

ಜನರನ್ನು ಭಾವನಾತ್ಮಕವಾಗಿ ಉತ್ತೇಜಿಸಿ ಜನದ್ರೋಹ ಮಾಡುವ ವ್ಯವಸ್ಥಿತ ಪರಿವಾರವನ್ನು ಹಿಮ್ಮೆಟ್ಟಿಸದಿದ್ದರೆ ಭಾರತದಲ್ಲಿ ರೈತರು, ಕಾರ್ಮಿಕರು, ಮಹಿಳೆಯರು ಎರಡನೇ ದರ್ಜೆಯ ಪ್ರಜೆಗಳಾಗುವ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಕಾರ್ಮಿಕ ಮುಖಂಡೆ ಯಮುನಾ ಗಾಂವ್ಕರ್ ಕಳೆದ ಒಂದು ದಶಕದಿಂದಲೂ ಜನಸಾಮಾನ್ಯರು, ಬಡವರಾದ ಕಾರ್ಮಿಕರು, ರೈತರು, ಮಹಿಳೆಯರನ್ನು ಶೋಷಿಸುವ ವ್ಯವಸ್ಥೆಯನ್ನು ಪೋಶಿಸುವ ಆಡಳಿತ ಉಳ್ಳವರ ಪರವಾಗಿ ಕೆಲಸಮಾಡುತ್ತಾ ಭಾರತವನ್ನು ಗುಲಾಮಗಿರಿಗೆ ತಳ್ಳುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.
ಗಾಂಧಿಜಯಂತಿ ನಿಮಿತ್ತ ರಾಷ್ಟ್ರದಾದ್ಯಂತ ಇಂದು ನಡೆದ ಧರಣಿ ಸತ್ಯಾಗ್ರಹದ ಅಂಗವಾಗಿ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಸಂಘಟಿಸಿದ್ದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು ಬಂಡವಾಳಶಾಹಿ ಬಹುಜನಶ್ರಮಿಕವರ್ಗವನ್ನು ಶೋಷಿಸುತ್ತದೆ. ಇಂಥ ಶೋಷಕರನ್ನು ಬೆಂಬಲಿಸುತ್ತಿರುವ ಈಗಿನ ಸರ್ಕಾರಗಳು ಜನದ್ರೋಹಿ ನೀತಿ ಅನುಸರಿಸುತ್ತಿವೆ ಎಂದರು.
ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದ ಪ್ರಮುಖರು ಈ ದೇಶದಲ್ಲಿ ಬಹುಸಂಖ್ಯಾತರಾದ ಕಾರ್ಮಿಕರು, ರೈತರು. ಮಹಿಳೆಯರು ಶ್ರಮಿಕವರ್ಗವನ್ನು ಉಪೇಕ್ಷಿಸಿ ಆಡಳಿತ ನಡೆಸಲಾಗುತ್ತಿದೆ. ಕಾರ್ಮಿಕ ಮಸೂದೆ, ಭೂಸುಧಾರಣೆ ಮಸೂದೆ, ಕೃಷಿಮಾರುಕಟ್ಟೆ ಅಧಿನಿಯಮ ಬದಲಾವಣೆಗಳ ಹಿಂದೆ ಕಾರ್ಪೊರೇಟ್ಗಳನ್ನು ರಕ್ಷಿಸುವ ಉಪಾಯದ ಲಾಭಾಕಾಂಕ್ಷೆಯ ಅಪಾಯದ ಆಡಳಿತ ವ್ಯವಸ್ಥೆಯನ್ನು ಮಾಡುವ ಮೂಲಕ ಭಾರತೀಯ ಶ್ರಮಿಕ ವರ್ಗವನ್ನು ಹಿಂಸಿಸಲಾಗುತ್ತಿದೆ. ಇಂಥ ಅಪಾಯಕಾರಿ ಪರಿವಾರದ ಆಡಳಿತದ ವಿರುದ್ಧ ಜನಜಾಗೃತಿ, ಸಂಘಟನೆಮಾಡಿ ಪ್ಯಾಸಿಸ್ಟ್ ಶಕ್ತಿಗಳನ್ನು ಹಿಮ್ಮೆಟ್ಟಿಸುವ ಮೂಲಕ ಜನಪರರಿಗೆ ಆಡಳಿತ ನೀಡಬೇಕು ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಕನ್ನೇಶ್ ಕೋಲಶಿರ್ಸಿ, ರೈತಸಂಘದ ಅಧ್ಯಕ್ಷ ವೀರಭದ್ರ ನಾಯ್ಕ, ಕೆರಿಯಪ್ಪ ಸಂಪೆಸರ, ಚಂದ್ರಶೇಖರ್ ಕುಂಬ್ರಿಗದ್ದೆ, ಎಸ್.ಎಫ್.ಆಯ್ ಮುಖಂಡ ಸಾಕಿಬ್ ಗುರ್ಕಾರ್, ವಿಷ್ಣುನಾಯ್ಕ, ಆಯ್.ಸಿ.ನಾಯ್ಕ, ನಾಗಪ್ಪ ನಾಯ್ಕ,ಕೆ.ಟಿ.ನಾಯ್ಕ ಹೆಗ್ಗೇರಿ ಮಾತನಾಡಿದರು.




