ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಮಂತ್ರಿ ಮಂಡಲದ ವಿರುದ್ಧ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ನಿರ್ಣಯದ ಪ್ರಸ್ತಾವದ ಚರ್ಚೆಯ ನಂತರ ಧ್ವನಿ ಮತದ ಮೂಲಕ ನಿರ್ಧಾರ ಕೈಗೊಳ್ಳಲು ವಿಧಾನ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಮಂತ್ರಿ ಮಂಡಲದ ವಿರುದ್ಧ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ನಿರ್ಣಯದ ಪ್ರಸ್ತಾವದ ಚರ್ಚೆಯ ನಂತರ ಧ್ವನಿ ಮತದ ಮೂಲಕ ನಿರ್ಧಾರ ಕೈಗೊಳ್ಳಲು ವಿಧಾನ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ವ್ಯಾಪಕವಾಗಿ ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಪಾಸಿಟಿವ್ ಬಂದಿರುವ ಶಾಸಕರನ್ನು ಸದನಕ್ಕೆ ಕರೆಸಲು ಸಾಧ್ಯವಿಲ್ಲದಿರುವ ಕಾರಣ ಮತದಾನಕ್ಕೆ ಅವಕಾಶವಿಲ್ಲ ಎಂದು ಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿದರು.
ಕೆಲವು ಸಚಿವರು ಹಾಗೂ ಶಾಸಕರು ಕೊರೊನಾ ಸೋಂಕಿಗೆ ಒಳಗಾಗಿ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದರಿಂದ ಅವಿಶ್ವಾಸ ನಿರ್ಣಯವನ್ನು ಮತ ವಿಭಜನೆಗೆ ಒತ್ತಾಯಿಸದೆ ಧ್ವನಿಮತದ ಮೂಲಕ ತೀರ್ಮಾನ ಕೈಗೊಳ್ಳಲು ವಿಧಾನಸಭೆಯಲ್ಲಿಂದು ಮತ ಸಮ್ಮತ ನಿರ್ಧಾರ ಕೈಗೊಳ್ಳಲಾಯಿತು. ಇಂದು ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಅವರು ಇಂದು ಸದನದಲ್ಲಿ ನಾಲ್ಕು ಮಸೂದೆಗಳ ಚರ್ಚೆ ಮತ್ತು ಅಂಗೀಕಾರವಾಗಬೇಕಾಗಿದೆ. ಹಾಗೆಯೇ ಮಹತ್ವದ ಅವಿಶ್ವಾಸ ನಿರ್ಣಯದ ಬಗ್ಗೆಯೂ ಚರ್ಚೆ ನಡೆಸಬೇಕಿದೆ ಎಂದಾಗ ಎದ್ದು ನಿಂತ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು, ನಾನು ಕಳೆದ ಗುರುವಾರ ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡಲದ ಮೇಲೆ ಈ ಸದನ ವಿಶ್ವಾಸ ಕಳೆದುಕೊಂಡಿದೆ ಎಂಬ ನಿರ್ಣಯವನ್ನು ಮಂಡಿಸಿದೆ ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದರು.
