

ಮನಸೇ ನನ್ನ ಮನಸೇ……..ಅಪ್ಪ ಸಣ್ಣವ ಇರುವಾಗ ಒಂದು ದಿನ ಕೂರಿಸಿ ಹೇಳಿದರು ” ಕಾಲಹರಣ ಮಾಡಬೇಡ, ಕ್ಷಣ ಕ್ಷಣವೂ ಸಾವಿಗೆ ಹತ್ತಿರ ಆಗುತ್ತ ಇರುತ್ತೇವೆ “. ಆ ಮಾತು ನನ್ನ ಎಷ್ಟು ಆಳಕ್ಕೆ ಇಳಿದಿದೆ ಎಂದರೆ ಆವತ್ತಿನಿಂದ ನಾ ಎಲ್ಲೂ ನಿಂತಿಲ್ಲ. ಪಾದರಸ ತರ ಇರಬೇಕು ಅಂತ ಸಹಮತ ಸ್ನೇಹಿತರ ಜತೆ ಆಗಾಗ ಹೇಳುತ್ತಾ ಇರುವೆ.
ನಿಜ ಹಾಗೆ ಬದುಕುವುದು ನನಗೆ ಇಷ್ಟ..ಅದು ನನ್ನ ಜೀವನ ಕ್ರಮವೇ ಆಗಿದೆ. ಮನಸು ಜಂಗಮ ಆಗಿಸುತ್ತಾ ಬದುಕಿನ ಚಕ್ರ ತಿರುಗುತ್ತಿದೆ. ಓದು..ಬರಹ..ರಾಜಕೀಯ.. ಪತ್ರಿಕಾ ರಂಗ… ನಾಟಕ.. ಕೃಷಿ…ಮಾತು…ಹೀಗೆ. ಎಲ್ಲವೂ ಪ್ರೀತಿ ಸುತ್ತಾ ಇದೆ.ಎಷ್ಟೋ ಬಾರಿ ನಡೆಯುವ ಹಾದಿ ಸವಾಲಿನದೆ ಆಗಿರುತ್ತೆ, ಹೆದರಿಕೆ ಎಂಬ ಪದ ನನ್ನಿಂದ ಬಹಳ ದೂರ ಇದೆ. ಪಟ್ಟು ಹಾಕಿ ಸ್ಪರ್ಧೆ ಮಾಡುವುದು ನನಗೆ ಇಷ್ಟ. ಅಪ್ಪ ನನಗೆ ಸುಳ್ಳಿನ ವಂಚನೆ ಕಲಿಸಿಲ್ಲ. ಅದೇ ಕಾರಣಕೆ ಗೋಸುಂಬೆತನ ಹತ್ತಿರ ಸುಳಿದಿಲ್ಲ. ಒಂದು ನಿಲುವಿನ ಪರ ನಿಂತರೆ ಅಲ್ಲಿ ಗಟ್ಟಿ ನಿಲ್ಲುವ ಸ್ವಭಾವ ಬಂದಿದೆ. ಇಬ್ಬಂದಿತನದ ಚಮಚಗಿರಿ ರೂಢಿಸಿಕೊಳ್ಳದ ಕಾರಣ ಮನಸು ನಿಷ್ಠುರವಾಗಿ ಯೋಚನೆ ಮಾಡುತ್ತದೆ. ಇದೇ ಕಾರಣಕ್ಕೆ ನ್ಯಾಯ ಪ್ರಜ್ಞೆ ತಳಹದಿಯಲ್ಲಿ ಆಲೋಚನೆ ರೂಪುಗೊಳ್ಳುತ್ತವೆ.
ಆದರೆ ಇದು ಕಷ್ಟದ ಹಾದಿ. ಆದರೆ ತುಂಬಾ ದೊಡ್ಡ ಮಹತ್ವಾಕಾಂಕ್ಷೆ ಇಲ್ಲದೆ ಸಾಗಿರುವ ಬದುಕಿನ ಈ ಹಾದಿ ನನ್ನನ್ನು ಸಾಧನೆಯ ಮೆಟ್ಟಿಲು ಏರಿಸಿದೆ. ಇವೆಲ್ಲವಕ್ಕೂ ಕಾರಣ ಈ ಮನಸು. ನನ್ನ ಮನಸ್ಸಿನ ರಚನಾ ಕ್ರಮ ಮತ್ತು ಅದು ಸದಾ ಉತ್ಸಾಹ ದ ಚಿಲುಮೆಯಾಗಿ ಹರಿಯುವ ರೀತಿಯೇ ಜೀವ ಚೈತನ್ಯ. ಅದೆಷ್ಟು ಬಾರಿ ಒಂಟಿಯಾಗಿದೆ ಈ ಮನಸು.
