಳಿತಷ್ಟೆ. ಮಗನಿಗೆ ಏನು ಓದಿಸಬೇಕು ಎಂದೂ ಕೂಡ ಗೊತ್ತಿರದ ಕುಟುಂಬದ ಹುಡುಗ ಬೆಂಗಳೂರಿಗೆ ಬಂದು ಉದ್ಯೋಗದೊಂದಿಗೆ ಶಿಕ್ಷಣ ಕಲಿತು, ಸಹಪಾಠಿಯ ಪ್ರೇರಣೆಯಿಂದ ಕೆಎಎಸ್ ಅಧಿಕಾರಿಯಾಗಿ, ಐಎಎಸ್ ಪದವಿಗೆ ಬಡ್ತಿ ಪಡೆಯುವವರೆಗಿನ ಕಥನ ಜೀವನ ಈ ಹಾದಿಗಲ್ಲಿನಲ್ಲಿದೆ. ಮೇಲ್ನೋಟಕ್ಕೆ ಅದು ಅವರ ವ್ಯಕ್ತಿಗತ ಜರಿತ್ರೆ ಎನಿಸಿದರು ಕೂಡ ವಾಸ್ತವವಾಗಿ ಅದು ಹಳ್ಳಿ ಬದುಕಿನ ಚರಿತ್ರೆಯಾಗಿ ರೂಪುಗೊಂಡಿದೆ. ಈ ಹಿನ್ನೆಲೆಯಲ್ಲಿ “ಹರಿವ ನದಿಗೆ ಮೈಯೆಲ್ಲಾ ಕಾಲು! ಉರಿವ ಕಿಚ್ಚಿಗೆ ಮೈಯೆಲ್ಲಾ ನಾಲಿಗೆ! ಬೀಸುವ ಗಾಳಿಗೆ ಮೈಯೆಲ್ಲಾ ಕೈ” ಎಂಬ ಅಲ್ಲಮನ ಸಾಲುಗಳನ್ನು ಹಾದಿಗಲ್ಲು ಕೃತಿಯ ಬರವಣಿಗೆ ನೆನಪಿಸಿತು.

ಪುಸ್ತಕದಲ್ಲಿ ಬರುವ ಕೆಲವು ಪಾತ್ರಗಳ ಬಗ್ಗೆ ಓದುಗರು ಕರೆ ಮಾಡಿ, ಹೀಗೂ ಜೀವನ ಸೆವಸಿದವರು ನಮ್ಮ ಮಧ್ಯೆ ಇದ್ದಾರೆಯೇ ಎಂದು ಲೇಖಕರಿಗೆ ಆಶ್ಚರ್ಯದಿಂದ   ಕೇಳಿರುವುದುಂಟು. ಹುಚ್ಚಮ್ಮ, ರಾಮಾಚಾರಿ, ಅನುದೀಪನೆಂಬ ಆಶಾದೀಪ, ಮೇಲಾಧಿಕಾರಿ ಎಂದರೆ ಹೇಗಿರಬೇಕು, ಅಪರಿಚಿತೆ ಎಂಬ ಲೇಖನಗಳು ಓದುಗರಲ್ಲಿ ಶರಣರ ದಾಸೋಹ ಸಿದ್ದಾಂತವನ್ನು ನೆನಪಿಸುತ್ತವೆ. “ನಾನು ದುಡಿಯಬೇಕು ನಾವು ಉಣ್ಣಬೇಕು” ಎಂಬುದು ಆ ಲೇಖನಗಳ ಒಟ್ಟು ಸಾರಾಂಶ. ಸಾಮಾಜಿಕ ಕಾಳಜಿ ಮತ್ತು ಬದ್ಧತೆಯನ್ನು ಒಟ್ಟೊಟ್ಟಿಗೆ ವ್ಯಕ್ತಪಡಿಸಿವೆ. “ಈ ಜಗತ್ತಿನಲ್ಲಿರು, ಆದರೆ  ಜಗತ್ತಿನಲ್ಲಿರದಂತೆ ಬಾಳಲು ಪ್ರಯತ್ನಿಸು” ಎಂಬ ಸೂಫಿ ತತ್ವಗಳಡಿ ರೂಪುಗೊಂಡ ಪಾತ್ರಗಳಿವು. ಯಾಹೊತ್ತಿಗೂ ಕೂಡ ಈ ಪರಂಪರೆಯ ವಾರುಸುದಾರಿಕೆಯೊಂದು ಕನ್ನಡ ನೆಲದಲ್ಲಿ ಹರಿದುಕೊಂಡು ಬಂದೇ ಇದೆ. ಅದು ಪುಣ್ಯಕೋಟಿಯ ಕಾಲದಿಂದಲೂ ಸರಿ. ಮಳೆಯೆಂಬ ಮಹಾಮಾರಿ, ಮಂಗ ಕೋಳಿಯ ಕೊಲೆ, ನಾವು ಮತ್ತು ನಮ್ಮ ಕುರಿಗಳ ಓಟ, ಕರಿ ಎತ್ತು ಮುಂತಾದ ಲೇಖನಗಳು ಹಳ್ಳಿ ಜನರ ಬದುಕು ಬವಣೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿವೆ. “ಹಸಿವಾದೊಡೆ ಬಿಕ್ಷಾನ್ನಗಳುಂಟು, ತೃಷೆಯಾದೊಡೆ ಹಳ್ಳ ಬಾವಿಗಳುಂಟು, ಶಯನಕ್ಕೆ ಪಾಳು ದೇಗುಲಗಳುಂಟು” ಎಂಬ ಮಾತನ್ನು ಮೀರಿದ ಸ್ವಾಭಿಮಾನದ ಬದುಕು ಇಲ್ಲಿ ಅನಾವರಣಗೊಂಡಿದೆ. ಅದೇ ಈ ಹೊತ್ತಿನ ಪೀಳಿಗೆಯ ಕೊರತೆ ಎಂಬುದನ್ನು ಲೇಖಕರು ಮತ್ತೆ ಮತ್ತೆ ಸಾಬೀತುಪಡಿಸುತ್ತಾ ಹೋಗುತ್ತಾರೆ. ಆಡಳಿತ ವ್ಯವಸ್ಥೆಯೇ ಇರಲಿ ಇನ್ನೊಂದಿರಲಿ ಎಲ್ಲೆಡೆ ಗುರು ಶಿಷ್ಯ ಪರಂಪರೆ ಇದ್ದೆ ಇದೆ. ಆಡಳಿತಕ್ಕೆ ಸಂಬಂಧಿಸಿದ ಒಂದಿಷ್ಟು ಲೇಖನಗಳಲ್ಲಿ ದಾರಾಶಿಕೊ ಮತ್ತು ಸಮರ್ದ್ ರ ಅನುಸಂಧಾನದ ಬಗೆ ಹಾಗೂ ತಿಕ್ಕಾಟಗಳು ನೆನಪಿಗೆ ಬರುತ್ತವೆ. ಇನ್ನೊಂದಿಷ್ಟು ಲೇಖನಗಳು ಒರ್ವ ಅಧಿಕಾರಿ ಆಡಳಿತ ರಂಗದ ಮೂಲಕ ಜನತೆಗೆ ಸಲ್ಲಿಸಬಹುದಾದ ಗೌರವ ಸೇವೆಯ ಬಗ್ಗೆ ಆಶಾದಾಯಕ ಬೆಳವಣಿಗೆಯನ್ನು ಸೂಚಿಸುತ್ತವೆ. ಇದು ಈವರೆಗಿನ ಜನರ ತಪ್ಪು ಕಲ್ಪನೆಯನ್ನು ಸರಿಪಡಿಸುವ ಕೆಲಸ ಮಾಡಿದೆ. ಹಾಗೆ ನೋಡಿದರೆ ಆಡಳಿತ ವರ್ಗದವರಲ್ಲಿ ಈ ತರಹದ ಅನುಭವಗಳನ್ನು ಬರೆದವರು ವಿರಳಾತೀವಿರಳ. ಅದು ನಿವೃತ್ತಿಯಾದ ನಂತರದ ಬರವಣಿಗೆಯಾದರು ಕೂಡ ಅಷ್ಟೇ. ಬಹುಶಃ ಕನ್ನಡದ ಮಟ್ಟಿಗೆ ಶ್ರೀ. ಕೆ.