

ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ ಮತ್ತು ನಾಟಕಗಾರ ಪಿ. ಲಂಕೇಶ್ ನಾಡಿನ ಪ್ರಸಿದ್ಧ ಬರಹಗಾರರಲ್ಲಿ ಒಬ್ಬರಾಗಿದ್ದಾರೆ. ಅವರ ಲಿಖಿತ ಕೃತಿಗಳು ಶೀಘ್ರದಲ್ಲೇ ಆಡಿಯೊ ಪುಸ್ತಕಗಳಾಗಿ ಬದಲಾಗಲಿವೆ.

ಬೆಂಗಳೂರು: ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ ಮತ್ತು ನಾಟಕಗಾರ ಪಿ. ಲಂಕೇಶ್ ನಾಡಿನ ಪ್ರಸಿದ್ಧ ಬರಹಗಾರರಲ್ಲಿ ಒಬ್ಬರಾಗಿದ್ದಾರೆ.
ಪಿ. ಲಂಕೇಶ್ ಅವರ ಲಿಖಿತ ಕೃತಿಗಳು ಶೀಘ್ರದಲ್ಲೇ ಆಡಿಯೊ ಪುಸ್ತಕಗಳಾಗಿ ಬದಲಾಗಲಿವೆ ಎಂಬುದು ಓದುಗರಿಗೆ ಒಳ್ಳೆಯ ಸುದ್ದಿಯಾಗಿದೆ. ಯುವ ಪೀಳಿಗೆಗೆ ತಮ್ಮ ತಂದೆಯ ಕೆಲಸಗಳನ್ನು ತಲುಪಿಸುವ ನಿಟ್ಟಿನಲ್ಲಿ ಪುತ್ರ ಇಂದ್ರಜಿತ್ ಲಂಕೇಶ್ ಪ್ರಯತ್ನ ಮಾಡುತ್ತಿದ್ದಾರೆ.
ತಮ್ಮ ತಂದೆಯ ಕೃತಿಗಳು ಯಾವಾಗಲೂ ಸರ್ವತೋಮುಖವಾಗಿದ್ದು, ಯಾವುದೇ ಪೀಳಿಗೆಗೂ ಪ್ರಸ್ತುತವಾಗಲಿವೆ. ಡಿಜಿಟಲ್ ಮಾದರಿಯಲ್ಲಿ ಅವರ ಬರಹಗಳನ್ನು ಜೀವಂತವಾಗಿ ಇರಿಸುವ ಪ್ರಯತ್ನ ಮಾಡುತ್ತಿರುವುದಾಗಿ ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಮಹತ್ವದ ಪಾತ್ರ ವಹಿಸಿರುವ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.
ಪಿ. ಲಂಕೇಶ್ ಅವರ ಕಾದಂಬರಿ, ನಾಟಕಗಳು, ಕವಿತೆಗಳು ಸೇರಿದಂತೆ ಸುಮಾರು 20 ಪುಸ್ತಕಗಳನ್ನು ಬರೆದಿದ್ದಾರೆ. ಕಲ್ಲು ಕರಗುವ ಸಮಯ ಮತ್ತಿತರ ಕಥೆಗಳು, ಹುಳಿ ಮಾವಿನ ಮರ, ಸಂಕ್ರಾಂತಿ ಇವುಗಳಲ್ಲಿ ಹೆಚ್ಚಿನ ಜನಪ್ರಿಯ ಕೃತಿಗಳಾಗಿವೆ.ಈ 20 ಪುಸ್ತಕಗಳ ಪೈಕಿ 10 ಪುಸ್ತಕಗಳು ಈಗಾಗಲೇ ಡಬ್ ಆಗಿರುವುದಾಗಿ ಇಂದ್ರಜಿತ್ ಲಂಕೇಶ್ ಹೇಳುತ್ತಾರೆ.
ಉಳಿದ ಕೃತಿಗಳ ಡಬ್ಬಿಂಗ್ ಗಾಗಿ ಸ್ಯಾಂಡಲ್ ವುಡ್ ನ ಹಿರಿಯ ನಟರೊಂದಿಗೆ ಮಾತುಕತೆ ನಡೆಯುತ್ತಿದೆ. ಆ ಪಾತ್ರಕ್ಕೆ ಹೊಂದಿಕೆಯಾಗುವಂತಹ ಧ್ವನಿಗಾಗಿ ಹುಡುಕಾಟ ನಡೆಯುತ್ತಿದೆ. ಎಲ್ಲಾ ಆಡಿಯೋ ಬುಕ್ ಗಳು ಮೊಬೈಲ್ ಆ್ಯಪ್ ನಲ್ಲಿ ಉಚಿತವಾಗಿ ದೊರೆಯಲಿವೆ. ಪ್ರತಿಯೊಂದು ಕಥೆಯೂ 10 ನಿಮಿಷಗಳಿಗಿಂತ ಹೆಚ್ಚಿಗೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಲಂಕೇಶ್ ಅವರ ಕೃತಿಗಳು ಹಲವರ ಮೇಲೆ ಪ್ರಭಾವ ಬೀರಿದೆ. ಅವರ ಆತ್ಮಕಥೆ ಹುಳಿಮಾವಿನ ಮರ ಹಾಗೂ 12ನೇ ಶತಮಾನದ ಸಾಮಾಜಿಕ ಹರಿಕಾರ ಕ್ರಾಂತಿಕಾರಿ ಬಸವಣ್ಣ ಅವರ ಕುರಿತಾದ ಸಂಕ್ರಾಂತಿ ಅಚ್ಚುಮೆಚ್ಚಿನ ಕೃತಿಗಳಾಗಿವೆ ಎಂದು ಇಂದ್ರಜಿತ್ ಲಂಕೇಶ್ ಹೇಳುತ್ತಾರೆ.
ಈವರೆಗೂ ಅವರ ಕಲ್ಲು ಕರಗುವ ಸಮಯ, ಸಂಕ್ರಾಂತಿ ಎರಡು ಪುಸ್ತಕಗಳು ಮಾತ್ರ ಇಂಗ್ಲಿಷ್ ನಲ್ಲಿ ಅನುವಾದಗೊಂಡಿವೆ. ಆದಾಗ್ಯೂ, ಅನೇಕ ಕೃತಿಗಳು ತಮಿಳು ಹಾಗೂ ಹಿಂದಿ ಭಾಷೆಗೆ ಅನುವಾದಗೊಂಡಿರುವುದಾಗಿ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ. (kpc)
