ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಅವರ ಸೋದರ ಸಂಸದ ಡಿ ಕೆ ಸುರೇಶ್ ಅವರಿಗೆ ಸೋಮವಾರ ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ.
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಅವರ ಸೋದರ ಸಂಸದ ಡಿ ಕೆ ಸುರೇಶ್ ಅವರಿಗೆ ಸೋಮವಾರ ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ.
60ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ ಕೆ ಶಿವಕುಮಾರ್ ನಿವಾಸ ಸೇರಿದಂತೆ ಅವರ ಊರು ರಾಮನಗರದ ದೊಡ್ಡ ಆಲದಹಳ್ಳಿಯ ಮನೆ ಸೇರಿ 15ಕ್ಕೂ ಹೆಚ್ಚು ಕಡೆಗಳಲ್ಲಿ ಏಕಾಏಕಿ ದಾಳಿ ನಡೆಸಿದ್ದಾರೆ.
ಇಂದು ಬೆಳಗ್ಗೆ 6 ಗಂಟೆಯಿಂದ ನಿರಂತರವಾಗಿ ದಾಳಿ ನಡೆಸುತ್ತಿದ್ದು ವ್ಯವಸ್ಥಿತವಾಗಿ ಸಿಬಿಐ ಅಧಿಕಾರಿಗಳು ಮಾಹಿತಿ ಕಲೆ ಹಾಕಿ ದಾಳಿ ನಡೆಸಿದ್ದಾರೆ. ಸದ್ಯ ಡಿ ಕೆ ಶಿವಕುಮಾರ್ ಅವರನ್ನು ಒಬ್ಬರನ್ನೇ ಕೂರಿಸಿಕೊಂಡು ನಿರಂತರವಾಗಿ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಸಿಬಿಐ ಎಸ್ಪಿ ಥಾಮ್ಸನ್ ಜೋಸ್ ನೇತೃತ್ವದಲ್ಲಿ ದಾಳಿ ನಡೆದಿದೆ. ಅವರ ಕುಟುಂಬಸ್ಥರನ್ನೆಲ್ಲಾ ಮನೆ ಹತ್ತಿರದಲ್ಲಿರುವ ಕಚೇರಿಗೆ ಸದ್ಯ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ.
ದೆಹಲಿಯ 4 ಕಡೆ, ಮುಂಬೈಯ 1 ಕಡೆ ದಾಳಿ: ಸಿಬಿಐ ಅಧಿಕಾರಿಗಳು ದೆಹಲಿ, ಮುಂಬೈ ಕೂಡ ಬಿಟ್ಟಿಲ್ಲ. ದೆಹಲಿಯಲ್ಲಿ ಸಂಸದ ಡಿ ಕೆ ಸುರೇಶ್ ವಾಸ್ತವ್ಯ ಹೂಡುವ ಕಾವೇರಿ ಅಪಾರ್ಟ್ ಮೆಂಟ್ ಮೇಲೆ, ಮುಂಬೈಯಲ್ಲಿರುವ ನಿವಾಸಗಳ ಮೇಲೆ ಸಹ ವ್ಯವಸ್ಥಿತವಾಗಿ ದಾಳಿ ನಡೆಸಿದ್ದಾರೆ. ಸಾಕಷ್ಟು ಪೂರ್ವ ತಯಾರಿ ನಡೆಸಿಯೇ ದಾಳಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆಯೇ ಸರ್ಚ್ ವಾರಂಟ್ ಬಂದಿತ್ತು ಎಂದು ತಿಳಿದುಬಂದಿದೆ.
ಡಿ ಕೆ ಸೋದರರ ನಿವಾಸಗಳ ಮೇಲೆ ದಾಳಿ ನಡೆಯುತ್ತಿದ್ದಂತೆ ಅವರ ಬೆಂಬಲಿಗರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಜಾರಿ ನಿರ್ದೇಶನಾಲಯ ಡಿ ಕೆ ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಿ ಅವರು ಜೈಲಿಗೆ ಕೂಡ ಹೋಗಿ ಬಂದಿದ್ದರು. (kpc)https://www.facebook.com/Varadigara/videos/335438387545191/