ಸಿದ್ದಾಪುರ: ತಾಲೂಕಿನ ಇಟಗಿ ಕಲಗದ್ದೆಯ ಯಕ್ಷಗಾನ ಶ್ರೀ ನಾಟ್ಯ ವಿನಾಯಕ
ದೇವರಿಗೆ ಸಂಕಷ್ಟ ಹರ ರಥ ಸಮರ್ಪಣಾ ಸಮಾರಂಭ ಧಾರ್ಮಿಕ ವಿಧಿ
ವಿಧಾನಗಳ ಮೂಲಕ ಸೋಮವಾರ ಜರುಗಿತು.
ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು
ಇನ್ನು ಮುಂದೆ ಪ್ರತೀ ಸಂಕಷ್ಟಿಗೆ ಸಂಕಷ್ಟ ಹರ ರಥೋತ್ಸವ ನಡೆಯಲಿರುವ
ಶ್ರೀದೇವರ ನೂತನ ರಥ ಎಳೆಯುವ ಮೂಲಕ ಭಗವಂತನಿಗೆ ಅರ್ಪಣೆ
ಮಾಡಿದರು. ಬಳಿಕ ಮಾತನಾಡಿದ ಅವರು,
ಭಾರತೀಯ ಸಂಪ್ರದಾಯಗಳನ್ನು
ಉಳಿಸಿ ಬೆಳಸಿಕೊಂಡು ಹೋಗಬೇಕು. ಅದರಲ್ಲಿ ಸಾಧನೆ ಮಾಡಬೇಕು. ಕಲಗದ್ದೆ
ಅನೇಕ ಕಾರಣಕ್ಕೆ ಗಮನ ಸೆಳೆಯುತ್ತಿದೆ ಎಂದು ಹೇಳಿದರು.
ಸಾಮಾಜಿಕ ಮುಖಂಡ ಡಾ. ಶಶಿಭೂಷ ಹೆಗಡೆ ದೊಡ್ಮನೆ, ದೇವತಾ
ಕಾರ್ಯಗಳನ್ನು ಹೆಚ್ಚೆಚ್ಚು ನಡೆಸುವ ಮೂಲಕ ಇದೊಂದು ಯಾತ್ರಾ
ಸ್ಥಳವಾಗಿದೆ ಎಂದರು. ದೇವಾಲಯದ ಪೂಜಾ ವಿಧಾನ ಪುಸ್ತಕದ
ಸಮರ್ಪಣೆಯನ್ನು ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ, ಪುಟ್ಟನಮನೆ
ಪರಮೇಶ್ವರ ಭಟ್ಟ ನಡೆಸಿಕೊಟ್ಟರು.
ಧಾರವಾಡ ಹಾಲು ಒಕ್ಕೂಟ ನಿರ್ದೇಶಕ
ಸುರೇಶ್ಚಂದ್ರ ಹೆಗಡೆ, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಹೆಗಡೆ
ಬಾಳೇಗದ್ದೆ, ರಥ ನಿರ್ಮಾಣ ಮಾಡಿದ ಡಿ.ಡಿ.ಶೇಟ್ ಕುಮಟಾ, ವಿದ್ವಾನ್ ಕೃಷ್ಣ
ಭಟ್ಟ ಅಡವಿತೋಟ, ಅಗ್ಗೆರೆ ಮಹೇಶ ಭಟ್ಟ ಸೇರಿದಂತೆ ಇತರರು
ಪಾಲ್ಗೊಂಡರು.
ದೇವಾಲಯದ ಮೊಕ್ತೇಸರ ವಿನಾಯಕ ಹೆಗಡೆ ಕಲಗದ್ದೆ, ರಷ್ಮಿ
ಹೆಗಡೆ ದಂಪತಿಗಳು ಯಜಮಾನತ್ವ ವಹಿಸಿದ್ದರು. ವಿವಿಧ ಧಾರ್ಮಿಕ
ಕಾರ್ಯಕ್ರಮಗಳು ಗೋಕರ್ಣ ಹಾಗೂ ಸ್ಥಳೀಯ ವೈದಿಕರ ನೇತೃತ್ವದಲ್ಲಿ
ನಡೆಯಿತು.