ಎ ದಯಾನಂದ್ ಅವರು ವೃತ್ತಿಯಲ್ಲಿ ಇರುವಾಗಲೇ ಜೀವನಸ್ಮೃತಿ ಮತ್ತು ವೃತ್ತಿ ಬಗೆಗೆ ಬರೆದುಕೊಂಡು ಮೊದಲ ವ್ಯಕ್ತಿ ಆಗಿರಬಹುದು ಎನಿಸುತ್ತದೆ. ಹಾದಿಗಲ್ಲು ಹಳ್ಳಿ ಬದುಕಿಗೆ ಪರಿಭಾಷೆ ಎಂಬಂತೆ ರೂಪುಗೊಂಡಿದೆ. ಅದನ್ನು ಓದುತ್ತಾ ಹೋದಂತೆ ‘ಹಳ್ಳಿ’ ಎಂದರೆ ‘ಪರಿಪೂರ್ಣ ಜೀವನ ಮೌಲ್ಯ’ ಎಂಬ ಮಟ್ಟಿಗೆ ಬರಹ ಅನುಭವವನ್ನು ಓದುಗರಿಗೆ ದಕ್ಕಿಸುತ್ತದೆ. ಅಲ್ಲಿ ಏನುಂಟು ಏನಿಲ್ಲ. ಬಡತನ, ಹಸಿವು, ಹತಾಸೆ, ಹುಮ್ಮಸ್ಸು, ಸಹೋದರತ್ವ, ಅಸೂಯೆ, ತಮಾಷೆ, ಜೀವನ ಮಿಮಾಂಸೆ, ಕೃಷಿ, ಕಳ್ಳತನ, ಜಾತ್ರೆ, ಹಬ್ಬ-ಹರಿದಿನ ಹೀಗೆ ಇಡಿ ಹಳ್ಳಿಯ ಬದುಕನ್ನು ಒಂದಿಷ್ಟೇ ಲೇಖನಗಳಲ್ಲಿ ಕಟ್ಟಿಕೊಡಲಾಗಿದೆ. ಮನುಷ್ಯ ಸಂಬಂಧಿತ ನೆಲೆಯ ಎಲ್ಲಾ ಆಯಾಮಗಳನ್ನು ‘ಹಾದಿಗಲ್ಲು’ ಸ್ಪರ್ಷಿಸುತ್ತದೆ. ನಾನು ಕೂಡ ಹಳ್ಳಿಗಾಡಿನಿಂದ ಬಂದವನಾಗಿ ಮತ್ತು ಇಲ್ಲಿಗೆ ಬರುವ ಮುಂಚೆ ಒರ್ವ ಉಪನ್ಯಾಸಕನಾಗಿ ಕೆಲಸ ಮಾಡಿದ್ದರಿಂದ ಈ ಹಳ್ಳಿಗಾಡಿನ ಮಕ್ಕಳ ಬಗ್ಗೆ ಅದರಲ್ಲೂ ವಿಶೇಷವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಮನಸ್ಥಿತಿಯ ತೊಳಲಾಟವನ್ನು ಹತ್ತಿರದಿಂದ ಕಂಡಿದ್ದೇನೆ; ಅನುಭವಿಸಿದ್ದೇನೆ. ಬಹುಶಃ ದಯಾನಂದ್ ಅವರ ‘ಹಾದಿಗಲ್ಲು’ ಕೃತಿ ಆ ಮಕ್ಕಳಿಗೆ, ಅವರ ಮನಸ್ಸಿನ ತೊಳಲಾಟಗಳಿಗೆ ಉತ್ತರವಾಗಿ ಎದುರುಗೊಳ್ಳುತ್ತದೆ ಎಂದು ಖಚಿತವಾಗಿ ಹೇಳಬಲ್ಲೆ. ಅದೇ ಮಾದರಿಯ ಹುಡುಗನೊಬ್ಬ ಇಲ್ಲಿ ಹೇಗೆ ತನ್ನ ಬದುಕನ್ನು ಇದ್ದಿದರಲ್ಲಿಯೇ ಸ್ವಚ್ಚಂದವಾಗಿ ಕಟ್ಟಿಕೊಂಡ ಎಂಬುದನ್ನು ಕೃತಿ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದೆ ಮತ್ತು ಆ ದಿಶೆಯಲ್ಲಿ ಕ್ರಮಿಸಬಯಸುವ ಮನುಸ್ಸುಗಳಿಗೆ ಖಂಡಿತಾ ದಿಕ್ಸೂಚಿಯಾಗಿ ಅನುಸಂಧಾನಗೊಳ್ಳುತ್ತದೆ. ಹಾಗಾಗಿ ಈ ವರ್ಗದ ಮಕ್ಕಳು ಓದಲೇಬೇಕಾದ ಪುಸ್ತಕವಿದು. ಮೇಲಾಗಿ ಲೇಖಕರೆ ಇದನ್ನು ತನ್ನ ನುಡಿಯಲ್ಲಿ ಕೂಡ ಹೇಳಿಕೊಂಡಿದ್ದಾರೆ. ‘ಇದ್ದಿಲಿಗೆ ಚಿಗುರುವ ಹಕ್ಕಿಲ್ಲವೆಂದಲ್ಲ’ ಎಂಬ ಕವಿ ಮಾತಿಗೆ ಪುಸ್ತಕ ಬಂದು ನಿಂತಿದೆ. ಮೂಲತಃ ಪುಸ್ತಕ ೨ ಭಾಗಗಳ ಅನುಭವ ನೀಡುತ್ತದೆ. ಒಂದು ಅವರ ಜೀವನಘಟ್ಟದ ನಿರೂಪಣೆ ಎನಿಸಿದರೆ ಇನ್ನೊಂದು ಅವರ ಆಡಳಿತ ವೈಖರಿಯ ಅನುಭವ ಕಥನ. ಹಾಗೆ ನೋಡಿದರೆ ಜೀವನ ಕಥನದಷ್ಟು ಆಡಳಿತ ಕಥನ ನಿರೂಪಿಸಿಕೊಂಡಿಲ್ಲ. ಸಾಮಾನ್ಯವಾಗಿ ಆಡಳಿತ ವರ್ಗದವರ ಎಲ್ಲ ಬರವಣಿಗೆಗೂ ಈ ತೊಂದರೆ ಎದುರಾಗಿದೆ. ಇ-ಆಡಳಿತ ಅನುಷ್ಠಾನ, ಚುನಾವಣೆ ವಿಷಯ, ಸಹ್ಯಾದ್ರಿ ಉತ್ಸವದಂತಹ ಲೇಖನಗಳು ಸರ್ಕಾರಕ್ಕೆ ಒಪ್ಪಿಸಿದ ವರದಿಗಳಂತೆ ಕಂಡರು ಅವುಗಳಲ್ಲಿ ಬಳಕೆಯಾದ ಭಾಷೆಯ ಬಗ್ಗೆ ಎರಡು ಮಾತಿಲ್ಲ. ಬಹುಶಃ ಆಡಳಿತಾತ್ಮಕವಾಗಿ ಹೊಂದಿಕೊಂಡ ಅವರ ಮನಸ್ಥಿತಿ ಕೃತಿ ರಚನೆಯ ಸಂದರ್ಭದಲ್ಲೂ ಅದರಿಂದ ಹೊರಬಂದಂತೆ ಕಾಣುತ್ತಿಲ್ಲ. ಆದರೆ ಜೀವನ ಕಥನ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಮೈತೆಳೆದು ನಿಂತಿದೆ. ಪಂಪ ಪ್ರಸಿದ್ದಿಗೆ ಬರಲು ‘ಅತ್ತಿಮಬ್ಬೆ’ ಕಾರಣವೆಂಬುದು ತಿಳಿದೆ ಇದೆ. ಹಾಗಂತ ಪಂಪನ ಸಾಹಿತ್ಯ ಗಟ್ಟಿಯಾಗಿರಲಿಲ್ಲ ಎಂದಲ್ಲ. ಅದನ್ನು ಜನರಿಗೆ ತಲುಪಿಸಿದ ಕೀರ್ತಿ ಇವಳಿಗೆ ಸಲ್ಲುತ್ತದೆ. ಹಾಗೆಯೇ ದಯಾನಂದ್ ಅವರ ‘ಹಾದಿಗಲ್ಲು’ಕೃತಿ ಈ ಮಟ್ಟದಲ್ಲಿ ಒಳಹರಿವಿನ ಮೂಲಕ ಜನರಿಗೆ ತಲುಪಿ ೫ನೇ ಮುದ್ರಣ ಕಾಣುವಂತಾಗಿದ್ದು ಇದೇ ಮಾದರಿಯ ಕೆಲವು ‘ಅತ್ತಿಮಬ್ಬೆ’ ಎಂಬುವವರಿಂದ. ಪುಸ್ತಕದ ವಿಷಯ ವಸ್ತು ಓದಿ ಅವುಗಳನ್ನು ನಮ್ಮ ನಮ್ಮ ಭಾಗದ ಶಾಲೆಗಳಿಗೆ ಕಾಲೇಜುಗಳಿಗೆ ಉಚಿತವಾಗಿ ಕೊಡಬೇಕೆಂದು ನೂರಾರು ಪ್ರತಿಗಳನ್ನು ತರಿಸಿಕೊಂಡಿದವರಿದ್ದಾರೆ. ಹಾಗೇ ನೋಡಿದರೆ ಅವರು ಕರ್ತವ್ಯ ನಿರ್ವಹಿಸಿದ ಸ್ಥಳಗಳಿಂದ ಈ ಮಾದರಿಯ ಬೇಡಿಕೆ ಬರಬಹುದೆಂದು ಅವರು ನಿರೀಕ್ಷಿಸಿರಲಿಕ್ಕೆ ಉಂಟು. ಆದರೆ ಆಶ್ಚರ್ಯವೆಂದರೆ ಅವರೆಂದೂ ಕೆಲಸ ಮಾಡದ ಉತ್ತರ ಕರ್ನಾಟಕದಿಂದ ಪುಸ್ತಕಕ್ಕೆ ಅತಿಹೆಚ್ಚು ಬೇಡಿಕೆ ಸಲ್ಲಿಕೆಯಾಗುತ್ತಿರುವ ಬಗ್ಗೆ ಪ್ರಕಾಶಕರು ಮಾಹಿತಿ ಹಂಚಿಕೊಳ್ಳುತ್ತಾರೆ. ಇದೆ ಪುಸ್ತಕದ ಮುಖಪುಟದೊಂದಿಗೆ ಬರೆದ ನನ್ನದೊಂದಿಷ್ಟು ನುಡಿಗಳನ್ನು ಓದಿದ ಸುಮಾರು ಸ್ನೇಹಿತರು ಪುಸ್ತಕಗಳಿಗೆ ಬೇಡಿಕೆ ಇಟ್ಟಿದ್ದಾರೆ. ಬಹುಶಃ ಒಬ್ಬ ಲೇಖಕನ ಬರವಣಿಗೆಗೆ ಇದಕ್ಕಿಂತ ದೊಡ್ಡ ಮೌಲ್ಯ ಮತ್ತೊಂದಿದೆಯೇ…!!

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *