

ಶಾಂತಿದೂತ ಗಾಂಧಿ ಜಗತ್ತಿನ ಬೆಳಕು. ಗಾಂಧಿ ಪರಿಚಯಿಸಿ,ಪ್ರತಿಪಾದಿಸಿದ ಸತ್ಯ, ಅಹಿಂಸೆ ಎಂದೆಂದೂ ಪ್ರಸ್ತುತ. ಗಾಂಧಿ ನೆನಪು, ಚಿತ್ರದೊಂದಿಗೆ ಸ್ಮರಣೆಗೆ ಬರುವ ಅವರ ಚಿತ್ರ ಸತ್ಯ, ಶಾಂತಿ,ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ಈ ಕಾರಣ, ಮಹತ್ವದ ಕಾರಣಗಳಿಗಾಗಿ ಗಾಂಧೀಜಿಯವರ ವೃತ್ತ- ಮೂರ್ತಿ ಎಲ್ಲೆಡೆ ಕಾಣುವ ಉಪಮೆ.
ಹೊರದೇಶ, ದೇಶ, ರಾಜ್ಯ,ಜಿಲ್ಲೆ, ತಾಲೂಕು,ಗ್ರಾ.ಪಂ. ಮಟ್ಟದ ವರೆಗೆ ಕಾಣುವ ಗಾಂಧಿ ಚಿತ್ರ, ಮೂರ್ತಿ, ವೃತ್ತ ಸಿದ್ಧಾಪುರದಲ್ಲೆಲ್ಲೂ ಕಾಣದಿರುವುದು ಈಗ ಚರ್ಚೆಯ ವಿಷಯವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಗಾಂಧೀಜಿಯವರ ನೆನಪಿಗಾಗಿ ಕಾರವಾರದ ಗಾಂಧಿಮಾರ್ಗದಲ್ಲಿ, ನಗರದ ವೃತ್ತವೊಂದರಲ್ಲಿ ಗಾಂಧೀಜಿ ಮೂರ್ತಿ ಸ್ಥಾಪಿಸಲಾಗಿದೆ.
1936 ರಲ್ಲಿ ಜಿಲ್ಲೆಗೆ ಬಂದಿದ್ದ ಮಹಾತ್ಮಗಾಂಧೀಜಿಯವರ ಅಹಿಂಸೆ ಪ್ರತಿಪಾದನೆಯ ಶಿರಸಿ ಮಾರಿಕಾಂಬಾ ದೇವಾಲಯದ ಭೇಟಿ, ಅಲ್ಲಿಯ ಕೋಣನ ಬಲಿಗೆ ವಿರೋಧ ವ್ಯಕ್ತಪಡಿಸಿ ಪ್ರಾಣಿವಧೆ ನಿಲ್ಲಿಸಿದ ಮಹಾತ್ಮ ಈಗಲೂ ಶಿರಸಿ ಗಾಡಿಬಿಡ್ಕಿಯಲ್ಲಿ ಅಜರಾಮರ.
ಇದೇ ಮಹಾತ್ಮ ಅಸ್ಪೃಶ್ಯತೆ,ಬಾಲವಿದವೆಯರ ಕೇಶಮಂಡನ ಆಚರಣೆ ವಿರೋಧಿಸಿ ಸಿದ್ಧಾಪುರಕ್ಕೆ ಭೇಟಿ ನೀಡಿದ್ದರು ಎಂದು ಚಾರಿತ್ರಿಕ ದಾಖಲೆಗಳು ಸ್ಫಷ್ಟಪಡಿಸುತ್ತವೆ. ಆದರೆ ಈ ನೆನಪಿಗೆ ಸಿದ್ಧಾಪುರದಲ್ಲಿ ಗಾಂಧಿ ಪ್ರತಿಮೆಯಾಗಲಿ, ಗಾಂಧಿ ವೃತ್ತವಾಗಲಿ ಇಲ್ಲ. ಸಿದ್ಧಾಪುರ ಅಶೋಕ ರಸ್ತೆಯ ಮನೆಯೊಂದಕ್ಕೆ ಮಹಾತ್ಮಗಾಂಧಿ ಭೇಟಿ ನೀಡಿ ಅಲ್ಲಿ ಮಹಾದೇವಿ ತಾಯಿ ಯವರನ್ನು ಭೇಟಿ ಮಾಡಿದ್ದ ಗಾಂಧೀಜಿ ನೆನಪಿಗೆ ರಾಧಾಕೃಷ್ಣ ಹೆಗಡೆ ತಮ್ಮ ಮನೆಯನ್ನು ಹಿಂದಿನಂತೆಯೇ ಉಳಿಸಿಕೊಂಡಿದ್ದಾರೆ. ಅವರೇ ಹೇಳುವ ಪ್ರಕಾರ ಬಹುಹಿಂದೆ ಅವರ ಮನೆಗೆ ಬರುತಿದ್ದ ಪತ್ರಗಳೆಲ್ಲಾ ಗಾಂಧಿವೃತ್ತ ಎನ್ನುವ ವಿಳಾಸದಿಂದ ಬರುತಿದ್ದವಂತೆ ಆದರೆ ಈಗ ಗಾಂಧಿ ನೆನಪಿಸುವವರೇ ಇಲ್ಲ.
ಕೆಲವು ವರ್ಷಗಳ ಕೆಳಗೆ ಇಲ್ಲಿಯ ನಿವೃತ್ತ ನೌಕರರು ಸಿದ್ಧಾಪುರದ ಈಗಿನ ಪಟ್ಟಣ ಪಂಚಾಯತ್ ವೃತ್ತಕ್ಕೆ ಗಾಂಧಿವೃತ್ತ ಎಂದು ನಾಮಕರಣ ಮಾಡಲು ಒತ್ತಾಯಿಸಿದ್ದರು. ಈ ಬಗ್ಗೆ ಪ.ಪಂ. ಗೆ ಮನವಿಯೊಂದನ್ನೂ ನೀಡಿದ್ದರು. ಆದರೆ ಈ ಬೇಡಿಕೆ ಈವರೆಗೆ ಈಡೇರಿಲ್ಲ. ಸಿದ್ಧಾಪುರದಲ್ಲಿ ಗಾಂಧಿ ವೃತ್ತ, ಗಾಂಧಿ ಪ್ರತಿಮೆಗಳಿಲ್ಲದ ಬಗ್ಗೆ ವಿಷಾದಿಸಿರುವ ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಮತ್ತು ಕಾರ್ಮಿಕ ಮುಖಂಡೆ ಯುಮುನಾ ಗಾಂವ್ಕರ್ ಜನಾಭಿಪ್ರಾಯ, ಗಾಂಧಿ ಮಹತ್ವಕ್ಕೆ ಮನ್ನಣೆ ನೀಡಿ ಅವರ ಹೆಸರಿನ ವೃತ್ತ, ಪ್ರತಿಮೆ ನಿರ್ಮಾಣಮಾಡಬೇಕು ಎಂದು ಸ್ಥಳಿಯ ಆಡಳಿತವನ್ನು ಆಗ್ರಹಿಸಿದ್ದಾರೆ.