ಅಕ್ಕನ ಮಗಳು ಭವ್ಯ ತೀರಿ ಹೋದಾಗ, ಎಸ್ ಎಸ್ ಎಲ್ ಸಿ. ಪರೀಕ್ಷೆ ಫೇಲ್ ಆದಾಗ, ಅಪರಾಧಿ ಆಗಿ ಅಧಿಕಾರಿ ಮುಂದೆ ನಿಂತಾಗ, ಅವಳು ಎಲ್ ಬಿ ಕಾಲೇಜಿನ ಮೈದಾನದಲ್ಲಿ ಪ್ರೇಮ ನಿರಾಕರಿಸಿ ಗಳಗಳನೆ ಅತ್ತಾಗ, ಮುಂದೆ ಪ್ರೇಮಿಸಿದ ಹುಡುಗಿ ಹೊರಟು ಹೋದಾಗ. ಮಿತ್ರರೇ ಶತ್ರುಗಳಾದಾಗ, ವಂಚನೆಗೆ ಒಳಗಾದಾಗ…..
ಹೀಗೆ ಹೀಗೆ ನೂರಾರು ಬಾರಿ. ಶೂನ್ಯ ಮಾತ್ರ ಎದುರಿದ್ದು ಕತ್ತಲು ಸುರಿದಾಗ ಅಕ್ಷರಶಃ ಒಂಟಿಯಾಗಿರುವೆ. ತಬ್ಬಲಿತನದಲ್ಲಿ ಮನಸು ನೋವುಂಡು ಬಿಕ್ಕಿದೆ. ಆದರೆ….. ಒಮ್ಮೆಯೂ ಸಾಕು ಅಂದಿಲ್ಲ. ಹೌದು ಮನಸೇ ತಾನೇ ಹೇಳೋದು ಸಾಕು ಬದುಕು ಅಂತ. ದೇಹದೊಳಗಿನ ಜೀವ ಹಾರಿ ಹೋಗಿ ಸತ್ತು ಬಿಟ್ಟರೆ ಸುಖವಿದೆ ಎಂದು ವಾದ ಮಾಡಿ ಗೆಲ್ಲುವುದು ಮನಸೇ ತಾನೆ?
ಹಾಗೆ ನಾವು ನೆಗೆಟಿವ್ ಯೋಚನೆಗಳಿಗೆ ಸೋತಾಗಲೇ ಕೊರಳಿಗೆ ಹಗ್ಗ, ನಿದ್ದೆಮಾತ್ರೆ, ವಿಷದ ಬಾಟಲು ಇನ್ನೂ ಏನೇನೋ ದಾರಿ ತೆರೆಯುವುದು. ಆತ್ಮಹತ್ಯೆ ಬಗ್ಗೆ ಯೋಚಿಸುವುದು. ಖಾಲಿತನವನ್ನು ತುಂಬಲು ಆಗದ ಮನಸು ಮಾತ್ರ ಹಾಗೆ ಯೋಚಿಸತ್ತೆ. ಅದೊಂದು ಸರಣಿ ನೆಗೆಟಿವ್ ಆಲೋಚನೆಯ ಅಂತಿಮ ಆಘಾತ. ನಿಜ… ಎಷ್ಟೋ ಬಾರಿ ಮನಸು ಆಯಾಸ ಆಗುತ್ತದೆ. ಅದರಲ್ಲೂ ಅತಿ ಕ್ರಿಯಾಶೀಲವಾಗಿ ಜಂಗಮ ಆಗಿಸಿಕೊಂಡ ಮನಸುಗಳಂತೂ ಕೆಲವೊಮ್ಮೆ ತುಂಬಾ ಹಠ ಮಾಡುತ್ತವೆ. ಒಂದು ದೊಡ್ಡ space ಸೃಷ್ಟಿಯಾಗಿ ಜಿಜ್ಞಾಸೆಗಳ ಒಡ್ಡೋಲಗ. ಏನೂ ಯೋಚಿಸದೇ ವಾಸ್ತವದ ಜತೆ ಒಂದಿಷ್ಟು ಕಾಲ ಇದ್ದು ಬಿಡುವುದು ನಾವು ಕಲಿತಿಲ್ಲ. ಮನಸ್ಸಿಗೂ ಅದನ್ನೂ ಕಲಿಸಿಲ್ಲ. ಹಾಗೆ ಮನಸು ನಿಧಾನ ಆದಾಗ ಕೊಂಚ ಮುನಿಸಿಕೊಂಡಾಗ ಅದನ್ನು ನಿರ್ವಹಣೆ ಮಾಡುವ ಕಲೆಯೇ ಒಂದು ಸವಾಲಿನದು. ಪಾಸಿಟಿವ್ ಆಲೋಚನೆ ಮಾಡುವುದು ಆಮೇಲೆ ನೆಗೆಟಿವ್ ಆಲೋಚನೆ ನಮ್ಮನ್ನು ಬಂಧಿಸದ ಹಾಗೆ ಎಚ್ಚರವಿಟ್ಟು ನಿರ್ವಾತದಿಂದ ಮುಂದಕ್ಕೆ ಸಾಗುವ ಕ್ಷಣ ಇದೆಯಲ್ಲ ಅಲ್ಲಿ ನಾವು ಮಾತ್ರ ಇರುತ್ತೇವೆ. ಒಂಟಿಯಾಗಿ. ನಮ್ಮ ಅಧಿಕಾರ ಹೆಸರು ದುಡ್ಡು ಆಸ್ತಿ ಯಾವುದೂ ಇರುವುದಿಲ್ಲ. ಏಕಾಂಗಿಯಾಗಿ ನಿರ್ವಾತವನ್ನು ದಾಟುವುದನ್ನ ಮನಸಿಗೆ ಕಲಿಸಿಬಿಟ್ಟರೇ…..
