
https://www.youtube.com/watch?v=TL8xT2FlaMQ&t=240s
ನಾವೆಲ್ಲಾ ಅಪಾರ ಕನಸುಗಳೊಂದಿಗೆ ಕಾಲೇಜು ಸೇರಿ, ಹಾಸ್ಟೇಲ್ ಕೂಡಿಕೊಂಡ ಸಂದರ್ಭವದು. ಒಂದು ರವಿವಾರದ ದಿನ ವಾರದ ಸ್ವಚ್ಛತೆ ನಡೆಯುತಿದ್ದ ಸಂದರ್ಭದಲ್ಲಿ ಒಂದು ಮಾರಾಮಾರಿಯೇ ನಡೆದು ಹೋಯಿತು. ನಮ್ಮ ಸ್ನೇಹಿತ ಅಂದಿನ ಹಿರಿಯ ಸಂಗಾತಿ ರಾಜೇಶ್ ಎನ್ನುವ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಮುಖ ಮೂತಿ ನೋಡದೆ ಇಕ್ಕಿ ಬಿಟ್ಟಿದ್ದ. ಆತ ಭಯದಿಂದ ನಡುಗುತ್ತಾ ಮಾರುತಿಯನ್ನು ಹುಡುಕುತಿದ್ದಾಗ ಮಾರಿತಿ ಥೇಟ್ ಈಗಿನ ದುನಿಯಾ ವಿಜಯ್ ರೀತಿ ಕೆಂಗಣ್ಣಿನಿಂದ ನೋಡುತ್ತಾ ನಾನು ಮಾಡಿದ್ದು ತಪ್ಪಾ? ಎಂದು ಮೌನವಾಗೇ ಪ್ರಶ್ನಿಸುತಿದ್ದ.
ಬಹುಶ: ನಮ್ಮ ಅವಧಿಯಲ್ಲಿ ಹೊಸ ವಿದ್ಯಾರ್ಥಿಯೊಬ್ಬ ಹಿರಿಯ ವಿದ್ಯಾರ್ಥಿಗೆ ಒದೆ ಕೊಟ್ಟದ್ದು ಅದೇ ಮೊದಲು ನಂತರ ಮಾರುತಿ ಮಿ.ಬ್ರೇವ್ ಎನಿಸಿಕೊಂಡ.
ಈ ಪ್ರಕರಣವಾಗಿ ಆರೋ, ಹತ್ತಹನ್ಹೆರಡು ತಿಂಗಳು ಕಳೆದಿರಬೇಕು. ಗ್ಯಾಸ್ ಕಾಲೇಜಿನ ವಾರ್ಷಿಕೋತ್ಸವ, ಯುವಜನೋತ್ಸವ, ಯೂಥ್ ಫೆಸ್ಟಿವಲ್ ಥರದ ಕಾರ್ಯಕ್ರಮ, ನಮ್ಮ ಕ್ರೀಯಾಶೀಲತೆ, ಮನೋರಂಜನಾ ಕಾರ್ಯಕ್ರಮಗಳಿಂದ ಅಸೂಯೆ ಪಟ್ಟಿದ್ದ ಸ್ಥಳಿಯ ವಿದ್ಯಾರ್ಥಿಗಳ ತಂಡ ನಮ್ಮನ್ನು ಹೀಯಾಳಿಸಿ ಅವಮಾನ ಮಾಡಲು ಹವಣಿಸಿತ್ತು. ಇದು ರಗಳೆ, ಗಲಾಟೆಯಾಗಿ ಕೊನೆಗೆ ರಾತ್ರಿ ವೇಳೆ ಆ ಪುಂಡರ ಗುಂಪು ನಮ್ಮ ವಸತಿ ನಿಲಯಕ್ಕೆ ಕುಡಿದು ಬಂದು ಖ್ಯಾತೆ ತೆಗೆದಾಗ ಜಗಳವಾಗಿ ನಮ್ಮ ಸಮಯಪ್ರಜ್ಞೆಯಿಂದಾಗಿ ಆ ಪುಂಡರ ತಂಡ ಪೊಲೀಸ್ ವಶವಾಯಿತು.
