

ಸಿದ್ದಾಪುರ – 28 : ನಿವೃತ್ತ ಸೈನಿಕರ ಸಂಘ ಸಿದ್ದಾಪುರ ತಾಲೂಕಾ ಘಟಕಕ್ಕೆ ನಿವೃತ್ತ ಸೇನಾ ಸುಬೇದಾರ ಎಂ.ಆರ್. ನಾಯ್ಕ ಕೆಳಗಿನಸಶಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಉಪಾಧ್ಯಕ್ಷರಾಗಿ ಗೌರವ ಕ್ಯಾಪ್ಟನ್ ರಾಜೇಶ ನಾಯ್ಕ, ಕಾರ್ಯದರ್ಶಿಯಾಗಿ ನಾಯಬ್ ಸುಭೇದಾರ ಕುಮಾರ ಗೌಡರ್ ಸಿದ್ದಾಪುರ, ಜೊತೆ ಕಾರ್ಯದರ್ಶಿಯಾಗಿ ಸುಬೇದಾರ ಸಂತೋಷಕುಮಾರ ಅವರು ಆಯ್ಕೆ ಹೊಂದಿದ್ದಾರೆ.
ಈ ಸಂದರ್ಭದಲ್ಲಿ, ನಿವೃತ್ತ ಸೇನಾ ಸಿಬ್ಬಂದಿ, ವಿ.ಎಸ್. ಹೆಗಡೆ ಕಾನಗೋಡ (ಜಂಟೀ ನಿರ್ದೇಶಕರು ಕೈಗಾರಿಕಾ ಇಲಾಖೆ, ಹಾಸನ) ರವರ ನಿಧನಕ್ಕೆ ಸಂತಾಪ ಕೋರಲಾಯಿತು.

ಹಳ್ಳಿಬೈಲು : ಲಯನ್ಸದಿಂದ 80 ಕುಟುಂಬಗಳಿಗೆ ಪರಿಹಾರ ಕಿಟ್
ಸಿದ್ದಾಪುರ-28 : ತಾಲೂಕಿನ ಚಪ್ಪರಮನೆ ಸೋವಿನಕೊಪ್ಪ ಭಾಗದಲ್ಲಿ ಅತಿವೃಷ್ಠಿಯಿಂದ ಹಾನಿಗಳೊಗಾದ 80 ಕುಟುಂಬಗಳಿಗೆ ಬಟ್ಟೆ, ಔಷಧಿ ಮತ್ತು ಆರೋಗ್ಯ ರಕ್ಷಕ ಪರಿಕರ ಹಾಗೂ ದವಸಧಾನ್ಯಗಳನ್ನು ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ ಜಿಲ್ಲೆ 317 ರ ಪರವಾಗಿ ಸಿದ್ದಾಪುರ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಹಳ್ಳಿಬೈಲ್ ಸರಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ವಿತರಿಸಲಾಯಿತು.
ಲಯನ್ಸ್ ಜಿಲ್ಲಾ ಗವರ್ನರ್ ಡಾ. ಗಿರೀಶ ಕುಚ್ಚಿನಾಡ್ ಕಿಟ್ ವಿತರಿಸಿ ಮಾತನಾಡಿ – ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯು ಅತಿವೃಷ್ಠಿಯಿಂದ ಹಾನಿಗೊಳಗಾದವರಿಗೆ, ಆರ್ಥಿಕ ಸಹಾಯ ನೀಡಿದ್ದು, ಇದರೊಂದಿಗೆ ಲಯನ್ಸ್ ಜಿಲ್ಲೆಯ ಆರ್ಥಿಕ ನೆರವನ್ನು ಸೇರಿಸಿ 600 ಕುಟುಂಬಗಳಿಗೆ ಪರಿಹಾರ ಕಿಟ್‍ಗಳನ್ನು ವಿತರಿಸಲು ನಿರ್ಧರಿಸಿದ್ದು, ಸಿದ್ದಾಪುರ ತಾಲೂಕಿನಲ್ಲಿಯೂ ಸಹಕರಿಸಲಾಗಿದೆ. ಇದೊಂದು ತುರ್ತು ಪರಿಹಾರ ನೆರವಾಗಿದೆ. ಜನಸಮುದಾಯ ಕಷ್ಟದಿಂದ ಮೇಲೆ ಬರಲು ಸಾರ್ವಜನಿಕ ಸಹಯೋಗ ಅಗತ್ಯ ಎಂದರು.
ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ. ರವಿ ಹೆಗಡೆ ಹೂವಿನಮನೆ ಮಾತನಾಡಿ – ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ ವಿಶ್ವದ ಅನೇಕ ಕಡೆ ತುರ್ತು ಪರಿಹಾರ ಕಾರ್ಯಗಳಲ್ಲಿ ನೆರವಾಗಿದೆ. ಕೋವಿಡ್-19 ನೆರವಿಗಾಗಿ ಕೋಟ್ಯಾಂತರ ರೂಪಾಯಿಗಳ ನೆರವನ್ನು ನಮ್ಮ ದೇಶಕ್ಕೂ ನೀಡಿದೆ. ಆರೋಗ್ಯ ಹಾಗೂ ಶಿಕ್ಷಣ ಸೇವೆಗಾಗಿ, ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಸದಾ ಆರ್ಥಿಕ ಸಹಾಯವನ್ನು ನೀಡುತ್ತಿದೆ ಎಂದು ಹೇಳಿ ಪರಿಹಾರ ಕಿಟ್‍ಗಳನ್ನು ವಿತರಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ಯಾಮಲಾ ರವಿ ಹೆಗಡೆ ಹೂವಿನಮನೆ ಮಾತನಾಡಿ – ಆರೋಗ್ಯ ರಕ್ಷಣೆ ಮುಖ್ಯವಾದ ವಿಚಾರ. ಸ್ವಚ್ಛ ಪರಿಸರವನ್ನು ಕಾಯ್ದುಕೊಂಡು ಆರೋಗ್ಯ ನಿಯಮವನ್ನು ಪಾಲನೆ ಮಾಡಿಕೊಂಡು ಬರುವಂತೆ ಸೂಚಿಸಿ ನೆರವನ್ನು ವಿತರಿಸಿದರು.
ವೇದಿಕೆಯಲ್ಲಿ ಸಾಮಾಜಿಕ ಕಾರ್ಯಕರ್ತ ಗಜಾನನ ಹೆಗಡೆ ಮುಟ್ಟೇರ್ಮನೆ, ನ್ಯಾಯವಾದಿ ಎಂ.ಎನ್. ಹೆಗಡೆ, ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಚಂದ್ರು ನಾಯ್ಕ, ಸಾಮಾಜಿಕ ಕಾರ್ಯಕರ್ತ ಗಿರೀಶ ಶೇಟ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ನಾಗರಾಜ ಎಂ. ದೋಶೆಟ್ಟಿ, ಕೋಶಾಧ್ಯಕ್ಷ ಪ್ರಶಾಂತ ಡಿ. ಶೇಟ್ ಹಾಳದಕಟ್ಟಾ ಉಪಸ್ಥಿತರಿದ್ದು.
ಪ್ರೌಢಶಾಲಾ ಶಿಕ್ಷಕ ಗಣೇಶ ಹೆಗಡೆ ಸ್ವಾಗತಿಸಿ ನಿರೂಪಿಸಿದರು. ಜಿ.ಜಿ. ಹೆಗಡೆ ಬಾಳಗೋಡ ವಂದಿಸಿದರು.