ಸುಷಿರ ಸಂಗೀತ ಪರಿವಾರ, ಸಂಸ್ಕೃ ತಿ ಸಂಪದ ಸಾಂಸ್ಕೃತಿಕ ಸಂಘಟನೆಗಳಿಂದ
ಸಂಗೀತ ಅಭ್ಯಾಸ ಬೈಟಕ್ ಪ್ರಾರಂಭ
ಸಿದ್ದಾಪುರ. ಸಾಂಸ್ಕೃ ತಿಕ ಚಟುವಟಿಕೆಗಳ ಕೇಂದ್ರವಾಗಿರುವ ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಸಂಗೀತ ಅಭ್ಯಾಸ ಬೈಟಕ್ ಎನ್ನುವ ಹೊಸಕಾರ್ಯಕ್ರಮವೊಂದು ರವಿವಾರ ಪ್ರಾರಂಭಗೊಂಡಿತು. ಸುಷಿರ ಸಂಗೀತ ಪರಿವಾರ ಭುವನಗಿರಿ, ಮತ್ತು ಸಂಸ್ಕೃತಿ ಸಂಪದ ಈ ಎರಡು ಸಂಘಟನೆಗಳ ಸಹಯೋಗದಲ್ಲಿ ಈ ವಿನೂತನ ಕಾರ್ಯಕ್ರಮವನ್ನು ಸಂಘಟಿಸಲಾಗಿದ್ದು ಸಂಗೀತ ಅಭಿರುಚಿ ನಿರಂತರಗೊಳಿಸಲು ಈ ಕಾರ್ಯಕ್ರಮ ರೂಪಗೊಂಡಿದೆ. ಮುಂದೆ ವಾರಕ್ಕೊಮ್ಮೆ ಏರ್ಪಡಿಸಲಾಗುವ ಈ ಕಾರ್ಯಕ್ರಮದ ಮೊದಲ ಪ್ರಯೋಗ ರವೀಂದ್ರ ಹೆಗಡೆ ಇಳಿಮನೆ (ಬೆಂಗಳೂರು) ಇವರ ಶಾಸ್ತ್ರೀಯ ಸಂಗೀತದೊಂದಿಗೆ ಪ್ರಾರಂಭಗೊಂಡಿತು.
ಕಾರ್ಯಕ್ರಮವನ್ನು ರಾಗ ಮಾರವಾ ದಿಂದ ಪ್ರಾರಂಭಿಸಿ, ರಾಗ ದೇಸ್ ಹಾಗೂ ಭಜನ್ ಗಳೊಂದಿಗೆ ಮುಂದುವರಿಸಿ ರಾಗ ಬೈರವಿಯಲ್ಲಿ ಸಂಪನ್ನಗೊಳಿಸಲಾಯಿತು. ಬಾಜರೆ ಮುರಳಿಯ ಬಾಜೆ ಭಜನ್ ಗೆ ಪಂ.ರವೀಂದ್ರ ಹೆಗಡೆ ಯವರೊಂದಿಗೆ ಪಂ. ಪ್ರಕಾಶ ಹೆಗಡೆ ಕಲ್ಲಾರೆಮನೆಯವರ ಕೊಳಲು ಸೇರಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದಿತು. ಡಾ. ಸಮೀರ ಬಾದ್ರಿಯವರ ಹಾರ್ಮೋನಿಯಂ ಸಾತ್ ಹಾಗೂ ನಿತಿನ್ ಹೆಗಡೆ ಕಲಗದ್ದೆ, ಶಶಾಂಕ ಹೆಗಡೆ ಹಿತ್ತಲಕೈ ತಬಲಾಸಾತ್ ನೀಡಿದರು. ಕರೋನಾ ಹಿನ್ನೆಲೆಯಲ್ಲಿ ಅತಿಕಡಿಮೆ ಪ್ರೇಕ್ಷಕರು ಮಾಸ್ಕ ಧರಿಸಿ ಸಾಮಾಜಿಕ ಅಂತರದೊಂದಿಗೆ ಪಾಲ್ಗೊಂಡಿದ್ದರು. ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಉಪಸ್ಥಿತರಿದ್ದರು. ನಿವೃತ್ತ ಪ್ರಾಚಾರ್ಯ ಟಿ.ಜಿ.ಹೆಗಡೆ ಸ್ವಾಗತಿಸಿ, ವಂದಿಸಿದರು.