ಈ ಜಗಳದ ಅವಧಿಯಲ್ಲಿ ಮಾರುತಿಗೆ ಬಿದ್ದ ಒಂದು ಏಟಿನಿಂದಾಗಿ ಅವನ ಕಿವಿಯ ಪೊರೆ ಹರಿದು ಕಿವಿಗೆ ಹಾನಿಯಾಗಿತ್ತು. ಒಂದು ಕಿವಿಕೇಳದ ಮಾರುತಿಯನ್ನು ನಾನೇ ಶಿರಸಿ ಆಸ್ಫತ್ರೆಗೆ ಒಯ್ದು ನಮ್ಮ ಚಿಕ್ಕಪ್ಪನ ಮನೆಯಲ್ಲಿ ಆಶ್ರಯ ಪಡೆದು ಮಾರುತಿಯ ಬನವಾಸಿಗೆ ಕಳುಹಿಸಿಕೊಟ್ಟಿದ್ದೆ. ಇಲ್ಲೆಲ್ಲೂ ಧೃತಿಗೆಡದ ಮಾರುತಿ ನಂತರ ಟಿ.ಸಿ.ಎಚ್. ಓದಿ ಮತ್ತೆ ಪದವಿಗಾಗಿ ನಮ್ಮ ಹಾಸ್ಟೇಲ್ ಸೇರಿಕೊಂಡಿದ್ದಾಗ ಆತ ನಮ್ಮ ಜೂನಿಯರ್! ಆಗಿದ್ದ ಆದರೆ ಬುದ್ಧನಂತೆ ಉಪದೇಶಿಸುವ ಎಳೆಪ್ರಬುದ್ಧನಾಗಿದ್ದ.
ಇದಕ್ಕಿಂತ ಮೊದಲು ನಿರೀಕ್ಷಿಸಿ ದಷ್ಟು ಪರೀಕ್ಷೆ ಸರಿಯಾಗಿ ಬರೆಯದ ತಪ್ಪಿಗೆ ಶಿಕ್ಷಣವನ್ನೇ ಬಿಡುತ್ತೇನೆಂದು ಪರೀಕ್ಷೆ ಬಿಟ್ಟು ಊರಿಗೆ ಹೋಗುವ ತಯಾರಿಸಿ ನಡೆಸಿದ್ದ, ನಂತರ ಸ್ನೇಹಿತರ ಮಾತಿಗೆ ಬೆಲೆ ಕೊಟ್ಟು ಪರೀಕ್ಷೆ ಬರೆದು ನಮ್ಮ ಕ್ಲಾಸಿಗೆ ಎರಡನೇ ರ್ಯಾಂಕ್ ಬಂದಿದ್ದ, ಆ ನಂತರ ಆತ ಶಿಕ್ಷಕರ ತರಬೇತಿಗೆ ತೆರಳಿದ್ದು.
ಇಂಥ ಮಾರುತಿ ಉತ್ತಮ ಮಾರ್ಗದರ್ಶನ, ಅನುಕೂಲ, ಅವಕಾಶ ದೊರೆತಿದ್ದರೆ ಕೇಂದ್ರ ಲೋಕಸೇವಾ ಆಯೋಗ, ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಹಿರಿಯ ಅಧಿಕಾರಿಯಾಗುತಿದ್ದನೇನೋ? ಆದರೆ ಆತ ಅನಿವಾರ್ಯವಾಗಿ ಶಿಕ್ಷಕನಾದ,ಶಿಕ್ಷಣ ಕ್ಷೇತ್ರದಲ್ಲಿ 30-40 ವರ್ಷಗಳ ವರೆಗೆ ಮಾಡುವ ಸೇವೆಯ ಪ್ರಮಾಣದ ಸೇವೆ, ಸಾಧನೆಯನ್ನು ಕಾಲು ಶತಮಾನದಲ್ಲೇ ಮಾಡಿದ. ಈತ ಮಾರುತಿ ಉಪ್ಪಾರ.
ಟೆಂಟ್ ಶಾಲೆ, ಸ್ಕೌಟ್ & ಗೈಡ್ಸ್ ಸೇರಿದಂತೆ ಪ್ರಾಮಾಣಿಕ ಶಿಕ್ಷಕ ಪರಿಶ್ರಮದಿಂದ ಮಾಡುವ ಬದ್ಧತೆಯ ಪ್ರಾಮಾಣಿಕ ಕೆಲಸವನ್ನು ಮಾಡಿರುವ ಮಾರುತಿ ಬನವಾಸಿ ಭಾಗ ಸೇರಿದಂತೆ ತಾಲೂಕು, ಜಿಲ್ಲೆ, ರಾಜ್ಯದಲ್ಲೇ ವಿಭಿನ್ನ ಶಿಕ್ಷಕ ಎನ್ನುವ ಹೆಗ್ಗಳಿಕೆ ಹೋದಿದ್ದಾನೆ. ಈ ಮಾರುತಿ ಉಪ್ಪಾರ ನಮ್ಮ ಸಂದರ್ಶನದಲ್ಲಿ ಮಾತನಾಡಿರುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಕೆಲಸ ಮಾಡಿರುವ ಸಾಧಕ. ಅವನ ಬಗ್ಗೆ ಬರೆದದ್ದೂ ಅವನಿರುವ ಗುಣಮಟ್ಟದ ಪ್ರತಿಶತ10 ಕ್ಕಿಂತ ಕಡಿಮೆ ಅಂಶ,ವಿಚಾರ. ಅವನಿಗೆ ಶುಭ- ಕೋರಿ ಅಭಿನಂದಿಸಲು ಈ ಪುಟ್ಟ ಅನುಭವದ ಬರಹ. -ಕನ್ನೇಶ್.