ಆಗ ಸಭಾಧ್ಯಕ್ಷರು ಕಾರ್ಯಕಲಾಪ ಪಟ್ಟಿಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆಯನ್ನು ಸೇರಿಸಲಾಗಿದೆ. ಮಧ್ಯಾಹ್ನದ ನಂತರ ಚರ್ಚೆಗೆ ಅವಕಾಶ ಕೊಡುತ್ತೇನೆ ಮೊದಲು ಮಸೂದೆಗಳನ್ನು ಅಂಗೀಕರಿಸೋಣ ನಂತರ ಮಧ್ಯಾಹ್ನ 3 ಗಂಟೆಗೆ ಅವಿಶ್ವಾಸ ನಿರ್ಣಯದ ಚರ್ಚೆಯನ್ನ ಕೈಗೆತ್ತಿಕೊಳ್ಳುತ್ತೇನೆ ಎಂದರು. ಆದರೆ ಕೊರೊನಾ ಸೋಂಕಿಗೆ ಒಳಗಾಗಿರುವ ಸದಸ್ಯರನ್ನು ಸದನಕ್ಕೆ ಬಿಡಲು ಅವಕಾಶವಿಲ್ಲ. ಪಿಪಿಇ ಕಿಟ್ ಧರಿಸಿ ಕೊರೊನಾ ಸೋಂಕಿತ ಶಾಸಕರನ್ನು ಸದನಕ್ಕೆ ಕರೆ ತರಲು ಅವಕಾಶ ನೀಡುವುದಿಲ್ಲ. ಹೀಗೆ ಮಾಡುವುದು ಸರಿಯಲ್ಲ. 25ಕ್ಕೂ ಹೆಚ್ಚು ಶಾಸಕರು, 6-7 ಸಚಿವರಿಗೆ ಕೊರೊನಾ ಪಾಸಿಟಿವ್ ಇದೆ. ಇವರನ್ನು ಸದನಕ್ಕೆ ಬಿಟ್ಟುಕೊಳ್ಳುವುದು ಸೂಕ್ತವಲ್ಲ. ಸದನದ ಘನತೆ, ಗೌರವ ದೃಷ್ಟಿಯಿಂದ ಈ ರೀತಿ ಪಿಪಿಇ ಕಿಟ್ ಧರಿಸಿ ಬರುವುದು ಸರಿ ಎನಿಸುವುದಿಲ್ಲ. ಹಾಗಾಗಿ ವಿರೋಧ ಪಕ್ಷದ ನಾಯಕರುಗಳು ಮತ ವಿಭಜನೆಗೆ ಒತ್ತಾಯಿಸದೆ ಸಹಕರಿಸಬೇಕು ಎಂದರು.
ಇದಕ್ಕೆ ದ್ವನಿಗೂಡಿಸಿದ ಕಾನೂನು ಸಚಿವ ಮಾಧುಸ್ವಾಮಿ, ವಿರೋಧ ಪಕ್ಷದ ನಾಯಕರು ಮತ ವಿಭಜನೆಗೆ ಒತ್ತಾಯಿಸುತ್ತೇನೆ ಎಂದು ಹೇಳಿದರೆ, ನಾವು ನಮ್ಮ ಸದಸ್ಯರನ್ನು ಒಟ್ಟುಗೂಡಿಸಬೇಕಾಗುತ್ತದೆ. ಸೋಂಕಿತರನ್ನ ಪಿಪಿಇ ಕಿಟ್ ಹಾಕಿ ಕರೆತರುವ ಅನಿವಾರ್ಯ ತೀರ್ಮಾನವನ್ನು ಕೈಗೊಳ್ಳಬೇಕಾಗುತ್ತದೆ. ಹಾಗಾಗಿ ವಿರೋಧ ಪಕ್ಷದ ನಾಯಕರು ಮತ ವಿಭಜನೆಗೆ ಒತ್ತಾಯಿಸದೆ ಧ್ವನಿ ಮತದಿಂದ ಈ ನಿರ್ಣಯದ ಪರವಾಗಿ ತೀರ್ಮಾನಕ್ಕೆ ಅವಕಾಶ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು. ಡಿಜೆ ಹಳ್ಳಿ ಗಲಭೆ ಬಗ್ಗೆ ನಿಯಮ 69ರ ಚರ್ಚೆಯೂ ಇದೆ. ಈ ವಿಚಾರವನ್ನು ಅವಿಶ್ವಾಸ ನಿರ್ಣಯದಲ್ಲಿ ಸೇರಿಸಿ ಮಾತನಾಡಬಹುದು. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಯಾವುದೇ ಮಿತಿ ಇಲ್ಲ. ನಾವು ಉತ್ತರ ಕೊಡುತ್ತೇವೆ. ಮಧ್ಯಾಹ್ನ 3 ಗಂಟೆ ನಂತರ ಚರ್ಚೆ ಕೈಗೆತ್ತಿಕೊಳ್ಳಲು ನಮ್ಮ ಅಭ್ಯಂತರವಿಲ್ಲ. ಆದರೆ ಮತ ವಿಭಜನೆಗೆ ಒತ್ತಾಯಿಸದೆ ವಿರೋಧ ಪಕ್ಷದ ನಾಯಕರು ಸಹಕರಿಸಬೇಕು ಎಂದು ಮತ್ತೊಮ್ಮೆ ಮಾಧುಸ್ವಾಮಿ ಅವರು ಮನವಿ ಮಾಡಿದರು. (kpc)