.ವಾಹ್….ಗೆದ್ದು ಬಿಡುತ್ತೇವೆ. ನಮ್ಮೊಳಗೆ ನಾವು. ಅಲ್ಲಿ ನಮ್ಮನ್ನು ಬೆನ್ನು ತಟ್ಟುವವರು ಯಾರೂ ಇರಲ್ಲ. ನಮಗೆ ನಾವೇ. ಆ ಗೆದ್ದ ಸಂತಸ ಒಳಗೆ ಉಳಿದರೆ ಕೆಟ್ಟ ಕಾಲ ಎನ್ನುವ ಯಾವ ಕಾಲವೂ ನಮ್ಮನ್ನು ನಮ್ಮೊಳಗೆ ಸೋಲಿಸದು. ನಾನು ಎಷ್ಟೋ ಬಾರಿ ಏಕಾಂಗಿ ಆಗಿರುವೆ. ಒಂಟಿ ಆಗಿಲ್ಲ. ಈಚೆಯ ತಿಂಗಳಲ್ಲಿಯೇ ಅಧಿಕಾರ ಮುಗಿದಾಗ, ಮೀಸಲಾತಿ ವಂಚಿತ ಆದಾಗ ದುಃಖ ಆಗಿದೆ. ಕೆಲವೊಮ್ಮೆ ನನ್ನದೇ ಆದ ಒಳ ಲೋಕದ ಕಾರಣಕ್ಕೂ ನೋವಾಗಿದೆ. 2020 ರಲ್ಲಿ ತುಂಬಾ ಆತ್ಮೀಯರು ಅಗಲುತ್ತಾ ಇದ್ದಾರೆ. ಸವಾಲು ಸದಾ ಕಾಲ ಜತೆ ಇದೆ. ಅದು ನನ್ನ ಬಿಟ್ಟು ಹೋಗಲ್ಲ. ಈಗಲೂ ಕೇಳುತ್ತಾರೆ ಆಪ್ತರು… ಮುಂದೇನು…?
ನನ್ನ ಉತ್ತರ “ನಿರ್ಧರಿಸಿಲ್ಲ”. ನಿಜ… ನಿರ್ಧಾರಕ್ಕೆ ಬಾರದ ಸಮಯ ಇರುತ್ತದಲ್ಲ ಅದೇ ನನ್ನೊಳಗಿನ ಅನುಸಂಧಾನದ ಸಮಯ. ನನ್ನೊಳಗೆ ಅಲ್ಲ ಪ್ರತಿಯೊಬ್ಬರ ಒಳಗೆ. ಏಕಾಂಗಿಯಾಗಿ ಇರಬೇಕಾದ ಮತ್ತು ಹೊರಡಬೇಕಾದ ಹೊತ್ತು ಅದು. ಇಂತಹ ಹೊತ್ತಿನಲ್ಲಿ ನಾನು ಗಿರೀಶ್ ಹಂದಲಗಿ ಬರೆದು ನಾದ ಹಾಡಿರುವ, ಪ್ರಶಾಂತ ಸಾಗರ ಮತ್ತು ಗೆಳೆಯರು ಛಾಯಾಗ್ರಹಣ ಮತ್ತು ಸಂಕಲಿಸಿರುವ ಅನಿಕೇತನ ಸಂಸ್ಥೆ ಬಿಡುಗಡೆ ಮಾಡಿರುವ ಈ ಹಾಡು ಕೇಳಿಸಿಕೊಳ್ಳುವೆ…..ಮನಸಿಗೆ ಏನೋ ಹಿತ…. ನಾಳೆಯ ನೋಟ ತೆರೆದುಕೊಳ್ಳುತ್ತದೆ.ಹಾಡೇ ಹಾದಿಯ ತೆರೆಯಿತು ಎಂಬುವ ಹಾಗೆ…….
..ಜಿ. ಟಿ ಸತ್ಯನಾರಾಯಣ ಕರೂರು. https://www.facebook.com/100023623211213/videos/787006215430145/
