

ಅಕ್ರಮ ಮದ್ಯ ಮಾರಾಟ ಮತ್ತು ಪ್ರವಾಸಿ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವ ವಿದ್ಯಮಾನವನ್ನು ನಿಯಂತ್ರಿಸುವುದು ಸೇರಿದಂತೆ ಸೈಬರ್ ಅಪರಾಧ ಮತ್ತು ಇತರ ಅಪರಾಧಗಳನ್ನು ತಡೆಯಲು ಕ್ರಮಕೈಗೊಳ್ಳುವುದಾಗಿ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಸಾದ ದೇವರಾಜ್ ತಿಳಿಸಿದ್ದಾರೆ.
ಸಿದ್ಧಾಪುರ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಿದ ನಂತರ ಮಾತನಾಡಿದ ಅವರು ಅಕ್ರಮಮದ್ಯ ಮಾರಾಟ, ಸೈಬರ್ ಕ್ರೈಂ ಸೇರಿದಂತೆ ಕೆಲವು ವಿಚಾರಗಳ ಬಗ್ಗೆ ದೂರು ಬರುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆಯ ಕೆಲಸ ನಡೆಯುತ್ತಿರುತ್ತದೆ ಆದರೆ ಮದ್ಯ ಮಾರಾಟ ಮಾಡುವ ಜನರ ಮೇಲೆ ಕ್ರಮ ಜರುಗಿಸಲು ಸ್ಥಳಿಯ ಸಂಸ್ಥೆಗಳಿಗೆ ಅಧಿಕಾರವಿದೆ ಆ ಅಧಿಕಾರ ಬಳಸಿ ಅಕ್ರಮ ಮದ್ಯ ಮಾರಾಟ ತಡೆಯಬಹುದು ಎಂದರು.
ಸಭೆಯಲ್ಲಿ ತಾಲೂಕಿನ ಅಕ್ರಮಗಳು, ಅವ್ಯವಹಾರಗಳು, ಜನಸಾಮಾನ್ಯರಿಗಾಗುತ್ತಿರುವ ತೊಂದರೆ ಬಗ್ಗೆ ಚರ್ಚಿಸಲಾಯಿತು. ನಗರದಲ್ಲಿ ರಸ್ತೆ ಮೇಲೆ ವಾಹನ ನಿಲ್ಲಿಸುವುದು, ಮುಖ್ಯರಸ್ತೆಗಳಲ್ಲಿ ತ್ಯಾಜ್ಯ ಎಸೆಯುವುದು, ಅಮಾಯಕರಿಗೆ ಹೆದರಿಸಿ ತೊಂದರೆ ಕೊಡುವುದು ಸೇರಿದಂತೆ ಕೆಲವು ತೊಂದರೆಗಳ ಬಗ್ಗೆ ಚರ್ಚೆ ನಡೆಯಿತು. ಸೈಬರ್ ಅಪರಾಧದ ಬಗ್ಗೆ ಶೀಘ್ರ ದೂರು ನೀಡುವುದು ತನಿಖೆ ಮತ್ತು ಅಪರಾಧ ನಿಯಂತ್ರಣಕ್ಕೆ ಸಹಾಯಕ ವಾಗುತ್ತದೆ ಎಂದರು.


